/newsfirstlive-kannada/media/media_files/2025/10/20/rekha-junjanwala-02-2025-10-20-15-47-58.jpg)
ಷೇರು ಹೂಡಿಕೆದಾರೆ ರೇಖಾ ಜುಂಜುನವಾಲಾಗೆ ಭರ್ಜರಿ ಲಾಭ
ದಿವಂಗತ ಹಿರಿಯ ಹೂಡಿಕೆದಾರ ರಾಕೇಶ್ ಜುಂಜುನ್ವಾಲಾ ಅವರ ಪತ್ನಿ ರೇಖಾ ಜುಂಜುನ್ ವಾಲಾ ಅವರು ಈ ದೀಪಾವಳಿಯಲ್ಲಿ ಗಣನೀಯ ಲಾಭವನ್ನು ಕಂಡಿದ್ದಾರೆ. ಇಂದು( ಅಕ್ಟೋಬರ್ 20, 2025) ಕೆಲವೇ ನಿಮಿಷದಲ್ಲಿ ಬರೋಬ್ಬರಿ 67 ಕೋಟಿ ರೂಪಾಯಿ ಲಾಭ ಗಳಿಸಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಇಂದು ಟ್ರೆಂಡಿಂಗ್ ಶುರುವಾರ ತಕ್ಷಣವೇ ಫೆಡರಲ್ ಬ್ಯಾಂಕ್ ಷೇರುಗಳ ಬೆಲೆ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿವೆ. ಫೆಡರಲ್ ಬ್ಯಾಂಕ್ ನಲ್ಲಿ ರೇಖಾ ಜುಂಜುನ್ ವಾಲಾ ಶೇ.2.42 ರಷ್ಟು ಷೇರು ಹೊಂದಿದ್ದಾರೆ. ಫೆಡರಲ್ ಬ್ಯಾಂಕ್ ನಲ್ಲಿ 5.90 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದು, ಶೇ.2.42 ರಷ್ಟು ಷೇರು ಹೊಂದಿದ್ದಾರೆ. ಇಂದು ಫೆಡರಲ್ ಬ್ಯಾಂಕ್ ಷೇರು ಬೆಲೆ ಶೇ.5.34 ರಷ್ಟು ಏರಿಕೆ ಕಂಡು 223 ರೂಪಾಯಿಗೆ ಏರಿಕೆಯಾದವು. ಫೆಡರಲ್ ಬ್ಯಾಂಕ್ ಷೇರುಗಳು ಕಳೆದ ವಾರ 212 ರೂಪಾಯಿಗೆ ಮಾರಾಟವಾಗುತ್ತಿದ್ದವು. ಇಂದು ಪ್ರತಿಯೊಂದು ಷೇರು ಬೆಲೆಯು 11 ರೂಪಾಯಿ ಏರಿಕೆಯಾಗಿದ್ದರಿಂದ ರೇಖಾ ಜುಂಜುನವಾಲಾ ಅವರು ಹೊಂದಿರುವ ಷೇರುಗಳ ಮೌಲ್ಯವು 67 ಕೋಟಿ ರೂಪಾಯಿ ಏರಿಕೆ ಕಂಡಿತು. ಫೆಡರಲ್ ಬ್ಯಾಂಕ್ ಮಾರುಕಟ್ಟೆ ಬಂಡವಾಳವೂ 53,976 ಕೋಟಿ ರೂಪಾಯಿಗೆ ಏರಿತು.
ಈ ಏರಿಕೆಗೆ ಕಾರಣವೇನು?
ಫೆಡರಲ್ ಬ್ಯಾಂಕಿನ ಷೇರುಗಳ ಬೆಲೆಯಲ್ಲಿನ ಏರಿಕೆಗೆ ಪ್ರಮುಖ ಕಾರಣ ಬ್ಯಾಂಕಿನ ಎರಡನೇ ತ್ರೈಮಾಸಿಕದ ಅತ್ಯುತ್ತಮ ಫಲಿತಾಂಶಗಳು, ಇದು ನಿರೀಕ್ಷೆಗಳನ್ನು ಮೀರಿತು ಮತ್ತು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿತು.
ಮಾರುಕಟ್ಟೆ ತೆರೆದಂತೆ, ಖರೀದಿ ಭರಾಟೆ ಉಂಟಾಯಿತು. ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ಷೇರುಗಳು ವಹಿವಾಟು ನಡೆಸಿದವು. ಬಾಂಬೆ ಸ್ಟಾಕ್ ಎಕ್ಸ್ಚೇಂಜ್ (ಬಿಎಸ್ಇ) ನಲ್ಲಿ ಸುಮಾರು 5.22 ಲಕ್ಷ ಷೇರುಗಳು ವಹಿವಾಟು ನಡೆಸಲ್ಪಟ್ಟವು. ಇದರ ಮೊತ್ತ ರೂ. 11.51 ಕೋಟಿ. ತಾಂತ್ರಿಕವಾಗಿ, ಫೆಡರಲ್ ಬ್ಯಾಂಕಿನ ಷೇರುಗಳು ಬಲವಾದ ಸ್ಥಾನದಲ್ಲಿವೆ.
ಫೆಡರಲ್ ಬ್ಯಾಂಕ್ ಷೇರುಗಳ ಸಾಪೇಕ್ಷ ಸಾಮರ್ಥ್ಯ ಸೂಚ್ಯಂಕ (ಆರ್‌ಎಸ್‌ಐ) 68.2 ರಷ್ಟಿದೆ, ಇದು ಷೇರುಗಳನ್ನು ಅತಿಯಾಗಿ ಖರೀದಿಸಲಾಗಿಲ್ಲ ಅಥವಾ ಅತಿಯಾಗಿ ಮಾರಾಟ ಮಾಡಲಾಗಿಲ್ಲ ಎಂದು ಸೂಚಿಸುತ್ತದೆ. ಹೆಚ್ಚುವರಿಯಾಗಿ, ಷೇರು ಬೆಲೆ 5-ದಿನ, 20-ದಿನ, 50-ದಿನ, 100-ದಿನ ಮತ್ತು 200-ದಿನಗಳ ಚಲಿಸುವ ಸರಾಸರಿಗಿಂತ ಹೆಚ್ಚಾಗಿದೆ.
ಮಾರ್ಚ್ 2025 ರಲ್ಲಿ, ಫೆಡರಲ್ ಬ್ಯಾಂಕಿನ ಷೇರುಗಳು ರೂ. 172.95 ಕ್ಕೆ ಇಳಿದಿದ್ದವು. ಆದರೆ ಈಗ ಅವು ಸುಮಾರು 30% ರಷ್ಟು ಹೆಚ್ಚಿನ ಏರಿಕೆ ಕಂಡಿವೆ. ಆ ಸಮಯದಲ್ಲಿ ಷೇರುಗಳನ್ನು ಖರೀದಿಸಿದ ಹೂಡಿಕೆದಾರರು ಅತ್ಯುತ್ತಮ ಆದಾಯವನ್ನು ಗಳಿಸಿದ್ದಾರೆ, ರೇಖಾ ಜುಂಜುನ್‌ವಾಲಾ ಅವರಂತಹ ದೊಡ್ಡ ಹೂಡಿಕೆದಾರರು ಗಮನಾರ್ಹ ಲಾಭಗಳನ್ನು ಗಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.