/newsfirstlive-kannada/media/media_files/2025/08/23/mask-man-dharamasthala-011-2025-08-23-13-10-46.jpg)
ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನ
ಮಾಸ್ಕ್ ಮ್ಯಾನ್ ಚಿನ್ನಯ್ಯ ಮೊದಲಿಗೆ ತಂದಿದ್ದ ತಲೆ ಬುರುಡೆಯೇ ನಕಲಿ ತಲೆ ಬುರುಡೆ ಎಂಬುದು ಈಗ ಗೊತ್ತಾಗಿದೆ. ಜೊತೆಗೆ ಪೊಲೀಸರಿಗೆ ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನ ನೀಡಿದ್ದ ದೂರಿನಲ್ಲಿ ಯಾವುದೇ ಸತ್ಯಾಂಶ ಇರಲಿಲ್ಲ. ಜೊತೆಗೆ ಚಿನ್ನಯ್ಯ ಪೊಲೀಸರಿಗೆ ಸುಳ್ಳು ಹೇಳಿಕೆ ನೀಡಿದ್ದಾನೆ ಎಂಬುದು ಎಸ್‌ಐಟಿಗೆ ಕನ್ಪರ್ಮ್ ಆಗಿದೆ. ನಿನ್ನೆ ಬೆಳಿಗ್ಗೆಯಿಂದ ಇಂದು ಬೆಳಿಗ್ಗೆ 5 ಗಂಟೆಯವರೆಗೂ ನಿರಂತರವಾಗಿ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ವಿಚಾರಣೆ ನಡೆಸಿದ ಬಳಿಕ ಎಸ್‌ಐಟಿ ಬಂಧಿಸುವ ತೀರ್ಮಾನ ಕೈಗೊಂಡಿದೆ. ಚಿನ್ನಯ್ಯನನ್ನು ಬಂಧಿಸುವ ಮುನ್ನ ಎಸ್‌ಐಟಿ ನಿರಂತರವಾಗಿ 19 ಗಂಟೆಗಳ ಕಾಲ ಆತನನ್ನು ವಿಚಾರಣೆಗೆ ಒಳಪಡಿಸಿದೆ. ಈ ವೇಳೆ ತಾನು ಮೊದಲಿಗೆ ತಂದಿದ್ದ ತಲೆ ಬುರುಡೆಯನ್ನು ಎಲ್ಲಿಂದ ತರಲಾಗಿತ್ತು ಎಂಬುದನ್ನು ಚಿನ್ನಯ್ಯ ಬಾಯಿಬಿಟ್ಟಿಲ್ಲ. ಪೊಲೀಸರಿಗೆ ಹಾಗೂ ಕೋರ್ಟ್ ಗೆ ಸುಳ್ಳು ದೂರು, ಸುಳ್ಳು ಮಾಹಿತಿ, ಸುಳ್ಳು ಸಾಕ್ಷ್ಯ ನೀಡುವುದು ಕೂಡ ಅಪರಾಧ. ಹೀಗಾಗಿ ಎಸ್‌ಐಟಿ ಯ ಪೊಲೀಸ್ ಅಧಿಕಾರಿಗಳು ಚಿನ್ನಯ್ಯನನ್ನು ಬಂಧಿಸುವ ತೀರ್ಮಾನ ಕೈಗೊಂಡಿದ್ದಾರೆ.
ಚಿನ್ನಯ್ಯ ಈ ಹಿಂದೆ ಧರ್ಮಸ್ಥಳ ದೇವಾಲಯದಲ್ಲಿ ಸಫಾಯಿ ಕರ್ಮಚಾರಿ ಆಗಿ ಕೆಲಸ ಮಾಡುತ್ತಿದ್ದ. ಈತ ಮೂಲತಃ ಮಂಡ್ಯ ಜಿಲ್ಲೆಯ ಮಂಡ್ಯ ತಾಲ್ಲೂಕಿನ ಚಿಕ್ಕಬಳ್ಳಿ ಗ್ರಾಮದವನು. ಪರಿಶಿಷ್ಟ ಜಾತಿಗೆ ಸೇರಿದವನು. ಈತನಿಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿಗೆ ಡಿವೋರ್ಸ್ ನೀಡಿದ್ದಾನೆ. ಬಳಿಕ ಎರಡನೇ ಮದುವೆಯಾಗಿದ್ದಾನೆ.
ತಾನು 1998ರಿಂದ 2014 ರ ಅವಧಿಯಲ್ಲಿ ಧರ್ಮಸ್ಥಳದ ದೇವಾಲಯದ ಸುತ್ತಮುತ್ತ, ನೇತ್ರಾವತಿ ನದಿ ಬಳಿ 70 ರಿಂದ 80 ಮಂದಿಯ ಶವಗಳನ್ನು ಹೂತಿದ್ದೇನೆ. ಹೆಣ್ಣು ಮಕ್ಕಳು, ಮಹಿಳೆಯರ ಮೇಲೆ ಅತ್ಯಾಚಾರವಾದ ಬಳಿಕ ನನಗೆ ಶವ ಹೂಳುವಂತೆ ಹೇಳುತ್ತಿದ್ದರು. ಅವರು ಹೇಳಿದಂತೆ ಶವ ಹೂತಿದ್ದೇನೆ. ಈಗ ಆ ಶವ ಹೂತ ಜಾಗಗಳನ್ನು ತೋರಿಸುತ್ತೇನೆ. ನನಗೆ ಈಗ ರಾತ್ರಿ ವೇಳೆ ನಿದ್ರೆ ಬರುತ್ತಿಲ್ಲ. ಪಾಪಪ್ರಜ್ಞೆ ಕಾಡುತ್ತಿದೆ. ಹಾಗಾಗಿ ಈಗ ಬಂದು ದೂರು ನೀಡುತ್ತಿದ್ದೇನೆ ಎಂದು ಪೊಲೀಸರು ಹಾಗೂ ಕೋರ್ಟ್ ಗೆ ಚಿನ್ನಯ್ಯ ಹೇಳಿಕೆ ನೀಡಿ ದೂರು ನೀಡಿದ್ದ. ಈತನ ದೂರಿನ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ದಳ(ಎಸ್‌ಐಟಿ ) ರಚಿಸಿತ್ತು.
ಈ ಚಿನ್ನಯ್ಯ ತೋರಿಸಿದ ಸ್ಥಳಗಳನ್ನೆಲ್ಲಾ ಮೊದಲಿಗೆ ಎಸ್‌ಐಟಿ ನಂಬರ್ ಗಳನ್ನು ನೀಡಿ ಗುರುತು ಹಾಕಿಕೊಂಡಿತ್ತು. ಹೀಗೆ ಒಟ್ಟು 15 ಸ್ಥಳಗಳಲ್ಲಿ ತಾನು ಶವಗಳನ್ನು ಹೂತಿರುವುದಾಗಿ ಚಿನ್ನಯ್ಯ ಹೇಳಿದ್ದ. ಆ ಸ್ಥಳಗಳನ್ನೆಲ್ಲಾ ಪೊಲೀಸರಿಗೆ ತೋರಿಸಿದ್ದ. ಆ ಸ್ಥಳಗಳಲ್ಲಿ 20 ದಿನದವರೆಗೂ ಜೆಸಿಬಿ, ಕಾರ್ಮಿಕರ ಬಳಸಿ ಭೂಮಿ ಅಗೆದು ಪರಿಶೀಲನೆ ನಡೆಸಿತ್ತು. ಪಾಯಿಂಟ್ ನಂಬರ್ 6 ರಲ್ಲಿ ಮಾತ್ರ ಒಬ್ಬ ಪುರುಷನ ಅಸ್ಥಿಪಂಜರ ಸಿಕ್ಕಿದೆ. ಇನ್ನೊಂದು ಜಾಗದಲ್ಲಿ ಕೆಲ ಮೂಳೆಗಳು ಮಾತ್ರ ಸಿಕ್ಕಿವೆ.
/filters:format(webp)/newsfirstlive-kannada/media/media_files/2025/08/01/dharamasthala-case-2025-08-01-06-52-04.jpg)
ಏಕೆ ತಾನು ತೋರಿಸಿದ ಜಾಗದಲ್ಲಿ ಅಸ್ಥಿಪಂಜರಗಳು ಸಿಕ್ಕಿಲ್ಲ ಎಂಬ ಪ್ರಶ್ನೆಗೆ ಚಿನ್ನಯ್ಯ, ಇವೆಲ್ಲಾ 10 -20 ವರ್ಷದ ಹಿಂದೆ ಹೂತಿರುವ ಶವಗಳು. ಹೀಗಾಗಿ ಮಣ್ಣಿನಲ್ಲಿ ಕರಗಿ ಹೋಗಿರಬಹುದು, ಅರಣ್ಯ ಬೆಳವಣಿಗೆಯಿಂದ ಅಸ್ಥಿಪಂಜರಗಳು ಸಿಗದೇ ಇರಬಹುದು. ಜೊತೆಗೆ ಕನ್ಸಟ್ರಕ್ಷನ್ ಕೆಲಸದಿಂದಲೂ ಶವದ ಅಸ್ಥಿಪಂಜರಗಳು ಸಿಗದೇ ಇರಬಹುದು ಎಂದು ಇಂಗ್ಲೀಷ್ ಮಾಧ್ಯಮಗಳಿಗೆ ನೀಡಿದ್ದ ಸಂದರ್ಶನದಲ್ಲಿ ಚಿನ್ನಯ್ಯ ಹೇಳಿದ್ದ.
ಧರ್ಮಸ್ಥಳ ದೇವಾಲಯಕ್ಕೆ ಕಳಂಕ ತರುವ ಉದ್ದೇಶದಿಂದ ಈ ಆರೋಪಗಳನ್ನು ಮಾಡುತ್ತಿದ್ದಿಯಾ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಚಿನ್ನಯ್ಯ, ದೇವಾಲಯದ ಹೆಸರು ಅನ್ನು ಹಾಳು ಮಾಡುವುದರಿಂದ ನನಗೆ ಏನು ಸಿಗುತ್ತೆ? ನಾನು ಹಿಂದೂ, ನಾನು ಪರಿಶಿಷ್ಟ ಜಾತಿಗೆ ಸೇರಿದವನು ಎಂದು ಚಿನ್ನಯ್ಯ ಹೇಳಿದ್ದ.
ಇನ್ನೂ ಈ ಚಿನ್ನಯ್ಯ ಮೊದಲಿಗೆ ತಂದಿದ್ದ ತಲೆ ಬುರುಡೆಯೇ ಫೇಕ್ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ. ಹೀಗಾಗಿ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನೇ ಬಂಧಿಸುವ ತೀರ್ಮಾನವನ್ನು ಎಸ್‌ಐಟಿ ಕೈಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ