/newsfirstlive-kannada/media/media_files/2025/08/29/abhiman-studio-place03-2025-08-29-14-31-08.jpg)
ಅಭಿಮಾನ್ ಸ್ಟುಡಿಯೋ ಜಾಗ ಮುಟ್ಟುಗೋಲು ಹಾಕಿಕೊಂಡ ಸರ್ಕಾರ
ಬೆಂಗಳೂರಿನ ಕೆಂಗೇರಿಯಿಂದ ಉತ್ತರಹಳ್ಳಿಗೆ ಹೋಗುವ ರಸ್ತೆಯಲ್ಲಿರುವ ಅಭಿಮಾನ್ ಸ್ಟುಡಿಯೋ ಈಗ ಸರ್ಕಾರದ ಸ್ವತ್ತು ಆಗಿದೆ. ರಾಜ್ಯ ಸರ್ಕಾರವು ಅಭಿಮಾನ್ ಸ್ಟುಡಿಯೋ ನಿರ್ಮಾಣಕ್ಕಾಗಿ ನಟ ಬಾಲಕೃಷ್ಣ ಅವರ ಕುಟುಂಬಕ್ಕೆ ನೀಡಿದ್ದ ಎಲ್ಲ 20 ಎಕರೆ ಜಾಗವನ್ನು ಈಗ ಅಧಿಕೃತವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಬಾಲಕೃಷ್ಣ ಅವರ ಮೊಮ್ಮಗ ಕಾರ್ತಿಕ್‌ಗೆ ಈಗ ಅಭಿಮಾನ್ ಸ್ಟುಡಿಯೋ ಜಾಗದ ಮೇಲೆ ಯಾವುದೇ ಹಕ್ಕು, ಅಧಿಕಾರ ಇಲ್ಲ. ಇದೇ ಅಭಿಮಾನ್ ಸ್ಟುಡಿಯೋ ಜಾಗದಲ್ಲಿ ನಟ, ಸಾಹಸಸಿಂಹ ವಿಷ್ಣು ವರ್ಧನ್ ಅವರ ಅಂತ್ಯಸಂಸ್ಕಾರ ಮಾಡಲಾಗಿದೆ. ಇದೇ ಜಾಗದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲು ಜಾಗ ನೀಡಲು ನಟ ಬಾಲಕೃಷ್ಣ ಕುಟುಂಬ ನಿರಾಕರಿಸಿತ್ತು.
ಇತ್ತೀಚೆಗೆ ವಿಷ್ಣುವರ್ಧನ್ ಸಮಾಧಿ ಸ್ಥಳದಲ್ಲಿದ್ದ ಸಣ್ಣ ಗೋಪುರವನ್ನು ಬಾಲಕೃಷ್ಣ ಮೊಮ್ಮಗ ಕಾರ್ತಿಕ್ ಹೈಕೋರ್ಟ್ ಆದೇಶದಂತೆ ನೆಲಸಮ ಮಾಡಿರುವುದಾಗಿ ಹೇಳಿದ್ದರು. ಇದು ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಆದರೇ, ಈಗ ಅಭಿಮಾನ್ ಸ್ಟುಡಿಯೋ ಜಾಗವನ್ನು ಅರಣ್ಯ ಭೂಮಿ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಎಲ್ಲ 20 ಎಕರೆ ಜಾಗವನ್ನು ಅರಣ್ಯ ಭೂಮಿ ಎಂದು ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆದಿದೆ.
ನಟ ಬಾಲಕೃಷ್ಣ ಅವರು ರಾಜ್ಯ ಸರ್ಕಾರದಿಂದ 20 ಎಕರೆ ಭೂಮಿಯನ್ನು 20 ವರ್ಷಗಳಿಗೆ ಲೀಸ್‌ಗೆ ಪಡೆದಿದ್ದರು. ನಂತರ ಅದನ್ನು ಕಂದಾಯ ಇಲಾಖೆಯು ಸ್ಟುಡಿಯೋ ನಿರ್ಮಾಣಕ್ಕಾಗಿ ಬಾಲಕೃಷ್ಣ ಅವರಿಗೆ ನೀಡಿತ್ತು. ಆದರೇ, ನಿಗದಿತ ಕಾಲಮಿತಿಯಲ್ಲಿ ಆ ಜಾಗದಲ್ಲಿ ಸ್ಟುಡಿಯೋವನ್ನು ನಿರ್ಮಾಣ ಮಾಡಿಲ್ಲ. ಹೀಗಾಗಿ ನಿಯಮ ಉಲಂಘನೆಯ, ಷರತ್ತಿನ ಉಲಂಘನೆಯ ಕಾರಣದಿಂದ ಎಲ್ಲ 20 ಎಕರೆ ಜಾಗವನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆದಿದೆ.
/filters:format(webp)/newsfirstlive-kannada/media/media_files/2025/08/29/abhiman-studio-place-2025-08-29-14-32-34.jpg)
ಬಾಲಕೃಷ್ಣ ಅವರಿಗೆ ನೀಡಿದ್ದ 20 ಎಕರೆ ಪೈಕಿ 10 ಎಕರೆ ಜಾಗವನ್ನು ಅವರ ಮೊಮ್ಮಗ ಕಾರ್ತಿಕ್ ಅವರು ರಾಘವೇಂದ್ರ ಎಂಬುವವರಿಗೆ ಮಾರಾಟ ಮಾಡಿದ್ದರು. ಪ್ರತಿ ಎಕರೆ ಭೂಮಿಯನ್ನು 1 ಕೋಟಿ 37 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ಮೀಸಲು ಅರಣ್ಯ ಪ್ರದೇಶವನ್ನು ಅನಧಿಕೃತವಾಗಿ ಮಾರಾಟ ಮಾಡಿದ್ದಾರೆ.
ಈಗ ರಾಜ್ಯ ಸರ್ಕಾರ ಮಾರಾಟ ಮಾಡಿದ್ದ ಜಾಗದ ಜೊತೆಗೆ ಉಳಿದ ಜಾಗವನ್ನು ಮುಟ್ಟುಗೋಲು ಹಾಕಿಕೊಂಡಿದೆ. ಎಲ್ಲ 20 ಎಕರೆ ಜಾಗವನ್ನು ಸಂಪೂರ್ಣವಾಗಿ ರಾಜ್ಯಸರ್ಕಾರ ತನ್ನ ವಶಕ್ಕೆ ಪಡೆದಿದೆ.
ಇದೇ ಅಭಿಮಾನ್ ಸ್ಟುಡಿಯೋ ಜಾಗದಲ್ಲಿ ನಟ ವಿಷ್ಣುವರ್ಧನ್ ಅವರನ್ನು ಅಂತ್ಯಸಂಸ್ಕಾರ ಮಾಡಲಾಗಿತ್ತು. ಬಳಿಕ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ಜಾಗ ನೀಡಲು ನಟ ಬಾಲಕೃಷ್ಣ ಕುಟುಂಬ ನಿರಾಕರಿಸಿತ್ತು. ಆದರೇ, ಅಸಲಿಗೆ ನಿಯಮಬದ್ದವಾಗಿ, ಕಾನೂನು ಬದ್ದವಾಗಿ ಭೂಮಿಯನ್ನು ಸರ್ಕಾರದಿಂದ ಪಡೆದಿರಲೇ ಇಲ್ಲ. ಸರ್ಕಾರ ಲೀಸ್‌ಗೆ ನೀಡಿದ್ದ ಷರತ್ತುಗಳನ್ನು ನಟ ಬಾಲಕೃಷ್ಣ ಕುಟುಂಬ ಪಾಲಿಸುತ್ತಿರಲಿಲ್ಲ. ನಟ ಬಾಲಕೃಷ್ಣ ಮೊಮ್ಮಗ ಕಾರ್ತಿಕ್‌ಗೆ ಜಮೀನು ಮಾರಾಟದ ಹಕ್ಕೇ ಇರಲಿಲ್ಲ. ಆದರೂ, ಮಾರಾಟ ಮಾಡಿದ್ದಾರೆ. ಈಗ ಕಾರ್ತಿಕ್ ರಿಂದ ಜಮೀನು ಖರೀದಿಸಿದವರು ಇಂಗು ತಿಂದ ಮಂಗನಂತೆ ಆಗುವ ಸ್ಥಿತಿಯಲ್ಲಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರ ಹಾಗೂ ಕ್ರಮವನ್ನು ಪ್ರಶ್ನಿಸಿ ನಟ ಬಾಲಕೃಷ್ಣ ಮೊಮ್ಮಗ ಕಾರ್ತಿಕ್ ಕೋರ್ಟ್ ಮೆಟ್ಟಿಲೇರಬಹುದು. ಆದರೇ, ರಾಜ್ಯ ಸರ್ಕಾರ ಕೋರ್ಟ್ ನಲ್ಲಿ ತನ್ನ ತೀರ್ಮಾನವನ್ನು ಸಮರ್ಥಿಸಿಕೊಳ್ಳಲಿದೆ.
/filters:format(webp)/newsfirstlive-kannada/media/media_files/2025/08/29/abhiman-studio-place02-2025-08-29-14-33-56.jpg)
ಹೈಕೋರ್ಟ್ ಗೆ ರಾಜ್ಯ ಸರ್ಕಾರವು ಬಾಲಕೃಷ್ಣ ಕುಟುಂಬವು ನಿಯಮ ಹಾಗೂ ಷರತ್ತುಗಳನ್ನು ಉಲಂಘಿಸಿ ಜಾಗವನ್ನು ಮಾರಾಟ ಮಾಡಿದೆ. ಜೊತೆಗೆ ಷರತ್ತು ಹಾಗೂ ನಿಯಮದಂತೆ ಈ ಜಾಗದಲ್ಲಿ ಸ್ಟುಡಿಯೋ ನಿರ್ಮಾಣ ಮಾಡಿಲ್ಲ. ಲೀಸ್ ಗೆ ಪಡೆದಿದ್ದ 20 ವರ್ಷದ ಅವಧಿಯೂ ಮುಗಿದಿದೆ. ಬಳಿಕ ಸ್ಟುಡಿಯೋ ನಿರ್ಮಾಣ ಮಾಡಿಲ್ಲ. ವಿವಾದಿತ ಜಾಗವು ಅರಣ್ಯ ಭೂಮಿ ಎಂದು ಮನವರಿಕೆ ಮಾಡಿಕೊಡಬಹುದು. ಹೀಗಾಗಿ ಕಾನೂನು ಹೋರಾಟದಲ್ಲಿ ನಟ ಬಾಲಕೃಷ್ಣ ಮಕ್ಕಳು, ಮೊಮ್ಮಕ್ಕಳಿಗೆ ಹಿನ್ನಡೆಯಾಗುವ ಸಾಧ್ಯತೆಯೇ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us