/newsfirstlive-kannada/media/media_files/2025/09/20/vokkaliga-leaders-meeting-2025-09-20-15-55-56.jpg)
ಆದಿಚುಂಚನಗಿರಿ ಮಠದಲ್ಲಿ ಒಕ್ಕಲಿಗ ನಾಯಕರ ಸಭೆ
ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಿಂದ ಜನರ ಸಾಮಾಜಿಕ, ಆರ್ಥಿಕ ಸಮೀಕ್ಷೆ ಆರಂಭವಾಗುತ್ತೆ. ಈ ಸಮೀಕ್ಷೆಯಲ್ಲಿ ರಾಜ್ಯದ ಪ್ರಬಲ ಒಕ್ಕಲಿಗ ಸಮುದಾಯ ಹೇಗೆ, ಯಾವ ಮಾಹಿತಿ ನೀಡಬೇಕು ಎನ್ನುವ ಬಗ್ಗೆ ಚರ್ಚೆ ನಡೆಸಿ ಒಂದು ತೀರ್ಮಾನ ಕೈಗೊಳ್ಳಲು ಇಂದು ಒಕ್ಕಲಿಗ ಸಮುದಾಯದ ಶಾಸಕರು, ಸಚಿವರು, ಕೇಂದ್ರ ಸಚಿವರ ಸಭೆಯನ್ನು ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠದಲ್ಲಿ ನಡೆಸಲಾಗಿದೆ. ಆದಿಚುಂಚನಗಿರಿ ಮಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಕೈಗಾರಿಕೆ ಸಚಿವ ಕುಮಾರಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸದಾನಂದ ಗೌಡ, ಹಾಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯದ ಒಕ್ಕಲಿಗ ಸಮುದಾಯದ ಸಚಿವರು, ಒಕ್ಕಲಿಗ ಸಮುದಾಯದ ಲೋಕಸಭಾ ಸದಸ್ಯರು, ಶಾಸಕರು, ಮಾಜಿ ಶಾಸಕರು ಹಾಗೂ ಒಕ್ಕಲಿಗ ಸಂಘದ ಪದಾಧಿಕಾರಿಗಳು ಭಾಗಿಯಾಗಿದ್ದರು.
ಈ ಸಭೆಯಲ್ಲಿ ಸಮೀಕ್ಷೆಯ ವೇಳೆ ಒಕ್ಕಲಿಗ ಸಮುದಾಯಕ್ಕೆ ಸಮೀಕ್ಷೆಯಲ್ಲಿ ಏನೇನು ಬರೆಸಬೇಕು, ಯಾವ ಮಾಹಿತಿ ನೀಡಬೇಕು, ಒಕ್ಕಲಿಗ ಸಮುದಾಯದ ಜನಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳಲು ಏನು ಕ್ರಮ ಕೈಗೊಳ್ಳಬೇಕು, ಸಮೀಕ್ಷೆಯ ಬಗ್ಗೆ ಜಾಗೃತಿ ಮೂಢಿಸಲು ಏನೇನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ.
ಒಕ್ಕಲಿಗ ಸಮುದಾಯದ ಮೂರು ಪ್ರಮುಖ ಮಠಗಳ ಸ್ವಾಮೀಜಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದರು. ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಶ್ರೀ ನಿಶ್ಚಲಾನಂದ ಸ್ವಾಮೀಜಿ, ಶಿರಾದ ಗುರುಗುಂಡ ಬ್ರಹ್ಮೇಶ್ವರ ಮಠದ ಶ್ರೀ ನಂಜಾವಧೂತ ಸ್ವಾಮೀಜಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಸಮೀಕ್ಷೆಯ ಬಗ್ಗೆ ಒಮ್ಮತ ತೀರ್ಮಾನವನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಲಾಗಿದೆ. ರಾಜಕೀಯವಾಗಿ ಬದ್ದ ವೈರಿಗಳಾದ ಎಚ್.ಡಿ.ಕೆ ಹಾಗೂ ಡಿಸಿಎಂ ಡಿಕೆಶಿ ಇಬ್ಬರೂ ನಿರ್ಮಲಾನಂದ ನಾಥ ಸ್ವಾಮೀಜಿಗಳ ಅಕ್ಕಪಕ್ಕದಲ್ಲಿ ನಿಂತು ಸಮುದಾಯದ ಹಿತಾಸಕ್ತಿ ರಕ್ಷಣೆಯ ವಿಷಯದಲ್ಲಿ ನಾವಿಬ್ಬರೂ ಒಗ್ಗಟ್ಟಾಗಿರುತ್ತೇವೆ ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನ ಮಾಡಿದ್ದರು.
ಇನ್ನೂ ಸಭೆಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿದ್ದರು. ನಮ್ಮ ಒಕ್ಕಲಿಗ ಸಮುದಾಯ ದೊಡ್ಡ ಸಮುದಾಯ, ಅದರಲ್ಲಿ ಉಪಪಂಗಡಗಳು ಸಹ ಇದೆ. ಸಾಮಾಜಿಕ, ಆರ್ಥಿಕ ಸಮೀಕ್ಷೆಯಲ್ಲಿ ಮೂರು ಕಾಲಂ ಇರುತ್ತೆ. 9 ನೇ ಕಾಲಂ ಜಾತಿ ಅಂತ ಇದೆ. ಜಾತಿಯ ಕಾಲಂನಲ್ಲಿ ಒಕ್ಕಲಿಗ ಅಂತ ಬರೆಸಬೇಕು. 10 ನೇ ಕಲಂ ಉಪಜಾತಿ ಅಂತ ಇದೆ, ಅಲ್ಲೂ ಒಕ್ಕಲಿಗ ಅಂತಾನೇ ಬರೆಸಬೇಕು. ಸಮೀಕ್ಷೆ ನಡೆಸಲು ಹದಿನೈದು ದಿನಗಳು ಅವಕಾಶ ಕೊಟ್ಟಿದ್ದಾರೆ. ಸಮೀಕ್ಷೆಗೆ ಇನ್ನೂ ಹೆಚ್ಚಿನ ದಿನಗಳ ಕಾಲಾವಕಾಶ ಬೇಕು. ಧರ್ಮದ ಕಲಂನಲ್ಲಿ ಹಿಂದೂ ಎಂದು ಬರೆಸಬೇಕು. ಜಾತಿಯ ಕಲಂನಲ್ಲಿ ಒಕ್ಕಲಿಗ ಎಂದು ಬರೆಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಯಾರೂ ಗೊಂದಲ ಮಾಡಿಕೊಳ್ಳದಂತೆ ಸಭೆಯಲ್ಲಿ ಸಲಹೆ ನೀಡಲಾಗಿದೆ. ಒಕ್ಕಲಿಗ ಸಮುದಾಯದಲ್ಲಿ ಗಂಗಡಿಕಾರ, ಮೊರಸು, ಕುಂಚುಟಿಗ, ಸರ್ಪ ಒಕ್ಕಲಿಗ, ಹಳ್ಳಿಕಾರ್ ಒಕ್ಕಲಿಗ ಸೇರಿದಂತೆ ಬೇರೆ ಬೇರೆ ಉಪಜಾತಿಗಳಿವೆ. ಈ ಎಲ್ಲ ಉಪಜಾತಿಗಳು ಉಪಜಾತಿ ಕಲಂನಲ್ಲಿ ಒಕ್ಕಲಿಗ ಅಂತಾನೇ ನಮೂದಿಸಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ನಿರ್ಣಯವನ್ನು ನಿರ್ಮಲಾನಂದನಾಥ ಸ್ವಾಮೀಜಿ ಪ್ರಕಟಿಸಿದ್ದಾರೆ. ಈ ನಿರ್ಣಯವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ ಉಳಿದ ನಾಯಕರು ಅನುಮೋದಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.