/newsfirstlive-kannada/media/media_files/2025/09/19/ai-question-paper-by-vtu-2025-09-19-18-12-01.jpg)
VTU ನಲ್ಲಿ ಎಐ ನಿಂದಲೇ ಪ್ರಶ್ನೆಪತ್ರಿಕೆ ರೆಡಿ!
ಜಗತ್ತಿನ ಎಲ್ಲ ಕ್ಷೇತ್ರಗಳಿಗೂ ಆರ್ಟಿಫಿಯಲ್ ಇಂಟೆಲಿಜೆನ್ಸ್ ಲಗ್ಗೆ ಇಟ್ಟಿದ್ದು ಶಿಕ್ಷಣ ವ್ಯವಸ್ಥೆಗೂ ಕಾಲಿಟ್ಟಿದೆ. ಪ್ರಾಥಮಿಕ & ಪ್ರೌಢ ಶಿಕ್ಷಣದಲ್ಲಿ ಫೇಶಿಯಲ್ ಅಟೆಂಡೆನ್ಸ್ ಮೂಲಕ ಛಾಪು ಮೂಡಿಸಿದ್ದಾಗಿದೆ. ಇದೀಗ ರಾಜ್ಯದ ಪ್ರತಿಷ್ಠಿತ ವಿಶ್ವಿದ್ಯಾಲಯದ ಪ್ರಶ್ನೆ ಪತ್ರಿಕೆ ಸೆಟ್ ಮಾಡಲು ಕೂಡ AI ಬಳಕೆಗೆ ತೀರ್ಮಾನ ಮಾಡಲಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳ ಕನಸಿನ ವೃತ್ತಿಯ ಪದವಿ ಪಡೆಯಲು ಪ್ರಶ್ನೆ ಪತ್ರಿಕೆ ಇನ್ಮುಂದೆ AI ರೆಡಿ ಮಾಡುತ್ತೆ. ಆ ಬಗ್ಗೆ ಡೀಟೇಲ್ಸ್ ಇಲ್ಲಿದೆ . ಓದಿ.
ವಿವಿ ಪರೀಕ್ಷಾ ವ್ಯವಸ್ಥೆಗೆ ಬಂತು ಎಐ ತಂತ್ರಜ್ಞಾನ..!
ವಿಟಿಯು ವಿವಿ ಪ್ರಶ್ನೆ ಪತ್ರಿಕೆ ರೆಡಿ ಮಾಡಲಿದೆ ಎಐ..!
ಜಗತ್ತು ಮುಂದುವರಿದಂತೆ ಶಿಕ್ಷಣ ವ್ಯವಸ್ಥೆಯಲ್ಲಿಯೂ ಆಧುನಿಕತೆ ಅನಿವಾರ್ಯವಾಗಿದೆ. ಇದು AI ಯುಗ. ಶಿಕ್ಷಣ ಕ್ಷೇತ್ರದಲ್ಲೂ ಕೂಡ ಎ ಐ ಟೆಕ್ನಾಲಜಿಗಳು ಎಂಟ್ರಿ ಕೊಟ್ಟಿವೆ. ಇತ್ತೀಚಿಗಷ್ಟೇ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯೂ ಕೂಡ ಮಕ್ಕಳ ಹಾಜರಾತಿಯನ್ನ ಫೇಷಿಯಲ್ ಅಟೆಂಡೆನ್ಸ್ ಮೂಲಕ ದಾಖಲಿಸಿಕೊಳ್ಳಲು ಮುಂದಾಗಿದ್ದು ವ್ಯಾಪಕ ಚರ್ಚೆಗೆ ಕಾರಣ ಆಗಿತ್ತು. ಆ ಬೆನ್ನಲ್ಲೇ ಈಗ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತನ್ನ ವ್ಯಾಪ್ತಿಯ ಇಂಜಿನಿಯರಿಂಗ್ ಕಾಲೇಜಿನ ಪರೀಕ್ಷೆಗಳ ವ್ಯವಸ್ಥೆಗೂ AI ತಂತ್ರಜ್ಞಾನ ಬಳಕೆ ಮಾಡಲು ತೀರ್ಮಾನ ಮಾಡಿದ್ದು ಅಂತಿಮ ಹಂತದ ತಯಾರಿ ಭರದಿಂದ ಸಾಗುತ್ತಿದೆ.
ಹೌದು, ಮೊದಲು ಪ್ರಶ್ನೆ ಪತ್ರಿಕಗಳ ರಚನೆಯಲ್ಲಿ ಯಶಸ್ವಿಯಾದ ಬಳಿಕ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೂ ಎಐ ಬಳಕೆಗೆ ವಿಟಿಯು ಮುಂದಾಗಿದೆ.. ವಿಶ್ವವಿದ್ಯಾಲಯಗಳ ಪರೀಕ್ಷ ಪದ್ಧತಿಯಲ್ಲಿಯೇ ಮೊದಲ ಬಾರಿಗೆ ಮಹತ್ವ ಬದಲಾವಣೆಗೆ VTU ಮುಂದಾಗಿದೆ.. ಇದೇ ಮೊದಲ ಬಾರಿಗೆ ರಾಜ್ಯದ ವಿವಿಗಳ ಇತಿಹಾಸದಲ್ಲಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ತಯಾರಿಕೆಗೆ AI ತಂತ್ರಜ್ಞಾನ ಬಳಕೆ ಮಾಡ್ತಾ ಇರೋದು ಅನ್ನೋದು ವಿಶೇಷ.
ಪ್ರಶ್ನೆ ಪತ್ರಿಕೆ ತೆಗೆಯಲು AI ಬಳಕೆ ಮಾಡೋದ್ರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಿದೆ. ಕುಲಪತಿಗಳಿಂದ ಹಿಡಿದು ಪಾಠ ಮಾಡಿದ ಪ್ರೋಪೆಸರ್ ಗಳಿಗೂ ಪರೀಕ್ಷೆಗೆ ಯಾವ ಪ್ರಶ್ನೆಗಳು ಬರುತ್ತೆ ಯಾವೆಲ್ಲ ವಿಷಯಗಳ ಮೇಲೆ ಪ್ರಶ್ನೆ ಬರುತ್ತೆ ಅನ್ನೋ ಮಾಹಿತಿ ಸಿಗಲ್ಲ.. ಈ ಮೂಲಕ ಪರೀಕ್ಷ ಪದ್ಧತಿಯಲ್ಲಿ ವಸ್ತುನಿಷ್ಠತೆ ತಂದು ಪ್ರಶ್ನೆ ಪತ್ರಿಕೆ ಸೋರಿಕೆಗೆ ಬ್ರೇಕ್ ಹಾಕುವ ಚಿಂತನೆಯನ್ನು ವಿಟಿಯು ಮಾಡುತ್ತಿದೆ. ಪ್ರಶ್ನೆ ಪತ್ರಿಕೆಗಳ ಸ್ವರೂಪ, ಸೆಮಿಸ್ಟರ್ ಹಾಗೂ ವಿಷಯ ವಸ್ತು ನೀಡಿದ್ರೆ ಸಾಕು ಎಐ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ನೀಡುತ್ತೆ..ಇದಕ್ಕೆ ಬೇಕಾದ ತಾಂತ್ರಿಕ ಸಹಾಯ ನೀಡಲು ಕೆಲವು ಕಂಪನಿಗಳು ಕೈ ಜೋಡಿಸಿದ್ದು ಪ್ರಾಯೋಗಿಕ ಹಂತದಲ್ಲಿ ವಿಟಿಯು ತನ್ನ ವ್ಯಾಪ್ತಿಯ ಆಯ್ದ ಕೆಲವು ಕಾಲೇಜುಗಳಲ್ಲಿ ಬಳಕೆಗೆ ಮುಂದಾಗಿದ್ದು ನಂತರ ಎಐ ತಂತ್ರಜ್ಞಾನದ ಬಳಕೆಯನ್ನ ಮೌಲ್ಯಮಾಪನಕ್ಕೂ ಅಳವಡಿಸುವ ಬಗ್ಗೆ ಚಿಂತನೆ ಮಾಡಿದೆ ಎಂದು ವಿಟಿಯು ಉಪಕುಲಪತಿ ಡಾಕ್ಟರ್ ವಿದ್ಯಾಶಂಕರ್ ಹೇಳಿದ್ದಾರೆ.
ಒಟ್ನಲ್ಲಿ ರಾಜ್ಯದ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಮೊದಲ ಬಾರಿಗೆ ಇಂಥ ಪ್ರಯತ್ನಕ್ಕೆ ಕೈ ಹಾಕಿದ್ದು ಶಿಕ್ಷಣ ಕ್ಷೇತ್ರದಲ್ಲಿ ಯಾವ ಅಂತಾರಾಷ್ಟ್ರೀಯ ವಿವಿಗೆ ಕಡಿಮೆ ಇಲ್ಲ ಅನ್ನೋದನ್ನು ತೋರಿಸೋಕೆ ಹೊರಟಿದೆ. ಯೋಚನೆ ಏನೋ ಉತ್ತಮವಾಗಿದ್ದು ಯೋಜನೆ ಅನುಷ್ಠಾನ ಆಗುವ ಹೊತ್ತಿಗೆ ಏನೇನು ಆಗುತ್ತೆ ಅಂತ ಕಾದು ನೋಡಬೇಕು
ಪ್ರಗತಿ ಶೆಟ್ಟಿ
ನ್ಯೂಸ್ ಫಸ್ಟ್
ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.