/newsfirstlive-kannada/media/post_attachments/wp-content/uploads/2024/09/Nelamangala-Airport-1.jpg)
ಬೆಂಗಳೂರಿನ 2ನೇ ಏರ್ ಪೋರ್ಟ್ ಗೆ ಸ್ಥಳ ಆಯ್ಕೆ ಬಾಕಿ
ಬೆಂಗಳೂರಿನ ಎರಡನೇ ಏರ್ ಪೋರ್ಟ್ ಅನ್ನು ಎಲ್ಲಿ ನಿರ್ಮಿಸಬೇಕೆಂಬ ಬಗ್ಗೆ ಕೇಂದ್ರ ಸರ್ಕಾರದ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ನಿರ್ಧರಿಸಿ ವರದಿ ನೀಡುವುದು ವಿಳಂಬವಾಗುತ್ತಿದೆ. ರಾಜ್ಯದ ಭಾರಿ ಕೈಗಾರಿಕಾ ಖಾತೆ ಸಚಿವ ಎಂ.ಬಿ.ಪಾಟೀಲ್ ದೆಹಲಿಗೆ ಭೇಟಿ ನೀಡಿ ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಆದರೇ, ಇನ್ನೂ ಯಾವುದೇ ಸ್ಥಳವನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿ, ರಾಜ್ಯ ಸರ್ಕಾರಕ್ಕೆ ತಿಳಿಸಿಲ್ಲ. ಸೆಪ್ಟೆಂಬರ್ 1 ರಂದು ಸಚಿವ ಎಂ.ಬಿ.ಪಾಟೀಲ್ ಅವರು ರಾಜ್ಯ ಸರ್ಕಾರ ಮುಂದಿನ 2 ವಾರದೊಳಗೆ ಕೇಂದ್ರ ಸರ್ಕಾರದ ತೀರ್ಮಾನವನ್ನು ತಿಳಿದುಕೊಳ್ಳುವ ನಿರೀಕ್ಷೆಯಲ್ಲಿದೆ ಎಂದಿದ್ದರು.
ಆದರೇ, ಈಗಾಗಲೇ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ಬಂದರೂ, ಕೇಂದ್ರ ಸರ್ಕಾರ 2ನೇ ಏರ್ ಪೋರ್ಟ್ ಅನ್ನು ಯಾವ ಸ್ಥಳದಲ್ಲಿ ಸ್ಥಾಪಿಸಿದರೇ, ಸೂಕ್ತ ಎಂಬ ತೀರ್ಮಾನಕ್ಕೆ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಅಧಿಕಾರಿಗಳ ತಂಡವೇ ದೆಹಲಿಗೆ ಹೋಗಿ ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಇಲಾಖೆ ಅಧಿಕಾರಿಗಳು, ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.
ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳು ಈಗಾಗಲೇ ಏಪ್ರಿಲ್ ತಿಂಗಳಲ್ಲೇ ಬೆಂಗಳೂರಿನ ಕನಕಪುರ ರಸ್ತೆಯ 2 ಸ್ಥಳಗಳು ಹಾಗೂ ನೆಲಮಂಗಲದ ಬಳಿಯ ಒಂದು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಮೂರು ಸ್ಥಳಗಳ ಸಾಧಕಭಾದಕಗಳ ಬಗ್ಗೆ ರಾಜ್ಯ ಸರ್ಕಾರದ ಅಧಿಕಾರಿಗಳು ಕೇಂದ್ರದ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಮೂರು ಸ್ಥಳಗಳಲ್ಲೂ ತಲಾ 5 ಸಾವಿರ ಎಕರೆ ಭೂಮಿ ಏರ್ ಪೋರ್ಟ್ ಗೆ ಒದಗಿಸಿಕೊಡುವುದಾಗಿ ರಾಜ್ಯ ಸರ್ಕಾರದ ಅಧಿಕಾರಿಗಳು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ.
ಇನ್ನೂ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾದ ಅಧಿಕಾರಿಗಳು ಜೂನ್ 23 ರಂದು ಕೇಂದ್ರದ ನಾಗರಿಕ ವಿಮಾನಯಾನ ಇಲಾಖೆಗೆ ತಮ್ಮ ವರದಿಯನ್ನು ಸಲ್ಲಿಸಿದ್ದಾರೆ.
ಆದರೇ, ಪರಿಸರ ಇಲಾಖೆಯ ಕ್ಲಿಯರೆನ್ಸ್ ವರದಿ ಇನ್ನೂ ಸಿಕ್ಕಿಲ್ಲ. ಕೆಲ ಅಧಿಕಾರಿಗಳು ರಜೆಯ ಮೇಲೆ ತೆರಳಿದ್ದಾರೆ. ಹೀಗಾಗಿ ಕೇಂದ್ರ ಸರ್ಕಾರವು 2ನೇ ಏರ್ ಪೋರ್ಟ್ ಅನ್ನು ಯಾವ ಸ್ಥಳದಲ್ಲಿ ನಿರ್ಮಾಣ ಮಾಡಿದರೇ, ಸೂಕ್ತ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳುವುದು ವಿಳಂಬವಾಗುತ್ತಿದೆ. ಆದರೇ, ಉಳಿದಂತೆ 2ನೇ ಏರ್ ಪೋರ್ಟ್ ಸ್ಥಳ ಆಯ್ಕೆಯ ಪ್ರಕ್ರಿಯೆಗಳು ನಿರೀಕ್ಷೆಯಂತೆಯೇ ನಡೆಯುತ್ತಿವೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.