Advertisment

ನಿಗದಿತ ಕಾಲಮಿತಿಯಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಪೂರ್ಣವಾಗುತ್ತೆ: ಸಚಿವ ಶಿವರಾಜ್ ತಂಗಡಗಿ

ಸೆಪ್ಟೆಂಬರ್ 22 ರಿಂದ ಆಕ್ಟೋಬರ್ 7ರವರೆಗೆ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆ ನಡೆಯಲಿದ್ದು, ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳ್ಳಲಿದೆ. ಸಮೀಕ್ಷೆ ಬಗ್ಗೆ ಯಾವುದೇ ಗೊಂದಲ ಇಲ್ಲ. ಡಿಸೆಂಬರ್ ನಲ್ಲಿ ಹಿಂದುಳಿದ ವರ್ಗಗಳ ಆಯೋಗವು ರಾಜ್ಯ ಸರ್ಕಾರಕ್ಕೆ ಸಮೀಕ್ಷಾ ವರದಿ ಸಲ್ಲಿಸಲಿದೆ ಎಂದು ಸಚಿವ ತಂಗಡಗಿ ಹೇಳಿದ್ದಾರೆ.

author-image
Chandramohan
shivaraj thangadagi

ಸಚಿವ ಶಿವರಾಜ್ ತಂಗಡಗಿ

Advertisment
  • ನಿಗದಿತ ಕಾಲಮಿತಿಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಪೂರ್ಣ
  • ರಾಜ್ಯ ಸರ್ಕಾರದಲ್ಲಿ ಸಮೀಕ್ಷೆ ಬಗ್ಗೆ ಗೊಂದಲಗಳಿಲ್ಲ-ತಂಗಡಗಿ
  • ಗೊಂದಲಗಳ ಬಗ್ಗೆ ಆಯೋಗಕ್ಕೆ ಸಲಹೆ ಮಾತ್ರ ನೀಡಿದ್ದೇವೆ-ಶಿವರಾಜ್ ತಂಗಡಗಿ

ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7ರವರೆಗೆ ನಿಗದಿತ ಕಾಲಮಿತಿಯಲ್ಲಿ ರಾಜ್ಯದಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ನಡೆಯಲಿದ್ದು, ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಸ್ಪಷ್ಟಪಡಿಸಿದ್ದಾರೆ.

Advertisment

ಬೆಂಗಳೂರಿನ ತಮ್ಮ ಗೃಹ ಕಚೇರಿ ಬಳಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ನಮ್ಮಲ್ಲಿ  ಸಮೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲ ಇಲ್ಲ. ಒಂದು ತಿಂಗಳ ಮುಂಚಿತವಾಗಿಯೇ ಸಮೀಕ್ಷೆಯ ದಿನಾಂಕವನ್ನು ಪ್ರಕಟ ಮಾಡಿದ್ದೇವೆ. ಈಗಾಗಲೇ ಇದಕ್ಕೆ ಬೇಕಾದ ಸಿದ್ಧತೆಗಳು ನಡೆದಿವೆ. ಅಕ್ಟೋಬರ್ ನಲ್ಲಿ ಸಮೀಕ್ಷೆ ಪೂರ್ಣಗೊಂಡು ಡಿಸೆಂಬರ್ ನಲ್ಲಿ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ವರದಿಯನ್ನ ಸರ್ಕಾರ ಜಾರಿ ಮಾಡುವ ಕೆಲಸವನ್ನು ಮಾಡಿಯೇ ಮಾಡುತ್ತದೆ ಎಂದು ಹೇಳಿದರು.
ದೊಡ್ಡ ಕಾರ್ಯಕ್ಕೆ ಸರ್ಕಾರ ಕೈ ಹಾಕಿದ್ದು, ಇದು ನಮಗೆ ಸವಾಲಿನ ಕೆಲಸ ಕೂಡ ಹೌದು. ಇದರಲ್ಲಿ ಯಶಸ್ವಿಯೂ ಕೂಡ ಆಗುತ್ತೇವೆ. ಯಾವುದೇ ಸವಾಲಿನ ಕೆಲಸಕ್ಕೆ ಕೈ ಹಾಕಿದರೆ ಸಣ್ಣ- ಪುಟ್ಟ ಲೋಪಗಳು ಸಹಜ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಯೋಗಕ್ಕೆ ಸಲಹೆ ನೀಡಿದ್ದೇವೆ

ಕೆಲವೊಂದು ಗೊಂದಲಗಳ ಬಗ್ಗೆ ಚರ್ಚೆ ನಡೆಸಿ ಶಾಶ್ವತ ಹಿಂದುಳಿದ ವರ್ಗಗಳ  ಆಯೋಗಕ್ಕೆ ಸಲಹೆ ನೀಡಿದ್ದೇವೆ.  ಆಯೋಗ ಒಂದು ಸಾಂವಿಧಾನಿಕ ಸಂಸ್ಥೆ. ಆಯೋಗಕ್ಕೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಕೇವಲ ಸಲಹೆ ನೀಡಬಹುದು. ಆಯೋಗದವರು ಸಂಪೂರ್ಣ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುತ್ತಾರೆ. ಆ ಬಳಿಕ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗಳಾಗಲಿವೆ ಎಂದರು. 

ನಾನು ಮತ್ತೆ-ಮತ್ತೆ ಹೇಳುತ್ತಿದ್ದೇನೆ, ಇದು ಜಾತಿ ಸಮೀಕ್ಷೆ ಅಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ. ರಾಜ್ಯದಲ್ಲಿನ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪಬೇಕೆಂಬ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

Advertisment

ಕ್ರಿಶ್ಚಿಯನ್ ಕುರುಬ ಎಂದು ನಾವು ಬರೆಸಿಲ್ಲ;
ಕ್ರಿಶ್ಚಿಯನ್ ಜಂಗಮ, ಕ್ರಿಶ್ಚಿಯನ್ ಕುರುಬ ಎಂಬ ಕಲಂ ಸೃಷ್ಟಿ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ರೀತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಗಲಿ, ನಾನಾಗಲಿ ಅಥವಾ ಆಯೋಗದವರಾಗಲಿ ಬರೆಸಿಲ್ಲ. ಹಿಂದಿನ ಕಾಂತರಾಜು ಆಯೋಗದವರು ಸಮೀಕ್ಷೆ ನಡೆಸುವ ವೇಳೆ ಸಾರ್ವಜನಿಕರೇ ಈ ರೀತಿಯಾಗಿ ತಮ್ಮ ತಮ್ಮ ಸಮುದಾಯಗಳು ಎಂದು ಸ್ವ ಇಚ್ಛೆಯಿಂದ ಬರೆಸಿದ್ದಾರೆ. ಜನರು ಬರೆದಿದ್ದನ್ನು ಆಯೋಗ ಪಟ್ಟಿಯಲ್ಲಿ ಸೇರಿಸಿದೆ. ಯಾರಿಗೂ ಈ ರೀತಿ ಬರೆಯಿಸಿ ಎಂದು ಸಮೀಕ್ಷೆಗೆ ಹೋದವರು ಹೇಳಲು ಸಾಧ್ಯನಾ? ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಯಬಾರದು ಎಂದರೆ ಹೇಗೆ? ಎಂದು ಮರು ಪ್ರಶ್ನಿಸಿದರು.

ನಮ್ಮಲ್ಲಿ ಯಾವುದೇ ಅಪಸ್ವರ ಗಳಿಲ್ಲ. ಯಾವುದೇ ಸಮುದಾಯದ ನಾಯಕರ ಒತ್ತಡಗಳಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆದಿದೆಯಷ್ಟೇ. ಇದಕ್ಕೆ ನಿಮ್ಮ ಭಾಷೆಯಲ್ಲಿ ವಿರೋಧ ಎನ್ನುತ್ತೀರಾ? ನಾವು ಚರ್ಚೆ ಎನ್ನುತ್ತೇವೆ ಎಂದು ಮಾರ್ಮಿಕವಾಗಿ ನುಡಿದರು.

ಬಿಜೆಪಿಗರಿಗೆ ಜಾತಿ-ಧರ್ಮ ಕಂಡರೆ ಮಾತ್ರ ಪ್ರೀತಿ
ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ನಮಗೆ ಸ್ವಾತಂತ್ರ್ಯ ನೀಡಿದ್ದಾರೆ. ಯಾರು ಯಾವುದೇ ಸಲಹೆ ನೀಡಿದರು, ಏನೇ ಹೇಳಿದರು ಅದನ್ನು ಕೇಳುವ ಮನಸ್ಥಿತಿಯುಳ್ಳವರು. ಬಿಜೆಪಿಗರಿಗೆ, ಬಿಜೆಪಿ ಮಂತ್ರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮಾತನಾಡಲು ಸಾಧ್ಯನಾ? ಮೋದಿಯವರು ಅವರ ಕೈಗೆ ಸಿಗುತ್ತಾರೆಯೇ? ಸುಮ್ಮನೆ ಇಲ್ಲ-ಸಲ್ಲದ ಆರೋಪ ಮಾಡುತ್ತಾರೆ. ಬಿಜೆಪಿಯವರಿಗೆ ಜಾತಿ , ಮಸೀದಿ ಕಂಡರೆ ಪ್ರೀತಿ.  ಅಭಿವೃದ್ಧಿ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
 
ಕೇವಲ ಧರ್ಮ ಜಾತಿಗಳ ಬಗ್ಗೆಯೇ ಚರ್ಚೆ ಮಾಡುತ್ತಾ ಹೋದರೆ, ದೇಶ ಅವನತಿಯತ್ತ ಸಾಗುತ್ತದೆ.  ಪಾಕಿಸ್ತಾನ, ಬಾಂಗ್ಲಾದೇಶ ಹಾಳಾಗಿರುವುದೇ ಧರ್ಮದ ಚರ್ಚೆ ಮಾಡಿ ಎಂದು ಮಾರ್ಮಿಕವಾಗಿ ಹೇಳಿದರು. 

Advertisment

ನಮ್ಮ ಪ್ರಣಾಳಿಕೆಯಲ್ಲಿ ಸಮೀಕ್ಷೆ ಬಗ್ಗೆ ಘೋಷಣೆ ಮಾಡಿದ್ದೆವು, ಆ ನಿಟ್ಟಿನಲ್ಲಿ ನಮ್ಮ ಪಕ್ಷ ಹಾಗೂ ಸರ್ಕಾರ ಹೆಜ್ಜೆ ಇಟ್ಟಿದೆ. ಸಮಾಜದಲ್ಲಿನ ಕಷ್ಟದಲ್ಲಿರುವ ಬಡವರಿಗೆ ಸರ್ಕಾರದ ಸವಲತ್ತನ್ನು ನೀಡುವುದಾಗಿ ಹೇಳಿದ್ದೆೇವು. ಆ ಹಿನ್ನೆಲೆಯಲ್ಲಿ ಸಮೀಕ್ಷೆ ಕೈಗೊಳ್ಳುತ್ತಿದ್ದೇವೆ ಎಂದು ವಿವರಿಸಿದರು.

ಎಲ್ಲಾ ಸಮುದಾಯಗಳ ನಾಯಕರು ಹಾಗೂ ಸ್ವಾಮೀಜಿಗಳು ಸಭೆ ನಡೆಸುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ, ಸಭೆ ನಡೆಸಲಿ ಅದರಲ್ಲಿ ತಪ್ಪಿಲ್ಲ. ಸಮೀಕ್ಷೆಗೆ ಸಂಬಂಧಿಸಿದಂತೆ ಆಯಾ ಸಮುದಾಯದವರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.  ನಾವು ಕೂಡ ಸಮೀಕ್ಷೆ ಬಗ್ಗೆ ಜನರಲ್ಲಿ  ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು. 

ಇನ್ನು ತಮ್ಮ ಮನೆಗಳ ಬಳಿ ಸಮೀಕ್ಷೆಗಾಗಿ ಶಿಕ್ಷಕರು ಬರಲಿದ್ದು, ದಯಮಾಡಿ ಸೂಕ್ತ ಮಾಹಿತಿ ನೀಡಿ ಸಹಕರಿಸಿ. ಯಾವುದೇ ಒತ್ತಡಕ್ಕೆ ಒಳಗಾಗದೇ ಉತ್ತರ ನೀಡಿ ಎಂದು ಸಚಿವರು ಮಾಧ್ಯಮಗಳ ಮೂಲಕ ಮನವಿ ಸಾರ್ವಜನಿಕರಿಗೆ ಮನವಿ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Advertisment
Backward classes socio and educational survey
Advertisment
Advertisment
Advertisment