/newsfirstlive-kannada/media/media_files/2025/09/11/kuvempu-2025-09-11-19-44-25.jpg)
ಕವಿ ಕುವೆಂಪು ಅವರಿಗೆ ಭಾರತ ರತ್ನ ಪುರಸ್ಕಾರ ನೀಡಲು ಕೇಂದ್ರಕ್ಕೆ ಶಿಫಾರಸ್ಸು
ರಾಷ್ಟ್ರಕವಿ ಕುವೆಂಪು ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪುರಸ್ಕಾರ ನೀಡಲು ರಾಜ್ಯದ ಕ್ಯಾಬಿನೆಟ್ ಸಭೆಯು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ತೀರ್ಮಾನಿಸಿದೆ. ರಾಜ್ಯದ ಕ್ಯಾಬಿನೆಟ್ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಈ ಶಿಫಾರಸ್ಸಿನ ಬಗ್ಗೆ ಈಗ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕಾಗಿದೆ. ಕರ್ನಾಟಕ ಸರ್ಕಾರವು ಈ ಹಿಂದೆ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾಗಿದ್ದ ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ಪುರಸ್ಕಾರ ನೀಡಬೇಕೆಂದು ಕೂಡ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಅದರ ಬಗ್ಗೆಯೂ ಕೇಂದ್ರ ಸರ್ಕಾರ ಇದುವರೆಗೂ ಯಾವುದೇ ತೀರ್ಮಾನ ಕೈಗೊಂಡಿಲ್ಲ.
ಇನ್ನೂ 2024 ರಲ್ಲಿ ಕೇಂದ್ರದ ಮೋದಿ ಸರ್ಕಾರವು ಬಿಹಾರದ ಮಾಜಿ ಸಿಎಂ ಕರ್ಪೂರಿ ಠಾಕೂರ್, ಬಿಜೆಪಿಯ ಭೀಷ್ಮ ಎಲ್.ಕೆ.ಅಡ್ವಾಣಿ, ಕೃಷಿ ವಿಜ್ಞಾನಿ ಎಂ.ಎಸ್.ಸ್ವಾಮಿನಾಥನ್, ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸಿದೆ.
ಇನ್ನೂ ಕರ್ನಾಟಕದಿಂದ ಇದುವರೆಗೂ ಭಾರತ ರತ್ನ ಪುರಸ್ಕಾರ ಪಡೆದವರೆಂದರೇ, ಸರ್ ಎಂ.ವಿಶ್ವೇಶ್ವರಯ್ಯ, ಭೀಮಸೇನ ಜೋಶಿ ಹಾಗೂ ಸಿಎನ್.ಆರ್. ರಾವ್ ಅವರಿಗೆ ಭಾರತ ರತ್ನ ನೀಡಲಾಗಿದೆ.
ಇನ್ನೂ ಕುವೆಂಪು ಅವರದ್ದು ಅಪಾರ ಸಾಹಿತ್ಯ ಕೃಷಿ. ಸಾಹಿತ್ಯ ಕ್ಷೇತ್ರದ ಕೊಡುಗೆಗಾಗಿ ಕುವೆಂಪು ಅವರಿಗೆ ಭಾರತ ರತ್ನ ಪುರಸ್ಕಾರ ನೀಡಬೇಕೆಂದು ಕರ್ನಾಟಕ ಸರ್ಕಾರ ಈಗ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಕುವೆಂಪು ಅವರು ದೆಹಲಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಕ್ಷಣ.
ಕುವೆಂಪು ಅವರು 20ನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ಅವರೊಬ್ಬ ರಸಋಷಿ. ತಮ್ಮ ಮೇರು ಕೃತಿ 'ಶ್ರೀ ರಾಮಾಯಣ ದರ್ಶನಂ'ನಲ್ಲಿ ಈ ಕಾಲಕ್ಕೆ ಅಗತ್ಯವಾದ ದರ್ಶನವನ್ನು ನೀಡಿದ್ದಾರೆ. ಅವರ ಎರಡು ಬೃಹತ್ ಕಾದಂಬರಿಗಳಾದ 'ಕಾನೂರು ಹೆಗ್ಗಡತಿ' ಹಾಗೂ 'ಮಲೆಗಳಲ್ಲಿ ಮದುಮಗಳು' ಅವರನ್ನು ಜಗತ್ತಿನ ಮಹಾನ್ ಕಾದಂಬರಿಕಾರರ ಸಾಲಿನಲ್ಲಿ ನಿಲ್ಲುವಂತೆ ಮಾಡಿವೆ. ಅವರ ನಾಟಕಗಳಿಗೆ ವೈಚಾರಿಕತೆಯ ಸ್ಪರ್ಶವಿದೆ. ಇನ್ನೂ ಕುವೆಂಪು ಅವರ ವಿವಿಧ ಪ್ರಾಕಾರದ ಸಾಹಿತ್ಯದ ವಿವರ ಇಲ್ಲಿದೆ , ಒಮ್ಮೆ ಓದಿ.
ಮಹಾಕಾವ್ಯ
ಶ್ರೀರಾಮಾಯಣ ದರ್ಶನಂ- 1949
ಖಂಡಕಾವ್ಯ
ಚಿತ್ರಾಂಗದ- 1936
ಕವನ ಸಂಕಲನಗಳು
ಕೊಳಲು (1930)
ಪಾಂಚಜನ್ಯ (1933)
ನವಿಲು (1934)
ಕಲಾಸುಂದರಿ (1934)
ಕಥನ ಕವನಗಳು (1937)
ಕೋಗಿಲೆ ಮತ್ತು ಸೋವಿಯಟ್ ರಷ್ಯಾ (1944)
ಪ್ರೇಮ ಕಾಶ್ಮೀರ (1946)
ಅಗ್ನಿಹಂಸ (1946)
ಕೃತ್ತಿಕೆ (1946)
ಪಕ್ಷಿಕಾಶಿ (1946)
ಕಿಂಕಿಣಿ (ವಚನ ಸಂಕಲನ) (1946)
ಷೋಡಶಿ (1946)
ಚಂದ್ರಮಂಚಕೆ ಬಾ ಚಕೋರಿ (1957)
ಇಕ್ಷುಗಂಗೋತ್ರಿ (1957)
ಅನಿಕೇತನ (1963)
ಜೇನಾಗುವ (1964)
ಅನುತ್ತರಾ (1965)
ಮಂತ್ರಾಕ್ಷತೆ (1966)
ಕದರಡಕೆ (1967)
ಪ್ರೇತಕ್ಯೂ (1967)
ಕುಟೀಚಕ (1967)
ಹೊನ್ನ ಹೊತ್ತಾರೆ (1976)
ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ (1981)
ಕಥಾ ಸಂಕಲನ
ಸಂನ್ಯಾಸಿ ಮತ್ತು ಇತರ ಕಥೆಗಳು (1936)
ನನ್ನ ದೇವರು ಮತ್ತು ಇತರ ಕಥೆಗಳು (1940)
ಕಾದಂಬರಿಗಳು
ಕಾನೂರು ಹೆಗ್ಗಡತಿ (1936)
ಮಲೆಗಳಲ್ಲಿ ಮದುಮಗಳು (1967)
ನಾಟಕಗಳು
ಯಮನ ಸೋಲು (1928)
ಜಲಗಾರ (1928)
ಬಿರುಗಾಳಿ (1930)
ವಾಲ್ಮೀಕಿಯ ಭಾಗ್ಯ (1931)
ಮಹಾರಾತ್ರಿ (1931)
ಸ್ಶಶಾನ ಕುರುಕ್ಷೇತ್ರಂ (1931)
ರಕ್ತಾಕ್ಷಿ (1933)
ಶೂದ್ರ ತಪಸ್ವಿ (1944)
ಬೆರಳ್‍ಗೆ ಕೊರಳ್ (1947)
ಬಲಿದಾನ (1948)
ಚಂದ್ರಹಾಸ (1963)
ಕಾನೀನ (1974)
ಪ್ರಬಂಧ
ಮಲೆನಾಡಿನ ಚಿತ್ರಗಳು (1933)
ವಿಮರ್ಶೆ
ಕಾವ್ಯವಿಹಾರ (1946)
ತಪೋನಂದನ (1950)
ವಿಭೂತಿಪೂಜೆ (1953)
ದ್ರೌಪದಿಯ ಶ್ರೀಮುಡಿ (1960)
ರಸೋ ವೈ ಸಃ (1963)
ಇತ್ಯಾದಿ (1970)
ಆತ್ಮಕಥೆ
ನೆನಪಿನ ದೋಣಿಯಲ್ಲಿ: ಕುವೆಂಪು ಮದುವೆ ಪ್ರಸಂಗ
ಜೀವನ ಚರಿತ್ರೆಗಳು
ಸ್ವಾಮಿ ವಿವೇಕಾನಂದ
ರಾಮಕೃಷ್ಣ ಪರಮಹಂಸ
ಅನುವಾದ
ಗುರುವಿನೊಡನೆ ದೇವರಡಿಗೆ (ಭಾಗ 1, 2) (1954)
ಕೊಲಂಬೋ ಇಂದ ಆಲ್ಮೋರಕೆ
ಭಾಷಣ-ಲೇಖನ
ಸಾಹಿತ್ಯ ಪ್ರಚಾರ (1930)
ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (1944)
ಷಷ್ಠಿನಮನ (1964)
ಮನುಜಮತ-ವಿಶ್ವಪಥ (1971)
ವಿಚಾರ ಕ್ರಾಂತಿಗೆ ಆಹ್ವಾನ (1976)
ಶಿಶು ಸಾಹಿತ್ಯ
ಅಮಲನ ಕಥೆ (1924)
ಮೋಡಣ್ಣನ ತಮ್ಮ (ನಾಟಕ) (1926)
ಹಾಳೂರು (1926)
ಬೊಮ್ಮನಹಳ್ಳಿಯ ಕಿಂದರಿಜೋಗಿ (1928)
ನನ್ನ ಗೋಪಾಲ (ನಾಟಕ) (1930)
ನನ್ನ ಮನೆ (1946)
ಮೇಘಪುರ (1947)
ಮರಿವಿಜ್ಞಾನಿ (1947)
ನರಿಗಳಿಗೇಕೆ ಕೋಡಿಲ್ಲ (1977)
ಇತರೆ
ಜನಪ್ರಿಯ ವಾಲ್ಮೀಕಿ ರಾಮಾಯಣ
ಆಯ್ದ ಸಂಕಲನಗಳು
ಕನ್ನಡ ಡಿಂಡಿಮ (1968)
ಕಬ್ಬಿಗನ ಕೈಬುಟ್ಟಿ (1973)
ಪ್ರಾರ್ಥನಾ ಗೀತಾಂಜಲಿ (1972)
ಇಷ್ಟೆಲ್ಲಾ ಸಾಹಿತ್ಯ ಕೃಷಿ ಮಾಡಿರುವ ಕುವೆಂಪು ಅವರು ಕರ್ನಾಟಕಕ್ಕೆ ಮೊದಲ ಜ್ಞಾನಪೀಠ ಪುರಸ್ಕಾರ ತಂದುಕೊಟ್ಟವರು. ಕುವೆಂಪು ಸಾಹಿತ್ಯ ಸೇವೆ, ಕೊಡುಗೆಗೆ ಭಾರತ ರತ್ನ ನೀಡಬೇಕು ಅನ್ನೋದು ಈಗ ಕರ್ನಾಟಕ ಸರ್ಕಾರಕ್ಕೆ ಅರಿವಾಗಿದೆ. ಹೀಗಾಗಿ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ರಾಜ್ಯದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.