/newsfirstlive-kannada/media/media_files/2025/09/25/i-love-mohammed-2025-09-25-15-10-15.jpg)
ಐ ಲವ್ ಮೊಹಮ್ಮದ್ ವಿವಾದ ಕಾನ್ಪುರದಲ್ಲಿ ಮೊದಲು ಆರಂಭ
ದೇಶದಲ್ಲಿ ಈಗ ಮತ್ತೊಂದು ಧಾರ್ಮಿಕ ವಿವಾದ ಶುರುವಾಗಿದೆ. ಈ ಭಾರಿ ಐ ಲವ್ ಮೊಹಮ್ಮದ್ ಪೋಸ್ಟರ್ ನಿಂದ ವಿವಾದ ಆರಂಭವಾಗಿದೆ. ಈ ತಿಂಗಳ ಪ್ರಾರಂಭದಲ್ಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಐ ಲವ್ ಕಾನ್ಪುರ ಪೋಸ್ಟರ್ ಗಳನ್ನು ಹಾಕಲಾಗಿತ್ತು. ಇದರ ವಿರುದ್ಧ ಕಾನ್ಪುರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಬಳಿಕ ಇದೇ ರೀತಿಯ ಪೋಸ್ಟರ್ ಗಳನ್ನು ಉತ್ತರ ಪ್ರದೇಶದ ಬೇರೆ ಬೇರೆ ಜಿಲ್ಲೆಗಳು ಹಾಗೂ ಪಕ್ಕದ ಉತ್ತರಾಖಂಡ್ ರಾಜ್ಯ, ದಕ್ಷಿಣದ ತೆಲಂಗಾಣ, ಮಹಾರಾಷ್ಟ್ರ ರಾಜ್ಯಗಳಲ್ಲೂ ಹಾಕಲಾಗಿದೆ.
ಈ ವಿವಾದ ಆರಂಭವಾಗಿದ್ದು, ಸೆಪ್ಟೆಂಬರ್ 4 ರಂದು ಕಾನ್ಪುರದಲ್ಲಿ ನಡೆದ ಈದ್ ಇ ಮೀಲಾದ್ ಉನ್ ನಬಿ ಮೆರವಣಿಗೆ ವೇಳೆ. ಅಂದು ಸ್ಥಳೀಯ ಮುಸ್ಲಿಂ ಯುವಕರು ಹಸಿರು ಬಣ್ಣದ ಬಾವುಟಗಳ ಜೊತೆಗೆ ಐ ಲವ್ ಮೊಹಮ್ಮದ್ ಪೋಸ್ಟರ್ ಗಳನ್ನು ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಂಜೆ ವೇಳೆಗೆ ಐ ಲವ್ ಮೊಹಮ್ಮದ್ ಬ್ಯಾನರ್ ಗಳು ಕಾನ್ಪುರದ ಪ್ರಮುಖ ಟ್ರಾಫಿಕ್ ಜಂಕ್ಷನ್ ಗಳಲ್ಲಿ ಪ್ರತ್ಯಕ್ಷವಾದವು. ಕಾನ್ಪುರದ ಬೀಕಾನಗಂಜ್ ಮತ್ತು ಅನ್ವರ್ ಗಂಜ್‌ನ ಅಂಗಡಿಮುಂಗಟ್ಟುಗಳ ಮುಂದೆಯೂ ಐ ಲವ್ ಮೊಹಮ್ಮದ್ ಪೋಸ್ಟರ್ ಗಳು ಕಾಣಿಸಿಕೊಂಡವು. ಇದರ ಉದ್ದೇಶ ಸಂಪೂರ್ಣವಾಗಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಉದ್ದೇಶ ಮಾತ್ರ ಆಗಿತ್ತು ಎಂದು ಸ್ಥಳೀಯ ಮುಸ್ಲಿಂರು ಹೇಳಿದ್ದರು.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಹಾಕಿದ್ದ ಐ ಲವ್ ಮೊಹಮ್ಮದ್ ಬ್ಯಾನರ್.
ಆದರೇ, ಇದಕ್ಕೆ ಕಾನ್ಪುರದ ಸ್ಥಳೀಯ ಹಿಂದೂ ಸಮುದಾಯದ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೊಸ ಸಂಪ್ರದಾಯವನ್ನು ಮುಸ್ಲಿಂರು ಪ್ರಾರಂಭಿಸುತ್ತಿದ್ದಾರೆ. ಇದು ಸರಿಯಲ್ಲ ಎಂಬುದು ಹಿಂದೂ ಯುವಕರ ಆಕ್ಷೇಪವಾಗಿತ್ತು.
ಆದರೇ, ಸಮಸ್ಯೆ ಶುರುವಾಗಿದ್ದು, ಯಾವಾಗ ಅಂದರೇ, ಸ್ಥಳೀಯ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಪಡೆಯದೇ ಈ ಬ್ಯಾನರ್, ಪೋಸ್ಟರ್ ಗಳನ್ನು ಹಾಕಲಾಗಿದೆ ಎಂದು ಪೋಸ್ಟರ್, ಬ್ಯಾನರ್ ಗಳನ್ನು ತೆಗೆದು ಹಾಕಿದ್ದರು. ಹಗಲಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಇದರ ಬಗ್ಗೆ ಚರ್ಚೆ ನಡೆಯಿತು. ರಾತ್ರಿಯಾಗುತ್ತಿದ್ದಂತೆ, ಮುಸ್ಲಿಂ ಸಮುದಾಯದ ಯುವಕರು, ಬೀದಿಗಿಳಿದು ಈ ಬ್ಯಾನರ್, ಪೋಸ್ಟರ್ ಗಳನ್ನು ಮತ್ತೆ ಹಾಕಬೇಕೆಂದು ಪಟ್ಟು ಹಿಡಿದರು. ಪೊಲೀಸರು ಲಘು ಲಾಠಿಪ್ರಹಾರ ನಡೆಸಿ , ಜನರನ್ನು ಚದುರಿಸಿದರು. 10 ಮಂದಿಯನ್ನು ವಶಕ್ಕೆ ಪಡೆದರು.
ಬಳಿಕ ಇದೇ ವಿವಾದ ಉತ್ತರ ಪ್ರದೇಶದ ಬೇರೆ ಜಿಲ್ಲೆಗಳಿಗೂ ವಿಸ್ತರಿಸಿತು. ಬರೇಲಿಯಲ್ಲೂ ದೊಡ್ಡ ಐ ಲವ್ ಮೊಹಮ್ಮದ್ ಪೋಸ್ಟರ್ ಅನ್ನು ಹಾಕುವುದನ್ನು ಪೊಲೀಸರು ತಡೆದರು. ತಕ್ಷಣವೇ ಮುಸ್ಲಿಂ ಸಮುದಾಯದ ಯುವಕರು ಪ್ರತಿಭಟನೆಗೆ ಮುಂದಾಗಿದ್ದರು. ಬಳಿಕ ಪ್ರತಿಭಟನೆ ಹಿಂಪಡೆದರು.
ಇನ್ನೂ ಕೋಮು ಸೂಕ್ಷ್ಮ ಸಂಭಾಲ್ ಜಿಲ್ಲೆಯಲ್ಲೂ ಗೋಡೆಗಳ ಮೇಲೆ ಐ ಲವ್ ಮೊಹಮ್ಮದ್ ಘೋಷಣೆ ಬರೆಯಲಾಗಿತ್ತು. ಇದರ ಮೇಲೆ ಸ್ಥಳೀಯ ಮುನ್ಸಿಪಾಲಿಟಿ ಪೇಟಿಂಗ್ ಮಾಡಿ ಅಳಿಸಿ ಹಾಕಿತ್ತು. ಬಳಿಕ ಸ್ಥಳೀಯ ಮುಸ್ಲಿಂ ಯುವಕರು ಪೊಲೀಸ್ ಠಾಣೆ ಬಳಿ ಪ್ರತಿಭಟನೆ ನಡೆಸಿದ್ದರು. ಗೋಡೆ ಮೇಲೆ ಬರಹ ಅಳಿಸಿ ಹಾಕಿದ್ದನ್ನು ಖಂಡಿಸಿದ್ದರು.
ಇದಾದ ಬಳಿಕ ಸೆಪ್ಟೆಂಬರ್ 9 ರಂದು ಕಾನ್ಪುರ ಪೊಲೀಸರು ಐ ಲವ್ ಮೊಹಮ್ಮದ್ ಪೋಸ್ಟರ್, ಬ್ಯಾನರ್ ಹಾಕಿದ್ದಕ್ಕಾಗಿ 24 ಜನರ ವಿರುದ್ಧ ಕೇಸ್ ದಾಖಲಿಸಿದ್ದರು. ಕೋಮುಸೌಹಾರ್ದತೆಯನ್ನು ಕದಡಿದ ಆರೋಪದಡಿ ಕೇಸ್ ದಾಖಲಿಸಲಾಯಿತು.
ಇದಾದ ಬಳಿಕ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಐ ಲವ್ ಮೊಹಮ್ಮದ್ ಎಂದು ಹೇಳುವುದು ಅಪರಾಧ ಅಲ್ಲ ಎಂದು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದರಿಂದ ಇಡೀ ದೇಶದ ಗಮನ ಸೆಳೆಯಿತು.
ಇದಾದ ಬಳಿಕ ವಿವಾದವು ಮಹಾರಾಷ್ಟ್ರದ ನಾಗಪುರ, ಮುಂಬೈ, ಹೈದರಾಬಾದ್, ಉತ್ತರಾಖಂಡ್ ಸೇರಿದಂತೆ ಬೇರೆ ಬೇರೆ ರಾಜ್ಯ, ನಗರಗಳಿಗೂ ವಿಸ್ತರಿಸಿತು.
ಉತ್ತರಾಖಂಡ್ ರಾಜ್ಯದ ಉದಮ್ ಸಿಂಗ್ ನಗರದಲ್ಲೂ ಪ್ರತಿಭಟನೆ ನಡೆದಿವೆ.
ಈಗ ಇದೇ ವಿವಾದ ಕರ್ನಾಟಕಕ್ಕೂ ಕಾಲಿಟ್ಟಿದೆ. ಕರ್ನಾಟಕದ ದಾವಣಗೆರೆಯಲ್ಲೂ ಐ ಲವ್ ಮೊಹಮ್ಮದ್ ಪೋಸ್ಟರ್, ಬ್ಯಾನರ್ ಗಳನ್ನು ಹಾಕಲಾಗಿದೆ. ಇದೇ ಕಳೆದ ರಾತ್ರಿ ಕಲ್ಲು ತೂರಾಟ, ಗಲಾಟೆ, ಲಾಠಿ ಚಾರ್ಜ್ ಕೂಡ ಆಗಿದೆ.
ಇನ್ನೂ ಐ ಲವ್ ಮೊಹಮ್ಮದ್ ಪೋಸ್ಟರ್, ಬ್ಯಾನರ್ ಗೆ ಪ್ರತಿಯಾಗಿ ಹಿಂದೂಗಳು ಕೂಡ ಸೋಷಿಯಲ್ ಮೀಡಿಯಾದಲ್ಲಿ ಐ ಲವ್ ಮಹದೇವ, ಐ ಲವ್ ರಾಮ ಎಂದು ಪೋಸ್ಟರ್ ಗಳನ್ನು ಹಾಕುತ್ತಿದ್ದಾರೆ.
ಇದು ಸೋಷಿಯಲ್ ಮೀಡಿಯಾದಲ್ಲಿ ಧಾರ್ಮಿಕ ಪೋಸ್ಟರ್ ಗಳ ವಾರ್ ಗೆ ಕಾರಣವಾಗಿದೆ.
ಆದರೇ, ಈಗ ಸೋಷಿಯಲ್ ಮೀಡಿಯಾಕ್ಕೆ ಸೀಮಿತವಾಗದೇ, ರಸ್ತೆ, ರಸ್ತೆಗಳಿಗೂ ವಿವಾದ ವಿಸ್ತರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.