ಪ್ರವಾಹದಲ್ಲಿ ಮುಳುಗಿದ ಮಹಾಕುಂಭ ಮೇಳ ನಗರ ಪ್ರಯಾಗರಾಜ್, ಜೀವನ್ಮರಣದ ನಡುವೆ ಜನರ ಹೋರಾಟ

ಮಹಾಕುಂಭ ಮೇಳ ನಗರ ಪ್ರಯಾಗರಾಜ್ ಪ್ರವಾಹದಿಂದ ತತ್ತರಿಸಿ ಹೋಗಿದೆ. ತ್ರಿವೇಣಿ ಸಂಗಮ ಪ್ರಯಾಗರಾಜ್‌ನ ಅರ್ಧ ಭಾಗವೇ ನೀರಿನಲ್ಲಿ ಮುಳುಗಿ ಹೋಗಿದೆ. ಜನರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ.

author-image
Chandramohan
PRAYAGRAJ FLOOD44
Advertisment
  • ಪ್ರಯಾಗರಾಜ್ ನಲ್ಲಿ ಉಕ್ಕಿ ಹರಿದ ಗಂಗಾ, ಯಮುನಾ ನದಿಗಳು
  • ಪ್ರಯಾಗರಾಜ್‌ನ ಅರ್ಧಭಾಗವೇ ನೀರಿನಲ್ಲಿ ಮುಳುಗಡೆ
  • ಪ್ರವಾಹದ ನೀರಿನಲ್ಲಿ ಜನರಿಂದ ಜೀವನ್ಮರಣದ ಹೋರಾಟ


ಶಿವಗಾಮಿಯಂತೆ ಅಂಗೈಲಿ ಮಗು ಹಿಡಿದು ಪ್ರವಾಹ ದಾಟಿದ ತಂದೆ! ಮನೆಗೆ ನುಗ್ಗಿದ ಗಂಗೆ! ಪೊಲೀಸ್​ ಅಧಿಕಾರಿಯಿಂದ ಆರತಿ! ದೇವರಿಗೂ ಜಲ ದಿಗ್ಬಂಧನ! ಪ್ರಯಾಗ್​ರಾಜ್​ನಲ್ಲಿ ಮಹಾ ಪ್ರವಾಹ!  ಉತ್ತರ ಪ್ರದೇಶದ ತ್ರಿವೇಣಿ ಸಂಗಮ ನಗರಿ ಪ್ರಯಾಗರಾಜ್ ನಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಗಂಗಾ ನದಿ  ನೀರು ಮನೆಗಳಿಗೆ ನುಗ್ಗಿದೆ. ಪ್ರಯಾಗರಾಜ್‌ನ ಅರ್ಧ ಭಾಗವೇ ನೀರಿನಲ್ಲಿ ಮುಳುಗಿ ಹೋಗಿದೆ. ಜನವರಿಯಲ್ಲಿ ಕೋಟ್ಯಾಂತರ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. ಆದರೇ, ಈಗ ಅದೇ ಪ್ರಯಾಗರಾಜ್ ನ ಸ್ಥಳೀಯ ನಿವಾಸಿಗಳು ಗಂಗಾ, ಯಮುನಾ ನದಿಯ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಂಗಾ, ಯಮುನಾ ನದಿಯಲ್ಲಿ 10 ಲಕ್ಷ ಕ್ಯೂಸೆಕ್ ನೀರು ಏಕಕಾಲಕ್ಕೆ ಹರಿಯುತ್ತಿದ್ದು, ಜನರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. 
ಪ್ರಕೃತಿ ಮುಂದೆ ಮನುಷ್ಯ ಯಕಶ್ಚಿತ್ ಅನ್ನೋದು ಪದೇ ಪದೇ ಸಾಬೀತಾಗ್ತಾನೆ ಇದೆ.. ಪ್ರಕೃತಿ ದೇವಿ ಒಮ್ಮೆ ಮುನಿಸಿಕೊಂಡ್ರೆ ಮಾನವನ ಅವಶೇಷವೂ ಸಿಗದೇ ನಾಪತ್ತೆಯಾಗಿಬಿಡ್ತಾನೆ. ಪ್ರಯಾಗ್​ರಾಜ್​ನಲ್ಲಿ ಮಳೆರಾಯನ ಆರ್ಭಟ ಜನರ ಬದುಕನ್ನೆ ನುಂಗಿ ಹಾಕಿದೆ.. ಜೀವ ಮತ್ತು ಜೀವನ ಉಳಿಸಿಕೊಳ್ಳೋದಕ್ಕೆ ಜನ ಅಕ್ಷರಶಃ ಹರಸಾಹಸವನ್ನೆ ಪಡ್ತಿದ್ದಾರೆ.. ನೆತ್ತಿಗೆ ಆಸರೆಯಾಗಿದ್ದ ಸೂರುಗಳು ಜಲಾವೃತವಾಗಿದ್ದು, ಕಾಳಜಿ ಕೇಂದ್ರವೇ ದಿಕ್ಕಾಗಿದೆ.. ಜಲಾಸುರು ಸೃಷ್ಟಿಸಿರುವ ಅವಾಂತರದ ಒಂದೊಂದು ದೃಶ್ಯಗಳು ನಿಜಕ್ಕೂ ಕರುಣಜಾನಕ.. ಆ ವರುಣ ಮೃದoಗದ ದೃಶ್ಯಗಳು ಭಯಾನಕ.


ಉತ್ತರ ಭಾರತದಲ್ಲಿ ವರುಣ ಮೃದಂಗ..  ಜಲ ಪ್ರವಾಹ!
ವರುಣಾರ್ಭಟಕ್ಕೆ ಅಬ್ಬರಿಸಿದ ಬೊಬ್ಬಿರಿದ ಗಂಗೆ-ಯಮುನೆ
ಕಳೆದೆರಡು ತಿಂಗಳ ಹಿಂದೆ ಕರ್ನಾಟಕದಲ್ಲಿ ಅಬ್ಬರಿಸಿ ಬೊಬ್ಬಿರಿದ್ದ ಮಳೆರಾಯ ಈಗ ಉತ್ತರ ಭಾರತದಲ್ಲಿ ಆರ್ಭಟಿಸ್ತಿದ್ದಾನೆ. ವರುಣನ ಅಟ್ಟಹಾಸಕ್ಕೆ ಜನ ಸಾಕಪ್ಪ ವರುಣ ನಮ್ಮನ್ನ ಬಿಟ್ಟುಬಿಡು  ಅಂತ ಕೈ ಮುಗಿದು ಕೇಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ.. ಕಳೆದ ಮೂರು ದಿನದಿಂದ ಉತ್ತರ ಪ್ರದೇಶದ ಪ್ರಯಾಗ್​ ರಾಜ್​ನಲ್ಲಿ ವರುಣ ಬಡಪಾಯಿ ಜನರ ಬದುಕಿಗೆ ಕತ್ತಲೆ ಆವರಿಸುವಂತೆ ಮಾಡಿದ್ದಾನೆ. ಬಿಟ್ಟು ಬಿಡದೇ ಸುರಿಯತ್ತಿರುವ ಮಳೆ ಹತ್ತಾರು ಗ್ರಾಮಗಳನ್ನ ಸ್ವಾಹ ಮಾಡಿದೆ. ಮನೆ ಕಳ್ಕೊಂಡು ಕಂಗಾಲಾದವರು ಕಾಳಜಿ ಕೇಂದ್ರ ಸೇರಿ ನೆರವಿಗಾಗಿ ಎದುರು ನೋಡ್ತಿದ್ದಾರೆ. ಪ್ರಯಾಗ್​ ಪ್ರವಾಹದ ಒಂದೊಂದು ದೃಶ್ಯವೂ ಭೀಕರ.  ರಣ ಭೀಕರ.. 
ರಾಜಮೌಳಿ ಬಾಹುಬಲಿ ಸಿನಿಮಾದ ಈ ಸೀನ್ ಎಂದಿಗೂ ಮರೆಯೋದಕ್ಕೆ ಸಾಧ್ಯವಿಲ್ಲ ಬಿಡಿ. ಇಂಥದೊಂದು ಕಲ್ಪನೆ ಮೂವಿ ಮಾಂತ್ರಿಕ ರಾಜಮೌಳಿಗೆ ಬಿಟ್ಟು  ಬೇರೆ ಯಾರಿಗೂ ಊಹಿಸಿಕೊಳ್ಳೋಕೆ ಸಾಧ್ಯನೇ ಇಲ್ಲ. ಮೈದುಂಬಿ ಹರಿಯುತ್ತಿರುವ ನದಿ, ಕೈಯಲ್ಲಿ ಕಂದ, ಈ ಸೀನ್ ನೋಡುತ್ತಿದ್ದರೇ, ಮೈ ರೋಮಾಂಚನವಾಗಿ ಬಿಡುತ್ತೆ. ಇದು ರೀಲ್ ಸೀನ್, ಸಿನಿಮಾದ ಸೀನ್.






‘ಪ್ರಯಾಗ’ ಪ್ರಳಯ
ದೃಶ್ಯ 01: ಅಂಗೈಯಲ್ಲಿ ಕಂದನ ಹಿಡಿದು ಪ್ರವಾಹ ದಾಟಿದ ತಂದೆ 

https://x.com/TeluguScribe/status/1952041182323773553

 ಇದರ ರಿಯಲ್ ದೃಶ್ಯವನ್ನು ಈ ಟ್ವೀಟರ್ ಲಿಂಕ್ ನಲ್ಲಿ ಹಾಕಿದ್ದೇವೆ ನೋಡಿ. 

ಇದ್ಯಾವುದೋ ಸಿನಿಮಾ ಸೀನ್ ಅಲ್ಲ. ಅಥವಾ ರೀಲ್ಸ್​ಗಾಗಿ ಮಾಡಿದ ವಿಡಿಯೋ ಕೂಡ ಅಲ್ಲ.. ಸಾವು ಬದುಕಿನ ಸಂಘರ್ಷಕ್ಕೆ ಸಾಕ್ಷಿಯಾಗಿರೋವ ಕರುಳು ಹಿಂಡುವ ವಿಡಿಯೋ.. ಗಂಗೆ ಯಮುನೆಯ ಆರ್ಭಟಕ್ಕೆ ಸಾಕ್ಷಿಯಾದ ದೃಶ್ಯವಿದು.. ಆರ್ಭಟಿಸ್ತಿರೋ ಮಳೆರಾಯ ಪ್ರಯಾಗರಾಜ್​​ನಲ್ಲಿ ಮಹಾ ಪ್ರವಾಹವನ್ನೆ ಸೃಷ್ಟಿಸಿಬಿಟ್ಟಿದ್ದಾನೆ. ಮನೆಗಳಿಗೆ ನೀರು ನುಗ್ಗಿ, ಜೀವ ಉಳಿದ್ರೆ ಸಾಕು ಅಂತ ಜನ ಉಟ್ಟ ಬಟ್ಟೆಯಲ್ಲೇ ತಾವಿದ್ದ ಸ್ಥಳವನ್ನ ತೊರೆಯುತ್ತಿದ್ದಾರೆ.. ಹೀಗೆ ಪ್ರವಾಹದಿಂದ ಬಚಾವ್​ ಆಗುವ ಹೊತ್ತಲ್ಲಿ ಕಂಡು ಬಂದ ಮನ ಮಿಡಿಯುವ ಮಿಡಿಯುವ ದೃಶ್ಯವಿದು... ಮುಂದೆ ಅಪ್ಪ ತನ್ನ ಕರುಳ ಬಳ್ಳಿಯನ್ನ ಅಂಗೈಯಲ್ಲಿ ಹಿಡಿದು  ಒಂದೊಂದೆ ಹೆಜ್ಜೆ ಇಡ್ತಿದ್ರೆ,  ಹಿಂದೆ ಗಂಡ ಹೆಗಲಿಗೆ ಕೈ ಒರಗಿ ಹೆಂಡತಿ ಸಾಗ್ತಿದ್ದಾಳೆ.. ನಿಜಕ್ಕೂ ಈ ದೃಶ್ಯ ನೋಡ್ತಿದ್ರೆ ಕರುಳು ಹಿಂಡಿದ ಅನುಭವವೇ ಆಗುತ್ತೆ. 

ನೀವು ಸೂಕ್ಷ್ಮವಾಗಿ ಗಮನಿಸಿದ್ರೆ, ಕಣ್ಣು ಹಾಯಿಸಿದ ಕಡೆಯೆಲ್ಲ ಬರೀ ನೀರೇ ಕಾಣ್ತಿದೆ.. ಆ ನೀರಿನ ಮಧ್ಯೆ ಮೂರು ಜೀವಗಳು ಸಿಲುಕಿವೆ.. ಸುಮಾರು ನೂರು ಮೀಟರ್​ ತನಕ ಅರ್ಧದೇಹದ ತನಕ ನೀರು ನಿಂತಿದೆ.. ಸ್ವಲ್ಪ ಎಚ್ಚರ ತಪ್ಪಿದ್ರೂ ಕೈಯಲ್ಲಿದ್ದ ಮಗು ನೀರುಪಾಲಾಗುತ್ತೆ..  ಹೀಗಾಗಿ ಮಗುವಿನ ತಂದೆ.. ಮಗುವಿಗೆ ಒಂದು ಹನಿ ನೀರು ಕೂಡ ತಾಗದಂತೆ ಜೋಪಾನವಾಗಿ ಕಂದನನ್ನ ರಕ್ಷಣೆ ಮಾಡೋ ಸಾಹಸಕ್ಕೆ ಕೈ ಹಾಕಿದ್ದಾನೆ.. ಕೇವಲ ಮಗುವಿನ ಪ್ರಾಣ ಮಾತ್ರವಲ್ಲ.. ಬೆನ್ನ ಹಿಂದೆ ಹೆಜ್ಜೆ ಹಾಕ್ತಿರೋ ಹೆಂಡತಿಯನ್ನ ಆತ ಕಾಪಾಡಬೇಕಿದೆ..
ಉತ್ತರ ಪ್ರದೇಶದ ಪ್ರಯರಾಜ್​ನಲ್ಲಿ ವರುಣನ ಆರ್ಭಟಕ್ಕೆ ಮನೆಗಳೆಲ್ಲ ಮುಳುಗಡೆಯಾಗಿ.. ಜನ ಜೀವನ್ಮರಣದ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲೂ ಕೂಡ ಗಂಗೆ ಯಮನೆಯ ಆರ್ಭಟಕ್ಕ ಈ ದಂಪತಿ ಮನೆ ಜಲಾವೃತವಾಗಿದ್ದು, ಹಸುಗೂಸಿನ ಜೊತೆ ಗಂಡ ಹೆಂಡತಿ ಇಬ್ಬರೂ ಪ್ರವಾಹವನ್ನೆ ದಾಟಿದ್ದಾರೆ.  ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಅಪ್ಪನ ಈ ಹರಸಾಹಸವನ್ನ ಕಂಡು ಜನ ಕೂಡ ಆಶ್ಚರ್ಯಗೊಂಡಿದ್ದಾರೆ. 
ದೃಶ್ಯ 02
ಮನೆಗೆ ನುಗ್ಗಿದ ಗಂಗೆ! ಪೊಲೀಸ್​ ಅಧಿಕಾರಿಯಿಂದ ಆರತಿ


ಪ್ರಯಾಗ್​ರಾಜ್​ನಲ್ಲಿ ಸುರಿಯುತ್ತಿರುವ ಮಳೆಯಿಂದ ಗಂಗೆ ಮತ್ತು ಯುಮನಾ ನದಿಗಳು ಅಬ್ಬರಿಸಿ ಬೊಬ್ಬಿರಿಯುತ್ತಿವೆ... ನದಿ ಪಾತ್ರದಲ್ಲಿರೋ ಜನರ ಪಾಡಂತು ನಿಜಕ್ಕೂ ಘೋರಾತಿ ಘೋರವಾಗಿದೆ.. ಶಾಕಿಂಗ್ ಏನಂದ್ರೆ ನದಿ ಪಾತ್ರವನ್ನ ದಾಟಿ ಗಂಗೆ ನಗರಕ್ಕೂ ನುಗ್ಗಿದ್ದಾಳೆ. ಅಷ್ಟರ ಮಟ್ಟಿಗೆ ಮಳೆ ಬಿಟ್ಟು ಬಿಡದೇ ಸುರಿಯುತ್ತಿದೆ.. ಹೀಗಿರುವಾಗ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಮನೆ ಹೊಸ್ತಿಲ ತನಕವೂ ಗಂಗೆ ನುಗ್ಗಿ ಬಂದಿದ್ದಾಳೆ.. ಆದ್ರೆ ಈ ಪುಣ್ಯಾತ್ಮ ಗಂಗೆ ಮನೆ ಬಾಗಿಲಿಗೆ ಬಂದಿದ್ದಾಳೆ ಅಂತ ಪೂಜೆ ಸಲ್ಲಿಸಿದ್ದಾನೆ.

ಇನ್ನೊಂದೆರಡು ಅಡಿ ನೀರು ಹೆಚ್ಚಾದ್ರು, ಮನೆಯೂ ಉಳಿಯಲ್ಲ, ಮನೆಯಲ್ಲಿದ್ದವು ಉಳಿಯಲ್ಲ.. ಇಂಥಾ ಟೈಮ್​ನಲ್ಲಿ ಓದಿರೋ ತಿಳುವಳಿಕೆ ಇರೋ ಇಂಥವರೇ ಮೌಢ್ಯಕ್ಕೆ  ಬಿದ್ರೆ ಏನ್​ ಹೇಳೋಣ ಹೇಳಿ.. ಮನೆಗೆ ಗಂಗಾ ನದಿ ನುಗ್ಗಿ ಬಂದಿದ್ರೆ, ಈ ಪೊಲೀಸ್ ಅಧಿಕಾರಿಗೆ ಗಂಗೆ ಗುಲಾಬಿ ಹೂವು ಹಾಕಿ, ಆರತಿ ಮಾಡಿ ಪೂಜೆ ಸಲ್ಲಿಸಿದ್ದಾನೆ.ಇದಷ್ಟೆ ಅಲ್ಲ ಮುಳುಗಿರೋ ಮನೆ ಮೇಲಿಂದನೇ ಈ ಆಸಾಮಿ ನೀರಿಗೆ ಹಾರಿ ಸ್ವೀಮ್ಮಿಂಗ್ ಮಾಡಿದ್ದಾನೆ. ಇದನ್ನ ಹುಚ್ಚಾಟ ಅನ್ಬೇಕೋ.. ಮೌಢ್ಯದ ಪರಮಾವಧಿ ಅನ್ಬೇಕೋ ಗೊತ್ತಿಲ್ಲ.


12 ಜಿಲ್ಲೆಗಳಿಗೆ ರೆಡ್ ಅಲರ್ಟ್​! ಕಾಳಜಿ ಕೇಂದ್ರವೇ ಆಸರೆ! 
ಕಳೆದ ಮೂರು ನಾಲ್ಕು ದಿನದಿಂದ ಮಳೆ ಬಿಟ್ಟು ಬಿಡದೇ ಸುರಿಯುತ್ತಿರೋದ್ರಿಂದ.. ಜನರ ಬದುಕಿಗೆ ಕತ್ತಲೇ ಆವರಿಸಿದೆ. ಮನೆಗಳೆಲ್ಲ ಜಲಾವೃತವಾಗಿದ್ದು, ಜನರನ್ನ ಕಾಳಜಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಜೊತೆಗೆ ಪ್ರಯಾಗರಾಜ್​ ಸೇರಿದಂತೆ 12 ಜಿಲ್ಲೆಗಳಿಗೆ ರೆಡ್​ ಅಲರ್ಟ್ ಘೋಷಣೆ ಮಾಡಲಾಗಿದೆ.

ಮನೆಗೆ ಜಲ ದಿಗ್ಬಂಧನ! ಏಣಿಯಿಂದ ರಕ್ಷಣೆ
ಮಳೆರಾಯನ ಆರ್ಭಟ ಅದೆಷ್ಟಿದೆ ಅಂದ್ರೆ ಎರಡಂತಸ್ತಿನ ಕಟ್ಟಡಗಳು ಕೂಡ ನೀರಲ್ಲಿ ಮುಳುಗಿ ಹೋಗಿವೆ... ಒಂದ್ಕಡೆ ಮಳೆ.. ಇನ್ನೊಂದ್ಕಡೆ ಮನೆ ಮುಂದೆಯೇ ಮೊಣಕಾಲುದ್ದ ನಿಂತಿರೋ ನೀರು.. ಹೀಗೆ ಜೀವಕ್ಕಾಗಿ ಪರದಾಡ್ತಿರೋರ ಪಾಲಿಗೆ ದೇವದೂಂತರಂತೆ ನಿಂತು ಎನ್​ಡಿಆರ್​ ಎಫ್ ತಂಡ ಕೆಲಸ ಮಾಡ್ತಿದೆ. ಬಹಳಷ್ಟು  ಮನೆಗಳ  ಅರ್ಧ ಭಾಗ ನೀರಲ್ಲಿ ಮುಳುಗಿ ಹೋಗಿದೆ.. ದಿಕ್ಕೇ ತೋಚದೇ ಕೂತಿದ್ದವರಿಗೆ ದೇವರಂತೆ ಬಂದು ಎನ್​ಡಿಆರ್​ಎಫ್‌ ತಂಡ ರಕ್ಷಣೆ ಮಾಡಿದೆ.  ಮನೆಯಲ್ಲಿದ್ದವರನ್ನ ಏಣಿ ಮೂಲಕ ಒಬ್ಬೊಬ್ಬರನ್ನೆ ರಕ್ಷಣೆ ಮಾಡಿ ಬೋಟ್​ ಮೂಲಕ ಸುರಕ್ಷಿತ ಸ್ಥಳಕ್ಕೆ ಶಿಫ್ಟ್  ಮಾಡಲಾಗಿದೆ.

ಗಂಗಾ ತೀರದಲ್ಲಿ ಬೋಟಿಂಗ್​ ಮಾಡ್ತಿದ್ದ ಬಡಪಾಯಿಗಳ ಒಪ್ಪತ್ತಿನ ಊಟಕ್ಕೂ ಮಳೆರಾಯ ಕಲ್ಲು ಹಾಕಿದ್ದಾನೆ. ಗಂಗೆ ದಡದಲ್ಲಿ ಬೋಟಿಂಗ್​ ಇಲ್ಲಿನ ನಿವಾಸಿಗಳಿಗೆ ಮುಖ್ಯ ಆದಾಯ.. ನೂರಾರು ಕುಟಂಬಗಳಿಗೆ ಇವತ್ತು ಇದೇ ಬೋಟಿಂಗ್​ ಕೆಲಸವೇ ಆಸರೆಯಾಗಿದೆ.. ಆದ್ರೀಗ ನದಿಯಲ್ಲಿ ನೀರು ಹೆಚ್ಚಾಗಿರೋ ಕಾರಣಕ್ಕೆ ಬೋಟಿಂಗ್​ ಕೂಡ ಬಂದ್ ಆಗಿದ್ದು, ಅದನ್ನೆ ನಂಬ್ಕೊಂಡು ಕೆಲಸ ಮಾಡ್ತಿದ್ದವರ ಪರದಾಡುವಂತಾಗಿದೆ. ಎಲ್ಲ ಬಂದ್ ಆಗಿದೆ ನಮ್ಮ ಕಷ್ಟ ಕೇಳೋರು ಯಾರು ಅಂತ ಬೋಟ್​ ಓಡಿಸೋ ವ್ಯಕ್ತಿಯೊಬ್ಬ ಅಳಲು ತೋಡಿಕೊಂಡಿದ್ದಾನೆ. 
 ನಮ್ಮ ದಿನದ ಊಟ ಇದೇ ಆಗಿತ್ತು.. ಅದೇ ಇಲ್ಲ..ಗಂಗಾನದಿ ಉಕ್ಕಿ ಹರಿಯುತ್ತಿರೋದ್ರಿಂದ.. ಘಾಟ್​​ ಬಳಿ ಜನ ಸ್ನಾನಕ್ಕೆ ಬರ್ತಿದ್ರು. ಈಗ ಎಲ್ಲ ಬಂದ್ ಆಗಿದೆ.  ಸ್ನಾನ ಮಾಡೋರಿಗೂ ಜಾಗ ಇಲ್ಲ... ಬೋಟ್ ಮೂಲಕ ಹೋಗ್ತಿದ್ರು.. ಯಾರು ಬರ್ತಿಲ್ಲ. ಒಂದು ಗಂಟೆ ಎರಡು ಗಂಟೆ ಬಳಿಕ ಒಬ್ಬೊಬ್ಬರು ಬರ್ತಾರೆ.. ಪೊಲೀಸರು ಕೂಡ ಬಿಡಲ್ಲ.. ಅಲ್ಲಿ ಶವ ಸಂಸ್ಕಾರ ಮಾಡುವ ಘಾಟ್​ ಕೂಡ ಮುಳುಗಿ ಹೋಗಿದೆ.  ಹೆಣ ಸುಡೋಕು ಕಷ್ಟ ಆಗ್ತಿದೆ.  ಅಸ್ಥಿ ತಂದೆ ಬೋಟ್ ಮೂಲಕ ಗಂಗೆಯಲ್ಲಿ ಬಿಡ್ತಿದ್ರು.. ಈಗ ಯಾರು ಬರ್ತಿಲ್ಲ.
ಒಟ್ನಲ್ಲಿ ಮಳೆರಾಯ ಸೃಷ್ಟಿಸಿದ ಅವಾಂತರಕ್ಕೆ  ಘಾಟ್​ಗಳಲ್ಲಿ ಹೆಣ ಸುಡೋದಕ್ಕೂ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಹಳ್ಳದ ನಟ್ಟ ನಡುವಲ್ಲಿ ಸಿಲುಕಿಕೊಂದಿದ್ದ ಬೈಕ್​ ಸವಾರ ಬದುಕಿ ಬಂದ ದೃಶ್ಯ ನಿಜಕ್ಕೂ ರಣ ರೋಚಕವಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

flood, North india flood, Uttara pradesh flood, karnataka flood, Heavy rain , river overflowing, RIVER crosses danger mark. GANGA RIVER, Yamuna river.
Advertisment