/newsfirstlive-kannada/media/media_files/2025/08/25/state-government-appointment02-2025-08-25-17-54-20.jpg)
ರಾಜ್ಯ ಸರ್ಕಾರದಿಂದ ದಲಿತ ಒಳ ಮೀಸಲಾತಿ ಹಂಚಿಕೆ ಮಾಡಿ ಆದೇಶ
ಕರ್ನಾಟಕ ರಾಜ್ಯ ಸರ್ಕಾರ ನಿರೀಕ್ಷೆಯಂತೆ, ರಾಜ್ಯದಲ್ಲಿ ಪರಿಶಿಷ್ಟ ಜಾತಿಯ 101 ಜಾತಿಗಳಿಗೆ ಶೇ.17 ರ ಮೀಸಲಾತಿಯನ್ನು ಹಂಚಿಕೆ ಮಾಡಿ ಕರ್ನಾಟಕ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ. ಗುಂಪು-1 ರಲ್ಲಿರುವ ದಲಿತ ಬಲಗೈ ಜಾತಿಗಳಿಗೆ ಶೇ.6 ರಷ್ಟು ಮೀಸಲಾತಿ ಸಿಗಲಿದೆ. ಗುಂಪು-2ರ ದಲಿತ ಎಡಗೈ ಹಾಗೂ ಸಂಬಂಧಿತ ಉಪಜಾತಿಗಳಿಗೆ ಶೇ.6 ರಷ್ಟು ಮೀಸಲಾತಿ ಸಿಗಲಿದೆ. ಗುಂಪು-3ರ ಭೋವಿ, ಲಂಬಾಣಿ ಸೇರಿದಂತೆ ಸ್ಪೃಶ್ಯ ಜಾತಿಗಳು ಹಾಗೂ ಅಲೆಮಾರಿ ಸಮುದಾಯಗಳಿಗೆ ಶೇ.5 ರಷ್ಟು ಮೀಸಲಾತಿ ಸಿಗಲಿದೆ. ಆಗಸ್ಟ್ 19 ರಂದು ರಾಜ್ಯ ಸಚಿವ ಸಂಪುಟ ಶೇ.17 ರಷ್ಟು ಮೀಸಲಾತಿಯನ್ನು ದಲಿತ ಸಮುದಾಯಗಳಿಗೆ ಹಂಚಿಕೆ ಮಾಡಿದ್ದ ನಿರ್ಧಾರದಂತೆ ಸಮಾಜ ಕಲ್ಯಾಣ ಇಲಾಖೆಯು ಈಗ ಮೀಸಲಾತಿಯನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಹಂಚಿಕೆ ಮಾಡಿ ನಿನ್ನೆ( ಆಗಸ್ಟ್ 25) ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಕಳೆದ ನವಂಬರ್ ನಲ್ಲಿ ದಲಿತ ಒಳ ಮೀಸಲಾತಿಯ ಬಗ್ಗೆ ತೀರ್ಮಾನ ಕೈಗೊಳ್ಳುವವರೆಗೂ ಯಾವುದೇ ಹೊಸ ನೇಮಕಾತಿಯನ್ನು ಮಾಡಿಕೊಳ್ಳದಂತೆ ರಾಜ್ಯ ಸರ್ಕಾರವು ಹಣಕಾಸು ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಗೂ ಸ್ಪಷ್ಟ ಸೂಚನೆ ನೀಡಿತ್ತು.
ಈಗ ದಲಿತ ಒಳ ಮೀಸಲಾತಿ ಹಂಚಿಕೆಯಾಗಿದ್ದು, ಸರ್ಕಾರದ ಆದೇಶ ಹೊರಬಿದ್ದಿದೆ. ಇದರಿಂದಾಗಿ ಕರ್ನಾಟಕದಲ್ಲಿ ಎಲ್ಲ ಇಲಾಖೆಗಳಲ್ಲೂ ಹೊಸ ನೇಮಕಾತಿ ಮಾಡಿಕೊಳ್ಳದಂತೆ ನೀಡಿದ್ದ ಸೂಚನೆಯು ರದ್ದಾಗಿದೆ.
ಇದರಿಂದಾಗಿ ಕರ್ನಾಟಕದಲ್ಲಿ ಕಳೆದ 10 ತಿಂಗಳಿನಿಂದ ನೆನೆಗೆದಿಗೆ ಬಿದ್ದಿದ್ದ ಎಲ್ಲ ಸರ್ಕಾರಿ ಇಲಾಖೆಗಳ ನೇಮಕಾತಿಗೂ ಮರು ಚಾಲನೆ ಸಿಕ್ಕಿದೆ. ವಿವಿಧ ಇಲಾಖೆಗಳು ತಮ್ಮ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಬಹುದು. ಈಗಾಗಲೇ ಆರಂಭಿಸಿರುವ ಪ್ರಕ್ರಿಯೆಯನ್ನು ಈಗ ಮುಂದುವರಿಸಬಹುದು.
ಉದ್ಯೋಗ ನೇಮಕಾತಿಯಲ್ಲಿ ಹಾಜರಾಗುವ ಎಲ್ಲ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಸಡಿಲಿಕೆಗೆ ತೀರ್ಮಾನಿಸಿದ್ದು, ಡಿಪಿಎಆರ್ ಪ್ರತ್ಯೇಕ ಆದೇಶ ಹೊರಡಿಸಲಿದೆ.
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸದ್ಯ 2.76 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಇವುಗಳ ಪೈಕಿ ವಿವಿಧ ಇಲಾಖೆಗಳಲ್ಲಿ ಮೊದಲಿಗೆ 80 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತೆ. ಇದು ನಿರುದ್ಯೋಗಿಗಳ ಪಾಲಿಗೆ ಗುಡ್ ನ್ಯೂಸ್. ಸರ್ಕಾರಿ ನೌಕರಿಗಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿರುವವರಿಗೆ ಸದ್ಯದಲ್ಲೇ ಸರ್ಕಾರಿ ಉದ್ಯೋಗ ಸಿಗಲಿದೆ.
ಶಿಕ್ಷಣ ಹಾಗೂ ಉದ್ಯೋಗದಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿ ಕಲ್ಪಿಸುವ ಆದೇಶ ಪ್ರಕಟವಾಗಿರುವುದು ಸ್ವಾಗತಾರ್ಹ ಸಂಗತಿ. ಈ ಮೂಲಕ ನೇಮಕಾತಿ ಪ್ರಕ್ರಿಯೆಗೆ ಇದ್ದ ಅಡೆತಡೆಯನ್ನು ರಾಜ್ಯ ಸರ್ಕಾರ ನಿವಾರಿಸಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಹೇಳಿದ್ದಾರೆ. ಕೆಪಿಸಿಎಸ್‌ಸಿ ಬಾಕಿ ನೇಮಕಾತಿಗಳನ್ನು ತಕ್ಷಣದಿಂದಲೇ ಆದ್ಯತೆ ಮೇಲೆ ಪುನರ್ ಆರಂಭಿಸಿ ನಿರುದ್ಯೋಗಿಗಳ ಸಂಕಷ್ಟವನ್ನು ನಿವಾರಿಸಲಿದೆ ಎಂದು ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್ ಹೇಳಿದ್ದಾರೆ.
ಇನ್ನೂ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯು ದಲಿತ ಒಳ ಮೀಸಲಾತಿ ಹಂಚಿಕೆ ಮಾಡಿ ಆದೇಶ ಹೊರಡಿಸಿರುವುದರಿಂದ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮತ್ತು ಮುಂಬಡ್ತಿಗೂ ಚಾಲನೆ ದೊರೆಯಲಿದೆ. ಇದಕ್ಕೂ ಮೊದಲು ಡಿಪಿಎಆರ್ ನಿಂದ ಮತ್ತೊಂದು ವಯೋಮಿತಿ ಸಡಿಲಿಕೆ ಆದೇಶ ಬರಲಿದ್ದು, ಬಳಿಕ ಮಾರ್ಗಸೂಚಿ ಹೊರಡಿಸಿ ಎಲ್ಲ ಇಲಾಖೆಗೂ ನೇಮಕಾತಿಗೆ ಸೂಚನೆಯನ್ನು ನೀಡಲಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.