/newsfirstlive-kannada/media/post_attachments/wp-content/uploads/2025/05/PAKISTAN-2.jpg)
ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ತನ್ನ ಅಮೆರಿಕ ಭೇಟಿಯ ಸಂದರ್ಭದಲ್ಲಿ ಭಾರತದ ವಿರುದ್ಧ ಪರಮಾಣು ಬೆದರಿಕೆಯನ್ನು ಹಾಕಿದ್ದಾನೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸೀಮ್ ಮುನೀರ್ ಅಮೆರಿಕದಲ್ಲಿ ಮಾತನಾಡುತ್ತಾ, ಭಾರತದ ವಿರುದ್ಧ ಪರಮಾಣು ಬೆದರಿಕೆಗಳನ್ನು ಹಾಕಿದ್ದಾನೆಂದು ವರದಿಯಾಗಿದ್ದು, ಭಾರತದಿಂದ ಅಸ್ತಿತ್ವದ ಬೆದರಿಕೆಯನ್ನು ಎದುರಿಸಿದರೆ ಪಾಕಿಸ್ತಾನ ‘ಅರ್ಧ ಜಗತ್ತನ್ನು ನಾಶಪಡಿಸುತ್ತದೆ’ ಎಂದು ಆತ ಎಚ್ಚರಿಸಿದ್ದಾನೆ.
ಟ್ರಂಪ್ ಭೇಟಿಯಿಂದ ಧೈರ್ಯ ಬಂತಾ?
ಸಂಘರ್ಷಗಳಿಗೆ ತೀವ್ರ ಪ್ರತೀಕಾರದ ಎಚ್ಚರಿಕೆ ನೀಡಿರುವ ಆಸೀಮ್ ಮುನೀರ್, ಜೂನ್‌ನಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗಿನ ಅಪರೂಪದ ಭೇಟಿಯ ನಂತರ, ಇದೀಗ ಅಮೆರಿಕದ ಹಿರಿಯ ಮಿಲಿಟರಿ ಮತ್ತು ರಾಜಕೀಯ ನಾಯಕರನ್ನು ಸಹ ಆಸೀಮ್ ಮುನೀರ್ ಭೇಟಿಯಾಗಿದ್ದಾನೆ. ಉದ್ಯಮಿ ಮತ್ತು ಕಾನ್ಸುಲ್ ಅದ್ನಾನ್ ಅಸಾದ್ ಅವರು ಟ್ಯಾಂಪಾದಲ್ಲಿ ಆಯೋಜಿಸಿದ್ದ ಬ್ಲ್ಯಾಕ್-ಟೈ ಭೋಜನಕೂಟದಲ್ಲಿ, ಭಾಗವಹಿಸಿದ್ದ ಮುನೀರ್, ‘ನಾವು ಒಂದು ಪರಮಾಣು ರಾಷ್ಟ್ರ. ನಮ್ಮ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ನಾವು ಭಾವಿಸಿದರೆ, ನಮ್ಮೊಂದಿಗೆ ಅರ್ಧದಷ್ಟು ಪ್ರಪಂಚವನ್ನು ಸಹ ಪತನಗೊಳಿಸುತ್ತೇವೆ’ ಎಂದು ಹೇಳಿದ್ದಾನೆ. ಆಸಿಮ್ ಮುನೀರ್ ನೀಡಿರುವ ಈ ಹೇಳಿಕೆ ಅಮೆರಿಕದ ಪ್ರದೇಶದಿಂದ ಮೂರನೇ ದೇಶದ ವಿರುದ್ಧ ಹೊರಡಿಸಲಾದ ಪರಮಾಣು ಬೆದರಿಕೆಯ ಮೊದಲ ನಿದರ್ಶನ.
ಸಿಂಧು ನದಿಗಾಗಿ ಬೆದರಿಕೆನಾ?
ಭಾರತದೊಂದಿಗಿನ ನಾಲ್ಕು ದಿನಗಳ ಸಂಘರ್ಷದ ನಂತರ ಎರಡು ತಿಂಗಳಲ್ಲಿ ತನ್ನ ಎರಡನೇ ಅಮೆರಿಕ ಭೇಟಿಯಲ್ಲಿ ಆಸಿಮ್ ಮುನೀರ್, ಸಿಂಧೂ ನದಿಯ ನಿಯಂತ್ರಣಕ್ಕಾಗಿ ಭಾರತವನ್ನು ಗುರಿಯಾಗಿಸಿಕೊಂಡಿದ್ದಾನೆ. ‘ನಾವು ಭಾರತ ಅಣೆಕಟ್ಟು ನಿರ್ಮಿಸುವವರೆಗೆ ಕಾಯುತ್ತೇವೆ ಮತ್ತು ಅದು ಅಣೆಕಟ್ಟುಗಳನ್ನು ನಿರ್ಮಿಸಿದರೆ ನಾವು ಅದನ್ನು ಹತ್ತು ಕ್ಷಿಪಣಿಗಳಿಂದ ನಾಶಪಡಿಸುತ್ತೇವೆ. ಸಿಂಧೂ ನದಿ ಭಾರತೀಯರ ಕುಟುಂಬದ ಆಸ್ತಿಯಲ್ಲ ಎಂದಿರುವ ಆಸಿಮ್ ಮುನೀರ್, ನಮಗೆ ಕ್ಷಿಪಣಿಗಳ ಕೊರತೆಯಿಲ್ಲ, ಅಲ್ಹಮ್ದುಲಿಲ್ಲಾಹ್’ ಎಂದು’ ಎಂದು ಬೆದರಿಕೆ ಹಾಕಿದ್ದಾನೆ.
ಭಾರತ ಮರ್ಸಿಡಿಸ್ ಕಾರು, ಪಾಕ್ ಟ್ರಕ್ ಅಂದ ಮನೀರ್!
ಫ್ಲೋರಿಡಾದ ಟ್ಯಾಂಪಾದಲ್ಲಿ ನಡೆದ ಪಾಕಿಸ್ತಾನಿ ಸಮುದಾಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಜನರಲ್ ಅಸೀಮ್ ಮುನೀರ್, ‘ಭಾರತವು ಫೆರಾರಿಯಂತಹ ಹೆದ್ದಾರಿಯಲ್ಲಿ ಬರುವ ಮರ್ಸಿಡಿಸ್ ಕಾರ್ ಇದ್ದ ಹಾಗೆ, ಆದರೆ ನಾವು ಜಲ್ಲಿಕಲ್ಲುಗಳಿಂದ ತುಂಬಿದ ಡಂಪ್ ಟ್ರಕ್. ಟ್ರಕ್ ಕಾರಿಗೆ ಡಿಕ್ಕಿ ಹೊಡೆದರೆ, ಯಾರು ಸೋಲುತ್ತಾರೆ?’ ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ.
ಪಾಕಿಸ್ತಾನಕ್ಕೆ ತಾನು ಉದ್ಧಾರವಾಗೋದು ಬೇಕಾಗಿಲ್ಲ, ಬೇರೊಂದು ರಾಷ್ಟ್ರವನ್ನು ನಾಶ ಮಾಡುವ ಕೆಲಸವನ್ನು ಮಾತ್ರ ಮಾಡುತ್ತೆ ಎಂಬುದು ಈಗ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಹೇಳಿಕೆಯಿಂದಲೇ ಸ್ಪಷ್ಟವಾಗಿದೆ.
ಹೀಗಾಗಿ ಇಂಥ ಅರಾಜಕತೆಯ, ದಿಕ್ಕೆಟ್ಟ ಸ್ಥಿತಿಯಲ್ಲಿರುವ ಪಾಕಿಸ್ತಾನಕ್ಕೆ ಅಣ್ವಸ್ತ್ರ ಹೊಂದುವುದನ್ನು ಮುಂದುವರಿಸುವುದು ಇಡೀ ಜಗತ್ತಿಗೆ ಅಪಾಯಕಾರಿ. ಪಾಕ್ ಅಣ್ವಸ್ತ್ರ ಹೊಂದಿರುವುದು ಜಗತ್ತಿಗೆ ಒಳ್ಳೆಯದ್ದಲ್ಲ. ಹೀಗಾಗಿ ಪಾಕಿಸ್ತಾನವನ್ನು ಅಣ್ವಸ್ತ್ರ ನಿಶಸ್ತ್ರೀಕರಣ ಒಪ್ಪಂದದ ವ್ಯಾಪ್ತಿಗೆ ಒಳಪಡಿಸುವುದು ಜಗತ್ತಿನ ಹಿತದೃಷ್ಟಿಯಿಂದ ಒಳ್ಳೆಯದು. ಈ ಬಗ್ಗೆ ವಿಶ್ವ ಸಮುದಾಯ ಸರಿಯಾದ ಗಮನ ನೀಡಬೇಕು. ಆದರೇ, ಅಮೆರಿಕಾದಂಥ ರಾಷ್ಟ್ರವೇ ಪಾಕಿಸ್ತಾನವನ್ನು ಬೆಂಬಲಿಸುತ್ತಾ ಬಂದಿದೆ. ಪಾಕ್ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ನನ್ನು ಶ್ವೇತ ಭವನಕ್ಕೆ ಕರೆಸಿಕೊಂಡು ಅತಿಥಿ ಸತ್ಕಾರ ನೀಡುತ್ತಿರುವುದು ದುರಂತ.
ಭಾರತವು ಅಣ್ವಸ್ತ್ರವನ್ನು ವಿದ್ಯುತ್ ಉತ್ಪಾದನೆಯಂಥ ಜನ ಕಲ್ಯಾಣ ಯೋಜನೆಗೆ ಬಳಸುತ್ತೆ. ಪಾಕಿಸ್ತಾನ ಅಣ್ವಸ್ತ್ರವನ್ನು ಅರ್ಧ ಜಗತ್ತು ಅನ್ನು ನಾಶ ಮಾಡಲು ಬಳಸುತ್ತೆ. ಇದೇ ಪಾಕಿಸ್ತಾನ ಮತ್ತು ಭಾರತಕ್ಕೆ ಇರುವ ವ್ಯತ್ಯಾಸ. ಭಾರತವು ಈಗ ವಿಶ್ವದಲ್ಲಿ ಮೂರನೇ ಅತಿ ದೊಡ್ಡ ಆರ್ಥಿಕತೆಯ ದೇಶವಾಗಿ ಬೆಳೆಯಬೇಕೆಂಬ ಗುರಿ ಇದೆ. ಆದರೇ, ಪಾಕಿಸ್ತಾನಕ್ಕೆ ತಾನು ಮಾಡಿರುವ ಸಾಲವನ್ನು ಹೇಗೆ ತೀರಿಸುವುದು, ಮುಂದೆ ಎಲ್ಲಿಂದ ಸಾಲ ಪಡೆಯುವುದು ಎಂಬ ಚಿಂತೆ ಮಾತ್ರ ಇದೆ. ಒಂದೇ ದಿನ ಹುಟ್ಟಿದ 2 ರಾಷ್ಟ್ರಗಳು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿರುವುದರ ಸಂಕೇತ ಇದು. ಸರಿಯಾದ ಚಿಂತನೆ, ಪರಿಶ್ರಮ, ಅಭಿವೃದ್ದಿಯನ್ನು ಮಂತ್ರವಾಗಿಸಿಕೊಂಡ ಭಾರತ ಜಗತ್ತಿನ ಸೂಪರ್ ಪವರ್ ರಾಷ್ಟ್ರವಾಗುವತ್ತ ಹೊರಟರೇ, ಪಾಕಿಸ್ತಾನ, ಸಾಲದ ಸುಳಿಗೆ ಸಿಲುಕಿ, ಆರ್ಥಿಕವಾಗಿ ದಿವಾಳಿಯಾಗಿ ಬೇರೊಂದು ರಾಷ್ಟ್ರವನ್ನು , ಅರ್ಧ ಜಗತ್ತು ಅನ್ನು ನಾಶ ಮಾಡುವ ಮಾತುಗಳನ್ನಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.