Advertisment

ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತರಿಗೆ ಇತರೆ ಕಲಂ ಏಕೆ ಮುಖ್ಯ: ನಿಡುಮಾಮಿಡಿ ವೀರಭದ್ರಚನ್ನ ಮಲ್ಲಸ್ವಾಮೀಜಿ ಹೇಳಿದ್ದೇನು?

ರಾಜ್ಯದಲ್ಲಿ ಸಾಮಾಜಿಕ ಸಮೀಕ್ಷೆಯಲ್ಲಿ ವೀರಶೈವ ಲಿಂಗಾಯತರು ಧರ್ಮದ ಕಲಂನಲ್ಲಿ ಇತರೆ ಎಂದು ಬರೆಸಲು ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲಸ್ವಾಮೀಜಿ ಕರೆ ನೀಡಿದ್ದಾರೆ. ಸ್ವಾಮೀಜಿ ಅವರು ಈ ಬಗ್ಗೆ ಬರೆದಿರುವ ಲೇಖನವನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ. ಓದಿ.

author-image
Chandramohan
VEERABHADRA CHANNAMALLA SWAMIJI

ನಿಡುಮಾಮಿಡಿ ಮಠದ ವೀರಭದ್ರಚನ್ನಮಲ್ಲಸ್ವಾಮೀಜಿ

Advertisment
  • ವೀರಶೈವ -ಲಿಂಗಾಯತ ಪ್ರತೇಕ ಧರ್ಮ ಎಂದು ಪ್ರತಿಪಾದಿಸಿದ ಸ್ವಾಮೀಜಿ
  • ಧರ್ಮದ ಕಲಂನಲ್ಲಿ ಇತರೆ ಎಂದು ಬರೆಸಲು ನಿಡುಮಾಮಿಡಿ ಸ್ವಾಮೀಜಿ ಕರೆ
  • ವೀರಭದ್ರಚನ್ನಮಲ್ಲಸ್ವಾಮೀಜಿ ಬರೆದ ಲೇಖನ ಯಥಾವತ್ತಾಗಿ ಇಲ್ಲಿ ಪ್ರಕಟ

ವೀರಶೈವ ಲಿಂಗಾಯತ ಧರ್ಮೀಯರ ಅಂತಃಕರಣಕ್ಕೆ                           

             ವೀರಶೈವ ಲಿಂಗಾಯತ ಎಂಬುದು ಒಂದು ಧರ್ಮಕ್ಕೆ ಇರುವ ಎರಡು ಹೆಸರುಗಳು.ಎರಡೂ ಸಂಸ್ಕೃತ ಶಬ್ದಗಳೇ. ವೀರಶೈವ ಎಂಬುದು ಗ್ರಾಂಥಿಕ ಶಬ್ದವಾದರೆ ಲಿಂಗಾಯತ ಎನ್ನುವುದು ಆಡು ಮಾತಿನ ಶಬ್ದ. ವೀರಶೈವ ಮತ್ತು ಲಿಂಗಾಯತದ ಮೂಲ ಸಿದ್ಧಾಂತ ಒಂದೇ ಆಗಿರುವುದರಿಂದ ಇವೆರಡು ಅಭಿನ್ನ. ಎರಡಕ್ಕೂ ಅಷ್ಟಾವರಣವೇ ಅಂಗ ಪಂಚಾಚಾರವೇ ಪ್ರಾಣ ಷಟ್ ಸ್ಥಲವೇ ಆತ್ಮ. ಗುರಿ ಒಂದೇ; ಮಾರ್ಗ ಭಿನ್ನ. ಇದರಿಂದ ಭಿನ್ನವೆಂಬಂತೆ ತೋರುತ್ತವೆ. ಆಚರಣಾ ಮಾರ್ಗದಲ್ಲಿ ವೀರಶೈವ ಅರ್ಧ ತಾಂತ್ರಿಕ (ಆಗಮಿಕ) ಅರ್ಧ ವೈದಿಕವಾಗಿದ್ದು, ಲಿಂಗಾಯತ ಬಹುಪಾಲು ಅವೈದಿಕವಾಗಿದೆ. ಈ ಮಾರ್ಗಗಳಾದರೂ ಸಮುದಾಯಗಳ ಆಶಯಕ್ಕೆ ಅನುಗುಣವಾಗಿ ರೂಪುಗೊಂಡಂಥವು ಸಮುದಾಯಗಳು ತಮ್ಮ ಇಚ್ಛೆಯನ್ನು ಅನುಸರಿಸಿ ಈ ಮಾರ್ಗಗಳನ್ನು ಅಳವಡಿಸಿಕೊಂಡಿವೆ.

Advertisment

            ವೀರಶೈವದ ಸಮಾನತೆಯ ತತ್ತ್ವವನ್ನು ವೀರಶೈವ ಮಾರ್ಗಾವಲಂಬಿಗಳು ಆದರ್ಶವೆಂದು ತಿಳಿದರೆ ವಿನಃ ಆಚರಣೆಯಲ್ಲಿ ಅಳವಡಿಸಿಕೊಳ್ಳಲಿಲ್ಲ. ಲಿಂಗಾಯತ ಮಾರ್ಗಾವಲಂಬಿಗಳು ಬಸವಾದಿ ಶರಣರ ಸಮಾನತೆಯ ಆಶಯಗಳನ್ನು ಆದರ್ಶವೆಂದು ಭಾವಿಸಿದರೆ ವಿನಃ ಅವರ ಆಶಯಗಳಿಗೆ ಅನುಗುಣವಾಗಿ ನಡೆದುಕೊಳ್ಳಲಿಲ್ಲ. ನಡೆ ನುಡಿ ಒಂದಾಗಿರಬೇಕೆಂಬ ತತ್ತ್ವದ ವೀರಶೈವ ಲಿಂಗಾಯತವು ನುಡಿಯೇ ಬೇರೆ ನಡೆಯೇ ಬೇರೆಯಾಗಿ ಯಥಾಸ್ಥಿತಿ ವಾದವನ್ನೇ ಅಪ್ಪಿಕೊಂಡವು. ಇದರಿಂದ ಎರಡೂ ಕಡೆ ಹಿಂದಿನ ಜಾತಿ ಉಪಜಾತಿಗಳ ಮೇಲುಕೀಳಿನ ಲಿಂಗ ತಾರತಮ್ಯದ ಮೌಢ್ಯಾಚರಣೆಗಳ ವ್ಯವಸ್ಥೆಯೇ ಮುಂದುವರಿದು ಸಮಾನತೆಯ ಆಶಯಗಳು ಸಾಕಾರಗೊಳ್ಳದೆ ಹೋದವು. ಹೀಗಾಗಿ ಭಾರತ ದೇಶಕ್ಕೆ ಮಾದರಿಯಾಗ ಬಹುದಾಗಿದ್ದ ಹೊಸ ದರ್ಶನವೊಂದು ಆಚರಣೆಯ ಹಂತದಲ್ಲಿ ವಿಫಲವಾಗಿ ಹೊಸ ಸಮಾಜ ಒಂದರ ಅಪೂರ್ಣ ಸೃಷ್ಟಿಗೆ ಕಾರಣವಾದುದು ತುಂಬಾ ನೋವಿನ ಸಂಗತಿ.

            ಮೀಸಲಾತಿಯ ಕಾರಣಕ್ಕಾಗಿ ಜಾತಿ ಧರ್ಮಗಳ ಮಧ್ಯೆ ಗೊಂದಲಗಳು ಸೃಷ್ಟಿಯಾಗಿದ್ದು ವೀರಶೈವ ಲಿಂಗಾಯತ ಸಮಾಜದಲ್ಲಿಯೂ ಇವು ಪ್ರತಿಫಲಿಸಿವೆ. ಸಾಂಪ್ರದಾಯಿಕ ಸಮಾಜವೊಂದರ ತಾರತಮ್ಯ ನೀತಿ ಹಾಗೂ ಏಕಸ್ವಾಮ್ಯದ ನಡವಳಿಕೆಯ ಕಾರಣದಿಂದಲೊ, ಸಮಕಾಲೀನ ರಾಗ ದ್ವೇಷಗಳ ಒತ್ತಡದಿಂದಲೊ, ರಾಜಕೀಯ ಪಕ್ಷಗಳು ತೆಗೆದುಕೊಂಡಿರುವ ಭಿನ್ನ ನಿಲುವುಗಳಿಂದಲೊ ವೀರಶೈವ ಲಿಂಗಾಯತ ಧರ್ಮೀಯರಲ್ಲಿ ಗೊಂದಲಗಳು ಕಾಣಿಸಿಕೊಂಡಿವೆ. ಇಂಥ ಸಂದಿಗ್ಧ ಸಮಯದಲ್ಲಿ ವೀರಶೈವರು ಲಿಂಗಾಯತರು ರಾಜ್ಯ ಸರ್ಕಾರವು ಹಮ್ಮಿಕೊಂಡಿರುವ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಆಧರಿತ ಜಾತಿಗಣತಿಯ ಸಮೀಕ್ಷೆಯಲ್ಲಿ ಧರ್ಮ ಜಾತಿ ಉಪಜಾತಿ ಇತರೆ ಕಾಲಂಗಳಲ್ಲಿ ಏನನ್ನು ಬರೆಸಬೇಕೆಂದು ಸಮಾಜಕ್ಕೆ ವಾಸ್ತವದ ನೆಲೆಗಟ್ಟಿನಲ್ಲಿ ನ್ಯಾಯ ಸಮ್ಮತವಾಗಿರುವುದನ್ನು ತಿಳಿಸಬೇಕಾದದ್ದು ನಮ್ಮ ಕರ್ತವ್ಯ ಎಂದು ಭಾವಿಸಿ ನಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದೇವೆ. 

            ವೀರಶೈವದ ಪಠ್ಯಗಳು ವೀರಶೈವರನ್ನು ಅತ್ಯಾಶ್ರಮಿಗಳು ಮತ್ತು ಅತಿ ವರ್ಣಾಶ್ರಮಿಗಳು (ವೈದಿಕರ ಚತುರಾಶ್ರಮ ಹಾಗೂ ಚಾತುರ್ವರ್ಣ್ಯಗಳಿಗೆ ಅತೀತರಾದವರು ಅಂದರೆ ಹೊರತಾದವರು)ಎಂದು ಕರೆದಿವೆ. ಇಷ್ಟ ಲಿಂಗ ಧರಿಸಿದ ಯಾರೇ ವ್ಯಕ್ತಿ ತನ್ನ ಪೂರ್ವ ವಾಸನೆಗಳನ್ನು ಕಳೆದುಕೊಂಡು ಪುನರ್ಜಾತ ನಾಗಿ ಸಮಾನತೆಯ ಶಿವಧರ್ಮಕ್ಕೆ ಒಳಪಡುತ್ತಾನೆ. ಮನು ಪ್ರಣೀತ ವಿಚಾರಧಾರೆಯನ್ನು ಪ್ರತಿಪಾದಿಸುವ ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಬಸವಾದಿ ಶರಣರು ಕೂಡ ಇಷ್ಟಲಿಂಗವನ್ನು ಆಧರಿಸಿ ಸರ್ವಸಮಾನತೆಯ ತತ್ತ್ವವನ್ನು ಪ್ರತಿಪಾದಿಸಿರುತ್ತಾರೆ ಹಾಗಾಗಿ ವೀರಶೈವ ಲಿಂಗಾಯತರು ತಾಂತ್ರಿಕವಾಗಿ ಈಗ ಹಿಂದೂ ಧರ್ಮದ ವ್ಯಾಪ್ತಿಗೆ ಒಳಪಟ್ಟಿದ್ದರೂ ತಾತ್ವಿಕವಾಗಿ ಹಿಂದೂ ಧರ್ಮದ ವ್ಯಾಪ್ತಿಗೆ ಒಳಪಡುವುದಿಲ್ಲ. ವೀರಶೈವ ಲಿಂಗಾಯತರು ತಮ್ಮ ಧರ್ಮ ಪರಂಪರೆ ನಂಬಿಕೆ ಆಚರಣೆಗಳ ರಕ್ಷಣೆಗೆ ಹಾಗೂ ತಮ್ಮ ಅಸ್ಮಿತೆಗೆ ಸ್ವತಂತ್ರ ಧರ್ಮದ ಮಾನ್ಯತೆಯನ್ನು ಅಪೇಕ್ಷಿಸುತ್ತಿದ್ದಾರೆ. ಸ್ವತಂತ್ರ ಧರ್ಮದ ಪ್ರತಿಪಾದನೆ ಮಾಡುವುದರಿಂದ ವೀರಶೈವರಾಗಲಿ ಲಿಂಗಾಯತರಾಗಲಿ ಹಿಂದೂ ಧರ್ಮದ ವಿರೋಧಿಗಳಾಗುವುದಿಲ್ಲ; ಆಗಬಾರದು ಕೂಡ. ಹಿಂದೂ ಧರ್ಮದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಶಿವಭಕ್ತರಿದ್ದಾರೆ. ಶಿವಭಕ್ತರು ಯಾರೇ ಇರಲಿ ಯಾವ ಮತವನ್ನೇ ಅನುಸರಿಸಲಿ ಯಾವುದೇ ದೇಶ ಭಾಷೆಗೆ ಸಂಬಂಧಿಸಿರಲಿ ಪರಸ್ಪರ ಹಿತ ಚಿಂತನೆ ಮಾಡುವ ಉದಾರತನವನ್ನು ಎಲ್ಲರೂ ಬೆಳೆಸಿಕೊಳ್ಳಬೇಕಾಗಿದೆ. ಈ ದೃಷ್ಟಿಯಿಂದ ವೀರಶೈವರು ಲಿಂಗಾಯತರು ಹಿಂದೂಗಳ ಹಿತೈಷಿಗಳಾಗಿಯೇ ಇರಬೇಕಾಗುತ್ತದೆ.ಇದರಿಂದ ಇಬ್ಬರಿಗೂ ಶ್ರೇಯಸ್ಸಾಗಲಿದೆ. 21ನೇ ಶತಮಾನದ ಮಧ್ಯಭಾಗ ಹಾಗೂ ಅದರ ಮುಂದಿನ ಭಾಗ ಮಾನವ ಜನಾಂಗಕ್ಕೆ ತಂದೊಡ್ಡುವ ಸಂಕಷ್ಟ ಸವಾಲುಗಳ ಹಿನ್ನೆಲೆಯಲ್ಲಿಯೂ ವೀರಶೈವರು ಲಿಂಗಾಯತರು ಒಗ್ಗಟ್ಟಿನಿಂದ ಒಂದಾಗಿ ಹೋಗಬೇಕಾದ ಅನಿವಾರ್ಯತೆ ಇರುವುದನ್ನು ಧರ್ಮ ಬಾಂಧವರು ಮನಸ್ಸಿಗೆ ತಂದುಕೊಳ್ಳಬೇಕಾಗಿದೆ.

Advertisment

VEERABHADRA CHANNAMALLA SWAMIJI02

            ಜಾತಿ ಗಣತಿ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ವೀರಶೈವರು ಲಿಂಗಾಯತರು ಏನನ್ನೂ ಬರೆಸದೆ ಖಾಲಿ ಬಿಡಬೇಕು. ಜಾತಿ ಹಾಗೂ ಉಪಜಾತಿ ಕಾಲಂನಲ್ಲಿ ತಮ್ಮ ತಮ್ಮ ಜಾತಿ ಉಪಜಾತಿಯನ್ನು ಮಾತ್ರ ಬರೆಸಬೇಕು. ಜಾತಿ ಕಾಲಂನಲ್ಲಿ ಯಾವುದೇ ಕಾರಣಕ್ಕೂ ವೀರಶೈವ ಲಿಂಗಾಯತ ಎಂದು ಬರೆಸಬಾರದು. ಯಾಕೆಂದರೆ ವೀರಶೈವ ಅಥವಾ ಲಿಂಗಾಯತ ಎನ್ನುವುದು ಧರ್ಮವೇ ವಿನಾ ಜಾತಿಯಲ್ಲ.ಧರ್ಮವನ್ನು ಜಾತಿಯ ಸ್ಥಾನಕ್ಕೆ ಕುಗ್ಗಿಸಿದರೆ ನಮ್ಮ ಪರಂಪರೆಗೆ ನಮ್ಮ ಹಿರಿಯರಿಗೆ ನಾವು ಅಪಚಾರ ಮಾಡಿದಂತೆ ಆಗುತ್ತದೆ. ಅಷ್ಟೇ ಅಲ್ಲ ನಮಗೆ ನಾವೇ ಅವಮಾನ ಮಾಡಿಕೊಂಡಂತೆ ಆಗುತ್ತದೆ. ಸಂಖ್ಯಾ ಬಾಹುಳ್ಯದ ಸಮುದಾಯಗಳು ಉಪಜಾತಿಗಳನ್ನು ಹೊಂದಿರುವುದರಿಂದ ಜಾತಿ ಕಾಲಂನಲ್ಲಿ ಅವರ ಮೂಲ ಜಾತಿಯನ್ನು ಉಪಜಾತಿ ಕಾಲಂನಲ್ಲಿ ಉಪಜಾತಿಯ ಹೆಸರನ್ನು ನಮೂದಿಸಬೇಕು. ಉಪಜಾತಿಗಳಿಲ್ಲದ ಸಮಾಜವಾಗಿದ್ದರೆ ಜಾತಿಯ ಕಾಲಂನಲ್ಲಿ ತಮ್ಮ ಜಾತಿಯ ಹೆಸರನ್ನಷ್ಟೇ ನಮೂದಿಸಿ ಉಪಜಾತಿ ಕಾಲಂ ಅನ್ನು ಖಾಲಿ ಬಿಡಬಹುದು. 

            ವೀರಶೈವ ಲಿಂಗಾಯತರಿಗೆ ಇತರೆ ಎಂಬ ಕಾಲಂ ಬಹುಮುಖ್ಯವಾಗಿದ್ದು ಇಲ್ಲಿ ವೀರಶೈವ ಲಿಂಗಾಯತ ಎಂದು ಧರ್ಮದ ಹೆಸರನ್ನು ಬರೆಸುವುದು ಸೂಕ್ತವಾಗಿರುತ್ತದೆ. ಇತರೆ ಎಂಬಲ್ಲಿ ವೀರಶೈವ ಲಿಂಗಾಯತರು ಎಂದು ಬರೆಸುವುದರಿಂದ ನಾವು ಹಿಂದೂಗಳಲ್ಲ ಎಂದು ಹೇಳಿದಂತಾಗುತ್ತದೆ. ಅಷ್ಟೇ ಅಲ್ಲ ನಾವು ಸ್ವತಂತ್ರ ಧರ್ಮದ ಮಾನ್ಯತೆಯನ್ನು ಬಯಸುವವರು ಎಂಬ ಅಭಿಪ್ರಾಯವನ್ನೂ ತಿಳಿಸಿದಂತಾಗುತ್ತದೆ. ಆದ್ದರಿಂದ ವೀರಶೈವ ಲಿಂಗಾಯತ ಧರ್ಮೀಯರು ಜಾತಿ ಉಪಜಾತಿಗಳ ಕಾಲಂನಲ್ಲಿ ತಮ್ಮ ತಮ್ಮ ಜಾತಿ ಉಪಜಾತಿಗಳನ್ನು  ಇತರೆ  ಎಂಬ ಕಾಲಂನಲ್ಲಿ ವೀರಶೈವ ಲಿಂಗಾಯತ ಎಂದು ಬರೆಸಬೇಕಾಗಿ ಆಶಿಸುತ್ತೇವೆ. 
                                                                     ಗೌರವಪೂರ್ವಕವಾಗಿ 
                                                     ವೀರಭದ್ರಚನ್ನಮಲ್ಲ ದೇಶೀಕೇಂದ್ರ  ಸ್ವಾಮೀಜಿ


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Backward classes socio and educational survey
Advertisment
Advertisment
Advertisment