/newsfirstlive-kannada/media/media_files/2025/09/13/vijay-lakashmi-flat-stolen-2025-09-13-13-44-43.jpg)
ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿರಿಂದ 2 ದೂರು ಸಲ್ಲಿಕೆ, ಬಳಿಕ ಮೌನ
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಕೊಲೆ ಕೇಸ್ ನಲ್ಲಿ ಮತ್ತೆ ಜೈಲು ಪಾಲಾಗಿದ್ದಾರೆ. ನಟ ದರ್ಶನ್ ಜೈಲು ಪಾಲಾದ ಮೇಲೆ ಇತ್ತ ಅವರ ಧರ್ಮಪತ್ನಿ ವಿಜಯಲಕ್ಷ್ಮಿ ಅವರು ಎರಡೆರೆಡು ಕಂಪ್ಲೇಂಟ್ ಗಳನ್ನು ಪೊಲೀಸರಿಗೆ ನೀಡಿದ್ದಾರೆ. ಮೊದಲನೇಯದಾಗಿ ಸೋಷಿಯಲ್ ಮೀಡಿಯಾಗಳಲ್ಲಿ ತಮಗೆ ಅಶ್ಲೀಲ ಸಂದೇಶಗಳನ್ನು ಕಳಿಸಲಾಗುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ತಮ್ಮ ಹೊಸಕೆರೆಹಳ್ಳಿ ಪ್ಲ್ಯಾಟ್ ನಲ್ಲಿ ಮೂರು ಲಕ್ಷ ರೂಪಾಯಿ ಹಣ ಕಳ್ಳತನವಾಗಿದೆ ಎಂದು ಮತ್ತೊಂದು ಲಿಖಿತ ದೂರು ಅನ್ನು ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಗೆ ನೀಡಿದ್ದಾರೆ.
ಈ ಎರಡೂ ಕೇಸ್ ಗಳನ್ನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಎರಡು ಕೇಸ್ ಗಳಲ್ಲಿ ವಿಜಯ ಲಕ್ಷ್ಮಿ ದೂರುದಾರರು. ದೂರು ಕೊಟ್ಟ ಮೇಲೆ ಪೊಲೀಸರಿಗೆ ದೂರಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಬೇಕು, ದೂರಿಗೆ ಪೂರಕವಾಗಿ ಸಾಕ್ಷ್ಯ, ಆಧಾರಗಳನ್ನು ನೀಡಬೇಕು, ಆಗ ಮಾತ್ರವೇ ಕೇಸ್ ತನಿಖೆಯನ್ನು ಚುರುಕುಗೊಳಿಸಲು ಪೊಲೀಸರಿಗೆ ಸಾಧ್ಯವಾಗುತ್ತೆ. ಆದರೇ, 2 ಕೇಸ್ ಗಳಲ್ಲೂ ವಿಜಯಲಕ್ಷ್ಮಿ ಮಾತ್ರ ಪೊಲೀಸರ ಸಂಪರ್ಕಕ್ಕೆ ಸಿಗುತ್ತಿಲ್ಲ. ಪೊಲೀಸರು ಪೋನ್ ಕಾಲ್ ಮಾಡಿದರೂ, ವಿಜಯಲಕ್ಷ್ಮಿ ಅವರು ಕಾಲ್ ರೀಸೀವ್ ಮಾಡುತ್ತಿಲ್ಲ. ಕೇಸ್ ಗಳಿಗೆ ಸಂಬಂಧಿಸಿದಂತೆ ಇದುವರೆಗೂ ವಿಜಯಲಕ್ಷ್ಮಿ ಅವರಿಗೆ ಮೂರು ನೋಟೀಸ್ ನೀಡಲಾಗಿದೆ.
ಆದರೇ, ನೋಟೀಸ್ ಗಳಿಗೂ ಉತ್ತರ ನೀಡಿಲ್ಲ.
ತಮ್ಮ ಪ್ಲ್ಯಾಟ್ ಕಳ್ಳತನ ಕೇಸ್ ನಲ್ಲೂ ಸಂಪೂರ್ಣ ಸೈಲೆಂಟ್ ಆಗಿದ್ದಾರೆ. ಇದರಿಂದಾಗಿ ವಿಜಯಲಕ್ಷ್ಮಿ ದರ್ಶನ್ ಅವರ ಈ ನಡೆ ಪೊಲೀಸರಿಗೆ ತಲೆ ನೋವಾಗಿದೆ.
ತಮಗೆ ಸೋಷಿಯಲ್ ಮೀಡಿಯಾದಲ್ಲಿ ಯಾಱರು ಅಶ್ಲೀಲ ಸಂದೇಶ ಕಳಿಸಿದ್ದಾರೆ? ಯಾವ ಸೋಷಿಯಲ್ ಮೀಡಿಯಾ ಅಕೌಂಟ್ ನಿಂದ ಅಶ್ಲೀಲ ಸಂದೇಶ ಬಂದಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ವಿಜಯಲಕ್ಷ್ಮಿ ಅವರಿಗೆ ಪೊಲೀಸರು ನೋಟೀಸ್ ನೀಡಿದ್ದರು. ತಮಗೆ ಅಶ್ಲೀಲ ಸಂದೇಶ ಕಳಿಸಿದವರ ಬಗ್ಗೆ ಯಾವುದೇ ಮಾಹಿತಿಯನ್ನು ವಿಜಯಲಕ್ಷ್ಮಿ ಪೊಲೀಸರಿಗೆ ನೀಡುತ್ತಿಲ್ಲ. ನೀವು ಇರುವ ಸ್ಥಳಕ್ಕೆ ಬಂದು ನಾವು ಹೇಳಿಕೆ ದಾಖಲಿಸಿಕೊಳ್ಳುತ್ತೇವೆ ಎಂದು ಹೇಳಿದರೂ, ವಿಜಯಲಕ್ಷ್ಮಿ ಉತ್ತರ ನೀಡಿಲ್ಲ.
ಹೀಗಾಗಿ ವಿಜಯಲಕ್ಷ್ಮಿ ಅವರು ಕೊಟ್ಟಿರುವ ದೂರುಗಳಿಗೆ ಸಂಬಂಧಿಸಿದಂತೆ ಈಗ ಪೊಲೀಸರು ಯಾವುದಾದರೊಂದು ಕ್ರಮವನ್ನು ಕೈಗೊಳ್ಳಲೇಬೇಕಾಗುತ್ತೆ. ಯಾವುದೇ ಕೇಸ್ ನಲ್ಲೇ ಆಗಲಿ, ಪೊಲೀಸರಿಗೆ ಮೂರು ಆಯ್ಕೆಗಳಿರುತ್ತಾವೆ. ಮೊದಲನೇಯದಾಗಿ ಆರೋಪಿಗಳನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಸಾಕ್ಷ್ಯಾಧಾರ ಸಂಗ್ರಹಿಸಿ ಕೋರ್ಟ್ ಗೆ ಚಾರ್ಜ್ ಷೀಟ್ ಸಲ್ಲಿಸಬೇಕಾಗುತ್ತೆ. 2ನೇಯದಾಗಿ ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರ ಇಲ್ಲದೇ ಇದ್ದರೇ, ಕೇಸ್ ಮುಕ್ತಾಯಗೊಳಿಸಲು ಬಿ ರಿಪೋರ್ಟ್ ಅನ್ನು ಕೋರ್ಟ್ ಗೆ ಸಲ್ಲಿಸಬೇಕಾಗುತ್ತೆ. ಜೊತೆಗೆ ಆರೋಪಿಗಳು ಪತ್ತೆಯಾಗದಿದ್ದರೇ, ಸಿ ರಿಪೋರ್ಟ್ ಸಲ್ಲಿಸಲು ಅವಕಾಶ ಇದೆ.
ಹೀಗಾಗಿ ವಿಜಯಲಕ್ಷ್ಮಿ ಅವರು ತಮ್ಮ ದೂರುಗಳಿಗೆ ಸಂಬಂಧಿಸಿದಂತೆ ಹೇಳಿಕೆ ನೀಡಿ, ಸಾಕ್ಷ್ಯಾಧಾರ ನೀಡಿ, ತನಿಖೆಗೆ ಸಹಕಾರ ನೀಡದಿದ್ದರೇ, ಕೋರ್ಟ್ ಗೆ ಸಿ ರಿಪೋರ್ಟ್ ಸಲ್ಲಿಸುವ ಬಗ್ಗೆ ಪೊಲೀಸರು ಚಿಂತನೆಯನ್ನು ನಡೆಸುತ್ತಿದ್ದಾರೆ.
ಮೈಸೂರಿನಲ್ಲಿ ನನಗೆ ಕೆಲಸ ಇದೆ. ನಿಮ್ಮ ಕೆಲಸವನ್ನು ನೀವು ಮಾಡಿ ಎಂದು ಪೊಲೀಸರಿಗೆ ಹೇಳಿರುವ ವಿಜಯಲಕ್ಷ್ಮಿ ದೂರಿನ ಬಗ್ಗೆ ಹೇಳಿಕೆ ನೀಡದೇ, ಮೌನಕ್ಕೆ ಶರಣಾಗಿದ್ದಾರೆ.
ಪ್ಲ್ಯಾಟ್ ನಲ್ಲಿ ಹಣ ಕಳ್ಳತನದ ಬಗ್ಗೆ ವಿಜಯಲಕ್ಷ್ಮಿ ಮ್ಯಾನೇಜರ್ ನಾಗರಾಜು ಹಾಗೂ ಮನೆ ಕೆಲಸದವರ ಹೇಳಿಕೆಯನ್ನು ಮಾತ್ರ ಪೊಲೀಸರು ಇದುವರೆಗೂ ದಾಖಲು ಮಾಡಿಕೊಂಡಿದ್ದಾರೆ. ಮನೆಯ ರೂಮುನಲ್ಲಿದ್ದ 3 ಲಕ್ಷ ರೂಪಾಯಿ ಹಣ ಕದ್ದವರಾರು ಎಂಬ ಬಗ್ಗೆ ಪೊಲೀಸರಿಗೂ ಯಾವುದೇ ಕ್ಲೂ ಸಿಕ್ಕಿಲ್ಲ. ಪ್ಲ್ಯಾಟ್ ಕಳ್ಳತನ ಪ್ರಕರಣದಲ್ಲೂ ತನಿಖೆಯಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ.
ಹೀಗಾಗಿ ಎಲ್ಲವೂ ಈಗ ವಿಜಯಲಕ್ಷ್ಮಿ ದರ್ಶನ್ ನೀಡುವ ಹೇಳಿಕೆಯನ್ನೇ ಅವಲಂಬಿಸಿದೆ. ಹೇಳಿಕೆ ನೀಡಿದರೇ, ಪೊಲೀಸರು ತನಿಖೆ, ವಿಚಾರಣೆಯನ್ನು ಮುಂದುವರಿಸುತ್ತಾರೆ. ಇಲ್ಲದಿದ್ದರೇ, 2 ಕೇಸ್ ಗಳಲ್ಲೂ ಸಿ ರಿಪೋರ್ಟ್ ಅನ್ನು ಕೋರ್ಟ್ ಗೆ ಸಲ್ಲಿಸುವುದೊಂದೇ ಪೊಲೀಸರ ಮುಂದಿರುವ ಆಯ್ಕೆಯಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.