/newsfirstlive-kannada/media/media_files/2025/10/01/mysore-jambu-savari-02-2025-10-01-17-56-12.jpg)
ನಾಳೆ ಸಂಜೆ ಮೈಸೂರು ದಸರಾದ ಜಂಬೂ ಸವಾರಿಗೆ ಚಾಲನೆ
ವಿಶ್ವವಿಖ್ಯಾತ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಅರಮನೆ ಅಂಗಳದಲ್ಲಿ ಐತಿಹಾಸಿಕ ಜಂಬೂಸವಾರಿಗೆ ಮಲ್ಲಿಗೆ ನಗರಿ ಮೈಸೂರು ಸಜ್ಜಾಗಿದ್ದು, ಕ್ಯಾಪ್ಟನ್ ಅಭಿಮನ್ಯು ಹೊತ್ತು ಸಾಗುವ 750 ಕೆ.ಜಿ.ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗೋ ತಾಯಿ ಚಾಮುಂಡೇಶ್ವರಿಯನ್ನ ಕಣ್ತುಂಬಿಕೊಳ್ಳಲು ಕ್ಯೋಟ್ಯಂತರ ಜನ ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..
ಜಂಬೂಸವಾರಿಗೆ ಸಾಂಸ್ಕೃತಿಕ ನಗರಿ ಸಜ್ಜು.
ಐದನೇ ಬಾರಿ ಚಿನ್ನದ ಅಂಬಾರಿ ಹೊತ್ತು ಸಾಗಲು ರೆಡಿಯಾದ ಕ್ಯಾಪ್ಟನ್ ಅಭಿಮನ್ಯು.
ಜಂಬೂಸವಾರಿ ಉದ್ಘಾಟನೆಗೆ ಸಜ್ಜಾದ ಅರಮನೆ ಅಂಗಳ.
ವಿಶ್ವವಿಖ್ಯಾತ ನಾಡಹಬ್ಬ ದಸರಾ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದೆ.ನಾಳೆ ಜಂಬೂ ಸವಾರಿಯ ಐತಿಹಾಸಿಕ ಮೆರವಣಿಗೆ ನಡೆಯಲಿದೆ, ಮಧ್ಯಾಹ್ನ 1ಗಂಟೆ 1 ನಿಮಿಷದಿಂದ ರಿಂದ 1 ಗಂಟೆ 16 ನಿಮಿಷಕ್ಕೆ ಸಲ್ಲುವ ಶುಭ ಧನುರ್ ಲಗ್ನದಲ್ಲಿ ನಂದಿ ಧ್ವಜಪೂಜೆ ನೆರವೇರಲಿದೆ. ಸಂಜೆ 4.42 ಗಂಟೆಯಿಂದ 5.16ರ ನಡುವೆ ಕುಂಭ ಲಗ್ನದಲ್ಲಿ ವಿಜಯದಶಮಿ ಮೆರವಣಿ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ. ಕ್ಯಾಪ್ಟನ್ ಅಭಿಮನ್ಯು ಆರನೇ ಬಾರಿಗೆ ಜಂಬೂಸವಾರಿ ಹೊತ್ತು ಬನ್ನಿಮಂಟಕ್ಕೆ ಹೊರಡಲು ಸಜ್ಜಾಗಿ ನಿಂತಿದ್ದಾನೆ. ಮುಖ್ಯಮಂತ್ರಿ ಸಿದ್ದರಾಮಯ್ಯ,ಡಿಸಿಎಂ ಡಿ.ಕೆ.ಶಿವಕುಮಾರ್, ರಾಜವಂಶಸ್ಥ ಯದುವೀರ್, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹಾದೇವಪ್ಪ, ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳು, ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರು ಸೇರಿದಂತೆ ಗಣ್ಯರು ದಸರಾದ ಜಂಬೂ ಸವಾರಿಗೆ ಚಾಲನೆ ನೀಡುವರು. ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತವರಿನಲ್ಲಿ ಎಂಟನೇ ಬಾರಿಗೆ ದಸರಾ ಜಂಬೂ ಸವಾರಿಗೆ ಚಾಲನೆ ನೀಡುವ ಮೂಲಕ ಅತಿ ಹೆಚ್ಚು ಬಾರಿ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದ ಕೀರ್ತಿಗೂ ಭಾಜನರಾಗುವರು.
ಇನ್ನೂ, ಆರನೆ ಬಾರಿಗೆ ಅಂಬಾರಿ ಹೊತ್ತು ಸಾಗೋ ಕ್ಯಾಪ್ಟನ್ ಅಭಿಮನ್ಯುಗೆ ಕಾವೇರಿ ಹಾಗು ರೂಪ ಕುಮ್ಕಿ ಆನೆಗಳಾಗಿ ಸಾಥ್ ನೀಡಿದ್ರೆ, ಧನಂಜಯ ನಿಶಾನೆ ಆನೆಯಾಗಲಿದ್ದಾನೆ. ಗೋಪಿ ನೌಪತ್ ಆನೆಯಾಗಲಿದ್ದು, 14 ಆನೆಗಳು ದಸರಾ ಮೆರವಣಿಗೆಯಲ್ಲಿ ಸಾಗಲಿವೆ. ಮೊದಲಿಗೆ ನಂದಿ ಧ್ವಜ ಉದ್ಘಾಟನೆ ಬಳಿಕ 57 ಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. ರಾಜ್ಯದ 31 ಜಿಲ್ಲೆಗಳ ಸ್ತಬ್ಧ ಚಿತ್ರಗಳ ಜೊತೆಗೆ ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಸಾಗಲಿವೆ. ಇದಲ್ಲದೆ ಮೈಸೂರಿನಲ್ಲಿ ಖಾಕಿ ಕಣ್ಗಾವಲು ಇದ್ದು, ಜಂಬೂ ಸವಾರಿ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಅರಮನೆ ಸುತ್ತಮುತ್ತ ಹಾಗೂ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ಹದ್ದಿನ ಕಣ್ಣಿಡಲಾಗಿದೆ. ಇಬ್ಬರು ಡಿಐಜಿ, 27 ಎಸ್‌ಪಿ, 989 ಡಿವೈಎಸ್ಪಿ, ಎಸಿಪಿ, ಇನ್ಸ್‌ಪೆಕ್ಟರ್ ಇತರೆ ಅಧಿಕಾರಿಗಳು, 3981 ಸಿಬ್ಬಂದಿ ಸೇರಿದಂತೆ ಎಎಸ್ಐ, ಹೆಡ್ ಕಾನ್ಸ್ಟೆಬಲ್, ಪೋಲೀಸ್ ಪೇದೆಗಳು ಸೇರಿದಂತೆ 4999 ಸಿಬ್ಬಂದಿ, 1500 ಹೋಂ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದರ ಜತೆಗೆ 10 ಸಿಎಆರ್, 33 ಕೆಎಸ್‌ಆರ್‌ಪಿ, 29 ಎಎಸ್‌ಸಿ, 3 ಬಿಡಿಡಿಎಸ್, 1 ಗರುಡಾಪಡೆ, 1 ಐಎಸ್‌ಡಿ, ಸಿಐಇಡಿ ತುಕಡಿ ನಿಯೋಜಿಸಲಾಗುತ್ತಿದೆ. ಜತೆಗೆ ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ 150 ಸಿಸಿ ಟಿವಿ ಅಳವಡಿಸಲಾಗಿದೆ. ಅರಮನೆಗೆ ಪ್ರವೇಶ ಮಾಡುವ ದ್ವಾರಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಿದ್ದು. ಗಣ್ಯರು, ಸಾರ್ವಜನಿಕರು ಪ್ರವೇಶಿಸುವ ಕಡೆ ತಪಾಸಣೆ ಮಾಡಲಾಗುತ್ತದೆ.
ಇದರ ಜೊತೆಗೆ ವಿವಿಧ ಜಿಲ್ಲೆಗಳು ಕಲಾತಂಡಗಳು, ಕೀಲುಕುದುರೆ, ಗೊರವರ ಕುಣಿತ, ಡೊಳ್ಳು ಕುಣಿತ, ಯಕ್ಷಗಾನ, ಕೀಲುಗೊಂಬೆ, ಮರಗಾಲು, ವೀರಗಾಸೆ, ಹಾಡಿ ಮಕ್ಕಳ ಕುಣಿತ ಸೇರಿದಂತೆ 140 ಕ್ಕೂ ಹೆಚ್ಚು ಕಲಾ ತಂಡಗಳು ಜಂಬೂಸವಾರಿ ಮೆರವಣಿಗೆಯಲ್ಲಿ ಸಾಗಲಿವೆ.
ಇನ್ನೂ, ಅರಮನೆ ಅಂಗಳದಲ್ಲಿ ಗಣ್ಯರು ಸಾರ್ವಜನಿಕರಿಗೆ 30 ಸಾವಿರ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ ಬಾರಿ 40 ಸಾವಿರ ಚೇರ್ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ 15 ಸಾವಿರ ಚೇರ್ ವ್ಯವಸ್ಥೆ ಕಡಿಮೆ ಮಾಡಲಾಗಿದೆ. ನಾಳೆ ನಡೆಯೋ ಜಂಬೂಸವಾರಿ ಮೆರವಣಿಗೆಗೆ ಅರಮನೆಯ ಅಂಗಳದಲ್ಲಿ ಸಕಲ ರೀತಿಯಲ್ಲೂ ಸಿದ್ಧತೆ ಪೂರ್ಣಗೊಂಡಿದೆ.
ರವಿಪಾಂಡವಪುರ, ನ್ಯೂಸ್ ಫಸ್ಟ್, ಮೈಸೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.