/newsfirstlive-kannada/media/media_files/2025/09/03/darshan-and-dayanada-2025-09-03-18-01-54.jpg)
ನಟ ದರ್ಶನ್, ಜೈಲು ಎಡಿಜಿಪಿ ಬಿ.ದಯಾನಂದ್
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಇಂದು ಕೋರ್ಟ್ ವಿಚಾರಣೆ ವೇಳೆ, ನನಗೆ ಸ್ವಲ್ಪ ಪಾಯಿಸನ್ ತೆಗೆದುಕೊಳ್ಳಲು ಅನುಮತಿ ಕೊಡಿ, ಬಿಸಿಲು ನೋಡಿ ಬಹಳ ದಿನ ಆಯಿತು. ಬಟ್ಟೆಗಳೆಲ್ಲಾ ವಾಸನೆ ಬರುತ್ತಿದೆ. ಬದುಕಲು ಆಗುತ್ತಿಲ್ಲ. ನನಗೆ ಒಬ್ಬನಿಗೆ ಮಾತ್ರ ಪಾಯಿಸನ್ ಕೊಡಿ, ಸಾಕು ಬೇರೆ ಯಾರಿಗೂ ಬೇಡ ಎಂದು ಬೆಂಗಳೂರಿನ ಸೆಷನ್ಸ್ ಕೋರ್ಟ್ ನ್ಯಾಯಾಧೀಶರಿಗೆ ಮನವಿ ಮಾಡಿಕೊಂಡಿದ್ದಾರೆ.
ಇದಕ್ಕೆ ಕೋರ್ಟ್ ನ ನ್ಯಾಯಾಧೀಶರು ಒಪ್ಪಿಲ್ಲ, ಹಾಗೆಲ್ಲ ಮಾಡಲು ಆಗಲ್ಲ, ಅದೆಲ್ಲಾ ಆಗುವುದಿಲ್ಲ ಎಂದು ನಟ ದರ್ಶನ್ ಗೆ ಬುದ್ದಿವಾದ ಹೇಳಿದ್ದಾರೆ. ನಾವು ಜೈಲು ಸೂಪರಿಂಟೆಂಡೆಂಟ್‌ಗೆ ಸೂಚನೆ ಕೊಡುತ್ತೇವೆ ಎಂದು ಕೋರ್ಟ್ ಜಡ್ಜ್ ಹೇಳಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಜೈಲಿನಿಂದಲೇ ವಿಡಿಯೋ ಕಾನ್ಪರೆನ್ಸ್ ಮೂಲಕ ಇಂದು ಕೋರ್ಟ್ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ನನಗೆ ಪಾಯಿಸನ್ ಬೇಕೆಂದು ಜಡ್ಜ್ ಗೆ ಮನವಿ ಮಾಡಿಕೊಂಡಿದ್ದಾರೆ. ಪಾಯಿಸನ್ ತೆಗೆದುಕೊಂಡು ಸಾಯುವಂಥ ಸ್ಥಿತಿ ನಟ ದರ್ಶನ್ ಗೆ ಏಕೆ ಬಂತಾ ಎಂದು ಕೋರ್ಟ್ ನಲ್ಲಿದ್ದವರು ಶಾಕ್ ಆಗಿದ್ದಾರೆ. ಇದಕ್ಕೆ ನಟ ದರ್ಶನ್ ಅವರೇ ಉತ್ತರ ನೀಡಿದ್ದಾರೆ. ನಟ ದರ್ಶನ್ ರನ್ನು ಜೈಲಿನ ರೂಮುನಿಂದ ಈಗ ಮೊದಲಿನಂತೆ ಹೊರಗೆ ಬಿಡುತ್ತಿಲ್ಲ. ಊಟವನ್ನು ಕೂಡ ನೇರವಾಗಿ ದರ್ಶನ್ ಇರುವ ರೂಮುಗೆ ತಲುಪಿಸಲಾಗುತ್ತಿದೆ. ದರ್ಶನ್ ಒಂದು ಕ್ಷಣವೂ ಜೈಲಿನ ತನ್ನ ಕೊಠಡಿ ಬಿಟ್ಟು ಹೊರಬರಲು ಅವಕಾಶ ಕೊಟ್ಟಿಲ್ಲ.
ಕಳೆದ ಭಾರಿ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ, ತನಗೆ ಬೇಕಾದ ಎಲ್ಲ ಸೌಲಭ್ಯ ಪಡೆದಿದ್ದರು. ಜೈಲಿನಲ್ಲೇ ಸಿಗರೇಟ್ ಧಮ್ ಹೊಡೆದಿದ್ದರು. ಜೈಲಿನ ಹುಲ್ಲುಹಾಸಿನ ಮೇಲೆ ಚೇರ್ ಹಾಕಿಕೊಂಡು ಕಾಫಿ ಮಗ್ ನಲ್ಲಿ ಕಾಫಿ ಕುಡಿಯುತ್ತಿದ್ದರು. ರೌಡಿಗಳ ಜೊತೆ ಸೇರಿ ಹರಟೆ ಹೊಡೆಯುತ್ತಿದ್ದರು. ಜೈಲಿನ ತನ್ನ ಕೊಠಡಿಯಲ್ಲಿ ಎರಡು ಮೂರು ಹಾಸಿಗೆಗಳನ್ನು ಒಟ್ಟಿಗೆ ಹಾಕಿಕೊಂಡು ಆರಾಮಾಗಿ ಮಲಗಿಕೊಳ್ಳುತ್ತಿದ್ದರು. ಜೈಲಿನಲ್ಲಿ ವಿಡಿಯೋ ಕಾಲ್ ಮೂಲಕ ಜೈಲು ಹೊರಗಿರುವವರ ಜೊತೆ ದರ್ಶನ್ ಮಾತನಾಡುತ್ತಿದ್ದರು. ಜೈಲಿನಿಂದಲೇ ಹೊರಗಿನವರಿಗೆ ಪೋನ್ ಕಾಲ್ ಕೂಡ ಮಾಡಿ ಮಾತನಾಡಿದ್ದರು. ಜೈಲಿನ ರೂಲ್ಸ್ ಗೆ ದರ್ಶನ್ ಡೋಂಟ್ ಕೇರ್ ಎಂದಿದ್ದರು.
ಇದೆಲ್ಲವನ್ನೂ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದ, ಬೆಂಗಳೂರು ಪೊಲೀಸರ ಪರ ವಕೀಲರು ಸುಪ್ರೀಂಕೋರ್ಟ್ ಗಮನಕ್ಕೆ ತಂದಿದ್ದರು. ಇದರಿಂದಾಗಿ ಸುಪ್ರೀಂಕೋರ್ಟ್ ಜೈಲು ಅಧಿಕಾರಿಗಳ ಮೇಲೆ ಸಿಡಿಮಿಡಿಗೊಂಡಿತ್ತು. ದರ್ಶನ್ ಜೈಲಿನಲ್ಲಿ ವಿಐಪಿ ಟ್ರೀಟ್ ಮೆಂಟ್ ಪಡೆದಾಗಲೇ ಜೈಲು ಅಧಿಕಾರಿಗಳನ್ನು ಅಮಾನತು ಮಾಡಬೇಕಾಗಿತ್ತು. ಜೈಲು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಗಿತ್ತು ಎಂದು ಸುಪ್ರೀಂಕೋರ್ಟ್ ನ ಜಸ್ಟೀಸ್ ಜೆ.ಬಿ.ಪರ್ದಿವಾಲಾ ಪೀಠ ತನ್ನ ಲಿಖಿತ ಆದೇಶದಲ್ಲಿ ಹೇಳಿದೆ.
ಜೈಲಿನಲ್ಲಿ ಈ ಭಾರಿ ದರ್ಶನ್ ಗೆ ನರಕ ದರ್ಶನ!
ಹೀಗಾಗಿ ಈಗ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊದಲಿನಂತೆ ವಿಐಪಿ ಸೌಲಭ್ಯ ಸಿಗುತ್ತಿಲ್ಲ. ರಾಜಾತಿಥ್ಯ ಸಿಗುತ್ತಿಲ್ಲ. ಜೈಲಿನಲ್ಲಿ ಓರ್ವ ಸಾಮಾನ್ಯ ಖೈದಿಯಂತೆ ಟ್ರೀಟ್ ಮಾಡಲಾಗುತ್ತಿದೆ. ಜೈಲಿನ ಖೈದಿಗಳ ಕೊಠಡಿಯಿಂದಲೂ ಹೊರಗೆ ಬರಲಾಗುತ್ತಿಲ್ಲ.
ಈಗ ರಾಜ್ಯದ ಜೈಲುಗಳ ಎಡಿಜಿಪಿ ಆಗಿ ಈಗ ಬಿ.ದಯಾನಂದ್ ವರ್ಗಾವಣೆಯಾಗಿದ್ದಾರೆ. ಈ ಹಿಂದೆ ಬಿ.ದಯಾನಂದ್ ಬೆಂಗಳೂರು ಪೊಲೀಸ್ ಕಮೀಷನರ್ ಆಗಿದ್ದಾಗಲೇ, ರೇಣುಕಾಸ್ವಾಮಿ ಕೊಲೆ ಕೇಸ್ ಬೆಳಕಿಗೆ ಬಂದಿತ್ತು. ಮುಚ್ಚಿ ಹೋಗಬಹುದಾಗಿದ್ದ ಅಪರಿಚಿತ ಶವದ ಕೇಸ್ ಅನ್ನು ಪೊಲೀಸರು ತನಿಖೆ ಮಾಡಿ, ನಟ ದರ್ಶನ್ ರನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆ ತರಲು ಕೂಡ ಬಿ.ದಯಾನಂದ್ ಅವರು ಎಸಿಪಿ ಚಂದನ್ ಗೆ ಕೊಟ್ಟಿದ್ದ ಅನುಮತಿಯೇ ಕಾರಣ. ಈಗ ಅದೇ ಬಿ.ದಯಾನಂದ್, ರಾಜ್ಯದ ಜೈಲುಗಳ ಎಡಿಜಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಹೀಗಾಗಿ ಜೈಲಿನಲ್ಲಿ ನಟ ದರ್ಶನ್ ಗೆ ಮೊದಲಿನಿಂದ ಯಾವುದೇ ವಿಐಪಿ ಸೌಲಭ್ಯವೂ ಸಿಗದಂತೆ ಎಲ್ಲವನ್ನೂ ಬಂದ್ ಮಾಡಿದ್ದಾರೆ. ನಟ ದರ್ಶನ್ ಗೆ ಈಗ ಅಸಲಿ ಜೈಲು ವಾಸದ ಅನುಭವ ಆಗುವಂತೆ ಮಾಡಿದ್ದಾರೆ.
ಹೀಗಾಗಿ ಈಗ ದರ್ಶನ್ ಜೈಲಿನ ಕೊಠಡಿಯಿಂದ ಹೊರಗೆ ಬರಲಾಗದೇ ವಿಲವಿಲ ಒದ್ದಾಡುತ್ತಿದ್ದಾರೆ. ನಟ ದರ್ಶನ್ ಗೆ ಈಗ ಅಸಲಿ ಜೈಲು ವಾಸದ ಅನುಭವ ಆಗಿದ್ದರಿಂದ ಜೈಲಿನ ಕೊಠಡಿಯಲ್ಲಿ ನರಳಾಡುವಂತಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು
ಹಾಗಾಗಿ ತನ್ನ ಸಂಕಷ್ಟವನ್ನು ಕೋರ್ಟ್ ಜಡ್ಜ್ ಗಮನಕ್ಕೆ ತರಲು ಹಾಗೂ ಅದನ್ನು ಭಾರಿ ಗಂಭೀರ ಸ್ವರೂಪದಲ್ಲೇ ಜಡ್ಜ್ ಗಮನಕ್ಕೆ ತರಲು ನನಗೆ ಸ್ವಲ್ಪ ಪಾಯಿಸನ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೇ ನಮ್ಮ ದೇಶದಲ್ಲಿ ಖೈದಿಗಳು ಪಾಯಿಸನ್ ಕೇಳಿದ ತಕ್ಷಣ ಕೊಟ್ಟುಬಿಡಲು ಆಗಲ್ಲ.
ಕ್ಲಿನಿಕಲ್ ಡೆತ್ ಸನ್ನಿವೇಶದಲ್ಲಿ ಇರುವವರಿಗೆ ಮಾತ್ರವೇ ದಯಾಮರಣ ಕೊಡಬಹುದು ಎಂದು ಸುಪ್ರೀಂಕೋರ್ಟ್ ತನ್ನ ಹಿಂದಿನ ತೀರ್ಪಿನಲ್ಲಿ ಹೇಳಿದೆ.
ಜೈಲಿನ ಖೈದಿಗಳು ಕೋರ್ಟ್ ತೀರ್ಪು ನೀಡುವವರೆಗೂ ಜೈಲು ವಾಸವನ್ನು ಮುಂದುವರಿಸಲೇಬೇಕು.
ಜೈಲಿನಲ್ಲಿ ಈಗ ದರ್ಶನ್ ಬಿಸಿಲು ಬೀಳುವಂತೆ , ಕೊಠಡಿಯಿಂದ ಹೊರಗೆ ಓಡಾಡಲು ಅವಕಾಶ ಕೊಡಬೇಕೇ ಬೇಡವೇ ಎಂಬ ಬಗ್ಗೆ ಈಗ ಕೋರ್ಟ್ ಆದೇಶ ನೀಡಬೇಕಾಗಿದೆ.
ದರ್ಶನ್ , ಜೈಲಿನಲ್ಲಿ ತನಗೆ ತಲೆ ದಿಂಬು, ಹಾಸಿಗೆ, ಬೆಡ್ ಶೀಟ್ ನೀಡಬೇಕೆಂದು ಕೋರ್ಟ್ ಗೆ ಮನವಿ ಮಾಡಿದ್ದಾರೆ. ಇದರ ಬಗ್ಗೆಯೂ ಇಂದು ಕೋರ್ಟ್ ತನ್ನ ಆದೇಶ ನೀಡುವ ನಿರೀಕ್ಷೆ ಇದೆ.
ಜೊತೆಗೆ ದರ್ಶನ್ ಅಂಡ್ ಗ್ಯಾಂಗ್ ಅನ್ನು ಬೇರೆ ಬೇರೆ ಜೈಲಿಗೆ ಶಿಫ್ಟ್ ಮಾಡಬೇಕೆಂದು ಕೂಡ ಜೈಲು ಅಧಿಕಾರಿಗಳು ಕೋರ್ಟ್ ಗೆ ಮನವಿ ಮಾಡಿದ್ದಾರೆ. ಇದರ ಬಗ್ಗೆಯೂ ಮಧ್ಯಾಹ್ನ 3 ಗಂಟೆಗೆ ಆದೇಶ ನೀಡುವ ನಿರೀಕ್ಷೆ ಇದೆ.
ಕೋರ್ಟ್ ನಲ್ಲಿ ಇಂದು ಏನೇನು ಆಯ್ತು ಅನ್ನೋದರ ಸಂಭಾಷಣೆಯ ವಿವರ ಇಲ್ಲಿದೆ ಓದಿ
ಸರ್ ( ಕೈ ಎತ್ತಿದ ದರ್ಶನ್)
ಮೈಕ್ ಕೊಡಿ
ಮೈಕ್ ಕೊಟ್ಟ ಜೈಲಿನ ಸಿಬ್ಬಂದಿ
ದರ್ಶನ್ : ನನಗೆ ಪಾಯ್ಸನ್ ಕೊಡಿ ಅಂತ ಒಂದು ಆದೇಶ ಮಾಡಿ
ಜಡ್ಜ್ (ಆಶ್ಚರ್ಯ ಚಕಿತರಾಗಿ ) : ಹಾಗೆಲ್ಲ ಮಾಡೋಕೆ ಆಗೊಲ್ಲ
ದರ್ಶನ್ : ನಂಗೆ ಪಾಯ್ಸನ್ ಕೊಡಬಹುದು ಅಂತ ಆದೇಶ ಮಾಡಿ, ಬೇರೆ ಯಾರಿಗೂ ಕೂಡ ಬೇಡ.. ನಂಗೆ ಮಾತ್ರ
ನಾನು ಜೈಲಿಗೆ ಬಂದು ಒಂದು ತಿಂಗಳಾಯ್ತು ಬಿಸಿಲನ್ನೇ ನೋಡಿಲ್ಲ, ಬಟ್ಟೆ ವಾಸನೆ ಬಂದಿದೆ.. ಫಂಗಸ್ ಬಂದಿದೆ
ಜಡ್ಜ್ : ಹಾಗೆಲ್ಲ ಮಾಡೋಕೆ ಆಗೊಲ್ಲ
ದರ್ಶನ್ : ಇಲ್ಲ ನಂಗೆ ಪಾಯ್ಸನ್ ಕೊಡಿ ಅಂತ ಆದೇಶ ಮಾಡಿ
ಜಡ್ಜ್ : ಇಲ್ಲ, ಮಧ್ಯಾಹ್ನ ಹಾಜರಾಗಲು ಸೂಚನೆ. ಮಧ್ಯಾಹ್ನ 3 ಕ್ಕೆ ಹಾಜರುಪಡಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.