/newsfirstlive-kannada/media/post_attachments/wp-content/uploads/2025/01/Supreme_Court.jpg)
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್ನ ಜಸ್ಟೀಸ್ ಜೆ.ಬಿ.ಪರ್ದಿವಾಲಾ ಮತ್ತು ಜಸ್ಟೀಸ್ ಆರ್.ಮಹದೇವನ್ ಅವರ ಪೀಠವು ಇಂದು ನಟ ದರ್ಶನ್ ಅಂಡ್ ಗ್ಯಾಂಗ್ಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದುಪಡಿಸಿ ಮಹತ್ವದ ಆದೇಶ ನೀಡಿದೆ. ತನ್ನ ಆದೇಶದ ಈ ಪ್ರತಿಯನ್ನು ಎಲ್ಲ ಹೈಕೋರ್ಟ್ ಹಾಗೂ ಎಲ್ಲ ಜೈಲುಗಳಿಗೆ ಕಳಿಸಲು ಕೂಡ ಆದೇಶಿಸಿದೆ. ಜಸ್ಟೀಸ್ ಮಹದೇವನ್ ಅವರ ಜಾಮೀನು ರದ್ದುಪಡಿಸುವ ತೀರ್ಪು ಬರೆದಿದ್ದಾರೆ. ಕೊನೆಯಲ್ಲಿ ಜಸ್ಟೀಸ್ ಜೆ.ಬಿ.ಪರ್ದಿವಾಲಾ ಅವರ ಕೂಡ ಒಂದು ಪುಟದ ತೀರ್ಪು ಬರೆದಿದ್ದಾರೆ. ಸುಪ್ರೀಂ ಕೋರ್ಟ್ ನೀಡಿರುವ 65 ಪುಟಗಳ ಜಾಮೀನು ರದ್ದತಿಯ ಆದೇಶದ ಕೆಲ ಮುಖ್ಯಾಂಶಗಳನ್ನು ಇಲ್ಲಿ ನೀಡುತ್ತಿದ್ದೇವೆ..
ನಟ ದರ್ಶನ್ ಜಾಮೀನು ರದ್ದು ಮಾಡಿದ ಆದೇಶದಲ್ಲಿ ಸುಪ್ರೀಂಕೋರ್ಟ್ ಹೇಳಿದ್ದೇನು?
ಜನಪ್ರಿಯತೆಯು ನಿರ್ಭಯವಾಗಿರಲು ರಕ್ಷಣಾಕವಚ ಅಲ್ಲ. ಪ್ರಭಾವ, ಸಂಪತ್ತು, ಸಾಮಾಜಿಕ ಸ್ಟೇಟಸ್ ಜಾಮೀನು ನೀಡಲು ಆಧಾರವಾಗಬಾರದು. ಇದರಿಂದ ನಿಜವಾಗಿಯೂ ತನಿಖೆ ಅಥವಾ ಕೋರ್ಟ್ ವಿಚಾರಣೆಗೆ ರಿಸ್ಕ್ ಆಗಲಿದೆ.ಜಾಮೀನು ನೀಡುವ ವಿಷಯ ಹಾಗೂ ಅದನ್ನು ರದ್ದುಗೊಳಿಸುವ ವಿಷಯಗಳನ್ನು ನಾವು ಸಂಪೂರ್ಣವಾಗಿ ಪರಿಶೀಲಿಸಿದ್ದೇವೆ. ಹೈಕೋರ್ಟ್ ನೀಡಿದ ಆದೇಶದಲ್ಲಿ ಗಂಭೀರ ಕಾನೂನು ದೋಷಗಳಿವೆ ಎಂಬುದು ಸ್ಪಷ್ಟವಾಗಿದೆ. ಸೆಕ್ಷನ್ 302 ಮತ್ತು 34, ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಜಾಮೀನು ನೀಡಲು ಯಾವುದೇ ವಿಶೇಷ ಅಥವಾ ತಾರ್ಕಿಕ ಕಾರಣಗಳನ್ನು ಆ ಆದೇಶದಲ್ಲಿ ದಾಖಲಿಸಲಾಗಿಲ್ಲ. ಬದಲಿಗೆ, ಕಾನೂನಿನ ದೃಷ್ಟಿಯಿಂದ ಸಂಬಂಧಪಟ್ಟ ಮುಖ್ಯ ವಿಷಯಗಳನ್ನು ಗಮನಿಸದೆ, ತಾಂತ್ರಿಕ ವಿಚಾರಗಳನ್ನ ಗಮನದಲ್ಲಿಟ್ಟುಕೊಂಡು ವಿವೇಚನೆಯನ್ನು ಬಳಸಿದಂತಿದೆ.
ಹೈಕೋರ್ಟ್ ಪ್ರಾಥಮಿಕ ಹಂತದಲ್ಲೇ ಸಾಕ್ಷಿದಾರರ ಹೇಳಿಕೆಗಳನ್ನು ವ್ಯಾಪಕವಾಗಿ ಪರಿಶೀಲಿಸಿ, ಪೊಲೀಸರ ಆರೋಪಗಳಲ್ಲಿನ ವ್ಯತ್ಯಾಸಗಳು ಮತ್ತು ವಿಳಂಬಗಳನ್ನು ಹೈಲೈಟ್ ಮಾಡಿದೆ. ಇಂತಹ ವಿಷಯಗಳನ್ನು ಪರಿಶೀಲಿಸುವುದು ವಿಚಾರಣಾ ನ್ಯಾಯಾಲಯದ ಹೊಣೆಗಾರಿಕೆ, ಏಕೆಂದರೆ ಅವುಗಳನ್ನು cross-examination ವೇಳೆ ಮಾತ್ರ ಸರಿಯಾಗಿ ವಿಶ್ಲೇಷಿಸಬಹುದು. ಸಾಕ್ಷಿದಾರರು ಹೇಳುವುದನ್ನು ನಂಬುವುದು ಮತ್ತು ಜವಾಬ್ದಾರಿಯನ್ನು ಮೌಲ್ಯಮಾಪನ ಮಾಡಲು ವಿಚಾರಣಾ ನ್ಯಾಯಾಲಯವೇ ಸೂಕ್ತ ವೇದಿಕೆ.
ಅಪರಾಧದ ಸ್ವಭಾವ ಮತ್ತು ಗಂಭೀರತೆ, ಆರೋಪಿ ಪಾತ್ರ, ವಿಚಾರಣೆಗೆ ಉಂಟಾಗಹೈಕೋಬಹುದಾದ ಅಡ್ಡಿ ಇತ್ಯಾದಿ ವಿಷಯಗಳನ್ನು ಸಮರ್ಪಕವಾಗಿ ಪರಿಗಣಿಸದೆ ಇಂತಹ ಗಂಭೀರ ಪ್ರಕರಣದಲ್ಲಿ ಜಾಮೀನು ನೀಡಿರುವುದು ಅನರ್ಹ ಹಾಗೂ ವಿವೇಚನೆ ಬಳಸುವಲ್ಲಿ ತಪ್ಪಾಗಿದೆ. ಸಾಕ್ಷಿದಾರರ ಮೇಲೆ ಪ್ರಭಾವ ಬೀರಿರುವ ಆರೋಪಗಳು, ಜೊತೆಗೆ ಬಲವಾದ ಫೊರೆನ್ಸಿಕ್ ಮತ್ತು ಸಾಂದರ್ಭಿಕ ಸಾಕ್ಷಿಗಳು, ಜಾಮೀನು ರದ್ದುಪಡಿಸುವ ಅಗತ್ಯವನ್ನು ಮತ್ತಷ್ಟು ದೃಢಪಡಿಸುತ್ತವೆ.
ಆದ್ದರಿಂದ ಜಾಮೀನು ನೀಡಿರುವುದು ನ್ಯಾಯದ ನಿರ್ವಹಣೆಗೆ ಅಪಾಯವನ್ನು ಉಂಟುಮಾಡುತ್ತದೆ ಹಾಗೂ ವಿಚಾರಣೆಯನ್ನು ದಾರಿತಪ್ಪಿಸುವ ಅಪಾಯವಿದೆ.
ಜಸ್ಟೀಸ್ ಜೆ.ಬಿ.ಪರ್ದಿವಾಲಾ ಮತ್ತು ಜಸ್ಟೀಸ್ ಆರ್.ಮಹದೇವನ್
ಈ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ, ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 439 ಅಡಿಯಲ್ಲಿ ಈ ನ್ಯಾಯಾಲಯದ ಅಸಾಧಾರಣ ನ್ಯಾಯಾಧಿಕಾರವನ್ನು ಬಳಸುವುದು ಅಗತ್ಯವೆಂದು ನಾವು ತೀರ್ಮಾನಿಸಿದ್ದೇವೆ. ಸಂವಿಧಾನದ ಕಲಂ 14 ಪ್ರಕಾರ ಕಾನೂನಿನ ಮುಂದೆ ಎಲ್ಲರೂ ಸಮಾನರು ಮತ್ತು ಕೆಲವರಿಗಷ್ಟೇ ಪ್ರಾಮುಖ್ಯತೆ ನೀಡುವುದನ್ನು ನಿಷೇಧಿಸುತ್ತದೆ. ಜನಪ್ರಿಯತೆ ಅಥವಾ ಹುದ್ದೆಯಿಂದ ವಿನಾಯಿತಿ ಇಲ್ಲದೆ ಎಲ್ಲರೂ ಕಾನೂನಿಗೆ ಸಮಾನವಾಗಿ ಒಳಪಡಬೇಕು ಎಂಬುದನ್ನು ಅದು ಖಚಿತಪಡಿಸುತ್ತದೆ.ಮೇಲಿನ ಕಾರಣಗಳಿಂದ ಎಲ್ಲಾ ಮೇಲ್ಮನವಿಗಳನ್ನು ಅಂಗೀಕರಿಸಲಾಗುತ್ತದೆ. 2024 ಡಿಸೆಂಬರ್ 13ರ ದಿನಾಂಕದ ಆದೇಶವನ್ನು ರದ್ದುಗೊಳಿಸಲಾಗುತ್ತದೆ. ಆರೋಪಿ ವ್ಯಕ್ತಿಗೆ ನೀಡಲಾದ ಜಾಮೀನು ರದ್ದುಪಡಿಸಲಾಗಿದೆ. ಅಧಿಕಾರಿಗಳಿಗೆ ಆರೋಪಿಯನ್ನು ತಕ್ಷಣ ವಶಕ್ಕೆ ಪಡೆಯುವಂತೆ ನಿರ್ದೇಶಿಸಲಾಗುತ್ತದೆ. ಅಪರಾಧದ ಗಂಭೀರತೆಯನ್ನು ಗಮನದಲ್ಲಿಟ್ಟು, ವಿಚಾರಣೆಯನ್ನು ಶೀಘ್ರಗತಿಯಲ್ಲಿ ನಡೆಸಿ, ಕಾನೂನಿನ ಪ್ರಕಾರ ತೀರ್ಪನ್ನು ನೀಡಬೇಕು. ಇಲ್ಲಿ ಮಾಡಲಾದ ಅವಲೋಕನಗಳು ಜಾಮೀನು ವಿಚಾರಕ್ಕೆ ಮಾತ್ರ ಸೀಮಿತವಾಗಿದ್ದು, ಪ್ರಕರಣದ ಮೂಲ ವಿಚಾರಣೆಯನ್ನು ಪ್ರಭಾವಿತಗೊಳಿಸಬಾರದು.
ಅರೆಸ್ಟ್ ಮೆಮೊ ಮತ್ತು ರಿಮ್ಯಾಂಡ್ ಕಾಪಿಯಿಂದ ಆರೋಪಿಗಳಿಗೆ ತಮ್ಮ ಬಂಧನದ ಕಾರಣ ಗೊತ್ತಿತ್ತು. ಆರೋಪಿಗಳು ಬಂಧನವಾದ ತಕ್ಷಣವೇ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಇದರಿಂದಾಗಿ ಆರೋಪಿಗಳಿಗೆ ತಮ್ಮ ಬಂಧನದ ಕಾರಣ ಗೊತ್ತಿತ್ತು ಎಂಬುದು ಸ್ಪಷ್ಟವಾಗುತ್ತೆ. ಪ್ರಕ್ರಿಯೆಗಳನ್ನು ಪಾಲಿಸುವಲ್ಲಿ ಲೋಪವಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯಗಳನ್ನು ಆರೋಪಿಗಳ ಪರ ವಕೀಲರು ನೀಡಿಲ್ಲ. ಹೀಗಾಗಿ ಬಂಧನದ ಕಾರಣ ನೀಡಿಲ್ಲ ಎಂಬುದು ಜಾಮೀನು ನೀಡಿಕೆಗೆ ಆಧಾರವಾಗಬಾರದು. ಹೈಕೋರ್ಟ್ ಐಪಿಸಿ ಸೆಕ್ಷನ್ 302ರಡಿ ಗಂಭೀರ ಅಪರಾಧವನ್ನ ಕಡೆಗಣಿಸಿದೆ.
ಜಾಮೀನು ನೀಡಬೇಕೇ ಬೇಡವೇ ಎನ್ನುವುದನ್ನು ನಿರ್ಧರಿಸುವಾಗ ಕೋರ್ಟ್ಗಳು ಸಾಕ್ಷ್ಯಗಳನ್ನು ವಿಸ್ತೃತವಾಗಿ ಎಕ್ಸಾಮಿನೇಷನ್ ಮಾಡಬೇಕಾಗಿಲ್ಲ. ಜಾಮೀನು ಅರ್ಜಿ ಬಗ್ಗೆ ನಿರ್ಧರಿಸುವಾಗ ಮೇಲ್ನೋಟಕ್ಕೆ ಲಭ್ಯವಿರುವ ಅಂಶಗಳ ಆಧಾರದ ಮೇಲೆ ತೀರ್ಮಾನ ಕೈಗೊಳ್ಳಬೇಕು. ಇದು ಬಗೆಹರಿದ ತತ್ವವಾಗಿದೆ. ಕೋರ್ಟ್ ಮಿನಿ ವಿಚಾರಣೆಯನ್ನೇ ನಡೆಸುವಂತಿಲ್ಲ ಅಥವಾ ವಿಚಾರಣೆಯ ಫಲಿತಾಂಶದ ಮೇಲೆ ಪರಿಣಾಮ ಬರುವ ತೀರ್ಮಾನಕ್ಕೆ ಬರಬಾರದು. ಜಾಮೀನು ನೀಡಲು ಕೆಲ ಕಾರಣಗಳನ್ನು ನೀಡಬೇಕು. ಡೀಟೈಲ್ ಮೌಲ್ಯಮಾಪನ ಅಗತ್ಯವಿಲ್ಲ.
ಹೈಕೋರ್ಟ್ ತನ್ನ ಆದೇಶದಲ್ಲಿ ರೇಣುಕಾಸ್ವಾಮಿಯೇ ಸ್ವಪ್ರೇರಣೆಯಿಂದ ಕೆಲ ಆರೋಪಿಗಳ ಜೊತೆ ಬೆಂಗಳೂರಿಗೆ ಬಂದಿದ್ದಾನೆ. ಮಾರ್ಗ ಮಧ್ಯೆ ಬಾರ್ ಬಳಿ ವಾಹನ ನಿಲ್ಲಿಸಿದ್ದಾರೆ. ಹೀಗಾಗಿ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಲಾಗಿತ್ತೇ ಎಂದು ಪ್ರಶ್ನಿಸಿದೆ. ಕಿಡ್ನ್ಯಾಪ್ ಮಾಡಲಾಗಿತ್ತೇ ಎಂಬ ಬಗ್ಗೆ ಪೂರ್ಣ ಪ್ರಮಾಣದ ವಿಚಾರಣೆಯ ಅಗತ್ಯವಿದೆ. ಪ್ಯಾರಾ 29ರಲ್ಲಿ ಹೈಕೋರ್ಟ್, ಷಡ್ಯಂತ್ರ ರೂಪಿಸಿರುವುದಕ್ಕೆ ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯವಿಲ್ಲ, ಪೂರ್ವ ನಿರ್ಧರಿತ ಕೊಲೆ ಎನ್ನುವುದಕ್ಕೆ ಸಾಕ್ಷ್ಯಗಳ ಹೇಳಿಕೆ ಇಲ್ಲ ಎಂದಿದೆ. ಶಸ್ತ್ರಾಸ್ತ್ರಗಳನ್ನು ಓಪನ್ ಜಾಗದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಹೈಕೋರ್ಟ್ ಅವುಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.
ಹೈಕೋರ್ಟ್ ಅಪ್ರಸ್ತುತ ವಿಷಯಗಳನ್ನು ಅವಲಂಬಿಸಿ ಆದೇಶ ನೀಡಿದೆ. ಹೈಕೋರ್ಟ್ ಪ್ರಿಮೆಚ್ಯೂರ್ ಅಸೆಸ್ ಮೆಂಟ್ ಮಾಡಿದೆ. ತನ್ನ ವ್ಯಾಪ್ತಿಗೆ ಬಾರದ ವಿಷಯಗಳ ಬಗ್ಗೆ ಗಮನಹರಿಸಿ ದೋಷ ಎಸಗಿದೆ.
ಈ ಕೇಸ್ ನಲ್ಲಿ ಹೈಕೋರ್ಟ್, ನಂಬಲಾರ್ಹವಾದ ಕೆಲ ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಮತ್ತಿು ಫೋರೆನ್ಸಿಕ್ ಸಾಕ್ಷಿಗಳನ್ನು ಕಡೆಗಣಿಸಿದೆ. ಹೈಕೋರ್ಟ್, ಪ್ರತ್ಯಕ್ಷದರ್ಶಿಗಳ ಹೇಳಿಕೆಯಲ್ಲಿ ವಿರೋಧಭಾಸ ಇದೆ ಎಂದು ಹೇಳಿದೆ. ವಿಳಂಬವಾಗಿ ಪ್ರತ್ಯಕ್ಷದರ್ಶಿಗಳ ಹೇಳಿಕೆ ದಾಖಲಿಸಿರುವುದಕ್ಕೆ ಪ್ರಾಸಿಕ್ಯೂಷನ್ ಕೊಟ್ಟ ವಿವರಣೆ ಬಗ್ಗೆ ಹೈಕೋರ್ಟ್ ಅನುಮಾನ ವ್ಯಕ್ತಪಡಿಸಿದೆ. ಚಾರ್ಜ್ ಷೀಟ್ ಸಲ್ಲಿಸಿರುವುದು ಅಥವಾ ದೀರ್ಘವಾದ ಸಾಕ್ಷಿಗಳ ಪಟ್ಟಿಯು ಜಾಮೀನು ನೀಡಿಕೆಗೆ ಸಮರ್ಥನೆಯಾಗಲ್ಲ.ರೇಣುಕಾಸ್ವಾಮಿ ಕೊಲೆಯು ಸಡನ್ ಪ್ರಚೋದನೆ ಅಥವಾ ಭಾವೋದ್ರೇಕಕ್ಕೊಳಗಾಗಿ ಮಾಡಿದ ಕೊಲೆ ಅಲ್ಲ. ಸಾಕ್ಷ್ಯಗಳ ಪ್ರಕಾರ, ಸೂಚಿಸುವುದೇನೇಂದರೆ ಪೂರ್ವ ನಿರ್ಧರಿತ ಮತ್ತು ಷಡ್ಯಂತ್ರ ರೂಪಿಸಿದ ಅಪರಾಧ. ಆರೋಪಿಗಳು ಬರೀ ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡಿಲ್ಲ, ಆದರೆ ವ್ಯವಸ್ಥಿತವಾಗಿ ಸಾಕ್ಷ್ಯ ನಾಶದಲ್ಲಿ ಭಾಗಿಯಾಗಿದ್ದಾರೆ. ಸಿಸಿಟಿವಿ ವಿಡಿಯೋ ಅಳಿಸಿ ಹಾಕುವುದು, ಸಹ ಆರೋಪಿಗಳಿಗೆ ಲಂಚ ನೀಡಿ ಸರೆಂಡರ್ ಮಾಡಿಸುವುದು, ಸ್ಥಳೀಯ ಪೊಲೀಸರನ್ನು ಮತ್ತು ಸ್ಥಳೀಯ ಪ್ರಭಾವ ಬಳಸಿ ತನಿಖೆಯನ್ನು ಹಳಿ ತಪ್ಪಿಸಲು ಯತ್ನಿಸಿದ್ದಾರೆ.
ಆರೋಪಿಗಳು ಸಾಕ್ಷ್ಯ ನಾಶ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ಎ2 ಬೇರೆ ಆರೋಪಿಗಳನ್ನು ಪೊಲೀಸ್ ಠಾಣೆಗೆ ಸರೆಂಡರ್ ಮಾಡಿಸಿದ್ದಾರೆ. ಅಪರಾಧ ಮುಚ್ಚಿ ಹಾಕಲು ಪೇಮೆಂಟ್ ನೀಡಿದ್ದಾರೆ. ಪೊಲೀಸರ ಜೊತೆಗಿನ ಸಂಪರ್ಕದಿಂದ ಎಫ್‌ಐಆರ್ ದುರ್ಬಲಗೊಳಿಸಲು ಮತ್ತು ಪೋಸ್ಟ್ ಮಾರ್ಟಂ ಪ್ರೊಸಿಜರ್ ವಿಳಂಬ ಮಾಡಲು ಯತ್ನಿಸಿದ್ದಾರೆ. ಎ2 ಆರೋಪಿಯ ಮನೆಯ ಸಿಸಿಟಿವಿ ಡೀಲೀಟ್ ಮಾಡಿದ್ದಾರೆ. ಬೇಲ್ ಪಡೆದ ನಂತರ ಸಾಕ್ಷಿ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಇವೆಲ್ಲವೂ ಆರೋಪಿಗಳು ಸಾಕ್ಷ್ಯ ನಾಶ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವುದಕ್ಕೆ ಉದಾಹರಣೆಗಳು.
ನ್ಯಾಯಾಂಗ ಬಂಧನದಲ್ಲಿದ್ದಾಗ, ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆಸ್ಪತ್ರೆ ಸ್ಥಿತಿ ಸೂಕ್ತವಾಗಿಲ್ಲ ಎಂಬುದನ್ನು ಸಾಬೀತುಪಡಿಸಲು ಎ2 ವಿಫಲವಾಗಿದ್ದಾರೆ. ಆದರೇ ಹೈಕೋರ್ಟ್, ಕಸ್ಟಡಿಯಲ್ಲಿದ್ದಾಗ ಟ್ರೀಟ್ ಮೆಂಟ್ ಪಡೆಯಲು ಏಕೆ ಸಾಧ್ಯವಿಲ್ಲ ಎಂಬುದನ್ನು ದಾಖಲಿಸದೇ ಬೇಲ್ ನೀಡಿದೆ. ಇದು ಹಠಮಾರಿನತನದ ಮತ್ತು ಕಾನೂನಿನಲ್ಲಿ ಸಮರ್ಥನೀಯವಲ್ಲದ ಬೇಲ್ ಆದೇಶ. ಹೀಗಾಗಿ ಹೈಕೋರ್ಟ್ ಆದೇಶವು ರದ್ದುಪಡಿಸಲು ಸೂಕ್ತವಾಗಿದೆ.
ಹೈಕೋರ್ಟ್ ತನ್ನ ಮುಂದಿಟ್ಟಿದ್ದ ಸಾಕ್ಷ್ಯಗಳನ್ನು ಪರಿಗಣಿಸದೇ ಜಾಮೀನು ನೀಡಿದೆ. ಹೈಕೋರ್ಟ್ , ಎ2 ದರ್ಶನ್ ಸಾಕ್ಷ್ಯಗಳನ್ನು ಪರಿಗಣಿಸದೆ ನೇರವಾಗಿ ಕೊಲೆಯಲ್ಲಿ ಭಾಗಿಯಾಗಿಲ್ಲ ಮತ್ತು ಮೇಲ್ನೋಟಕ್ಕೆ ಸಾಕ್ಷ್ಯವಿಲ್ಲ ಎಂದು ಹೇಳಿದೆ. ಇದು ಹೈಕೋರ್ಟ್, ವಿವೇಚನೆಯನ್ನು ಬಳಸಿಲ್ಲ ಎಂಬುದನ್ನು ತೋರಿಸುತ್ತೆ. ಹೀಗಾಗಿ ಕಾನೂನಿನಲ್ಲಿ ಹೈಕೋರ್ಟ್ ಜಾಮೀನು ಆದೇಶವು ಸಮರ್ಥೀನೀಯವಲ್ಲದ ಬೇಲ್ ಆದೇಶವಾಗಿದೆ.
ಸಂವಿಧಾನದ 14ನೇ ವಿಧಿಯಡಿ ಕಾನೂನು ಎದುರು ಎಲ್ಲರೂ ಸಮಾನರು ಎಂದು ಹೇಳುತ್ತೆ. ಯಾವುದೇ ವ್ಯಕ್ತಿ, ಸಂಪತ್ತು, ಪ್ರಭಾವ, ಪ್ರಸಿದ್ದಿಯ ಕಾರಣದಿಂದ ಕಠಿಣ ಕಾನೂನಿನಿಂದ ವಿನಾಯಿತಿ ಪಡೆಯಲಾಗಲ್ಲ. ಸೆಲಿಬ್ರೆಟಿ ಸ್ಟೇಟಸ್ ನಿಂದ ಓರ್ವ ಆರೋಪಿ ಕಾನೂನಿಗಿಂತ ಮೇಲೆ ಅಲ್ಲ. ಜೊತೆಗೆ ಸೆಲಿಬ್ರೆಟಿ ಸ್ಟೇಟಸ್ ನಿಂದ ಬೇಲ್ ನಂಥ ಆದ್ಯತೆಯ ಟ್ರೀಟ್ ಮೆಂಟ್ ನೀಡಲಾಗಲ್ಲ.
ಈ ಕೇಸ್ ನಲ್ಲಿ ಹೈಕೋರ್ಟ್ ತನ್ನ ವಿವೇಚನೆಯನ್ನು ಬಳಸುವಲ್ಲಿ ಎಡವಿದೆ.ಹೀಗಾಗಿ ಬೇಲ್ ರದ್ದು ಮಾಡುವ ಅಗತ್ಯವಿದೆ. ಎ2 ಸಾಮಾನ್ಯ ವಿಚಾರಣಾಧೀನ ಖೈದಿಯಲ್ಲ. ಎ2ಗೆ ಸೆಲಿಬ್ರೆಟಿ ಸ್ಥಾನಮಾನ, ಮಾಸ್ ಫಾಲೋಯಿಂಗ್, ರಾಜಕೀಯ ಹಿಡಿತ, ಪ್ರಭಾವ, ಹಣಕಾಸಿನ ಪ್ರಭಾವ ಇದೆ.
ಹೀಗಾಗಿ ಮೇಲ್ಮನವಿ ಅರ್ಜಿಗಳನ್ನು ಪುರಸ್ಕರಿಸುತ್ತಿದ್ದೇವೆ. 2024ರ ಡಿಸೆಂಬರ್ 13 ರಂದು ಹೈಕೋರ್ಟ್ ನೀಡಿರುವ ಆದೇಶವನ್ನು ರದ್ದುಪಡಿಸುತ್ತಿದ್ದೇವೆ. ಆರೋಪಿಗಳಿಗೆ ನೀಡಿರುವ ಜಾಮೀನನ್ನು ರದ್ದುಪಡಿಸುತ್ತಿದ್ದೇವೆ. ಈ ಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಆರೋಪಿಗಳನ್ನು ವಶಕ್ಕೆ ಪಡೆಯಬೇಕು. ಅಪರಾಧಧ ತೀವ್ರತೆಯ ಕಾರಣದಿಂದ ಶೀಘ್ರಗತಿಯಲ್ಲಿ ವಿಚಾರಣೆ ನಡೆಯಬೇಕು. ಕಾನೂನಿಗೆ ಅನುಗುಣವಾಗಿ ಮೆರಿಟ್ ಆಧಾರದ ಮೇಲೆ ಕೆಳ ನ್ಯಾಯಾಲಯ ತೀರ್ಪು ನೀಡಬೇಕು. ಇಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಬೇಲ್ ವಿಷಯಕ್ಕೆ ಮಾತ್ರ ಸೀಮಿತ. ಕೇಸ್ ನ ಮೆರಿಟ್ ಬಗ್ಗೆ ವಿಚಾರಣಾ ನ್ಯಾಯಾಲಯದ ಮೇಲೆ ಪ್ರಭಾವ ಬೀರಬಾರದು.
ಜಸ್ಟೀಸ್ ಜೆ.ಬಿ.ಪರ್ದಿವಾಲಾ
ಜಸ್ಟೀಸ್ ಆರ್.ಮಹದೇವನ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ