/newsfirstlive-kannada/media/media_files/2025/08/30/sub-registrar-office-tumakuru-2025-08-30-13-18-00.jpg)
ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಾಣಿ ಶುಲ್ಕ ಶೇ.2ಕ್ಕೆ ಏರಿಕೆ
ರಾಜ್ಯದಲ್ಲಿ ಈಗ ಬೆಲೆ ಏರಿಕೆಯ ಕಾಲವಾಗಿದೆ. ಎಲ್ಲ ದಿನಬಳಕೆಯ ವಸ್ತುಗಳ ಬೆಲೆಯೂ ಏರಿಕೆಯಾಗುತ್ತಲೇ ಇದೆ. ರಾಜ್ಯ ಸರ್ಕಾರಕ್ಕೆ ಈಗ ಗ್ಯಾರಂಟಿ ಸ್ಕೀಮ್ ಗಳಿಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ನೋಂದಾಣಿ ಮತ್ತು ಮುದ್ರಾಂಕ ಇಲಾಖೆಯಿಂದಲೂ ನಿರೀಕ್ಷಿತ ಮಟ್ಟದ ಆದಾಯ ಸಂಗ್ರಹವಾಗುತ್ತಿಲ್ಲ. ಹೀಗಾಗಿ ಆಸ್ತಿ ನೋಂದಾಣಿ ಶುಲ್ಕವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ನಾಳೆಯಿಂದಲೇ ( ಆಗಸ್ಟ್ 31 ರಿಂದಲೇ) ರಾಜ್ಯದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಆಸ್ತಿ ನೋಂದಾಣಿ ಶುಲ್ಕ ಡಬಲ್ ಆಗಲಿದೆ. ಸದ್ಯ ರಾಜ್ಯದಲ್ಲಿ ಆಸ್ತಿ ನೋಂದಾಣಿ ಶುಲ್ಕ ಶೇ.1 ರಷ್ಟು ಇದೆ. ಇದನ್ನು ಶೇ.2 ಕ್ಕೆ ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಖಾಲಿ ನಿವೇಶನ, ಭೂಮಿ, ಪ್ಲ್ಯಾಟ್, ಮನೆ ಖರೀದಿಗೆ ಹೋಗುವ ಗ್ರಾಹಕರು ಶೇ.2 ರಷ್ಟು ನೋಂದಾಣಿ ಶುಲ್ಕ ಪಾವತಿಸಬೇಕಾಗಿದೆ, ಇದರ ಜೊತೆಗೆ ಶೇ.5.6 ರಷ್ಟು ಮುದ್ರಾಂಕ ಶುಲ್ಕವನ್ನು ಕೂಡ ಪಾವತಿಸಬೇಕು. ಒಟ್ಟಾರೆ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನೋಂದಾಣಿ ಮತ್ತು ಮುದ್ರಾಂಕ ಶುಲ್ಕ ಶೇ.7.6 ರಷ್ಟು ಆಗಿದೆ. ಭೂಮಿ, ನಿವೇಶನ, ಮನೆಯ ಸಬ್ ರಿಜಿಸ್ಟ್ರಾರ್ ಮೌಲ್ಯದ ಶೇ.7.6 ರಷ್ಟು ನೋಂದಾಣಿ ಮತ್ತು ಮುದ್ರಾಂಕ ಶುಲ್ಕವನ್ನು ಪಾವತಿಸಿ ಜಮೀನು, ನಿವೇಶನ, ಪ್ಲ್ಯಾಟ್, ಮನೆಗಳನ್ನು ಜನರು ತಮ್ಮ ಹೆಸರಿಗೆ ರಿಜಿಸ್ಟ್ರಾರ್ ಮಾಡಿಸಿಕೊಳ್ಳಬೇಕಾಗಿದೆ.
ಸ್ಥಿರಾಸ್ತಿಗಳ ಶುದ್ದ ಕ್ರಯ ಪತ್ರ, ಸ್ವಾಧೀನ ಭೋಗ್ಯ ಪತ್ರ, ಖರೀದಿ ಉದ್ದೇಶದ ಜಿಪಿಎ ಸೇರಿದಂತೆ ವಿವಿಧ ಆಸ್ತಿಗಳ ನೋಂದಾಣಿಗೆ ಈಗ ಶೇ.7.6 ರಷ್ಟು ನೋಂದಾಣಿ ಮತ್ತು ಮುದ್ರಾಂಕ ಶುಲ್ಕವನ್ನು ರಾಜ್ಯದ ಜನರು ಸರ್ಕಾರಕ್ಕೆ ಪಾವತಿಸಬೇಕಾಗಿದೆ.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದರು. ಆಗ ರಾಜ್ಯದ ಆದಾಯದ ಮೂಲಗಳಲ್ಲಿ ಒಂದಾಗಿರುವ ನೋಂದಾಣಿ ಮತ್ತು ಮುದ್ರಾಂಕ ಇಲಾಖೆಯ ಆದಾಯ ಸಂಗ್ರಹದ ಬಗ್ಗೆ ಪರಿಶೀಲನೆ ನಡೆಸಿದ್ದರು. ರಾಜ್ಯದಲ್ಲಿ ಎ ಖಾತಾ ಮತ್ತು ಬಿ ಖಾತಾ ಗೊಂದಲ ಇದೆ. ಜೊತೆಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿನ ಮಾರಾಟ ಕುಸಿತದಿಂದ ರಾಜ್ಯ ಸರ್ಕಾರ ನೀಡಿರುವ ಗುರಿಗೆ ತಕ್ಕಂತೆ ನೋಂದಾಣಿ ಮತ್ತು ಮುದ್ರಾಂಕ ಇಲಾಖೆಯಿಂದ ಆದಾಯ ಸಂಗ್ರಹವಾಗುತ್ತಿಲ್ಲ ಎಂಬುದು ಸಿಎಂ ಗಮನಕ್ಕೆ ಬಂದಿದೆ. ಜೊತೆಗೆ ಇ ಸ್ವತ್ತು ಆಗದೇ ಆಸ್ತಿಗಳ ನೋಂದಾಣಿ ಆಗುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಕೊಟ್ಟಿರುವ ಗುರಿಯಂತೆ ಹೆಚ್ಚಿನ ಆದಾಯ ಸಂಗ್ರಹವಾಗಬೇಕಾದರೇ, ಆಸ್ತಿ ನೋಂದಾಣಿ ಶುಲ್ಕವನ್ನು ಶೇ.1 ರಿಂದ ಶೇ.2 ಕ್ಕೆ ಹೆಚ್ಚಳ ಮಾಡಬೇಕೆಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ. ಬೇರೆ ರಾಜ್ಯಗಳಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ನೋಂದಾಣಿ ಶುಲ್ಕ ಇದೆ ಎಂದು ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಗಮನಕ್ಕೆ ತಂದಿದ್ದಾರೆ. ಜೊತೆಗೆ ನೋಂದಾಣಿ ಶುಲ್ಕ ಏರಿಕೆಗೆ ಸರ್ಕಾರದ ಅನುಮತಿ ಕೇಳಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ನೋಂದಾಣಿ ಶುಲ್ಕವನ್ನು ಶೇ.1 ರಿಂದ ಶೇ.2 ಕ್ಕೆ ಹೆಚ್ಚಳ ಮಾಡಲು ಒಪ್ಪಿಗೆ ಕೊಟ್ಟಿದ್ದಾರೆ. ಹೀಗಾಗಿ ಆಗಸ್ಟ್ 31ರ ನಾಳೆಯಿಂದಲೇ ರಾಜ್ಯದಲ್ಲಿ ನೋಂದಾಣಿ ಶುಲ್ಕ ಶೇ.1 ರಿಂದ ಶೇ.2 ಕ್ಕೆ ಹೆಚ್ಚಳವಾಗಿದೆ.
ಇನ್ನೂ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಜಿಲ್ಲೆಗೊಂದರಂತೆ ರಜಾ ದಿನವಾದ ಭಾನುವಾರವೂ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ಭಾನುವಾರದಿಂದಲೇ ನೋಂದಾಣಿ ಶುಲ್ಕ ಏರಿಕೆಯೂ ಜಾರಿಯಾಗಲಿದೆ. ಇನ್ನೂ ಜಮೀನು ನೋಂದಾಣಿ, ನಿವೇಶನ ನೋಂದಾಣಿ, ಪ್ಲ್ಯಾಟ್ ನೋಂದಾಣಿಗೆ ಈ ಮುಂಚೆಯೇ ಅರ್ಜಿ ಸಲ್ಲಿಸಿ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ಅಪಾಯಿಂಟ್ ಮೆಂಟ್ ಪಡೆದಿರುವವರು ಕೂಡ ಹೊಸ ದರದಂತೆ ಶೇ.2 ರಷ್ಟು ನೋಂದಾಣಿ ಶುಲ್ಕವನ್ನು ಪಾವತಿಸಬೇಕೆಂದು ರಾಜ್ಯದ ಕಂದಾಯ ಇಲಾಖೆ ಆದೇಶ ಹೊರಡಿಸಿದೆ
ಸಿಎಂ , ಡಿಸಿಎಂ ಹಾಗೂ ಕಂದಾಯ ಸಚಿವ ಕೃಷ್ಣ ಭೈರೇಗೌಡ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.