/newsfirstlive-kannada/media/media_files/2025/09/13/modi-visits-manipura02-2025-09-13-18-33-04.jpg)
ಮಣಿಪುರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ
ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಸಂಘರ್ಷದಿಂದ ಕಂಗೆಟ್ಟಿದ್ದ ಮಣಿಪುರ ರಾಜ್ಯಕ್ಕೆ ಇಂದು ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಹಿಂಸೆಯಿಂದ ತುಂಬಿದ್ದ ಮಣಿಪುರದಲ್ಲಿ, ಅಭಿವೃದ್ದಿಗಾಗಿ ಶಾಂತಿ ಅಗತ್ಯ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 2023ರ ಮೇ ತಿಂಗಳಿನಿಂದ ನಿರಂತರವಾಗಿ ಮಣಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ಸಂಭವಿಸಿತ್ತು. ಬಳಿಕ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿತ್ತು. ಹಿಂಸಾಚಾರದಲ್ಲಿ 250 ಮಂದಿ ಸಾವನ್ನಪ್ಪಿದ್ದಾರೆ.
ಮಣಿಪುರಕ್ಕೆ ಹೊಸ ಬೆಳಕು ಮೂಡುತ್ತಿದೆ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ. ಮಣಿಪುರದ ಭೂಮಿ ಭರವಸೆ ಮತ್ತು ಆಕಾಂಕ್ಷೆಯ ಭೂಮಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದುರಾದೃಷ್ಟವಶಾತ್, ಹಿಂಸೆ ಈ ಸುಂದರ ಪ್ರದೇಶದ ಮೇಲೆ ಕರಿನೆರಳು ಆವರಿಸುವಂತೆ ಮಾಡಿತ್ತು. ಕೆಲ ಕ್ಷಣಗಳ ಹಿಂದೆಯಷ್ಟೇ, ರಿಲೀಫ್ ಕ್ಯಾಂಪ್ ಗಳಲ್ಲಿ ಇರುವವರನ್ನು ನಾನು ಭೇಟಿಯಾದೆ. ಅವರನ್ನು ಭೇಟಿಯಾದ ಬಳಿಕ, ಹೊಸ ಭರವಸೆಯ ಬೆಳಕು ಮೂಡುತ್ತಿದೆ ಎಂದು ನಾನು ಆತ್ಮವಿಶ್ವಾಸದಿಂದ ಹೇಳಬಲ್ಲೆ. ಮಣಿಪುರದ ಮೇಲೆ ನಂಬಿಕೆ ಹೆಚ್ಚಾಗುತ್ತಿದೆ ಎಂದು ಪ್ರಧಾನಿ ಮೋದಿ ಚುರಚಂದಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಹೇಳಿದ್ದಾರೆ.
ಹೈಕೋರ್ಟ್ ಮೀಸಲಾತಿ ಬಗ್ಗೆ ಕೊಟ್ಟ ಆದೇಶದಿಂದ ಮೈತೇಯಿ ಮತ್ತು ಕುಕಿ ಸಮುದಾಯಗಳ ಮಧ್ಯೆ ಸಂಘರ್ಷ ಉಂಟಾಗಿತ್ತು. ಮೀಸಲಾತಿ ಆದೇಶದಿಂದ ಸರ್ಕಾರಿ ಉದ್ಯೋಗ, ಹಕ್ಕುಗಳಲ್ಲಿ ಸಮಸ್ಯೆಯಾಗುತ್ತೆ ಎಂದು ಎರಡು ಸಮುದಾಯಗಳು ಪರಸ್ಪರರ ವಿರುದ್ಧ ಸಂಘರ್ಷಕ್ಕೆ ಇಳಿದಿದ್ದವು. ತಿಂಗಳುಗಟ್ಟಲೇ ಮಣಿಪುರದಲ್ಲಿ ಇಂಟರ್ ನೆಟ್ ಸಂಪರ್ಕವನ್ನು ಕಡಿತ ಮಾಡಲಾಗಿತ್ತು. 60 ಸಾವಿರ ಜನರು ತಮ್ಮ ಮನೆ ಬಿಟ್ಟು ಬೇರೆಡೆ ಹೋಗಿ ನೆಲೆಸಿದ್ದರು. ಇನ್ನೂ ಉದ್ವಿಗ್ನ ವಾತಾವರಣವೇ ಇರೋದರಿಂದ ಸಾವಿರಾರು ಮಂದಿ ಇನ್ನೂ ತಮ್ಮ ಮನೆಗಳಿಗೆ ಹಿಂತಿರುಗಿ ಬಂದಿಲ್ಲ.
ಹಿಂಸಾಚಾರ ಪೀಡಿತ ರಾಜ್ಯದಲ್ಲಿ "ಜೀವನವನ್ನು ಮತ್ತೆ ಹಳಿಗೆ ತರಲು" ಕೇಂದ್ರ ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ಒತ್ತಿ ಹೇಳಿದರು.
"ಅಭಿವೃದ್ಧಿ ಎಲ್ಲಿಯಾದರೂ ಬೇರೂರಲು, ಶಾಂತಿ ಅತ್ಯಗತ್ಯ. ಕಳೆದ 11 ವರ್ಷಗಳಲ್ಲಿ, ಈಶಾನ್ಯದಲ್ಲಿ ಅನೇಕ ಸಂಘರ್ಷಗಳು ಮತ್ತು ವಿವಾದಗಳನ್ನು ಪರಿಹರಿಸಲಾಗಿದೆ. ಜನರು ಶಾಂತಿಯ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ... ಇತ್ತೀಚೆಗೆ ಬೆಟ್ಟಗಳು ಮತ್ತು ಕಣಿವೆಯಲ್ಲಿ, ವಿವಿಧ ಗುಂಪುಗಳೊಂದಿಗೆ ಒಪ್ಪಂದಗಳಿಗೆ ಮಾತುಕತೆಗಳು ನಡೆದಿವೆ ಎಂದು ನಾವು ತೃಪ್ತರಾಗಿದ್ದೇವೆ. ಇವು ಭಾರತ ಸರ್ಕಾರದ ಪ್ರಯತ್ನಗಳ ಭಾಗವಾಗಿದ್ದು, ಇದರಲ್ಲಿ ಸಂವಾದ, ಗೌರವ ಮತ್ತು ಪರಸ್ಪರ ತಿಳುವಳಿಕೆಗೆ ಪ್ರಾಮುಖ್ಯತೆ ನೀಡುತ್ತಾ ಶಾಂತಿಯನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ. ಶಾಂತಿಯ ಹಾದಿಯಲ್ಲಿ ಮುಂದುವರಿಯಲು ಮತ್ತು ಅವರ ಕನಸುಗಳನ್ನು ಈಡೇರಿಸಲು ನಾನು ಎಲ್ಲಾ ಸಂಸ್ಥೆಗಳಿಗೆ ಮನವಿ ಮಾಡುತ್ತೇನೆ. ನಾನು ನಿಮ್ಮೊಂದಿಗಿದ್ದೇನೆ, ಭಾರತ ಸರ್ಕಾರ ಮಣಿಪುರದ ಜನರೊಂದಿಗಿದೆ." ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿಯವರ ಭಾಷಣವು ಅಭಿವೃದ್ಧಿಯ ಬಗ್ಗೆ ಹೆಚ್ಚು ಒತ್ತು ನೀಡಿತ್ತು. ಇಂಫಾಲ್‌ನಲ್ಲಿ ಹೊಸ ವಿಮಾನ ನಿಲ್ದಾಣ, ಹೊಸ ಹೆದ್ದಾರಿಗಳು, ರೈಲು ಮತ್ತು ರಸ್ತೆ ಸಂಪರ್ಕ, ಜಿರಿಬಮ್ ಅನ್ನು ಇಂಫಾಲ್‌ನೊಂದಿಗೆ ಸಂಪರ್ಕಿಸುವ ರೈಲ್ವೆ ಯೋಜನೆ, ವೈದ್ಯಕೀಯ ಕಾಲೇಜುಗಳು, ಇತ್ಯಾದಿ ಬಗ್ಗೆ ಮೋದಿ ಮಾತನಾಡಿದ್ದರು.
"ನಾವು ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದ್ದೇವೆ. ದೆಹಲಿಯಲ್ಲಿ ತೆಗೆದುಕೊಂಡ ನಿರ್ಧಾರಗಳು ಇಲ್ಲಿಗೆ ತಲುಪಲು ದಶಕಗಳೇ ಬೇಕಾದ ಕಾಲವಿತ್ತು. ಇಂದು, ನಮ್ಮ ಚುರಚಂದ್‌ಪುರ, ನಮ್ಮ ಮಣಿಪುರ, ದೇಶದ ಉಳಿದ ಭಾಗಗಳೊಂದಿಗೆ ಪ್ರಗತಿ ಸಾಧಿಸುತ್ತಿದೆ" ಎಂದು ಪ್ರಧಾನಿ ಮೋದಿ ಹೇಳಿದರು. ಕೇಂದ್ರ ಸರ್ಕಾರ ದೇಶಾದ್ಯಂತ ಬಡವರಿಗೆ ಪಕ್ಕಾ ಮನೆಗಳ ನಿರ್ಮಾಣವನ್ನು ಘೋಷಿಸಿದೆ ಮತ್ತು ಮಣಿಪುರ ಕೂಡ ಪ್ರಯೋಜನ ಪಡೆದಿದೆ ಎಂದು ಪ್ರಧಾನಿ ಹೇಳಿದರು.
ಇನ್ನೂ ಪ್ರಧಾನಿ ಮೋದಿ, ಹಿಂಸಾಚಾರದಿಂದ ತೊಂದರೆಗೊಳಗಾದ ಜನರು ಜೊತೆ ಮಾತನಾಡಿದ್ದರು. ಈ ವೇಳೆ ಸಂತ್ರಸ್ತರು ಕಣ್ಣೀರು ಹಾಕಿದ್ದರು. ಮಳೆಯ ಕಾರಣದಿಂದ ಮಣಿಪುರದಲ್ಲಿ ಪ್ರಧಾನಿ ಮೋದಿ ಹೆಲಿಕಾಪ್ಟರ್ ಬಳಸಲು ಸಾಧ್ಯವಾಗದೇ, ಚುರಚಂದ್ರಪುರಕ್ಕೆ ರಸ್ತೆಮಾರ್ಗವಾಗಿಯೇ ತಲುಪಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.