/newsfirstlive-kannada/media/media_files/2025/09/22/special-26-cinema-style-robberry-2025-09-22-12-24-36.jpg)
ಸ್ಪೆಷಲ್ 26 ಸಿನಿಮಾ ಸ್ಟೈಲ್ ನಲ್ಲಿ ಬೆಂಗಳೂರಿನಲ್ಲಿ ದರೋಡೆ
ಬೆಂಗಳೂರಿನಲ್ಲಿ ಸ್ಪೆಷಲ್ 26 ಸಿನಿಮಾ ಸ್ಟೈಲ್ ನಲ್ಲಿ ಗ್ರೇಟ್ ರಾಬರಿ ನಡೆದಿದೆ. ಬೆಂಗಳೂರಿನ ಯಲಹಂಕದಲ್ಲಿರುವ ಗಿರಿರಾಜ್ ಅವರ ನುಗ್ಗಿದ ಕಳ್ಳರು ನಾವು ಡಿಪಾರ್ಟ್ ಮೆಂಟ್ ನವರು ಎಂದು ಹೇಳಿ, ಮನೆಯಲ್ಲಿ ಹಣ ಎಲ್ಲಿದೆ ಎಂದು ಕೇಳಿದ್ದಾರೆ. ಅಡುಗೆ ಮನೆಯಲ್ಲಿ ಚೀಲದಲ್ಲಿ ಹಣ ಇಟ್ಟಿದ್ದೇವೆ ಎಂದು ಮನೆಯಲ್ಲಿದ್ದ ಮಹಿಳೆಯರು ಹೇಳಿದ್ದಾರೆ. ಜಮೀನು ಖರೀದಿಗಾಗಿ ಹಣ ತಂದು ಮನೆಯಲ್ಲಿ ಇಟ್ಟುಕೊಂಡಿದ್ದರು. ನಂತರ ಮನೆ ಮಾಲೀಕ ಗಿರಿರಾಜು ಎಲ್ಲಿ ಎಂದಿದ್ದಾರೆ. ಅವರು ಇಲ್ಲ, ಎಂದು ಮನೆಯವರು ಹೇಳಿದ ಬಳಿಕ ಹಣದ ಚೀಲವನ್ನು ಆರೋಪಿಗಳು ತೆಗೆದುಕೊಂಡು ಹೋಗಿದ್ದಾರೆ. ಗಿರಿರಾಜು ಮನೆಯಲ್ಲಿದ್ದ ಒಂದೂವರೆ ಕೋಟಿ ರೂಪಾಯಿ ನಗದು, 50 ಗ್ರಾಂ ಚಿನ್ನದ ಆಭರಣವನ್ನು ದೋಚಿಕೊಂಡು ದರೋಡೆಕೋರರ ಗ್ಯಾಂಗ್ ಪರಾರಿಯಾಗಿದೆ. ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಇನ್ನೋವಾ ಕಾರಿನಲ್ಲಿ ಬಂದಿದ್ದ ನಾಲ್ವರು ಆರೋಪಿಗಳು ಗಿರಿರಾಜ್ ಮನೆ ದೋಚಿ ಪರಾರಿಯಾಗಿದ್ದಾರೆ.
ಗಿರಿರಾಜ್ ಮನೆಗೆ ಬಂದು, ನಿಮ್ಮ ಮನೆಯಲ್ಲಿ ಹಣ ಇದೆ ಎಂದು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಮನೆಯಲ್ಲಿ ಹಣ ಎಲ್ಲಿದೆ ಎಂದು ಕೇಳಿದ್ದಾರೆ. ಬಳಿಕ ಹಣದ ಬ್ಯಾಗ್ ಅನ್ನು ಎತ್ತಿಕೊಂಡು ಇನ್ನೋವಾ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಈಗ ದರೋಡೆಕೋರರು ಬಂದು ಹೋಗಿರುವ ದೃಶ್ಯ ಮನೆ ಹಾಗೂ ರಸ್ತೆಯ ಸಿಸಿಟಿವಿಗಳಲ್ಲಿ ರೆಕಾರ್ಡ್ ಆಗಿದೆ.
ಇದರ ಆಧಾರದ ಮೇಲೆ ದರೋಡೆಕೋರರ ಪತ್ತೆಗೆ ಬಲೆಗೆ ಪ್ರಯತ್ನ ನಡೆಸಿದ್ದಾರೆ. ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಗಿರಿರಾಜ್ ಮನೆಯಲ್ಲಿ ಹಣ ಇದೆ ಎಂದು ಗೊತ್ತಿರುವವರೇ ಈ ಕೃತ್ಯ ನಡೆಸಿರಬಹುದು, ಇಲ್ಲವೇ ಹಣ ಇರುವ ಮಾಹಿತಿ ತಿಳಿದು ದರೋಡೆ ನಡೆಸಿರಬಹುದು ಎಂಬ ಶಂಕೆ ಪೊಲೀಸರಿಂದ ವ್ಯಕ್ತವಾಗುತ್ತಿದೆ.
2 ಲಕ್ಷ ರೂಪಾಯಿಗಿಂತ ಹೆಚ್ಚಿನ ನಗದು ಹಣದ ಕೊಡು-ಕೊಳ್ಳುವ ವ್ಯವಹಾರ ಮಾಡಬಾರದೆಂದು ಕೇಂದ್ರ ಸರ್ಕಾರ, ಆದಾಯ ತೆರಿಗೆ ಇಲಾಖೆ ಹೇಳುತ್ತೆ. ಆದರೇ, ಜನರು ಇಂದಿಗೂ ಬ್ಲ್ಯಾಕ್ ಮನಿ ವ್ಯವಹಾರವನ್ನೇ ಮುಂದುವರಿಸಿದ್ದಾರೆ. ಆಗ್ಗಾಗ್ಗೆ ಈ ರೀತಿಯ ದರೋಡೆ ಕೃತ್ಯ ನಡೆದಾಗ, ಬ್ಲ್ಯಾಕ್ ಮನಿ ವ್ಯವಹಾರ ಬೆಳಕಿಗೆ ಬರುತ್ತೆ.
ಮುಂಬೈ, ದೆಹಲಿಯಲ್ಲಿ ಈ ಹಿಂದೆ ತಿಂಗಳ 26 ನೇ ತಾರೀಖಿನಂದು ಮನೆಗೆ ನುಗ್ಗಿದ ದರೋಡೆಕೋರರು ನಾವು ಸರ್ಕಾರಿ ಇಲಾಖೆಯ ಅಧಿಕಾರಿಗಳು ಎಂದು ಶ್ರೀಮಂತರು, ಉದ್ಯಮಿಗಳ ಮನೆಯನ್ನು ದರೋಡೆ ಮಾಡಿದ್ದರು. ಆ ನಿಜ ಘಟನೆಯ ಆಧಾರದ ಮೇಲೆ ಸ್ಪೆಷಲ್ 26 ಹೆಸರಿನ ಹಿಂದಿ ಸಿನಿಮಾ ತೆರೆಗೆ ಬಂದಿತ್ತು. ನಟ ಅಕ್ಷಯ್ ಕುಮಾರ್, ಅನುಪಮ್ ಖೇರ್ ಸಿನಿಮಾದಲ್ಲಿ ನಟಿಸಿದ್ದರು. ಈಗ ಬೆಂಗಳೂರಿನಲ್ಲೂ ಸ್ಪೆಷಲ್ 26 ಸಿನಿಮಾ ಸ್ಟೈಲ್ ನಲ್ಲೇ ದರೋಡೆ ನಡೆದಿದೆ.
ಬೆಂಗಳೂರಿನ ಯಲಹಂಕದಲ್ಲೂ ನಾವು ಸರ್ಕಾರಿ ಇಲಾಖೆಯ ಅಧಿಕಾರಿಗಳು ಎಂದು ಹೇಳಿ ಮನೆಗೆ ನುಗ್ಗಿ, ಮನೆಯಲ್ಲಿದ್ದ ಒಂದೂವರೆ ಕೋಟಿ ರೂಪಾಯಿ ಕ್ಯಾಶ್, 50 ಗ್ರಾಂ ಚಿನ್ನಾಭರಣ ದೋಚಿಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.