/newsfirstlive-kannada/media/media_files/2025/10/17/looteri-dulhan-arrested-2025-10-17-18-14-31.jpg)
ಲೂಟಿ ಮಾಡುವ ವಧು ಕಾಜಲ್ ಬಂಧಿಸಿದ ಪೊಲೀಸರು!
- ಲೂಟಿ ಮಾಡುವ ವಧು ಕಾಜಲ್ ಬಂಧಿಸಿದ ಪೊಲೀಸರು!
- ಮದುವೆಯಾಗಿ ಮೂರೇ ದಿನಕ್ಕೆ ಹಣ, ಚಿನ್ನಾಭರಣದೊಂದಿಗೆ ಕಾಜಲ್ ನಾಪತ್ತೆ
- ಒಂದು ವರ್ಷದ ಬಳಿಕ ಆರೋಪಿ ಕಾಜಲ್ ಬಂಧಿಸಿದ ಸಿಕರ್ ಜಿಲ್ಲಾ ಪೊಲೀಸ್
ಒಂದು ವರ್ಷಕ್ಕೂ ಹೆಚ್ಚು ಕಾಲ, ಅವಳು ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಳು. ನಗರ, ಸಿಮ್ ಕಾರ್ಡ್, ಐಡೆಂಟಿಟಿಯನ್ನು ಸಿನಿಮಾ ಶೈಲಿಯಲ್ಲಿ ಬದಲಾಯಿಸಿಕೊಂಡು ಊರಿಂದ ಊರಿಗೆ ಓಡಾಡುತ್ತಿದ್ದಳು. ನೋಡಲು ಸುಂದರವಾದ ಈಕೆಯನ್ನು ಹಿಂದಿ ಭಾಷೆಯಲ್ಲಿ ಲೂಟೇರಿ ದುಲ್ಹನ್ ಅಂತ ಕರೆಯುತ್ತಾರೆ. ಅಂದರೇ, ಲೂಟಿ ಮಾಡುವ ವಧು ಎಂದರ್ಥ. ಮದುವೆಯಾಗಿ ಗಂಡನ ಮನೆಯಿಂದ ಹಣ, ಚಿನ್ನಾಭರಣವನ್ನು ಲೂಟಿ ಮಾಡಿಕೊಂಡು ಪರಾರಿಯಾಗುವ ಹೆಣ್ಣು ಎಂದರ್ಥ. ಮದುವೆಯ ಪವಿತ್ರ ಬಂಧನವನ್ನು ವಂಚನೆಯ ಸಾಧನವನ್ನಾಗಿ ಮಾಡಿಕೊಂಡಿದ್ದಳು. ಈಕೆಯೇ ಕಾಜಲ್. ಈಕೆ ಮೂಲತಃ ಉತ್ತರ ಪ್ರದೇಶದ ಮಥುರಾದ ಗೋವರ್ಧನ್ ಪ್ರದೇಶದವಳು. ತನ್ನ ತಂದೆ, ತಾಯಿ ಹಾಗೂ ಸೋದರಿ ಜೊತೆ ಸೇರಿ ಮದುವೆಯಾಗದ ಹುಡುಗರನ್ನು ಹಣದಾಸೆಗಾಗಿ ಮದುವೆಯಾಗಿ ವಂಚಿಸುವುದೇ ಈಕೆಯ ಕಾಯಕ.
ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ ರಾಜ್ಯಗಳಲ್ಲಿ ಜನರಿಗೆ ಮದುವೆ ಹೆಸರಿನಲ್ಲಿ ಕಾಜಲ್ ಜನರಿಗೆ ವಂಚಿಸಿದ್ದಳು. ಸುಳ್ಳು , ನಕಲಿ ವಿವಾಹ, ಭಾವನಾತ್ಮಕವಾಗಿ ಜನರನ್ನು ಮರಳು ಮಾಡಿ, ಮೋಸಗೊಳಿಸುವ ಕಲೆ ಕರಗತವಾಗಿತ್ತು. ಮದುವೆಯಾಗದ ಹುಡುಗರನ್ನು ಹುಡುಕಿ ಅವರಿಂದ ಮದುವೆಗೆ ವಧುದಕ್ಷಿಣೆಯಾಗಿ 10 ರಿಂದ 12 ಲಕ್ಷ ರೂಪಾಯಿ ಹಣ ಪಡೆದು ಒಂದೆರೆಡು ದಿನದಲ್ಲೇ ಮದುವೆಯಾದ ಗಂಡನ ಮನೆಯಿಂದಲೇ ನಾಪತ್ತೆಯಾಗುತ್ತಿದ್ದಳು. ಈಕೆಯ ವಿರುದ್ಧ ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
ಈ ಸುಂದರಿ ಕಾಜಲ್ ಳನ್ನು ಬಂಧಿಸುವಲ್ಲಿ ರಾಜಸ್ಥಾನ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಕಳೆದ ಒಂದು ವರ್ಷದಿಂದ ಈಕೆಗಾಗಿ ರಾಜಸ್ಥಾನದ ಸಿಕರ್ ಜಿಲ್ಲೆಯ ಪೊಲೀಸರು ಹುಡುಕಾಟ ನಡೆಸಿದ್ದರು. ಅಂತಿಮವಾಗಿ ಈಗ ಹರಿಯಾಣದ ಗುರುಗ್ರಾಮದ ಸರಸ್ವತಿ ಎನ್ ಕ್ಲೇವ್ ನಲ್ಲಿ ಕಾಜಲ್ ಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಜೀನ್ಸ್ ಪ್ಯಾಂಟ್ , ಟೀ ಶರ್ಟ್ ಧರಿಸಿಕೊಂಡು ಬಾಡಿಗೆ ಮನೆಯಲ್ಲಿ ಆರಾಮಾಗಿ ಇದ್ದ ಕಾಜಲ್ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಕಾಜಲ್ ಕೈಯಲ್ಲಿ ಇನ್ನೂ ಮದುವೆ ಹೆಣ್ಣಿನ ಮೆಹಂದಿ ಇತ್ತು. ಆದರೇ, ಪೊಲೀಸರು ಆಕೆಯ ಬಾಡಿಗೆ ರೂಮುಗೆ ಬಂದಾಗಲೂ ಶಾಂತವಾಗಿದ್ದಳು, ಮುಖದಲ್ಲಿ ನಗು ಇತ್ತು. ಯಾವುದೇ ಭಯ, ಆತಂಕ ಎಳ್ಳಷ್ಟೂ ಇರಲಿಲ್ಲ.
ಪೊಲೀಸರು ಹೇಳುವಂತೆ, ಕಾಜಲ್, ಮದುವೆ ವಂಚನೆಗಳು ಹಠಾತ್ ಆಗಿ ನಡೆದಿರುವಂಥದ್ದಲ್ಲ. ಎಲ್ಲವೂ ಪ್ಲ್ಯಾನ್ ಆಗಿ ಮಾಡಿರುವಂಥವುಗಳೇ ಆಗಿವೆ. ಒಬ್ಬಿಬ್ಬರಿಗೆ ಅಲ್ಲ, ಹತ್ತಾರು ಮಂದಿಗೆ ಮದುವೆ ಹೆಣ್ಣಿನ ಹೆಸರಿನಲ್ಲಿ ಮೋಸ ಮಾಡಿ ಹಣ, ಚಿನ್ನಾಭರಣದೊಂದಿಗೆ ಈ ಕಾಜಲ್ ಹಾಗೂ ಆಕೆಯ ಸೋದರಿ ತಮನ್ನಾ ಇಬ್ಬರೂ ನಾಪತ್ತೆಯಾಗುತ್ತಿದ್ದರು.
ಆಕೆಯ ತಂದೆ ಭಗವತ್ ಸಿಂಗ್ ರೂಪಿಸಿದ ಕುಟುಂಬ ನಡೆಸುವ "ವಿವಾಹಿತ-ಪಲಾಯನ" ಸಿಂಡಿಕೇಟ್‌ನ ಭಾಗವಾಗಿದ್ದಳು. ಈ ಗುಂಪು ಗ್ರಾಮೀಣ ಮತ್ತು ಸಣ್ಣ ಪಟ್ಟಣದ ಹಿನ್ನೆಲೆಯಿಂದ ಬಂದ ಹತಾಶ ಅವಿವಾಹಿತರನ್ನು ಭೇಟಿಯಾಗಿ ಮದುವೆಯಾಗಿ ವಂಚಿಸುತ್ತಿದ್ದರು. ಸಾಮಾಜಿಕ ಅಥವಾ ಆರ್ಥಿಕ ಕಾರಣಗಳಿಂದಾಗಿ ವಧುಗಳನ್ನು ಹುಡುಕಲು ಹೆಣಗಾಡುತ್ತಿದ್ದ ಆದರೆ ಬೇಗನೇ ಮದುವೆಗೆ ಭಾರಿ ಮೊತ್ತವನ್ನು ಪಾವತಿಸಲು ರೆಡಿ ಇದ್ದ ಹುಡುಗರನ್ನು ಹುಡುಕುತ್ತಿದ್ದರು.
ಭಗವತ್ ಸಿಂಗ್ ಮತ್ತು ಅವರ ಪತ್ನಿ ಸರೋಜ್ ದೇವಿ ಗೌರವಾನ್ವಿತ ಪೋಷಕರ ಪಾತ್ರವನ್ನು ನಿರ್ವಹಿಸುತ್ತಿದ್ದರು. ಅವರ ಹೆಣ್ಣುಮಕ್ಕಳಾದ ಕಾಜಲ್ ಮತ್ತು ತಮನ್ನಾ ಅವರನ್ನು ಗಂಡು ಅನ್ನು ಹುಡುಕುವ ಆದರ್ಶ, ಮನೆಮಂದಿ ಹುಡುಗಿಯರಾಗಿ ಬೇರೆಯವರಿಗೆ ಪರಿಚಯಿಸುತ್ತಿದ್ದರು. ಮದುವೆಯಾಗುವ ಹುಡುಗ ಬಕ್ರಾಗಳು ಸಿಕ್ಕ ನಂತರ ಮದುವೆಯನ್ನು ಆಯೋಜಿಸುತ್ತಿದ್ದರು. ಮದುವೆಯ ಸಿದ್ದತೆಗಾಗಿ ಲಕ್ಷಾಂತರ ರೂಪಾಯಿ ಹಣ ಬೇಕೆಂದು ಹುಡುಗನ ಕಡೆಯಿಂದ 10 ರಿಂದ 12 ಲಕ್ಷ ರೂಪಾಯಿ ಹಣವನ್ನು ಕೀಳುತ್ತಿದ್ದರು.
ಈ ಭಗವತ್ ಸಿಂಗ್, ಸರೋಜ್ ದೇವಿ, ಕಾಜಲ್, ತಮನ್ನಾ ಕುಟುಂಬವು ರಾಜಸ್ಥಾನದ ಸಿಕರ್ ಜಿಲ್ಲೆಯಲ್ಲಿ ತಾರಾಚಂದ್ ಜಾಟ್ ಎಂಬ ರೈತನನ್ನು ಮದುವೆಯಾಗುವುದಾಗಿ ನಂಬಿಸಿ ವಂಚಿಸಿದೆ. ತಾರಾಚಂದ್ ಜಾಟ್, 2024ರ ನವಂಬರ್ 24 ರಂದು ಜೈಪುರದಲ್ಲಿ ಭಗವತ್ ಸಿಂಗ್ ರನ್ನು ಭೇಟಿಯಾಗಿದ್ದರು. ತಮ್ಮ ಗಂಡು ಮಕ್ಕಳಾದ ಭವರ್ ಲಾಲ್, ಶಂಕರ್ ಲಾಲ್ ಇಬ್ಬರಿಗೂ ಕಾಜಲ್ ಮತ್ತು ತಮನ್ನಾರ ಮದುವೆ ಪ್ರಸ್ತಾಪ ಇಟ್ಟಿದ್ದರು. ಮದುವೆ ವೆಚ್ಚವಾಗಿ 11 ಲಕ್ಷ ರೂಪಾಯಿ ನೀಡಬೇಕೆಂದು ಬೇಡಿಕೆ ಇಟ್ಟಿದ್ದರು.
ಮೇ 21, 2024 ರಂದು, ಕ ಖಚರಿಯಾವಾಸ್‌ನಲ್ಲಿರುವ ಗೋವಿಂದ್ ಆಸ್ಪತ್ರೆಯ ಬಳಿಯ ಅತಿಥಿಗೃಹದಲ್ಲಿ ಕಾಜಲ್ ಮತ್ತು ತಮನ್ನಾ ಇಬ್ಬರೂ ಸೋದರರಾದ ಭವರ್ ಲಾಲ್ ಮತ್ತು ಶಂಕರ್ ಲಾಲ್ ರನ್ನು ವಿವಾಹವಾಗಿದ್ದರು. 2 ದಿನಗಳ ಕಾಲ ಮಾತ್ರ ನವವಿವಾಹಿತ ಕಾಜಲ್, ತಮನ್ನಾ ಅತ್ತೆ, ಮಾವನೊಂದಿಗೆ ವಾಸವಾಗಿದ್ದರು. ಮನೆಯವರ ನಂಬಿಕೆಯನ್ನು ಗಳಿಸಿದ್ದರು. ಮೂರನೇ ದಿನದ ಬೆಳಿಗ್ಗೆ ಮನೆಯಲ್ಲಿದ್ದ ಚಿನ್ನಾಭರಣ, ಕ್ಯಾಶ್ , ಮದುವೆ ಉಡುಗೊರೆ ಹೊತ್ತಿಕೊಂಡು ಮನೆಯಿಂದಲೇ ಪರಾರಿಯಾಗಿದ್ದರು. ಮೂರನೇ ದಿನದ ಬೆಳಿಗ್ಗೆ ಎದ್ದಾಗ, ತಾರಾಚಂದ್ ಜಾಟ್ ಕುಟುಂಬಕ್ಕೆ ಶಾಕ್ ಆಗಿತ್ತು. ಮನೆಯ ಇಬ್ಬರು ಹೊಸ ಸೊಸೆಯಂದಿರು ನಾಪತ್ತೆಯಾಗಿದ್ದರು. ಮದುವೆ ಹೆಣ್ಣುಗಳು ನಾಪತ್ತೆಯಾಗಿದ್ದರು. ತಾರಾಚಂದ್ ಜಾಟ್ ತಮ್ಮ ಉಳಿತಾಯದ ಹಣ ಮಾತ್ರವಲ್ಲದೇ, ಚಿನ್ನಾಭರಣವನ್ನು ಕಳೆದುಕೊಂಡಿದ್ದರು. ನೆರೆಹೊರೆಯವರು ಮತ್ತು ಸಂಬಂಧಿಕರಿಂದ ಅಪಹಾಸ್ಯವನ್ನು ಸಹ ಎದುರಿಸಬೇಕಾಯಿತು.
ಈ ಮದುವೆ ಮೋಸದ ಬಗ್ಗೆ ತಾರಾಚಂದ್ ಜಾಟ್ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಭಗವತ್ ಸಿಂಗ್, ಪತ್ನಿ ಸರೋಜ್ ದೇವಿ, ತಮನ್ನಾ ರನ್ನು ಬಂಧಿಸಿದ್ದರು. ಆದರೇ, ಕಾಜಲ್ ಮಾತ್ರ ಸಿಕ್ಕಿಬಿದ್ದಿರಲಿಲ್ಲ. ಈಗ ಕೊನೆಗೂ ಕಾಜಲ್ ಕೂಡ ಪೊಲೀಸರ ಬಲೆಗೆ ಬಿದ್ದಿದ್ದಾಳೆ.
ಪೊಲೀಸ್ ಠಾಣೆಗೆ ನಗುಮೊಗದಿಂದಲೇ ಬಂದಿದ್ದಾಳೆ. ಕ್ಯಾಮರಾಗೂ ಪೋಸ್ ನೀಡಿದ್ದಾಳೆ.
ಕಾಜಲ್ ಗ್ಯಾಂಗ್ ರಾಜಸ್ಥಾನ, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಕನಿಷ್ಠ ಅರ್ಧ ಡಜನ್ ಇದೇ ರೀತಿಯ ವಂಚನೆಗಳನ್ನು ನಡೆಸಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಆಕೆಯ ಬಂಧನದ ಸುದ್ದಿ ವರದಿಗಳನ್ನು ನೋಡಿದ ನಂತರ ಹಲವಾರು ಈಗಾಗಲೇ ಪೊಲೀಸರನ್ನು ಸಂಪರ್ಕಿಸಿದ್ದಾರೆ.
"ಅವಳು ಹಲವು ಬಾರಿ ಮದುವೆಯಾಗಿ ನಾಪತ್ತೆಯಾಗಿರಬಹುದು" ಎಂದು ಅಧಿಕಾರಿಯೊಬ್ಬರು ಹೇಳಿದರು, ಪೊಲೀಸರು ಮದುವೆ ಬ್ಯೂರೋ ದಾಖಲೆಗಳು ಮತ್ತು ಕುಟುಂಬಕ್ಕೆ ಸಂಬಂಧಿಸಿದ ಹಣಕಾಸಿನ ವಹಿವಾಟುಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.