/newsfirstlive-kannada/media/media_files/2025/08/30/tumakuru-dowry-harassment-case-2025-08-30-16-48-26.jpg)
ಪತ್ನಿ ಪ್ರೇರಣಾರಿಂದ ಪತಿ ಪ್ರಜ್ವಲ್ ಶಂಕರ್ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ
ವರದಕ್ಷಿಣೆ ಕಿರುಕುಳ ಆರೋಪ ಹೊರಿಸಿರುವ ನವ ವಿವಾಹಿತೆ ತನ್ನ ಪತಿಯ ಮನೆಯ ಮುಂದೆ ಧರಣಿ ನಡೆಸುತ್ತಿದ್ದಾರೆ. ಮದುವೆ ವೇಳೆ ತನಗೆ ತನ್ನ ಪೋಷಕರು ನೀಡಿದ್ದ ಒಡವೆಗಳನ್ನು ಗಂಡ ಹಾಗೂ ಗಂಡನ ಮನೆಯವರು ಇಟ್ಟುಕೊಂಡಿದ್ದಾರೆ. ಅವುಗಳನ್ನು ವಾಪಸ್ ನೀಡಬೇಕೆಂದು ಆಗ್ರಹಿಸಿ ಪತಿಯ ಮನೆ ಮುಂದೆ ಪತ್ನಿ ಧರಣಿ ಆರಂಭಿಸಿದ್ದಾರೆ. ತುಮಕೂರು ನಗರದ ಸಪ್ತಗಿರಿ ಬಡಾವಣೆಯ ಪತಿ ಪ್ರಜ್ವಲ್ ಶಂಕರ್ ಮನೆ ಮುಂದೆ ಪತ್ನಿ ಪ್ರೇರಣಾ ಧರಣಿ ಆರಂಭಿಸಿದ್ದಾರೆ.
ತನಗೆ ವರದಕ್ಷಿಣೆ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಪತ್ನಿ ಪ್ರೇರಣಾ ಆರೋಪ ಮಾಡಿದ್ದಾರೆ. ಮನೆಯ ಮುಂದೆ ಧರಣಿ ನಡೆಸುತ್ತಿರುವ ಸೊಸೆ ಪ್ರೇರಣಾಳನ್ನು ಅತ್ತೆ, ಮಾವ, ಗಂಡ ಭೇಟಿಯಾಗದೇ ಮನೆಯೊಳಗೆ ಇದ್ದಾರೆ.
ನಾನೇ ಬೇಡವಾದ ಮೇಲೆ, ನನ್ನ ಚಿನ್ನದ ಒಡವೆಗಳನ್ನು ಏಕೆ ಇಟ್ಟುಕೊಂಡಿದ್ದೀರಿ, ಅವುಗಳನ್ನು ವಾಪಸ್ ಕೊಡಿ ಎಂದು ಪತ್ನಿ ಪ್ರೇರಣಾ ಆಗ್ರಹಿಸುತ್ತಿದ್ದಾರೆ. ಮದುವೆ ವೇಳೆ ತನಗೆ ತನ್ನ ಪೋಷಕರು 130 ಗ್ರಾಂ ಚಿನ್ನದ ಆಭರಣ ನೀಡಿದ್ದರು. ಅವುಗಳನ್ನು ತನಗೆ ವಾಪಸ್ ನೀಡಬೇಕು ಅನ್ನೋದು ಪತ್ನಿ ಪ್ರೇರಣಾ ಆಗ್ರಹ. ಈಗ ನಮ್ಮ ಅಪ್ಪ, ಅಮ್ಮ ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ. ಅವರ ಸಾಲ ತೀರಿಸಲು ನಮಗೆ ನಮ್ಮ ಒಡವೆಗಳು ವಾಪಸ್ ಬೇಕು ಎಂದು ಪತ್ನಿ ಪ್ರೇರಣಾ ಪಟ್ಟು ಹಿಡಿದಿದ್ದಾರೆ. ಮಗಳು ಪ್ರೇರಣಾ ಜೊತೆ ತಾಯಿ ಚಂದ್ರಕಲಾ ಕೂಡ ಧರಣಿ ನಡೆಸುತ್ತಿದ್ದಾರೆ.
ರಾಜ್ಯ ಮಹಿಳಾ ಆಯೋಗ ಹಾಗೂ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರತಿ, ಪ್ರೇರಣಾ-ಪ್ರಜ್ವಲ್ ಶಂಕರ್ ಮದುವೆ ಪೋಟೋ.
ಕಳೆದ ವರ್ಷದ ಆಗಸ್ಟ್ ನಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಟೌನ್ ನಿವಾಸಿ ಪ್ರೇರಣಾ ಹಾಗೂ ತುಮಕೂರಿನ ಸಪ್ತಗಿರಿ ಬಡಾವಣೆಯ ನಿವಾಸಿ ಪ್ರಜ್ವಲ್ ಶಂಕರ್ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು. ಮದುವೆಯಾದ ನಾಲ್ಕು ತಿಂಗಳಲ್ಲೇ ಪತಿ ಪ್ರಜ್ವಲ್ ಶಂಕರ್ ಹಾಗೂ ಪೋಷಕರು ತನಗೆ ವರದಕ್ಷಿಣೆ ಕಿರುಕುಳ ನೀಡಿದ್ದರು ಎಂದು ಪತ್ನಿ ಪ್ರೇರಣಾ ಆರೋಪಿಸಿ ತುಮಕೂರಿನ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನ್ನ ಮೇಲೆ ಹಲ್ಲೆ ನಡೆಸಿ, ದೈಹಿಕ, ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ತುಮಕೂರಿನ ಮಹಿಳಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಎರಡು ಕಡೆಯವರನ್ನು ಕರೆಸಿ, ರಾಜೀ ಸಂಧಾನ ಮಾಡಿ ಪೊಲೀಸರು ಬುದ್ದಿವಾದ ಹೇಳಿ ಕಳಿಸಿದ್ದಾರೆ. ಆದರೇ, ಮತ್ತೆ ಪತಿ ಪ್ರಜ್ವಲ್ ಶಂಕರ್ ಹಾಗೂ ಆತನ ಪೋಷಕರು ನನಗೆ ಕಿರುಕುಳ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಪತ್ನಿ ಪ್ರೇರಣಾ ಆರೋಪಿಸಿದ್ದಾರೆ. ಈಗ ನ್ಯಾಯಕ್ಕಾಗಿ ಆಗ್ರಹಿಸಿ ರಾಜ್ಯ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ.
ತನ್ನ ಚಿನ್ನಾಭರಣಗಳನ್ನು ವಾಪಸ್ ನೀಡುವವರೆಗೂ ಪತಿಯ ಮನೆಯ ಮುಂದೆ ಧರಣಿ ಮುಂದುವರಿಸುವುದಾಗಿ ಪ್ರೇರಣಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.