/newsfirstlive-kannada/media/media_files/2025/08/02/punjab-cm-bhagwant-maan-2025-08-02-15-51-25.jpg)
ಮನೆಯಿಂದ ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗಿ ವಾಪಸ್ ಮನೆಗೆ ಬರೋ ಭರವಸೆ ಸದ್ಯ ಯಾರಿಗೂ ಇಲ್ಲದಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಭಾರತದಲ್ಲಿ ಆಗುತ್ತಿರೋ ರಸ್ತೆ ಅಪಘಾತ. ಇಡಿ ವಿಶ್ವದಲ್ಲೆ ರಸ್ತೆ ಅಪಘಾತದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. 2024 ರಲ್ಲಿ ಭಾರತದಲ್ಲಿ ರಸ್ತೆ ಅಪಘಾತಗಳಿಂದ ಸರಾಸರಿ ಪ್ರತಿದಿನ 475 ರಿಂದ 490 ಜನ ಸಾವಿಗೀಡಾಗಿದ್ದಾರೆ. ಇದು 2025 ರಲ್ಲಿ ಇಲ್ಲಿಯವರೆಗೆ ಶೇ 4.5 ರಷ್ಟು ಏರಿಕೆ ಯಾಗಿದೆ. 2024 ರಲ್ಲಿ 1.78 ಲಕ್ಷದಿಂದ 1.82 ಲಕ್ಷಜನ ರಸ್ತೆ ಅಪಘಾತಗಳಲ್ಲಿ ಸಾವಿಗಿಡಾಗಿದ್ರೆ, 2025ರ ಇಲ್ಲಿಯವರೆಗೆ 1.6 ಲಕ್ಷಜನ ರಸ್ತೆ ಅಪಘಾತದಲ್ಲಿ ಸಾವಿಗಿಡಾಗಿದ್ದಾರೆ. ಇನ್ನು 2025 ಮುಗಿಯೋದಕ್ಕೆ 5 ತಿಂಗಳು ಬಾಕಿ ಇದ್ದು ಇನ್ನು ಅದೆಷ್ಟು ಜನ ಅಪಘಾತದಲ್ಲಿ ಸಾವಿಗೀಡಾಗ್ತಾರೊ ಗೊತ್ತಿಲ್ಲ.
2022 ರ ವರದಿ ಅನ್ವಯ ಭಾರತದಲ್ಲಿ ಅತಿಹೆಚ್ಚು ಅಪಘಾತವಾಗುವ ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿದ್ದು ತಮಿಳುನಾಡು, ಎರಡನೇ ಸ್ಥಾನದಲ್ಲಿ ಮಧ್ಯಪ್ರದೇಶ ಮತ್ತು ಮೂರನೆ ಸ್ಥಾನದಲ್ಲಿ ಉತ್ತರ ಪ್ರದೇಶ ರಾಜ್ಯಗಳಿವೆ. ಅದೇ ರೀತಿ ಹೆಚ್ಚುಜನ ಅಪಘಾತದಲ್ಲಿ ಸಾವಿಗೀಡಾಗೊ ನಗರ ಅಂದ್ರೆ ಅದು ನವದೆಹಲಿ.
ಈ ಎಲ್ಲಾ ವರದಿಯ ಮಧ್ಯೆ, ಅದೊಂದು ರಾಜ್ಯದ ಆ ದಿಟ್ಟ ನಡೆಯಿಂದ ಆ ರಾಜ್ಯದಲ್ಲಿ 2024 ರಿಂದ ಇಲ್ಲಿಯವರೆಗೆ ಬರೋಬ್ಬರಿ 35000 ಸಾವಿರ ಜನರ ಜೀವ ಉಳಿದಿದೆ ಅಂತೆ. ಹೌದು ಪಂಜಾಬ್ ನ ಸಿಎಂ ಭಗವಂತ್ ಮಾನ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ರಸ್ತೆ ಸುರಕ್ಷಾ ಪಡೆಯನ್ನ 2024ರ ಜನವರಿಯಲ್ಲಿ ಆರಂಭ ಮಾಡಿದ್ರು. ಈ ಪಡೆ, ಒಂದು ವರ್ಷದ ಅವಧಿಯಲ್ಲಿ 35,000 ಕ್ಕೂ ಹೆಚ್ಚು ಜೀವಗಳನ್ನು ಉಳಿಸುವ ಮೂಲಕ ಪಂಜಾಬ್‌ನ ರಸ್ತೆಗಳನ್ನು ಸುರಕ್ಷಿತಗೊಳಿಸುವ ಭರವಸೆಯನ್ನು ಈಡೇರಿಸಿದೆ.
ಪಂಜಾಬ್ ರಾಜ್ಯದಲ್ಲಿ 4100 ಕಿ.ಮೀ ರಸ್ತೆ ಜಾಲವಿದ್ದು, ಅದರಲ್ಲಿ ಪ್ರತಿ 30 ಕಿ.ಮೀ.ಗೆ ಒಂದೋಂದು SSF ತಂಡವನ್ನ ನಿಯೋಜಿಸಲಾಗಿದೆ. SSF ಅಂದರೇ, ಸಡಕ್ ಸೇಫ್ಟಿ ಪೋರ್ಸ್ ಎಂದರ್ಥ. ರಸ್ತೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಎಸ್‌ಎಸ್‌ಎಫ್ ಅನ್ನು ಪಂಜಾಬ್ ಸರ್ಕಾರ ಆರಂಭಿಸಿದೆ. ಸಡಕ್ ಸೇಫ್ಟಿ ಪೋರ್ಸ್ ನ ಪ್ರತಿ ತಂಡಗಳ ಬಳಿ ಟೊಯೋಟಾ ಹಿಲಕ್ಸ್ ಮತ್ತು ಮಹೀಂದ್ರಾ ಸ್ಕಾರ್ಪಿಯೋದಂತಹ ಹೈಟೆಕ್ ವಾಹನಗಳನ್ನು ನೀಡಲಾಗಿದೆ.
ಯಾವುದೇ ರಸ್ತೆ ಅಪಘಾತದ ಬಗ್ಗೆ ಮಾಹಿತಿ ಸಿಕ್ಕ ಕೇವಲ 5-7 ನಿಮಿಷಗಳಲ್ಲಿ SSF ತಂಡ ಘಟನಾ ಸ್ಥಳಕ್ಕೆ ತಲುಪಿ, ಅಪಘಾತಕ್ಕೆ ಒಳಗಾದ ವ್ಯಕ್ತಿಗಳಿಗೆ ಪ್ರಥಮ ಚಿಕಿತ್ಸೆ ನೀಡುವ ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವ ಕಾರ್ಯವನ್ನು ಈ ಪಡೆ ಮಾಡುತ್ತೆ ಎಂದು ಪಂಜಾಬ್‌ನ ವಿಶೇಷ ಪೊಲೀಸ್ ಮಹಾನಿರ್ದೇಶಕ ಎ.ಎಸ್. ರೈ ಹೇಳಿದ್ದಾರೆ.
ಪಂಜಾಬ್ ಸಡಕ್ ಸೇಫ್ಟಿ ಪೋರ್ಸ್ ನ ಮಹಿಳಾ ಪೊಲೀಸರ ತಂಡ.
ವಿಶೇಷವೆಂದರೆ 2024 ರಲ್ಲಿ, ಎಸ್‌ಎಸ್‌ಎಫ್ ನಿಯೋಜಿಸಲಾದ ಪ್ರದೇಶಗಳಲ್ಲಿ ಶಾಲೆಗೆ ಹೋಗುವಾಗ ಅಥವಾ ಹಿಂತಿರುಗುವಾಗ ಯಾವುದೇ ಮಗು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿಲ್ಲ ಎಂಬುದು ಗಮನಾರ್ಹ ಸಂಗತಿ. SSF ತಂಡದಲ್ಲಿ ಶೇ. 28 ರಷ್ಟು ಮಹಿಳೆಯರಿದ್ದು ಅವರು ರಸ್ತೆ ಸುರಕ್ಷತೆಯ ಕಾರ್ಯದ ಜೊತೆಗೆ ಮಾದಕವಸ್ತು ಕಳ್ಳಸಾಗಣೆ ಮತ್ತು ಕಳ್ಳತನದಂತಹ ಅಪರಾಧಗಳನ್ನು ತಡೆಯುತ್ತಿದ್ದಾರಂತೆ. ಇದರ ಜೊತೆಗೆ ಈ ಪಡೆ 12 ಜನರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆದಿದೆಯಂತೆ. ಜೊತೆಗೆ ತಡರಾತ್ರಿ ಪ್ರಯಾಣಿಸುವ ಮಹಿಳೆಯರು, ಶಾಲಾ ಮಕ್ಕಳು ಮತ್ತು ಪ್ರವಾಸಿಗರ ಸುರಕ್ಷತೆಯಲ್ಲೂ ಈ ತಂಡದ ಕಾರ್ಯ ಶ್ಲಾಘನೀಯ.
ಈ ಮಟ್ಟಕ್ಕೆ SSF ತಂಡ ಕಾರ್ಯ ನಿರ್ವಹಿಸೋದಕ್ಕೆ ಮೂಲಕಾರಣ, ತಂಡಕ್ಕೆ ನೀಡಿರೋ ಅತ್ಯಾಧುನಿಕ ಸೌಕರ್ಯಗಳು. ಪ್ರತಿತಂಡಗಳ ಬಳಿ ಸ್ಪೀಡ್ ಗನ್ ವಾಹನಗಳು, ಬಾಡಿ ಕ್ಯಾಮೆರಾಗಳು, ಇ-ಚಲನ್, ಮೊಬೈಲ್ ಡೇಟಾ ಮತ್ತು AI ತಂತ್ರಜ್ಞಾನದೊಂದಿಗೆ SSF ತಂಡವನ್ನ ಸಜ್ಜುಗೊಳಿಸಲಾಗಿದೆ. ಇದರಿಂದ SSF ತಂಡದ ಪಾರದರ್ಶಕ ಪೊಲೀಸ್ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಕಂಡುಬಂದಿದೆ.
ಈ ಎಲ್ಲಾ ಕಾರಣಗಳಿಂದ ಆಸ್ಪತ್ರೆ ವೆಚ್ಚಗಳು ಕಡಿಮೆಯಾಗಿವೆ, ವಿಮೆಯ ಕ್ಲೈಮ್ ಕಡಿಮೆಯಾಗಿವೆ, ಪ್ರವಾಸೋದ್ಯಮ ಹೆಚ್ಚಾಗಿದೆ ಮತ್ತು ಸಂಚಾರ ವ್ಯವಸ್ಥೆ ಸುಧಾರಿಸಿದೆ ಅಂತ ಪಂಜಾಬ್ ಸಿಎಂ ಭಗವಂತ್ ಮಾನ್ ಹೇಳಿದ್ದಾರೆ.
ಅದೇನೆ ಇರಲಿ ಸರ್ಕಾರ ಮನಸ್ಸು ಮಾಡಿದ್ರೆ ಎಲ್ಲಾ ಸಮಸ್ಯಗಳಿಗೂ ಪರಹಾರ ಸಿಕ್ಕೆಸಿಗುತ್ತೆ ಅನ್ನೋದಕ್ಕೆ ಈ ಸಡಕ್ ಸೇಫ್ಟಿ ಪೋರ್ಸ್ ಕಾರ್ಯನಿರ್ವಹಣೆಯೇ ಸಾಕ್ಷಿಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.