/newsfirstlive-kannada/media/media_files/2025/10/28/mahesh-joshi-and-kasapa-2025-10-28-14-51-16.jpg)
ಕನ್ನಡ ಸಾಹಿತ್ಯ ಪರಿಷತ್‌ಗೆ ಆಡಳಿತಾಧಿಕಾರಿ ನೇಮಿಸಿದ ರಾಜ್ಯ ಸರ್ಕಾರ
ಕನ್ನಡ ಸಾಹಿತ್ಯ ಪರಿಷತ್ ಹಾಲಿ ಅಡಳಿತ ಮಂಡಳಿಯನ್ನು ಬದಿಗಿಟ್ಟು ರಾಜ್ಯ ಸರ್ಕಾರವು ಕನ್ನಡ ಸಾಹಿತ್ಯ ಪರಿಷತ್ ಗೆ ಅಡಳಿತಾಧಿಕಾರಿಯನ್ನು ನೇಮಿಸಿ ಆದೇಶ ಹೊರಡಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ.ಎಂ.ಗಾಯತ್ರಿ ಅವರನ್ನು ಕನ್ನಡ ಸಾಹಿತ್ಯ ಪರಿಷತ್ ನ ಅಡಳಿತಾಧಿಕಾರಿಯಾಗಿ ನೇಮಿಸಿದೆ.
ಇದರಿಂದ ಕನ್ನಡ ಸಾಹಿತ್ಯ ಪರಿಷತ್ ನ ಹಾಲಿ ಅಧ್ಯಕ್ಷ ಮಹೇಶ್ ಜೋಷಿ ಅವರಿಗೆ ಹಿನ್ನಡೆಯಾಗಿದೆ. ಇನ್ನೂ ಮುಂದೆ ಕನ್ನಡ ಸಾಹಿತ್ಯ ಪರಿಷತ್‌ನ ಹಣಕಾಸು ವ್ಯವಹಾರಗಳನ್ನು ಹಾಗೂ ಇತರೆ ಚಟುವಟಿಕೆಗಳನ್ನ ಆಡಳಿತಾಧಿಕಾರಿಗಳೇ ನೋಡಿಕೊಳ್ಳುತ್ತಾರೆ.
ಹಾಲಿ ಅಧ್ಯಕ್ಷ ಮಹೇಶ್ ಜೋಷಿ ವಿರುದ್ಧ ಸಾಹಿತಿಗಳ ಒಂದು ವರ್ಗ ತೀವ್ರ ಅಸಮಾಧಾನ, ವಿರೋಧ ವ್ಯಕ್ತಪಡಿಸಿತ್ತು. ಏಕಪಕ್ಷೀಯ ತೀರ್ಮಾನ ಕೈಗೊಳ್ಳುತ್ತಾರೆ ಎಂಬ ಆರೋಪವೂ ಇತ್ತು. ಮಹೇಶ್ ಜೋಶಿ ಅವರು ಸಿಎಂ ಸಿದ್ದರಾಮಯ್ಯ ಕನ್ನಡ ಸಾಹಿತ್ಯ ಪರಿಷತ್ ಚಟುವಟಿಕೆಗೆ ಬೆಂಬಲ, ಸಹಕಾರ ನೀಡುತ್ತಿಲ್ಲ ಎಂದು ಹೇಳಿದ್ದರು. ಬಳಿಕ ಮಹೇಶ್ ಜೋಷಿ ಅವರಿಗೆ ನೀಡಿದ್ದ ಭದ್ರತೆ ಹಾಗೂ ರಾಜ್ಯ ಸಚಿವರ ಸ್ಥಾನಮಾನವನ್ನು ರಾಜ್ಯ ಸರ್ಕಾರ ಹಿಂತೆಗೆದುಕೊಂಡಿತ್ತು. ಈಗ ಕನ್ನಡ ಸಾಹಿತ್ಯ ಪರಿಷತ್ ರಾಜ್ಯ ಘಟಕಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿದೆ.
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ರಾಜ್ಯ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್‌ಗೆ 2.50 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿತ್ತು. ಈ ಹಣದ ಖರ್ಚಿಗೆ ಸಂಬಂಧಿಸಿದಂತೆ ಹಣ ಬಳಕೆ ಪ್ರಮಾಣಪತ್ರವನ್ನ ಮಂಡ್ಯ ಜಿಲ್ಲಾಧಿಕಾರಿಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ಅವರು ಸಲ್ಲಿಸಿಲ್ಲ. ಕನ್ನಡ ಸಾಹಿತ್ಯ ಪರಿಷತ್‌ಗೆ ನೀಡಿದ್ದ ಅನುದಾನದ ಹಣವನ್ನು ಷರತ್ತು ಮತ್ತು ನಿಬಂಧನೆಗಳಿಗೆ ಅನುಗುಣವಾಗಿ ಸಮರ್ಪಕವಾಗಿ ಬಳಸದೇ ಇರೋದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಇಂದು ಹೊರಡಿಸಲಾದ ಆದೇಶದಲ್ಲಿ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/10/28/mahesh-joshi-and-kasapa02-2025-10-28-15-00-28.jpg)
ಈ ಆದೇಶ ಹೊರಡಿಸಿದ ದಿನಾಂಕದಿಂದ ಮುಂದಿನ 03 ತಿಂಗಳ ಅವಧಿಗೆ ಅಥವಾ ಕಲಂ.25ರ ವಿಚಾರಣೆ ಪೂರ್ಣಗೊಳ್ಳುವವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮಾತ್ರ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಿದೆ.
ಈ ಆದೇಶವನ್ನು ಮಾನ್ಯ ಉಚ್ಚ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ:29086/2025 ರಲ್ಲಿ ನೀಡಿರುವ ಮಧ್ಯಂತರ ಆದೇಶದಂತೆ ಮಾನ್ಯ ಉಚ್ಚ ನ್ಯಾಯಾಲಯದ ಆದ್ಯ ಗಮನಕ್ಕೆ ತಂದು ಮಾನ್ಯ ನ್ಯಾಯಾಲಯವು ನೀಡುವ ನಿರ್ದೇಶನದ ನಂತರ ಈ ಆದೇಶವನ್ನು ಅನುಷ್ಠಾನಗೊಳಿಸುವುದು. ಮಾನ್ಯ ಉಚ್ಚ ನ್ಯಾಯಾಲಯವು ಮೇಲ್ಕಂಡ ಪ್ರಕರಣದಲ್ಲಿ ನೀಡುವ ನಿರ್ದೇಶನದಂತೆ ಆಡಳಿತಾಧಿಕಾರಿಯು ಸಂಘದ ಪ್ರಭಾರವನ್ನು ವಹಿಸಿಕೊಂಡು, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 25ರ ವಿಚಾರಣೆಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ತ್ವರಿತವಾಗಿ ವಿಚಾರಣಾಧಿಕಾರಿಗಳಿಗೆ ಒದಗಿಸುವಂತೆ ಸೂಚಿಸಲಾಗಿದೆ.
ಆಡಳಿತಾಧಿಕಾರಿಯನ್ನು ನೇಮಿಸುವ ಕುರಿತು ಸಂಘಕ್ಕೆ ಹೊರಡಿಸಲಾದ ದಿನಾಂಕ:15.09.2025ರ ನೋಟೀಸ್ ಮತ್ತು ದಿನಾಂಕ: 17.09.2025ರ ಅಂತಿಮ ನೋಟೀಸ್‌ನಂತೆ ಸಂಘದ ಕಾರ್ಯದರ್ಶಿಗಳು ಸದರಿ ವಿಚಾರಣೆಗೆ ದಿನಾಂಕ: 22.09.2025 ರಂದು ಹಾಜರಾಗಿದ್ದರೂ ಸಹಾ ಸಂಘದ ವಿರುದ್ಧದ 17 ಆರೋಪಗಳಿಗೆ ಸಮರ್ಪಕ ಹಾಗೂ ಸಮರ್ಥನೀಯ ಹೇಳಿಕೆ/ದಾಖಲಾತಿಗಳನ್ನು ಸಲ್ಲಿಸಲು ವಿಫಲರಾಗಿರುತ್ತಾರೆ. ಸಂಘದ ಲಿಖಿತ ಸಮಜಾಯಿಷಿ, ಸಂಘಗಳ ವಿಚಾರಣಾಧಿಕಾರಿಯ ವರದಿ, ಜಿಲ್ಲಾ ನೋಂದಣಾಧಿಕಾರಿಗಳ ಶಿಫಾರಸ್ಸು ಹಾಗೂ ಸಹಕಾರ ನಿಬಂಧಕರ ಪ್ರಸ್ತಾವನೆಯಿಂದ ಈ ಕೆಳಕಂಡಂತೆ ವಿಧಿತವಾಗುತ್ತದೆ.
/filters:format(webp)/newsfirstlive-kannada/media/media_files/2025/10/28/kasapa-admistrator-appointment-2025-10-28-18-26-06.jpg)
ಕನ್ನಡ ಸಾಹಿತ್ಯ ಪರಿಷತ್ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವ ಕೆ.ಎಂ.ಗಾಯತ್ರಿ
ಸಂಘದ ಅಧ್ಯಕ್ಷರು ಉದ್ದೇಶ ಪೂರ್ವಕವಾಗಿ ವಿಚಾರಣೆಯಲ್ಲಿ ಭಾಗವಹಿಸುತ್ತಿಲ್ಲ ಹಾಗು ಒದಗಿಸುತ್ತಿಲ್ಲ. ವಿಚಾರಣೆಗೆ ಒಳಪಡಿಸಿರುವ ಆರೋಪಗಳು ಹಣಕಾಸು ದುರುಪಯೋಗಕ್ಕೆ ಸಂಬಂದಿತವಾಗಿದ್ದು ದಾಖಲೆಗಳ ಅಲಭ್ಯತೆಯಿಂದ ಹಣ ದುರುಪಯೋಗದ ಪರಿಮಾಣ/ಸ್ವರೂಪ ತೀರ್ಮಾನಿಸಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ಪೂರ್ಣ ಮಾಹಿತಿಯನ್ನು ಒದಗಿಸಿ ಗಂಭೀರವಾದಂತಹ ಹಣಕಾಸು ದುರುಪಯೋಗಕ್ಕೆ ಸಂಬಂದಿಸಿದ ಆರೋಪಗಳ ಬಗ್ಗೆ ವಿಚಾರಣೆ ನಡೆಸಿ ತೀರ್ಮಾನಿಸಲು ವಿಚಾರಣಾವಧಿ ಪೂರ್ಣಗೊಳ್ಳುವವರೆಗೂ ಆಡಳಿತಾಧಿಕಾರಿ ನೇಮಿಸಿ ಅವರ ಮುಖಾಂತರ ಎಲ್ಲಾ ದಾಖಲೆಗಳನ್ನು ಪಡೆದು ವಿಚಾರಣೆಯನ್ನು ಮುಂದುವರೆಸಿ ಪೂರ್ಣಗೊಳಿಸಲು ಸಾಧ್ಯವೇ ಹೊರತು ಪ್ರಸ್ತುತ ಆಡಳಿತದಲ್ಲಿರುವ ಸಮಿತಿಯ ಅಸಹಕಾರ ಧೋರಣೆಯಿಂದ ವಿಚಾರಣೆ ಮುಂದುವರೆಸುವುದು ಅಸಾಧ್ಯ. ಸಂಘದ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಮತ್ತು ದಾಖಲೆಗಳನ್ನು ವಿಚಾರಣಾಧಿಕಾರಿಗಳಿಗೆ ಒದಗಿಸಲು ಅನುವಾಗುವಂತೆ ಸಂಘಕ್ಕೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ, 1960ರ ಕಲಂ.27(ಎ) ರನ್ವಯ ವಿಚಾರಣಾ ಅವಧಿಗೆ ಸೀಮಿತವಾಗುವಂತೆ ಅಡಳಿತಾಧಿಕಾರಿ ನೇಮಿಸುವುದು ಅವಶ್ಯಕವೆಂದು ಸರ್ಕಾರವು ತೀರ್ಮಾನಿಸಿದೆ ಎಂದು ಆದೇಶದಲ್ಲಿ ಹೇಳಿದೆ.
ಸಹಕಾರ ಇಲಾಖೆಯ ಅಧೀನ ಕಾರ್ಯದರ್ಶಿ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us