/newsfirstlive-kannada/media/media_files/2025/09/12/sindhi-high-school-2025-09-12-14-52-08.jpg)
ಬೆಂಗಳೂರಿನ ಸಿಂಧಿ ಪ್ರೌಢಶಾಲೆ
ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಸಿಂಧಿ ಪ್ರೌಢಶಾಲೆಯಲ್ಲಿ ಕನ್ನಡದಲ್ಲಿ ಮಾತನಾಡಿದರೇ, ಅಂಥ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ದಂಡವನ್ನು ವಿಧಿಸುತ್ತಿದೆ. ಕನ್ನಡ ಮಾತೃಭಾಷೆಯಾಗಿರುವ ವಿದ್ಯಾರ್ಥಿಗಳಿಗೆ ಕನ್ನಡದಲ್ಲಿ ಮಾತನಾಡಲು, ವ್ಯವಹರಿಸಲು ಶಾಲೆಗಳಲ್ಲಿ ಅವಕಾಶ ಕೊಡಬೇಕು. ಆದರೇ, ಶಾಲೆಯು ಇಂಗ್ಲೀಷ್ ನಲ್ಲಿ ಮಾತನಾಡಬೇಕೆಂದು ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುತ್ತಿದೆಯಂತೆ.
ಈ ಬಗ್ಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ದೂರು ಸಲ್ಲಿಕೆಯಾಗಿದೆ. ಈ ದೂರಿನ ಆಧಾರದ ಮೇಲೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಬೆಂಗಳೂರು ಉತ್ತರ ಜಿಲ್ಲೆಯ ಡಿಡಿಪಿಐ ಅಂಜನಪ್ಪ ಅವರಿಗೆ ಪತ್ರ ಬರೆದು, ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೊತೆ ಸಮಾಲೋಚನೆ ನಡೆಸಿ, ವಾಸ್ತವಾಂಶಗಳ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದೆ ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಡಿಡಿಪಿಐಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ದೂರಿನ ನೈಜತೆಯ ಬಗ್ಗೆ ಪರಿಶೀಲಿಸಿ, ಒಂದು ವಾರದೊಳಗೆ ವರದಿ ನೀಡಲು ಪುರುಷೋತ್ತಮ ಬಿಳಿಮಲೆ ಅವರು ಡಿಡಿಪಿಐ ಅಂಜನಪ್ಪ ಅವರಿಗೆ ಸೂಚಿಸಿದ್ದಾರೆ.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊಫೆಸರ್ ಪುರುಷೋತ್ತಮ ಬಿಳಿಮಲೆ ಅವರು ಡಿಡಿಪಿಐ ಅಂಜನಪ್ಪಗೆ ಬರೆದ ಪತ್ರವನ್ನು ಇಲ್ಲಿ ಯಥಾವತ್ತಾಗಿ ನೀಡುತ್ತಿದ್ದೇವೆ. ಪತ್ರದಲ್ಲಿರುವ ಅಂಶ ಇಲ್ಲಿದೆ, ಒಮ್ಮೆ ಓದಿ.
ಬೆಂಗಳೂರಿನ ಕುಮಾರಕೃಪ ರಸ್ತೆಯಲ್ಲಿರುವ ಸಿಂಧಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಕನ್ನಡದಲ್ಲಿ ಸಂವಹನ ಮಾಡಿದ ಸಂದರ್ಭದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ದಂಡವನ್ನು ವಿಧಿಸಿ ಅವರುಗಳು ಕೇವಲ ಆಂಗ್ಲ ಭಾಷೆಯಲ್ಲಿ ವ್ಯವಹರಿಸಬೇಕೆಂಬ ಒತ್ತಡವನ್ನು ಹಾಕಲಾಗುತ್ತಿದೆ ಎನ್ನುವ ವರದಿಯನ್ನು ನಾನು ಸ್ವೀಕರಿಸಿದ್ದೇನೆ.
ಕರ್ನಾಟಕ ರಾಜ್ಯದಲ್ಲಿ ನಡೆಯುತ್ತಿರುವ ಯಾವುದೇ ಶಿಕ್ಷಣ ಸಂಸ್ಥೆ ತನ್ನ ವಿದ್ಯಾರ್ಥಿಗಳಲ್ಲಿ ಕನ್ನಡದ ಕುರಿತಾದ ಈ ಮನೋಧರ್ಮವನ್ನು ಸೃಷ್ಟಿಸುವ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಕನ್ನಡ ಮಾತೃಭಾಷೆಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಕನ್ನಡದ ಸಂವಹನವೇ ಆಪ್ತತೆಯನ್ನು ನೀಡುವುದಷ್ಟೇ ಅಲ್ಲ, ಆ ಮಕ್ಕಳ ಆತ್ಮವಿಶ್ವಾಸ ವೃದ್ಧಿಗೆ ಅದು ಅನಿವಾರ್ಯವಾಗಿರುತ್ತದೆ.
ನೀವು ಕೂಡಲೇ ಈ ಶಾಲೆಗೆ ಭೇಟಿ ನೀಡಬೇಕು. ವಿದ್ಯಾರ್ಥಿಗಳನ್ನು, ಆಯ್ದ ಶಿಕ್ಷಕರನ್ನು ಸಂದರ್ಶಿಸಿ ಈ ದೂರಿನ ನೈಜತೆಯ ಬಗ್ಗೆ ಪರಿಶೀಲಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಮುಂದಿನ ಒಂದು ವಾರದೊಳಗೆ
ವರದಿಯನ್ನು ಕಳುಹಿಸಿಕೊಡಬೇಕಾಗಿ ನಿಮಗೆ ಸೂಚಿಸಬಯಸುತ್ತೇನೆ. ವಿಳಂಬವಾದಲ್ಲಿ ಈ ಕುರಿತಂತೆ ನಿಮ್ಮ
ಇಲಾಖಾ ಪ್ರಧಾನ ಕಾರ್ಯದರ್ಶಿ ಹಾಗೂ ಹಾಗೂ ಸಚಿವರ ಗಮನ ಸೆಳೆಯಲಾಗುವುದು ಎಂಬ ಅಂಶವನ್ನು ಸ್ಪಷ್ಟಪಡಿಸುತ್ತೇನೆ.
ವಂದನೆಗಳೊಂದಿಗೆ,
ಶ್ರೀ ಆಂಜನಪ್ಪ ಕೆ.ಜಿ.,
ಉಪ ನಿರ್ದೇಶಕರು (ಆಡಳಿತ)
ಶಾಲಾ ಶಿಕ್ಷಣ ಇಲಾಖೆ,
ಬೆಂಗಳೂರು ಉತ್ತರ ಜಿಲ್ಲೆ,
ಬೆಂಗಳೂರು.
ಈಗ ಶಾಲಾ ಆಡಳಿತದ ಡಿಡಿಪಿಐ ಅಂಜನಪ್ಪ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಜತೆ ಮಾತನಾಡಿ ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಈ ಬಗ್ಗೆ ವರದಿ ಸಲ್ಲಿಸಬೇಕಾಗಿದೆ. ದೂರಿನ ನೈಜತೆ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ.
ಇನ್ನೂ ಈ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಂಧಿ ಶಾಲಾ ಆಡಳಿತ ಮಂಡಳಿ ನಿರಾಕರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.