/newsfirstlive-kannada/media/media_files/2025/08/28/bagalkot-cctv-video-2025-08-28-12-46-29.jpg)
ಶೃತಿ ಸಂಕಪ್ಪನವರ ಮತ್ತು ಮನೆಯ ಸಿಸಿಟಿವಿ
ಈಗಿನ ಕಾಲದಲ್ಲಿ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಅಮೆರಿಕಾದಲ್ಲಿ ಕುಳಿತು ದೂರದ ಬಾಗಲಕೋಟೆಯ ಮುಧೋಳ ನಗರದಲ್ಲಿ ಏನಾಗುತ್ತಿದೆ, ತಮ್ಮ ಮನೆಯ ಹತ್ತಿರ ಯಾರು ಬಂದಿದ್ದಾರೆ ಎಂಬುದನ್ನು ವಿಡಿಯೋದಲ್ಲಿ ನೋಡಬಹುದು. ಮುಧೋಳದಲ್ಲಿ ನಡೆಯುವ ಘಟನೆಯನ್ನು ದೂರದ ಅಮೆರಿಕಾದಲ್ಲಿ ನೋಡಿ ಅಪರಾಧ ಕೃತ್ಯವನ್ನು ತಪ್ಪಿಸಿದ ಚಾಣಾಕ್ಷ ಘಟನೆಯೊಂದು ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಚಡ್ಡಿ ಗ್ಯಾಂಗ್ ಕಳ್ಳರ ಹಾವಳಿ ಹೆಚ್ಚಾಗಿದೆ. ಅಮೇರಿಕಾದಲ್ಲಿ ನೆಲೆಸಿದ ಮಗಳಿಂದ ಕಳ್ಳರ ಕೃತ್ಯ ಬಯಲಾಗಿದೆ. ಹನುಮಂತಗೌಡ ಸಂಕಪ್ಪನವರ ಎಂಬುವವರ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಈ ಸಿಸಿ ಕ್ಯಾಮರಾದ ದೃಶ್ಯಗಳು ತನ್ನ ಮೊಬೈಲ್ ವೀಕ್ಷಿಸುವಂತೆ ಹನುಮಂತಗೌಡ ಸಂಕಪ್ಪನವರ ಮಗಳು ವ್ಯವಸ್ಥೆ ಮಾಡಿಕೊಂಡಿದ್ದರು. ಮನೆಯ ಸಿಸಿ ಕ್ಯಾಮರಾದ ವಿಡಿಯೋ ನೋಡುವಾಗ ರಾತ್ರಿ ವೇಳೆ ತಮ್ಮ ಮನೆಗೆ ಯಾರೋ ಕಳ್ಳರು ಕಂಪೌಂಡ್ ದಾಟಿ ಬಂದಿರುವುದು ಕಂಡಿದೆ.
ಅಮೇರಿಕಾದಲ್ಲಿ ಕುಳಿತೇ ತನ್ನ ಮೊಬೈಲ್‌ನಲ್ಲಿ ಸಿಸಿ ಕ್ಯಾಮರಾ ದೃಶ್ಯಗಳನ್ನು ಹನುಮಂತಗೌಡ ಸಂಕಪ್ಪನವರ ಮಗಳು ಶೃತಿ ಗಮನಿಸಿದ್ದಾರೆ. ತಕ್ಷಣವೇ ತಂದೆ ಹನುಮಂತಗೌಡ ಸಂಕಪ್ಪನವರ್ ಗೆ ಕರೆ ಮಾಡಿದ ಮಗಳು ಶೃತಿ ಆಲರ್ಟ್ ಆಗಿರುವಂತೆ ಹೇಳಿದ್ದಾರೆ. ನಂತರ ತಂದೆ ಹನುಮಂತಗೌಡ ಸಂಕಪ್ಪನವರ ಬಾಗಿಲು ತೆರೆದಾಗ ಕಳ್ಳರು ಹೆದರಿಕೊಂಡು ಎಸ್ಕೇಪ್ ಆಗಿದ್ದಾರೆ.
ಅಮೇರಿಕದಲ್ಲಿ ನೆಲೆಸಿರುವ ಹನುಮಂತಗೌಡ ಸಂಕಪ್ಪನವರ ಮಗಳು ಶೃತಿ ಸಂಕಪ್ಪನವರ ವೃತ್ತಿಯಲ್ಲಿ ಸಾಪ್ಟ್ ವೇರ್ ಇಂಜಿನಿಯರ್ . ಶೃತಿ ತಮ್ಮ ಮೊಬೈಲ್ ನಲ್ಲಿ ಸಿಸಿ ಕ್ಯಾಮೆರಾ ದೃಶ್ಯ ಗಮನಿಸಿ ಮನೆಗೆ ಕರೆ ಮಾಡಿ ಎಚ್ಚರಿಸಿದ್ದಾರೆ. ತಂದೆ ಬಾಗಿಲು ತೆರೆಯುತ್ತಿದ್ದಂತೆ ಕಳ್ಳರು ಎಸ್ಕೇಪ್ ಆಗಿದ್ದಾರೆ. ರಾಜಾರೋಷವಾಗಿ ಮನೆಗಳ್ಳತನ ಮಾಡಲು ಬಂದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಧೋಳ ನಗರದ ಸಿದ್ದರಾಮೇಶ್ವರ ನಗರದಲ್ಲಿ ಈ ಘಟನೆ ನಡೆದಿದೆ.
ಪತಿ ಜೊತೆ ಅಮೆರಿಕಾದಲ್ಲಿರುವ ಶೃತಿ ಸಂಕಪ್ಪನವರ
ಇದಕ್ಕೂ ಮೊದಲು ಅಶೋಕ ಕರಿಹೊನ್ನ ಎಂಬುವರ ಮನೆ ಕಳ್ಳತನ ಮಾಹಿತಿ ಕೂಡ ಈಗ ಪೊಲೀಸರಿಗೆ ಲಭ್ಯವಾಗಿದೆ. ೧೧ ಗ್ರಾಂ ಚಿನ್ನ, ೪೦ ಸಾವಿರ ನಗದು ಕದ್ದ ಮಾಹಿತಿ ಈಗ ಪೊಲೀಸರಿಗೆ ಸಿಕ್ಕಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕಳ್ಳರ ಗ್ಯಾಂಗ್ ದೃಶ್ಯ ಹನುಮಂತಗೌಡ ಸಂಕಪ್ಪನವರ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವುದರಿಂದ ಪೊಲೀಸರಿಗೆ ಈಗ ಕಳ್ಳರ ಮಾಹಿತಿ ಲಭ್ಯವಾಗಿದೆ. ಈ ಕಳ್ಳರು ಕರ್ನಾಟಕದವರೋ, ಆಂಧ್ರ, ತೆಲಂಗಾಣದವರೋ ಎಂಬುದನ್ನು ಮೊದಲು ಪತ್ತೆ ಹಚ್ಚಬೇಕಾಗಿದೆ. ತೆಲಂಗಾಣದ ಹೈದರಾಬಾದ್ ನಲ್ಲೂ ಈ ಹಿಂದೆ ಚಡ್ಡಿ ಗ್ಯಾಂಗ್ ಸಕ್ರಿಯವಾಗಿದ್ದು ಮನೆಕಳ್ಳತನ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ .