/newsfirstlive-kannada/media/media_files/2025/10/04/bangalore-jail-party-photos-2025-10-04-13-50-10.jpg)
ಬೆಂಗಳೂರಿನ ಜೈಲಿನಲ್ಲಿ ನಡೆದ ಪಾರ್ಟಿಯ ಪೋಟೋಗಳು
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬರ್ತ್ ಡೇ ಪಾರ್ಟಿ, ಮೊಬೈಲ್ ಪೋನ್ ಬಳಕೆ ಯಾವುದೂ ನಿಂತಿಲ್ಲ. ಜೈಲಿನಲ್ಲಿ ಜೈಲಿನ ಸಿಬ್ಬಂದಿಯ ಬೆಂಬಲದಿಂದಲೇ ನಿಯಮಬಾಹಿರ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತಿವೆ. ಜೈಲಿನ ಎಡಿಜಿಪಿ ಆಗಿ ಬಿ.ದಯಾನಂದ್ ನೇಮಕದ ಬಳಿಕ ಕಟ್ಟುನಿಟ್ಟಾಗಿ ನಿಯಮ ಜಾರಿ ಮಾಡಿದ್ದಾರೆ ಎಂದೇ ಹೇಳಲಾಗಿತ್ತು. ಆದರೇ, ಜೈಲು ಮ್ಯಾನ್ಯುಯಲ್ ಪ್ರಕಾರವೇ ಖೈದಿಗಳಿಗೆ ಸೌಲಭ್ಯ ನೀಡಲಾಗುತ್ತೆ. ನಟ ದರ್ಶನ್‌ಗೆ ಪಲ್ಲಂಗವನ್ನು ನೀಡಲು ಸಾಧ್ಯವಿಲ್ಲ ಎಂದು ಜೈಲು ಅಧಿಕಾರಿಗಳ ಪರ ವಕೀಲರಾಗಿ ಎಸ್‌ಪಿಪಿ ಪ್ರಸನ್ನ ಕುಮಾರ್ ಕೋರ್ಟ್ ನಲ್ಲಿ ವಾದಿಸಿದ್ದರು. ಆದರೇ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನೊಳಗಡೆ ಬೇರೆಯದ್ದೇ ವಾತಾವರಣ ಇದೆ. ಈಗಲೂ ಖೈದಿಗಳ ರಾಜಾರೋಷ ಪಾರ್ಟಿ ನಡೆಯುತ್ತಿದೆ. ಜೈಲಿನೊಳಕ್ಕೆ ಬರ್ತ್ ಡೇ ಕೇಕ್ ಸರಬರಾಜು ಆಗಿದೆ. ಜೊತೆಗೆ ಸೇಬಿನ ಹಾರವೂ ಪೂರೈಕೆಯಾಗಿದೆ. ಮೊಬೈಲ್ ನಲ್ಲಿ ಬರ್ತ್ ಡೇ ಪಾರ್ಟಿಯ ಪೋಟೋ, ವಿಡಿಯೋ ಚಿತ್ರೀಕರಣವೂ ನಡೆದಿದೆ. ಇದೆಲ್ಲವೂ ಜೈಲು ಅಧಿಕಾರಿಗಳ ಬೆಂಬಲ, ಪಾತ್ರ ಇಲ್ಲದೇ ಒಳಗೆ ಪೂರೈಕೆಯಾಗಲು ಹೇಗೆ ಸಾಧ್ಯ?
ಜೈಲಿನಲ್ಲಿ ರೌಡಿ ಶೀಟರ್ ಒಬ್ಬ ಸಹ ಖೈದಿಗಳ ಜೊತೆಗೆ ಸೇರಿ ಭರ್ಜರಿ ಬರ್ತಡೇ ಪಾರ್ಟಿ ಮಾಡಿದ್ದಾನೆ.
ಕೇಕ್ ಕಟ್ ಮಾಡಿ ಜೈಲಿನಲ್ಲಿ ಬರ್ತಡೇ ಸೆಲೆಬ್ರೇಷನ್ ನಡೆದಿದೆ. ಸೇಬಿನ ಹಾರ ಹಾಕಿ, ಕೇಕ್ ಕಟ್ ಮಾಡಿ ಬರ್ತಡೇ ಪಾರ್ಟಿ ನಡೆಸಲಾಗಿದೆ. ಜೈಲಿನಲ್ಲಿ ವಿಚಾರಣಾಧೀನ ಕೈದಿಗಳ ಕಳ್ಳಾಟಕ್ಕೆ ಯಾವುದೇ ಬ್ರೇಕ್ ಬಿದ್ದಿಲ್ಲ. ನಟೋರಿಯಸ್ ರೌಡಿ ಶೀಟರ್ ಶೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾನ ಬರ್ತಡೇ ಪಾರ್ಟಿ ಜೋರಾಗಿ ನಡೆದಿದೆ. ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟೋರಿಯಸ್ ರೌಡಿ ಶೀಟರ್ ಶ್ರೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನಾ. ಈತನ ಬರ್ತಡೇ ಅನ್ನು ಸಹಖೈದಿಗಳು ಜೋರಾಗಿ ಜೈಲಿನಲ್ಲೇ ಮಾಡಿದ್ದಾರೆ. ಅದರ ಪೋಟೋ, ವಿಡಿಯೋಗಳು ಈಗ ಹೊರಗಡೆ ಬಂದಿವೆ. ಮೊಬೈಲ್ ನಲ್ಲಿ ವಿಡಿಯೋ, ಪೋಟೋ ತೆಗೆದು ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜೈಲಿನಿಂದಲೇ ವಿಡಿಯೋ ಪೋಟೋ ಪೋಸ್ಟ್ ಆಗಿವೆ. ಗುಬ್ಬಚ್ಚಿ ಸೀನನ ಶಿಷ್ಯಂದಿರಿಂದ ಪೋಟೋ, ವಿಡಿಯೋ ಪೋಸ್ಟ್ ಆಗಿವೆ. ಜೈಲಾಧಿಕಾರಿಗಳು, ಸಿಬ್ಬಂದಿಗಳಿಂದ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವುದು ಇದರಿಂದಲೇ ಸಾಬೀತಾಗಿದೆ.
ಜೈಲಿನಲ್ಲಿ ಖೈದಿಗಳಿಗೆ ನಟ ದರ್ಶನ್‌ಗೆ ರಾಜಾತಿಥ್ಯ ನೀಡಿದ್ದು ಬೆಳಕಿಗೆ ಬಂದಾಗಲೇ, ಜೈಲು ಸೂಪರಿಂಟೆಂಡೆಂಟ್ ಅನ್ನು ಸಸ್ಪೆಂಡ್ ಮಾಡಬೇಕಾಗಿತ್ತು ಎಂದು ಸುಪ್ರೀಂಕೋರ್ಟ್‌ನ ಜಸ್ಟೀಸ್ ಜೆ.ಬಿ.ಪರ್ದಿವಾಲಾ ಅವರ ನೇತೃತ್ವದ ಪೀಠ ಹೇಳಿತ್ತು. ಈಗ ಮತ್ತೊಬ್ಬ ಕೊಲೆ ಕೇಸ್ ಆರೋಪಿ ಜೈಲಿನಲ್ಲಿ ರಾಜಾತಿಥ್ಯ ಪಡೆದು ಬರ್ತ್ ಡೇ ಪಾರ್ಟಿ ಮಾಡಿಕೊಂಡಿದ್ದಾನೆ. ಈಗ ರಾಜ್ಯದ ಸಿಎಂ, ಗೃಹ ಸಚಿವರು, ಬಂಧಿಖಾನೆ ಇಲಾಖೆ ಜೈಲು ಸೂಪರಿಂಟೆಂಡೆಂಟ್ ಮೇಲೆ ಏನು ಕ್ರಮ ಕೈಗೊಳ್ಳುತ್ತಾರೆ. ಜೈಲು ಎಡಿಜಿಪಿ ಬಿ.ದಯಾನಂದ್ ಈ ಪಾರ್ಟಿಗೆ ಕಾರಣವಾದ ಅಧಿಕಾರಿಗಳ ಮೇಲೆ ಮುಲಾಜಿಲ್ಲದೇ ಕ್ರಮ ಜರುಗಿಸುತ್ತಾರಾ ಎಂಬ ಕುತೂಹಲ ಇದೆ.
ಜೈಲು ಎಡಿಜಿಪಿ ಬಿ.ದಯಾನಂದ್
ರಾಜ್ಯದ ಗೃಹ ಇಲಾಖೆಯೇ ಜೈಲು ಸೂಪರಿಂಟೆಂಡೆಂಟ್ ಸೇರಿದಂತೆ ಜೈಲು ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕಾಗಿದೆ. ಈ ಹಿಂದೆ ಜೆ.ಜಯಲಲಿತಾ ಸಹವರ್ತಿ ಶಶಿಕಲಾಗೂ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಐಪಿಎಸ್ ಅಧಿಕಾರಿ ಬಿ.ರೂಪಾ ಆರೋಪಿಸಿ ವರದಿ ನೀಡಿದ್ದರು. ಅದು ಸತ್ಯವಾದ ವರದಿ ಎಂದು ಏಕವ್ಯಕ್ತಿ ಕಮೀಷನ್ ಕೂಡ ಹೇಳಿತ್ತು. ಈಗ ಜೈಲಿನಲ್ಲಿ ಮತ್ತೆ ಮತ್ತೆ ಪಾರ್ಟಿ, ಪೋನ್ ಬಳಕೆ ಎಲ್ಲವೂ ಮುಂದುವರಿದಿದೆ. ಇದಕ್ಕೆ ಬ್ರೇಕ್ ಹಾಕಲು ಬಿ.ದಯಾನಂದ್ ಅವರಿಗೂ ಸಾಧ್ಯವಾಗಿಲ್ಲ. ಬಿ.ದಯಾನಂದ್ ನಟ ದರ್ಶನ್ ಅವರನ್ನು ಮಾತ್ರ ಟಾರ್ಗೆಟ್ ಮಾಡಿ, ಉಳಿದಂತೆ ಜೈಲಿನ ಇತರೆ ಖೈದಿಗಳಿಗೆ ಎಲ್ಲ ವಿಐಪಿ ಟ್ರೀಟ್ ಮೆಂಟ್ ಮುಂದುವರಿಸಲು ಬಿಟ್ಟಿದ್ದಾರೆ ಎಂದು ನಟ ದರ್ಶನ್ ಪರ ವಕೀಲರು ಮೊನ್ನೆ ಬೆಂಗಳೂರು ಕೋರ್ಟ್ ನಲ್ಲೇ ಆರೋಪ ಮಾಡಿದ್ದರು. ಅದು ಸತ್ಯ ಅನ್ನೋದು ಈ ಗುಬಚ್ಚಿ ಸೀನಾನ ಬರ್ತ್ ಡೇ ಪಾರ್ಟಿಯಿಂದಲೇ ಅರ್ಥವಾಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.