/newsfirstlive-kannada/media/media_files/2025/09/08/mnd_ganesha-1-2025-09-08-11-05-15.jpg)
ಮದ್ದೂರಿನಲ್ಲಿ ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ , ನಾಳೆ ಮದ್ದೂರು ಬಂದ್‌ಗೆ ಕರೆ
ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣ ಉದ್ವಿಗ್ನವಾಗಿದೆ. ನಿನ್ನೆ ರಾತ್ರಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ರಸ್ತೆಯ ಲೈಟ್ ಆಫ್ ಮಾಡಿ ಕಲ್ಲು ತೂರಾಟ ಮಾಡಿದ್ದರಿಂದ ಪೊಲೀಸರು, ಜನರು ಗಾಯಗೊಂಡಿದ್ದಾರೆ. ಪಕ್ಕದ ಚನ್ನಪಟ್ಟಣದಿಂದ ಮೂರು ನಾಲ್ಕು ಮಂದಿ ಬಂದು, ಮದ್ದೂರಿನಲ್ಲಿ ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದಾರೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದಾರೆ. ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಖಂಡಿಸಿ, ನಾಳೆ ಮದ್ದೂರು ಬಂದ್‌ಗೆಕರೆ ನೀಡಲಾಗಿದೆ.
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಲೈಟ್ ಆಫ್ ಮಾಡಿ ಕಲ್ಲು ತೂರಾಟ ಮಾಡಿದ್ದರಿಂದ ಇಂದು ಕೂಡ ಮದ್ದೂರು ಪಟ್ಟಣ ಉದ್ವಿಗ್ನವಾಗಿದೆ. ಮದ್ದೂರು ಪೊಲೀಸ್ ಠಾಣೆಯ ಬಳಿ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಮದ್ದೂರು ಟೌನ್ ಗೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ದೌಡಾಯಿಸಿ ಬಂದಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ನಾಯಕರು ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ್ದನ್ನು ತೀವ್ರವಾಗಿ ಖಂಡಿಸಿದ್ದಾರೆ.
ಹಳೇ ಮೈಸೂರು- ಬೆಂಗಳೂರು ಹೆದ್ದಾರಿ ಬಂದ್ ಮಾಡಿ ಸ್ಥಳೀಯ ಜನರು ಪ್ರತಿಭಟನೆ ನಡೆಸಿದ್ದಾರೆ.
ಪೊಲೀಸ್ ಠಾಣೆಗೆ ಅಡ್ಡಲಾಗಿ ರಿಸರ್ವ್ ವಾಹನ ನಿಲ್ಲಿಸಿ ಭದ್ರತೆ ನೀಡಲಾಗಿದೆ. ಪೊಲೀಸ್ ಠಾಣೆ ಎದುರಿನ ತಾಲೂಕು ಕಚೇರಿ ಬಳಿ ಕಾರ್ಯಕರ್ತರ ಜಮಾವಣೆ ಆಗಿದ್ದಾರೆ. ಕಲ್ಲು ತೂರಾಟ ಮಾಡಿದ ಆರೋಪಿಗಳ ಬಂಧನಕ್ಕೆ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.
ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಕಳೆದ ರಾತ್ರಿಯಿಂದ ಮದ್ದೂರು ಟೌನ್ ನಲ್ಲೇ ಬೀಡುಬಿಟ್ಟಿದ್ದಾರೆ. ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ಕೂಡ ಮದ್ದೂರು ಟೌನ್ ಗೆ ಆಗಮಿಸಿದ್ದಾರೆ. ಮೈಸೂರು ಎಸ್ಪಿ ವಿಷ್ಣು ವರ್ಧನ್ ಅವರನ್ನು ಬಂದೋಬಸ್ತ್ ಗಾಗಿ ಮಂಡ್ಯದ ಮದ್ದೂರಿಗೆ ಕರೆಸಿಕೊಳ್ಳಲಾಗಿದೆ. ಮದ್ದೂರುನಲ್ಲಿ ಶಾಂತಿ ಕಾಪಾಡಲು, ಪರಿಸ್ಥಿತಿ ಉದ್ವಿಗ್ನವಾಗುವುದನ್ನು ತಪ್ಪಿಸಲು ಮೈಸೂರು, ಹಾಸನ ,ಚಾಮರಾಜನಗರದಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ರಸ್ತೆಯಲ್ಲೇ ಮಲಗಿ ಹಿಂದೂ ಕಾರ್ಯಕರ್ತರ ಆಕ್ರೋಶ
ಇನ್ನೂ ಗಣೇಶ್ ಮೆರವಣಿಗೆ ಮೇಲೆ ಕಲ್ಲು ತೂರಿದ್ದರಿಂದ ಹಿಂದೂ ಕಾರ್ಯಕರ್ತರು ತೀವ್ರ ಆಕ್ರೋಶಗೊಂಡಿದ್ದಾರೆ. ರಸ್ತೆಯಲ್ಲಿ ಮಲಗಿ ಆಕ್ರೋಶ ಹೊರಹಾಕಿದ್ದಾರೆ. ಇಲ್ಲೇ ಊಟ ಮಾಡ್ತೀವಿ,ಇಲ್ಲೇ ನಿದ್ದೆ ಮಾಡ್ತೀವಿ ಅಂತ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರ ಮಾತಿಗೆ ಕ್ಯಾರೆ ಎನ್ನದ ಕಾರ್ಯಕರ್ತರು ರಸ್ತೆಯಲ್ಲೇ ಮಲಗಿದ್ದಾರೆ. ಇನ್ನೂ ಹಿಂದೂ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಕೂಡ ಭಾಗಿಯಾಗಿದ್ದಾರೆ.
ಪ್ರತಿಭಟನೆ ಉದ್ದೇಶಿಸಿ ಮಾಜಿಸಂಸದ ಪ್ರತಾಪ್ ಸಿಂಹ ಭಾಷಣ ಮಾಡಿದ್ದಾರೆ.
ಭಾಷಣ ಆರಂಭಿಸುವಾಗ ಉಪಸ್ಥಿತರಿದ್ದ ಸ್ಥಳೀಯ ನಾಯಕರ ಹೆಸರು ಉಲ್ಲೇಖಿಸಿ ಪ್ರತಾಪ್ ಸಿಂಹ ಭಾಷಣ ಮಾಡಿದ್ದಾರೆ. ಜಿಲ್ಲಾ ಬಿಜೆಪಿ ನಾಯಕ ಡಾ.ಸಿದ್ದರಾಮಯ್ಯ ಹೆಸರು ಹೇಳ್ತಿದ್ದಂತೆ ಜೋರಾಗಿ ಕಾರ್ಯಕರ್ತರು ಕೂಗಿದ್ದಾರೆ. ಸಿಎಂ ಸಿದ್ದರಾಮಯ್ಯ ಎಂದು ತಪ್ಪಾಗಿ ಅರ್ಥೈಸಿಕೊಂಡು ಕಾರ್ಯಕರ್ತರು ಕೂಗಿದ್ದರು. ಆಗ ಪ್ರತಾಪ್ ಸಿಂಹ, ನಮ್ಮ ಬಿಜೆಪಿ ಪಕ್ಷದಲ್ಲೂ ಸಿದ್ದರಾಮಯ್ಯ ಇದ್ದಾರಪ್ಪ ಎಂದು ಸ್ಥಳೀಯ ಹಿಂದೂ ಕಾರ್ಯಕರ್ತರಿಗೆ ಪ್ರತಾಪ್ ಸಿಂಹ ಅರ್ಥ ಮಾಡಿಸಿದ್ದಾರೆ.
ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ಕಲ್ಲು ತೂರಾಟ ಖಂಡಿಸಿ ನಾಳೆ ಮದ್ದೂರು ಪಟ್ಟಣ ಬಂದ್‌ಗೆ ಹಿಂದೂ ಸಂಘಟನೆಗಳು ಕರೆ ನೀಡಿವೆ. ಮದ್ದೂರಿನಲ್ಲಿ ಜನರ ಆಕ್ರೋಶ ಹೆಚ್ಚಾಗಿದೆ. ಮದ್ದೂರಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಕೂಡ ಭೇಟಿ ನೀಡಿದ್ದಾರೆ. ಅತ್ತ ದೆಹಲಿಯಲ್ಲಿ ಮಾತನಾಡಿದ ಮಂಡ್ಯ ಲೋಕಸಭಾ ಸದಸ್ಯ ಹಾಗೂ ಕೇಂದ್ರದ ಉಕ್ಕು, ಭಾರಿ ಕೈಗಾರಿಕೆ ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ, ಮದ್ದೂರಿನಲ್ಲಿ ಗಣೇಶ್ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟವನ್ನು ತೀವ್ರವಾಗಿ ಖಂಡಿಸಿದ್ದಾರೆ.
ಮದ್ದೂರಿನಲ್ಲಿ ಮುಂದುವರೆದ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ. ಪೊಲೀಸರ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗಿದೆ. ಈಗಾಗಲೇ 1 ಸಾವಿರಕ್ಕೂ ಅಧಿಕ ಮಂದಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯ ಪೊಲೀಸರ ನಿಯೋಜನೆ ಮಾಡಲಾಗಿದೆ. ಮದ್ದೂರಿಗೆ ರಾಜ್ಯದ ಕಾನೂನು ಸುವ್ಯವಸ್ಥೆಯ ಎಡಿಜಿಪಿ ಆರ್.ಹೀತೇಂದ್ರ ಕೂಡ ಭೇಟಿ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.