/newsfirstlive-kannada/media/media_files/2025/09/26/tumakura-palike-expansion-2025-09-26-20-33-36.jpg)
ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿ ವಿಸ್ತರಣೆ!
ಬೆಂಗಳೂರಿನಲ್ಲಿ ಬಿಬಿಎಂಪಿ ಇತಿಹಾಸದ ಪುಟ ಸೇರಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಸ್ತಿತ್ವಕ್ಕೆ ಬಂದಿದೆ. ಬಿಬಿಎಂಪಿ ಬದಲಿಗೆ ಐದು ಹೊಸ ಪಾಲಿಕೆಗಳು ಆಸ್ತಿತ್ವಕ್ಕೆ ಬರುತ್ತಿವೆ. ಅತ್ತ ಬೆಂಗಳೂರು ಮಹಾನಗರ ಪಕ್ಕದ ತುಮಕೂರು ನಗರದಲ್ಲಿ ಮಹಾನಗರ ಪಾಲಿಕೆಯನ್ನು ಭೌಗೋಳಿಕವಾಗಿ ವಿಸ್ತರಿಸುವ ಪ್ರಯತ್ನಗಳು ಸದ್ದಿಲ್ಲದೇ ನಡೆಯುತ್ತಿವೆ. ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಈಗ ಇರುವ ನಗರ ಪ್ರದೇಶದ 35 ವಾರ್ಡ್ ಗಳ ಜೊತೆಗೆ ಸುತ್ತಲಿನ 14 ಗ್ರಾಮ ಪಂಚಾಯಿತಿಗಳ 54 ಗ್ರಾಮಗಳನ್ನು ಸೇರ್ಪಡೆ ಮಾಡುವ ಪ್ರಯತ್ನ ನಡೆಯುತ್ತಿದೆ.
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಜಿ.ಪರಮೇಶ್ವರ್ ಸೂಚನೆ ಮೇರೆಗೆ ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಹಾಗೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ಪ್ರಭು 54 ಗ್ರಾಮಗಳನ್ನು ಮಹಾನಗರ ಪಾಲಿಕೆಗೆ ಸೇರ್ಪಡೆ ಮಾಡುವ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದ್ದಾರೆ.
ತುಮಕೂರು ನಗರದ ವ್ಯಾಪ್ತಿಯನ್ನು 3 ದಶಕದ ಹಿಂದೆ ವಿಸ್ತರಣೆ ಮಾಡಲಾಗಿತ್ತು. ಈಗ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯು 48 ಚದರ ಕಿಲೋಮೀಟರ್ ಇದೆ. 14 ಗ್ರಾಮ ಪಂಚಾಯಿತಿಗಳ 54 ಗ್ರಾಮಗಳು ಮಹಾನಗರ ಪಾಲಿಕೆಗೆ ಸೇರ್ಪಡೆಯಾದರೇ, ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯು 174 ಚದರ ಕಿಲೋಮೀಟರ್ ವರೆಗೂ ವಿಸ್ತರಣೆಯಾಗಲಿದೆ. ಅಂದರೇ, ತುಮಕೂರು ಮಹಾನಗರ ಪಾಲಿಕೆಯ ಭೌಗೋಳಿಕ ವ್ಯಾಪ್ತಿ ಮೂರು ಪಟ್ಟು ಹೆಚ್ಚಾಗಲಿದೆ.
ತುಮಕೂರು ಮಹಾನಗರ ಪಾಲಿಕೆಯು ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಬಗ್ಗೆ ವರದಿಯನ್ನು ಸಿದ್ದಪಡಿಸಿ, ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ಸಲ್ಲಿಸಿದೆ. ಜೊತೆಗೆ ಪಾಲಿಕೆಗೆ ಭೌಗೋಳಿಕ ವ್ಯಾಪ್ತಿ ವಿಸ್ತರಣೆಯಾದರೇ, ಗಡಿ ಎಲ್ಲಿಯವರೆಗೂ ಇರಬೇಕು ಎಂಬ ಬಗ್ಗೆ ಗಡಿಯನ್ನು ಗುರುತಿಸಿ ಅದರ ಮಾಹಿತಿಯನ್ನು ಈ ವರದಿಯಲ್ಲಿ ಉಲ್ಲೇಖಿಸಿದೆ.
2023ರ ಅಂದಾಜಿನಂತೆ ತುಮಕೂರು ನಗರದ ಜನಸಂಖ್ಯೆ 4.07 ಲಕ್ಷ ಆಗಿದೆ. 54 ಹಳ್ಳಿಗಳು ಪಾಲಿಕೆಗೆ ಸೇರ್ಪಡೆಯಾದರೇ, ಮಹಾನಗರ ಪಾಲಿಕೆಯ ವ್ಯಾಪ್ತಿಯ ಜನಸಂಖ್ಯೆಗೆ 2.50 ಲಕ್ಷ ಜನಸಂಖ್ಯೆ ಸೇರ್ಪಡೆಯಾಗಲಿದೆ. ಇದರಿಂದ ತುಮಕೂರು ಮಹಾನಗರ ಪಾಲಿಕೆಯ ಜನಸಂಖ್ಯೆ 6.57 ಲಕ್ಷ ಆಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
1995 ರಲ್ಲಿ ತುಮಕೂರಿನಲ್ಲಿ ನಗರಸಭೆ ಇದ್ದಾಗ, ನಗರದ ವ್ಯಾಪ್ತಿಯನ್ನು ವಿಸ್ತರಿಸಲಾಗಿತ್ತು. ಬಳಿಕ ನಗರದ ಭೌಗೋಳಿಕ ವ್ಯಾಪ್ತಿಯ ವಿಸ್ತರಣೆಯೇ ನಡೆದಿಲ್ಲ. 30 ವರ್ಷದ ಬಳಿಕ ಈಗ ನಗರದ ಭೌಗೋಳಿಕ ವ್ಯಾಪ್ತಿಯನ್ನು ವಿಸ್ತರಿಸಿ, ಸುತ್ತಲಿನ 54 ಹಳ್ಳಿಗಳನ್ನು ಪಾಲಿಕೆಯ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.
ತುಮಕೂರು ಅಕ್ಕ ಪಕ್ಕ ಇರುವ ಈ 14 ಗ್ರಾಮ ಪಂಚಾಯಿತಿಗಳ 54 ಗ್ರಾಮಗಳು ಈಗಾಗಲೇ ಹಳ್ಳಿಯ ಸ್ವರೂಪ ಕಳೆದುಕೊಂಡು ನಗರದ ಸ್ವರೂಪ ಪಡೆದುಕೊಳ್ಳುತ್ತಿವೆ. 54 ಗ್ರಾಮಗಳಲ್ಲಿ ಈಗಾಗಲೇ ಕೃಷಿ ಚಟುವಟಿಕೆ ಕ್ಷೀಣಿಸುತ್ತಿದೆ. ನಗರದಲ್ಲಿ ನಿವೇಶನಗಳು ಜನರಿಗೆ ಸಿಗುತ್ತಿಲ್ಲ. ನಿವೇಶನಗಳ ಬೆಲೆಯೂ ದುಬಾರಿಯಾಗಿದ್ದು, ಜನರ ವಾಸಕ್ಕಾಗಿ ನಗರದ ಹೊರ ವಲಯದ ಗ್ರಾಮಗಳಲ್ಲಿ ಕಂದಾಯ ನಿವೇಶನಗಳನ್ನು ಖರೀದಿಸಿ ಮನೆ ಕಟ್ಟಿಕೊಂಡು ವಾಸಿಸಲು ಆರಂಭಿಸಿದ್ದಾರೆ. ನಗರದ ವ್ಯವಸ್ಥಿತ ಬೆಳವಣಿಗೆಯ ದೃಷ್ಟಿಯಿಂದ ನಗರದ ಭೌಗೋಳಿಕ ವ್ಯಾಪ್ತಿ ವಿಸ್ತರಣೆ ಮಾಡುವುದು ಅಗತ್ಯವಾಗಿದೆ ಎಂದು ತುಮಕೂರು ಮಹಾನಗರ ಪಾಲಿಕೆಯು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದೆ.
ತುಮಕೂರು ನಗರ ಹಾಗೂ ಸುತ್ತಮುತ್ತ ಮೂರು ಮೆಡಿಕಲ್ ಕಾಲೇಜು ಹಾಗೂ ಐದು ಇಂಜಿನಿಯರಿಂಗ್ ಕಾಲೇಜುಗಳಿವೆ. ಶಿಕ್ಷಣಕ್ಕಾಗಿ ಹೊರ ರಾಜ್ಯ, ಹೊರ ಜಿಲ್ಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ತುಮಕೂರು ನಗರಕ್ಕೆ ಬರುತ್ತಿದ್ದಾರೆ. ವಸಂತನರಸಾಪುರದಲ್ಲಿ ಕೈಗಾರಿಕಾ ಪ್ರದೇಶ ವಿಸ್ತರಣೆಯಾಗುತ್ತಿದ್ದು, ಕಾರ್ಮಿಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಒಟ್ಟಾರೆಯಾಗಿ ನಗರ ಪ್ರದೇಶ ಬೆಳವಣಿಗೆ ಕಾಣುತ್ತಿದ್ದು, ಜನಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಗರದ ವ್ಯಾಪ್ತಿಯನ್ನ, ಭೌಗೋಳಿಕ ಪ್ರದೇಶವನ್ನು ವಿಸ್ತರಿಸುವುದು ಅನಿವಾರ್ಯವಾಗಿದೆ ಎಂದು ತುಮಕೂರು ಪಾಲಿಕೆಯು ಜಿಲ್ಲಾಧಿಕಾರಿಗೆ ವಿಸ್ತೃತ ಪ್ರಸ್ತಾವ ಹಾಗೂ ವರದಿ ಸಲ್ಲಿಸಿದೆ.
ಯಾವ್ಯಾವ ಗ್ರಾಮ ಪಂಚಾಯಿತಿಗಳು ಪಾಲಿಕೆಗೆ ಸೇರ್ಪಡೆಯಾಗ್ತಾವೆ?
ಗೂಳೂರು ಗ್ರಾಮ ಪಂಚಾಯಿತಿ, ಹೆಗ್ಗೆರೆ , ಕೆ,ಪಾಲಸಂದ್ರ, ಕೆಸರುಮಡು, ಹಿರೇಹಳ್ಳಿ, ಬೆಳಗುಂಬ, ಸ್ವಾಂದೇನಹಳ್ಳಿ, ಅರಕೆರೆ, ಊರುಕೆರೆ, ಬುಗುಡನಹಳ್ಳಿ, ಮಲ್ಲಸಂದ್ರ, ಮೈದಾಳ, ದೊಡ್ಡನಾರವಂಗಲ, ಹೆತ್ತೇನಹಳ್ಳಿ ಗ್ರಾಮಪಂಚಾಯಿತಿಗಳು ಪಾಲಿಕೆಗೆ ಸೇರ್ಪಡೆ ಮಾಡಬೇಕೆಂದು ಉದ್ದೇಶಿಸಲಾಗಿದೆ. ಈ 14 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 54 ಗ್ರಾಮಗಳಿವೆ. ಎಲ್ಲ 54 ಗ್ರಾಮಗಳು ತುಮಕೂರು ಪಾಲಿಕೆಗೆ ಸೇರ್ಪಡೆಯಾಗಲಿವೆ.
ಈ ಬಗ್ಗೆ ತುಮಕೂರು ಮಹಾನಗರ ಪಾಲಿಕೆಯು ಕಳೆದ ವರ್ಷವೇ ತುಮಕೂರು ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೂ ಪತ್ರ ಬರೆದಿದ್ದು, 14 ಗ್ರಾಮ ಪಂಚಾಯಿತಿಗಳನ್ನು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಿಂದ ಬಿಡುಗಡೆ ಮಾಡಿ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀಡಬೇಕೆಂದು ಕೋರಲಾಗಿದೆ. ಜೊತೆಗೆ ಈ ಎಲ್ಲ 14 ಗ್ರಾಮ ಪಂಚಾಯಿತಿಗಳಿಂದ ತುಮಕೂರು ಮಹಾನಗರ ಪಾಲಿಕೆಗೆ ಸೇರಲು ನಿರಾಕ್ಷೇಪಣಾ ಪತ್ರವನ್ನು ಕೊಡಿಸಬೇಕೆಂದು ತುಮಕೂರು ಜಿಲ್ಲಾ ಪಂಚಾಯಿತಿ ಸಿಇಓ ಅವರಿಗೆ ಪಾಲಿಕೆಯು 2024ರ ಸೆಪ್ಟೆಂಬರ್ 10 ರಂದೇ ಪತ್ರ ಬರೆದಿದೆ. ಈಗ ಎಲ್ಲ 14 ಗ್ರಾಮ ಪಂಚಾಯಿತಿಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯುವ ಕೆಲಸವೂ ನಡೆದಿದೆ. ಬಳಿಕ ಅಂತಿಮವಾಗಿ ರಾಜ್ಯ ಕ್ಯಾಬಿನೆಟ್ ನಲ್ಲೂ 14 ಗ್ರಾಮ ಪಂಚಾಯಿತಿಗಳ 54 ಗ್ರಾಮಗಳನ್ನು ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸೇರ್ಪಡೆ ಮಾಡಲು ಒಪ್ಪಿಗೆ ಸಿಗಬೇಕಾಗಿದೆ.
ಪಾಲಿಕೆಯಿಂದ ಜಿಪಂ ಸಿಇಓ ಹಾಗೂ ಡಿಸಿ ಅವರಿಗೆ ಬರೆದ ಪತ್ರಗಳು
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾಕ್ಟರ್ ಜಿ.ಪರಮೇಶ್ವರ್ ಅವರ ಸೂಚನೆ ಮತ್ತು ನಿರ್ದೇಶನದ ಮೇರೆಗೆಯೇ 14 ಗ್ರಾಮ ಪಂಚಾಯಿತಿಗಳನ್ನು ಪಾಲಿಕೆಗೆ ಸೇರ್ಪಡೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ರಾಜ್ಯದ ಗೃಹ ಸಚಿವರೂ ಆದ ಡಾಕ್ಟರ್ ಜಿ.ಪರಮೇಶ್ವರ್ ಅವರು ತಮ್ಮ ಈ ಸರ್ಕಾರದ ಅವಧಿಯಲ್ಲೇ 14 ಗ್ರಾಮ ಪಂಚಾಯಿತಿಗಳನ್ನು ತುಮಕೂರು ಪಾಲಿಕೆಗೆ ಸೇರ್ಪಡೆ ಮಾಡುವ ಪ್ರಸ್ತಾವಕ್ಕೆ ರಾಜ್ಯ ಕ್ಯಾಬಿನೆಟ್ ಒಪ್ಪಿಗೆ ಕೊಡಿಸುವ ನಿರೀಕ್ಷೆಯಲ್ಲಿ 14 ಗ್ರಾಮ ಪಂಚಾಯಿತಿಗಳ ಜನರೂ ಇದ್ದಾರೆ.
14 ಗ್ರಾಮ ಪಂಚಾಯಿತಿಗಳು ತುಮಕೂರು ಪಾಲಿಕೆಗೆ ಸೇರ್ಪಡೆಯಾದರೇ, ಈ 14 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ದಿಯಾಗಲಿದೆ. ನಗರದ ಎಲ್ಲ ಸೌಲಭ್ಯಗಳನ್ನು ಈ 54 ಹಳ್ಳಿಗಳಿಗೂ ನೀಡಬೇಕಾಗುತ್ತೆ. ಇದರಿಂದ 54 ಹಳ್ಳಿಗಳು ನಗರದಂತೆ ಅಭಿವೃದ್ದಿಯಾಗಲಿವೆ. 54 ಗ್ರಾಮಗಳಲ್ಲಿ ಭೂಮಿಯ ಬೆಲೆ ಕೂಡ ಹೆಚ್ಚಾಗಲಿದೆ. ಈಗಾಗಲೇ ಬಹುತೇಕ ಈ 54 ಗ್ರಾಮಗಳು ತುಮಕೂರು ನಗರಾಭಿವೃದ್ದಿ ಪ್ರಾಧಿಕಾರದ ವ್ಯಾಪ್ತಿಯಲ್ಲೇ ಇವೆ.
ತುಮಕೂರು ನಗರವು ಈಗಾಗಲೇ ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಗೆ ಆಯ್ಕೆಯಾಗಿ ನಗರದಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯ ನಡೆದಿವೆ. ಅದೇ ಮಾದರಿಯ ಅಭಿವೃದ್ದಿ ಕಾರ್ಯಗಳು ಮುಂದೆ ಸುತ್ತಲಿನ ಹಳ್ಳಿಗಳಲ್ಲೂ ನಡೆಯುವ ನಿರೀಕ್ಷೆ ಇದೆ. ಆದರೇ, ಬೆಳೆಯುತ್ತಿರುವ ನಗರವು ಹಳ್ಳಿ, ಕೃಷಿ ಭೂಮಿಗಳನ್ನು ಅಪೋಶನ ತೆಗೆದುಕೊಳ್ಳುತ್ತಿರುವುದು ವಾಸ್ತವ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.