/newsfirstlive-kannada/media/post_attachments/wp-content/uploads/2025/06/CHM-TIGER-1.jpg)
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟ ವನ್ಯಧಾಮದ ಕೊಪ್ಪ ವಲಯ ಒಂದರಲ್ಲೇ 5 ಹುಲಿಗಳ ಕಳೆಬರ ಪತ್ತೆಯಾಗಿದ್ದವು. ಈ ಪ್ರಕರಣವು ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಹುಲಿಗಳ ದುರಂತ ಅಂತ್ಯಕ್ಕೆ ವಿಷಪ್ರಾಶನ ಕಾರಣ ಅಂತಾ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಒಂದು ತಾಯಿ ಹುಲಿ ಮತ್ತು 4 ಮರಿ ಸೇರಿ ಐದು ಹುಲಿಗಳು ಶಂಕಾಸ್ಪದ ರೀತಿಯಲ್ಲಿ ಜೀವಬಿಟ್ಟಿರುವ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮಾಹಿತಿ ನೀಡಲಾಗಿತ್ತು. ಇದನ್ನು ಪಿಸಿಸಿಎಫ್ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ್ದ ಅರಣ್ಯಾಧಿಕಾರಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತನಿಖೆ ನಡೆಸಿದ್ದಾರೆ.
ಅರಣ್ಯಾಧಿಕಾರಿ ಹೇಳಿದ್ದೇನು..?
ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಚಕ್ರಪಾಣಿ.. ಬೆಳಗ್ಗೆ 10 ಗಂಟೆ ನಮ್ಮ ಸಿಬ್ಬಂದಿ ಬೀಟ್ಗೆ ಬಂದಿದ್ದಾರೆ. ಆಗ ಪ್ರಕರಣ ಬೆಳಕಿಗೆ ಬಂದಿದೆ. ಹುಲಿಗಳು ಜೀವಬಿಟ್ಟ ಸ್ಥಳದಲ್ಲೇ ಹಸುವಿನ ಮೃತದೇಹ ಪತ್ತೆಯಾಗಿದೆ. ಹಸು ಹಾಗೂ ಹುಲಿಗಳು ಅಕ್ಕ-ಪಕ್ಕದಲ್ಲೇ ಬಿದ್ದಿರೋದು ಅನುಮಾನ ಮೂಡಿಸಿದೆ.
ಇದನ್ನೂ ಓದಿ: ಟ್ರಂಪ್ ಒಬ್ಬ ಶೋ ಮ್ಯಾನ್, ಕೆಣಕಿದವರಿಗೆ ಕಪಾಳಕ್ಕೆ ಹೊಡೆದಿದ್ದೇವೆ -ಇರಾನ್ ಸುಪ್ರೀಂ ಲೀಡರ್
ಒಂದು ತಾಯಿ ಹುಲಿ, 3 ಹೆಣ್ಣು ಮರಿಹುಲಿ, 1 ಗಂಡು ಮರಿ ಜೀವಬಿಟ್ಟಿದೆ. ಇವುಗಳ ಮರಣೋತ್ತರ ಪರೀಕ್ಷೆಗಳು ನಡೆಯಲಿದೆ. ಸ್ಯಾಂಪಲ್ಸ್ನ ಲ್ಯಾಬ್ಗೆ ಕಳುಹಿಸಲಾಗುತ್ತದೆ. ಅದಾದ ಬಳಿಕ ನಿಖರ ಕಾರಣ ತಿಳಿಯಲಿದೆ. ಮೃತಪಟ್ಟಿರುವ ಎಲ್ಲಾ ಹುಲಿಗಳು 100 ರಿಂದ 200 ಮೀಟರ್ ದೂರದಲ್ಲಿ ಬಿದ್ದಿವೆ. ಪ್ರಕರಣದ ಕುರಿತು ತನಿಖೆಯನ್ನ ನಮ್ಮ ಎಸಿಎಫ್ ನೇತೃತ್ವದಲ್ಲಿ ನಡೆಯಲಿದೆ.
ಮೃತಪಟ್ಟ ಹಸುವಿನ ಮಾಲೀಕ ಯಾರು ಎಂಬುದರ ಕುರಿತು ಮಾಹಿತಿ ಸಿಕ್ಕಿಲ್ಲ. ತನಿಖೆಯ ಬಳಿಕ ತಿಳಿಯಲಿದೆ. ಜಿಲ್ಲಾ ಮಟ್ಟದಲ್ಲಿ ಎಸಿಎಫ್ ನೇತೃತ್ವದಲ್ಲಿ ತನಿಖಾ ತಂಡ ತನಿಖೆಯನ್ನು ಮುಂದುವರಿಸಲಿದೆ. ಪೊಲೀಸ್ ಇಲಾಖೆಯೂ ತನಿಖೆಗೆ ಸಹಕಾರ ನೀಡಲಿದೆ. ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ತನಿಖೆ ನಡೆಸಲಿವೆ ಎಂದಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಅಶೋಕಕ್ ಕಿಡಿ
ಹುಲಿಗಳ ಮಾರಣಹೋಮದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಕಳವಳ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರ ಗಂಧದಗುಡಿಯನ್ನು ಕಸಾಯಿಖಾನೆ ಮಾಡುತ್ತಿದೆ ಎಂದು ಗುಡುಗಿದ್ದಾರೆ. ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀನ್ಯಂ ಅರಣ್ಯದಲ್ಲಿ 5 ಹುಲಿಗಳು ಮೃತಪಟ್ಟಿರುವ ವಿಷಯ ಅತ್ಯಂತ ಆಘಾತಕಾರಿ. ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿ ಇಡೀ ದೇಶದಲ್ಲಿ ತನ್ನದೇ ಆದ ಹೆಸರು ಮಾಡಿರುವ ಕರ್ನಾಟಕದಲ್ಲಿ ಇಂತಹ ಘಟನೆ ನಡೆದಿರುವುದು ರಾಜ್ಯಕ್ಕೆ ಕಳಂಕ ತಂದಿದೆ. ಅರಣ್ಯ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರ, ಭ್ರಷ್ಟಾಚಾರ ನಮ್ಮ ವನ್ಯ ಸಂಪತ್ತನ್ನು ಹಾಳು ಮಾಡುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರೆದರೆ, ಸರ್ಕಾರ ಅರಣ್ಯ ಇಲಾಖೆಯಲ್ಲಿ ಆಡಳಿತ ಬಿಗಿಗೊಳಿಸದಿದ್ದರೆ ಇಡೀ ಅರಣ್ಯವೇ ಸರ್ವನಾಶ ಆಗುವ ಅಪಾಯವಿದೆ. ತಪ್ಪಿತಸ್ಥರಿಗೆ ಮುಲಾಜಿಲ್ಲದೆ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ತಾಯಿ ಹುಲಿ, ಮೂರು ಮರಿ ದುರಂತ ಅಂತ್ಯ! ವಿಷಪ್ರಾಸನ ಶಂಕೆ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ