/newsfirstlive-kannada/media/media_files/2025/09/15/vantara-2025-09-15-16-39-48.jpg)
ವಂತಾರದ ಇಮೇಜ್ ಹಾಳು ಮಾಡಬೇಡಿ ಎಂದ ಸುಪ್ರೀಂಕೋರ್ಟ್
ಗುಜರಾತ್‌ನ ಜಾಮ್‌ನಗರದಲ್ಲಿ ಇರುವ ವನ್ಯಪ್ರಾಣಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರವಾದ ವಂತಾರದ ಕಾರ್ಯವೈಖರಿ ಬಗ್ಗೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಕ್ಲೀನ್ ಚಿಟ್ ನೀಡಿದೆ. ಅಂದಹಾಗೆ ಸುಪ್ರೀಂ ಕೋರ್ಟ್ ನಿಂದ ಎಸ್ಐಟಿ ನೇಮಕ ಮಾಡಲಾಗಿತ್ತು. ನ್ಯಾಯಮೂರ್ತಿಗಳಾದ ಪಂಕಜ್ ಮಿಥಲ್ ಮತ್ತು ಪಿ ಬಿ ವರಾಳೆ ಅವರ ಪೀಠವು ವರದಿಯನ್ನು ದಾಖಲೆಯಾಗಿ ಸ್ವೀಕರಿಸಿ, ವಂತಾರದಲ್ಲಿನ ನಿಯಮದ ಅನುಸರಣೆ ಮತ್ತು ನಿಯಂತ್ರಕ ಕ್ರಮಗಳ ವಿಷಯದ ಬಗ್ಗೆ ಅಧಿಕಾರಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂಬ ವಿಷಯವನ್ನು ಗಮನಕ್ಕೆ ತೆಗೆದುಕೊಂಡಿದೆ.
ಕಳೆದ ಶುಕ್ರವಾರ ಸುಪ್ರೀಂಕೋರ್ಟ್ ನೇಮಿಸಿದ್ದ ಎಸ್‌ಐಟಿ ತನ್ನ ವರದಿಯನ್ನು ಸಲ್ಲಿಸಿತ್ತು. ಸೋಮವಾರ ಸುಪ್ರೀಂಕೋರ್ಟ್ ಆ ವರದಿಯನ್ನು ಪರಿಶೀಲಿಸಿತು. ಈ ಬಗ್ಗೆ ವಿವರವಾದ ಆದೇಶ ನೀಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ವಂತಾರ ಕಟ್ಟುನಿಟ್ಟಾಗಿ ಕಾನೂನು ಪಾಲನೆ ಮಾಡುತ್ತಿದೆ. ಅದರ ಇಮೇಜ್ ಅನ್ನು ಹಾಳು ಮಾಡಬೇಡಿ ಎಂದು ಸುಪ್ರೀಂಕೋರ್ಟ್ ಹೇಳಿದೆ.
ವಂತಾರ ಕಾನೂನುಗಳನ್ನು ಪಾಲನೆ ಮಾಡುತ್ತಿಲ್ಲ ಮತ್ತು ಭಾರತ ಹಾಗೂ ವಿದೇಶಗಳಿಂದ ಪ್ರಾಣಿಗಳನ್ನು, ಅದರಲ್ಲೂ ವಿಶೇಷವಾಗಿ ಆನೆಗಳನ್ನು ಸುಪರ್ದಿಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಆರೋಪ ಮಾಡಲಾಗಿತ್ತು. ಈ ಆರೋಪಗಳ ಹಿನ್ನೆಲೆಯಲ್ಲಿ ವಂತಾರ ವಿರುದ್ಧ ಸತ್ಯಶೋಧನಾ ವಿಚಾರಣೆ ನಡೆಸಲು ಆಗಸ್ಟ್ 25ನೇ ತಾರೀಕಿನಂದು ಸುಪ್ರೀಂಕೋರ್ಟ್ ಎಸ್‌ಐಟಿಯನ್ನು ರಚಿಸಿತು.
ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ವರದಿಗಳು ಮತ್ತು ಎನ್‌ಜಿಒಗಳು ಹಾಗೂ ವನ್ಯಜೀವಿ ಸಂಸ್ಥೆಗಳಿಂದ ಬಂದ ವಿವಿಧ ದೂರುಗಳ ಆಧಾರದ ಮೇಲೆ ವಂತಾರ ವಿರುದ್ಧ ಅಕ್ರಮಗಳನ್ನು ಆರೋಪಿಸಿ, ಎರಡು ಪಿಐಎಲ್‌ಗಳ ವಿಚಾರಣೆ ನಡೆಸುವಾಗ ಸುಪ್ರೀಂ ಕೋರ್ಟ್ ನಿಂದ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನಾಲ್ವರು ಸದಸ್ಯರ ಎಸ್‌ಐಟಿಯನ್ನು ರಚಿಸಿತು.
ವಂತಾರದ ಸುಪರ್ದಿಯಲ್ಲಿ ಇರುವ ಆನೆಗಳನ್ನು ಅವುಗಳ ಮಾಲೀಕರಿಗೆ ಹಿಂದಿರುಗಿಸಲು ಮೇಲ್ವಿಚಾರಣಾ ಸಮಿತಿಯನ್ನು ರಚಿಸುವಂತೆ ಕೋರಿ ಆಗಸ್ಟ್ 14ರಂದು ಅರ್ಜಿದಾರರಾದ ಸಿ.ಆರ್. ಜಯಾ ಸುಕಿನ್ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿ ನಾಲ್ವರ ಸದಸ್ಯರ ಎಸ್‌ಐಟಿ ರಚಿಸಿತ್ತು.
ಒಂದಾದ ನಂತರ ಒಂದರಂತೆ ದೇವಾಲಯದ ಆನೆಗಳನ್ನು ವಂತಾರ ತೆಗೆದುಕೊಳ್ಳುತ್ತಿದೆ ಎಂದು ಜಯಾ ಸುಕಿನ್ ಅರ್ಜಿಯಲ್ಲಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್, ಆನೆಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯು ಕಾನೂನು ಬದ್ದವಾಗಿ ಹಾಗೂ ಎಲ್ಲ ನಿಯಮ ಪಾಲನೆ ಮಾಡಿ ನಡೆದಿದ್ದರೇ, ಯಾವುದೇ ಸಮಸ್ಯೆ ಇಲ್ಲ. ಇಂಥ ಜನರಲ್ ಹೇಳಿಕೆಗಳಿಗೆ ಯಾವುದೇ ಮನ್ನಣೆ, ಮಾನ್ಯತೆ ಇರಲ್ಲ ಎಂದು ಹೇಳಿದೆ.
ವಂತಾರ, ಅನಂತ್ ಅಂಬಾನಿಯ ಕನಸಿನ ಕೂಸು. ಅನಂತ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಫೌಂಡೇಷನ್ ಡೈರೆಕ್ಟರ್ ಆಗಿದ್ದಾರೆ. ಗುಜರಾತ್‌ನ ಜಾಮ್ ನಗರದ ರಿಲಯನ್ಸ್ ರಿಫೈನರಿ ಕಾಂಪ್ಲೆಕ್ಸ್ ನ 3 ಸಾವಿರ ಎಕರೆ ಪ್ರದೇಶದಲ್ಲಿ ವಂತಾರ ಸ್ಥಾಪಿಸಲಾಗಿದೆ. ಆನೆಗಳಿಗೆ ಸ್ಟೇಟ್ ಆಫ್ ದಿ ಆರ್ಟ್ ಶೆಲ್ಟರ್ ಗಳನ್ನು ನಿರ್ಮಾಣ ಮಾಡಲಾಗಿದೆ. ಹಗಲು- ರಾತ್ರಿ ವೇಳೆ ಆನೆಗಳಲು ಇರಲು ವೈಜ್ಞಾನಿಕವಾದ ಜಾಗ ನಿರ್ಮಾಣ ಮಾಡಲಾಗಿದೆ. ಹೈಡ್ರೋ ಥೆರಪಿ ನೀರಿನ ಫೂಲ್, ಕೆರೆ, ಆರ್ಥರೈಟಿಸ್ ಇರುವ ಆನೆಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯು ವಂತಾರದಲ್ಲಿದೆ. ಇದನ್ನು ಇತ್ತೀಚೆಗೆ ಪ್ರಧಾನಿ ಮೋದಿ ಉದ್ಘಾಟಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.