/newsfirstlive-kannada/media/post_attachments/wp-content/uploads/2025/07/TRANSPORT-6.jpg)
ಟ್ರಾಫಿಕ್ ಜಾಮ್​​ನಿಂದ ಬೇಸತ್ತಿರುವ ಬೆಂಗಳೂರಿನ ಜನರಿಗೆ ಕೇಂದ್ರದ ಹೆದ್ದಾರಿ ಮತ್ತು ಭೂ ಸಾರಿಗೆ ಇಲಾಖೆ ಸಚಿವ ನಿತಿನ್ ಗಡ್ಕರಿ (Nitin gadkari) ಗುಡ್ ನ್ಯೂಸ್ ನೀಡಿದ್ದಾರೆ. ಬೆಂಗಳೂರಿನಲ್ಲಿ ಪಾಡ್ ಟ್ಯಾಕ್ಸಿ (Pod taxi) , ಹೈಪರ್​ಲೂಪ್ (hyperloop) ಸಾರಿಗೆ ವ್ಯವಸ್ಥೆ ಹಾಗೂ ಪಿಲ್ಲರ್ ಆಧಾರಿತ ಸಾಮೂಹ ಸಾರಿಗೆ ವ್ಯವಸ್ಥೆಯನ್ನು ಬೆಂಗಳೂರು ಮತ್ತು ದೆಹಲಿ ನಗರಗಳಲ್ಲಿ ಪೈಲಟ್ ಪ್ರಾಜೆಕ್ಟ್ ಆಗಿ ಜಾರಿಗೊಳಿಸುವ ಯೋಜನೆ ಇದೆ ಎಂದು ಗಡ್ಕರಿ ಹೇಳಿದ್ದಾರೆ. ಈ ಯೋಜನೆಗಳ ಜಾರಿಗೆ ಟೆಕ್ನಾಲಜಿಯೂ ಲಭ್ಯ ಇದೆ. ಜೊತೆಗೆ ಬಂಡವಾಳ ಹೂಡಿಕೆದಾರರು ಮುಂದೆ ಬಂದಿದ್ದಾರೆ. ಇದೊಂದು ಕ್ರಾಂತಿಯಾಗಲಿದೆ ಎಂದು ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 1,00,000 ಉದ್ಯೋಗಿಗಳನ್ನ ಮನೆಗೆ ಕಳುಹಿಸಿದ ಟೆಕ್ ಕಂಪನಿಗಳು.. ಇನ್ನೂ 3 ವರ್ಷ ಇದೇ ಕತೆ -ಎಚ್ಚರಿಕೆ..!
ಮುಂದಿನ ತಲೆಮಾರಿನ ಸಮೂಹ ಸಾರಿಗೆ ವ್ಯವಸ್ಥೆಯ ಬಗ್ಗೆ ನಿತಿನ್ ಗಡ್ಕರಿ ಮಾತನಾಡಿದ್ದಾರೆ. ದೇಶದಲ್ಲಿ ಎಲೆಕ್ಟ್ರಿಕ್ ಱಪಿಡ್ ಟ್ರಾನ್ಸ್ ಪೋರ್ಟ್ ಸಿಸ್ಟಮ್, ನಗರ ಪ್ರದೇಶದಲ್ಲಿ ಹೈಪರ್​ಲೂಪ್ ಸಾರಿಗೆ ವ್ಯವಸ್ಥೆ, ತಲುಪಲಾಗದ ಬೆಟ್ಟಗುಡ್ಡ ಪ್ರದೇಶಗಳಲ್ಲಿ ರೋಪ್ ವೇ, ಕೇಬಲ್ ಬಸ್​ಗಳನ್ನು ಅಳವಡಿಸುವ ಬಗ್ಗೆಯೂ ನಿತಿನ್ ಗಡ್ಕರಿ ಹೇಳಿದ್ದಾರೆ.
ಬೆಂಗಳೂರು- ಚೆನ್ನೈ ಮಧ್ಯೆ ಎಲೆಕ್ಟ್ರಿಕ್ ಱಪಿಡ್ ಟ್ರಾನ್ಸ್ ಪೋರ್ಟ್
ಈಗಾಗಲೇ ಮಹಾರಾಷ್ಟ್ರದ ನಾಗಪುರದಲ್ಲಿ ಎಲೆಕ್ಟ್ರಿಕ್ ಱಪಿಡ್ ಟ್ರಾನ್ಸ್​ಪೋರ್ಟ್ ಸಿಸ್ಟಮ್ ಜಾರಿಗೆ ಟೆಂಡರ್ ಕರೆಯಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. 135 ಸೀಟುಗಳ ಎಲೆಕ್ಟ್ರಿಕ್ ಬಸ್ ಅನ್ನು ಪೈಲಟ್ ಪ್ರಾಜೆಕ್ಟ್ ಆಗಿ ತಮ್ಮ ಲೋಕಸಭಾ ಕ್ಷೇತ್ರವಾದ ನಾಗಪುರದಲ್ಲಿ ಜಾರಿಗೊಳಿಸಲು ನಿತಿನ್ ಗಡ್ಕರಿ ಮುಂದಾಗಿದ್ದಾರೆ. ಬಸ್​ನಲ್ಲಿ ಎಕ್ಸಿಕ್ಯುಟೀವ್ ಕ್ಲಾಸ್ ಸೀಟುಗಳ ವ್ಯವಸ್ಥೆ, ಏರ್ ಕಂಡೀಷನ್ ವ್ಯವಸ್ಥೆ, ಏರ್ ಲೈನ್ಸ್ ಗಳಲ್ಲಿ ಇರುವ ಸೌಕರ್ಯಗಳನ್ನು ಬಸ್​ನಲ್ಲಿ ಒದಗಿಸುವ ಪ್ಲಾನ್ ಇದೆ. ಎಲೆಕ್ಟ್ರಿಕ್ ಱಪಿಡ್ ಟ್ರಾನ್ಸ್​ಪೋರ್ಟ್​ ಬಸ್, ಗಂಟೆಗೆ 120 ರಿಂದ 125 ಕಿಮೀ ವೇಗದಲ್ಲಿ ಸಂಚರಿಸಲಿದೆ. ನಿಗದಿಗಳ ನಿಲ್ದಾಣಗಳಲ್ಲಿ 30 ರಿಂದ 40 ನಿಮಿಷಕ್ಕೆ ಬಸ್ ಚಾರ್ಜ್ ಆಗಲಿದೆ.
ಸಂಪ್ರದಾಯಿಕ ಡೀಸೆಲ್ ಬಸ್​ಗಳಿಗಿಂತ ಎಲೆಕ್ಟ್ರಿಕ್ ಬಸ್​ಗಳ ಸಾಗಣೆ ವೆಚ್ಚ ಶೇ.30 ರಷ್ಟು ಕಡಿಮೆಯಾಗಲಿದೆ. ಜೊತೆಗೆ ಮಾಲಿನ್ಯ ಇರಲ್ಲ. ಎಲೆಕ್ಟ್ರಿಕ್ ಱಪಿಡ್ ಬಸ್ ಪ್ರಯೋಗ ಯಶಸ್ವಿಯಾದರೆ ದೇಶದ ಉಳಿದ ಮಹಾನಗರಗಳ ಮಧ್ಯೆಯೂ ಈ ಎಲೆಕ್ಟ್ರಿಕ್ ಱಪಿಡ್ ಬಸ್ ಜಾರಿಗೊಳಿಸುವ ಪ್ಲ್ಯಾನ್ ಇದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಎಲೆಕ್ಟ್ರಿಕ್ ಱಪಿಡ್ ಬಸ್ ಅನ್ನು ಬೆಂಗಳೂರು- ಚೆನ್ನೈ ನಗರಗಳ ಮಧ್ಯೆಯೂ ಜಾರಿಗೊಳಿಸುವ ಯೋಜನೆ ಇದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಇದನ್ನೂ ಓದಿ: ಜುಲೈ 11 ರಂದು ಬೆಂಗಳೂರಿನಲ್ಲಿ ಬಿಸೈಡ್ಸ್​​ನ ವಾರ್ಷಿಕ ಸೈಬರ್ ಭದ್ರತಾ ಸಮ್ಮೇಳನ
ದೆಹಲಿ- ಚಂಢೀಗಡ, ದೆಹಲಿ- ಡೆಹ್ರೂಡೂನ್, ದೆಹಲಿ- ಮೀರತ್, ದೆಹಲಿ- ಜೈಪುರ, ಮುಂಬೈ- ಪುಣೆ, ಮುಂಬೈ- ಔರಂಗಾಬಾದ್ ನಗರಗಳ ನಡುವೆ ಈ ಎಲೆಕ್ಟ್ರಿಕ್ ಱಪಿಡ್ ಟ್ರಾನ್ಸ್​ಪೋರ್ಟ್ ಸಿಸ್ಟಮ್ ಜಾರಿ ಮಾಡಲಾಗುತ್ತೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪಾಡ್ ಟ್ಯಾಕ್ಸಿ ಜಾರಿ ಎಂದ ನಿತಿನ್ ಗಡ್ಕರಿ
ಬೆಂಗಳೂರಿನಲ್ಲಿ ಪಾಡ್ ಟ್ಯಾಕ್ಸಿ ಜಾರಿಗೊಳಿಸುವ ಬಗ್ಗೆಯೂ ನಿತಿನ್ ಗಡ್ಕರಿ ಮಾತನಾಡಿದ್ದಾರೆ. ಪಾಡ್ ಟ್ಯಾಕ್ಸಿಗಳು ರಸ್ತೆಯ ಮೇಲೆ ಓಡಾಡಲ್ಲ. ಇವು ಆಗಸದಲ್ಲಿ ಕೇಬಲ್ ಮೂಲಕ ಚಲಿಸುವ ಟ್ಯಾಕ್ಸಿಗಳು. ಇವು ಸಣ್ಣ ಕಾರಿನ ರೀತಿಯಲ್ಲಿ ಇರುತ್ತವೆ. ಇವುಗಳಲ್ಲಿ ಒಂದರಲ್ಲಿ 4-6 ಜನರು ಕುಳಿತು ಪ್ರಯಾಣ ಮಾಡಬಹುದು. ಅಗಸದಲ್ಲಿ ಚಲಿಸುವುದರಿಂದ ಯಾವುದೇ ಟ್ರಾಫಿಕ್ ಜಾಮ್ ಇರಲ್ಲ. ಗಂಟೆಗೆ 60 ರಿಂದ 120 ಕಿಮೀ ವೇಗದಲ್ಲಿ ಪಾಡ್ ಟ್ಯಾಕ್ಸಿಗಳು ಅಗಸದಲ್ಲಿ ಸಂಚಾರ ಮಾಡುತ್ತವೆ. ಬೆಂಗಳೂರಿನ ಮೆಜೆಸ್ಟಿಕ್ ನಿಂದ ಬೆಂಗಳೂರಿನ ದೇವನಹಳ್ಳಿ ಏರ್​ಪೋರ್ಟ್ ಅನ್ನು ಗಂಟೆಗೆ 130 ಕಿಮೀ ವೇಗದಲ್ಲಿ ಸಂಚರಿಸಿದರೆ 30 ನಿಮಿಷಕ್ಕೆ ತಲುಪಬಹುದು. ಹೀಗಾಗಿ ಟ್ರಾಫಿಕ್ ಜಾಮ್​ನಿಂದ ಬೇಸತ್ತಿರುವ ಜನರಿಗೆ ಪಾಡ್ ಟ್ಯಾಕ್ಸಿಗಳು ರಿಲೀಫ್ ನೀಡಲಿವೆ. ಆದರೆ ಪಾಡ್ ಟ್ಯಾಕ್ಸಿಗಳು ಸಂಚಾರಕ್ಕೆ ದುಬಾರಿ. ಹಣ ಇರುವವರು ತುರ್ತು ಸಂದರ್ಭಗಳಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಪಾಡ್ ಟ್ಯಾಕ್ಸಿಯಲ್ಲಿ ಸಂಚಾರ ಮಾಡಬಹುದು.
ಇದನ್ನೂ ಓದಿ: AI ಬಳಕೆಯಿಂದ ಮಂಡೆ ಪೆಟ್ಟು.. ಸಂಶೋಧನೆಯಲ್ಲಿ ಆಘಾತಕಾರಿ ಸತ್ಯ ಬಯಲಿಗೆ..!
ಹೈಪರ್​ಲೂಪ್ ಸಾರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಸಂಶೋಧನೆ, ಟ್ರಯಲ್​​ ರನ್​ಗಳನ್ನು ನಡೆಸುತ್ತಿದೆ. ಚೆನ್ನೈ ಐಐಟಿಯಲ್ಲಿ ಹೈಪರ್​ಲೂಪ್ ಜಾರಿ ಬಗ್ಗೆ ಸಂಶೋಧನೆ, ಟ್ರಯಲ್ ರನ್ ನಡೆಯುತ್ತಿವೆ. ಭೂಮಿಯೊಳಗೆ ಹೈಪರ್​ಲೂಪ್ ಟ್ಯೂಬ್ ಸಂಚರಿಸಬೇಕು. ಇದು ಹೈಸ್ಪೀಡ್ ಬುಲೆಟ್ ಟ್ರೇನ್​ಗಿಂತ ಹೆಚ್ಚಿನ ವೇಗದಲ್ಲಿ ಸಂಚಾರ ಮಾಡುತ್ತದೆ. ಬುಲೆಟ್ ಟ್ರೇನ್ ಗಂಟೆಗೆ 350 ಕಿಮೀ ವೇಗದಲ್ಲಿ ಸಂಚರಿಸಿದರೆ ಹೈಪರ್​ ಲೂಪ್ ಗಂಟೆಗೆ 700 ರಿಂದ 1,200 ಕಿಮೀ ವೇಗದಲ್ಲಿ ಸಂಚರಿಸುತ್ತೆ. ಹೈಪರ್​ಲೂಪ್​ನಲ್ಲಿ ಗಂಟೆಗೆ ಕನಿಷ್ಠ 700 ಕಿಮೀ ವೇಗದಲ್ಲಿ ಸಂಚರಿಸಿದರೂ ಬೆಂಗಳೂರಿನಿಂದ ಚೆನ್ನೈಗೆ ಕೇವಲ 30 ನಿಮಿಷದಲ್ಲಿ ತಲುಪಬಹುದು.
ಫ್ಲೆಕ್ಸ್ ಇಂಧನ ಇಂಜಿನ್ ಅಭಿವೃದ್ಧಿ..!
ನಮ್ಮ ದೇಶದಲ್ಲಿ ಫ್ಲೆಕ್ಸ್ ಇಂಧನ ಇಂಜಿನ್ ವಾಹನಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ 11 ಕಂಪನಿಗಳು ಒಪ್ಪಿಕೊಂಡಿವೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ಟಾಟಾ, ಟೋಯೋಟಾ, ಹುಂಡೈ, ಮಹೀಂದ್ರ ಸೇರಿದಂತೆ 11 ಕಂಪನಿಗಳು ಫ್ಲೆಕ್ಸ್ ಇಂಧನ ಇಂಜಿನ್ ಅಭಿವೃದ್ಧಿಪಡಿಸಲು ಒಪ್ಪಿಕೊಂಡಿವೆ. ಫ್ಲೆಕ್ಸ್ ಇಂಧನ ಇಂಜಿನ್ ವಾಹನದಿಂದ ವಿದೇಶಗಳಿಂದ ಕಚ್ಚಾತೈಲ ಆಮದು ಅವಲಂಬನೆ ಕಡಿಮೆಯಾಗುತ್ತೆ. ಜೊತೆಗೆ ಪೆಟ್ರೋಲ್, ಡೀಸೆಲ್ ಬಳಕೆಯೂ ಕಡಿಮೆಯಾಗುತ್ತದೆ. ಫ್ಲೆಕ್ಸ್ ಇಂಧನ ಇಂಜಿನ್ ವಾಹನಗಳು ಒಂದಕ್ಕಿಂತ ಹೆಚ್ಚಿನ ಇಂಧನವನ್ನು ಬಳಸಿಕೊಂಡು ಚಲಿಸುತ್ತವೆ. ಫ್ಲೆಕ್ಸ್ ಇಂಧನ ಇಂಜಿನ್ ವಾಹನಗಳು ಪ್ರಾಥಮಿಕವಾಗಿ ಎಥೆನಾಲ್, ಮೆಥೆನಾಲ್ ಮಿಶ್ರಣದೊಂದಿಗೆ ಚಲಾಯಿಸುವ ಗುರಿ ಇದೆ ಅಥವಾ ಬಯೋಫ್ಯೂಯಲ್​ನಿಂದ ಚಲಾಯಿಸುವ ಉದ್ದೇಶವಿದೆ. ಫ್ಲೆಕ್ಸ್ ಇಂಧನ ಇಂಜಿನ್​ಗಳಲ್ಲಿ ಶೇ.85 ರಷ್ಟು ಎಥೆನಾಲ್ ಹಾಗೂ ಶೇ.15 ರಷ್ಟು ಪೆಟ್ರೋಲ್, ಡೀಸೆಲ್ ಬಳಸುವ ಗುರಿ ಇದೆ.
ರಸ್ತೆ, ಹೆದ್ದಾರಿ ಮೂಲಸೌಕರ್ಯ ಅಭಿವೃದ್ದಿಯಿಂದ ಆರ್ಥಿಕತೆಗೆ ಪುನಶ್ಚೇತನ ಸಿಗುವುದರ ಜೊತೆಗೆ ಆರ್ಥಿಕ ಬೆಳವಣಿಗೆಯಾಗುತ್ತೆ, ಉದ್ಯೋಗಗಳು ಸೃಷ್ಟಿಯಾಗುತ್ತವೆ.
ರಸ್ತೆ ಪಕ್ಕ 670 ಸೌಲಭ್ಯಗಳನ್ನು ಒದಗಿಸಲು ಈಗಾಗಲೇ ಅನುಮೋದನೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳ ಪಕ್ಕದಲ್ಲಿ ಪ್ರಯಾಣಿಕರು ಹಾಗೂ ಬಸ್ ಚಾಲಕರಿಗೆ ವರ್ಲ್ಡ್ ಕ್ಲಾಸ್ ಸೌಲಭ್ಯ ನೀಡಲಾಗುತ್ತೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ದೇಶದಲ್ಲಿ ಟ್ರೀ ಬ್ಯಾಂಕ್ ಜಾರಿಗೊಳಿಸುವ ಉದ್ದೇಶವೂ ಇದೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ. ದೇಶದಲ್ಲಿ 25 ಸಾವಿರ ಕಿ.ಮೀ. ದ್ವಿಪಥದ ರಸ್ತೆಗಳನ್ನು ನಾಲ್ಕು ಪಥದ ರಸ್ತೆಗಳಾಗಿ ಅಪ್​ಗ್ರೇಡ್ ಮಾಡಲಾಗುವುದು. ದಿನವೊಂದಕ್ಕೆ 100 ಕಿ.ಮೀ. ಹೆದ್ದಾರಿ ರಸ್ತೆಯ ನಿರ್ಮಾಣದ ಪ್ಲ್ಯಾನ್ ಇದೆ ಎಂದು ದೇಶದ ಹೆದ್ದಾರಿ ನಿರ್ಮಾಣದ ಗುರಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ರಿಷಬ್​ ಶೆಟ್ಟಿ ಅದ್ಧೂರಿ ಬರ್ತ್​ ಡೇ ಸೆಲೆಬ್ರೇಷನ್; ಟಾಪ್ 10 ಫೋಟೋಸ್ ಇಲ್ಲಿವೆ
ದೇಶದಲ್ಲಿ 2013-14 ರಲ್ಲಿ 91,287 ಕಿಮೀ ರಾಷ್ಟ್ರೀಯ ಹೆದ್ದಾರಿಯ ಉದ್ದ ಇತ್ತು. ಆದರೆ ಈಗ ಶೇ.60 ರಷ್ಟು ರಾಷ್ಟ್ರೀಯ ಹೆದ್ದಾರಿ ಉದ್ದ ಹೆಚ್ಚಾಗಿದೆ. ಈಗ ದೇಶದಲ್ಲಿ 1,46,204 ಕಿಮೀ ರಾಷ್ಟ್ರೀಯ ಹೆದ್ದಾರಿ ಅದೆ. ದೇಶದಲ್ಲಿ ನ್ಯಾಷನಲ್ ಹೈ-ಸ್ಪೀಡ್ ಕಾರಿಡಾರ್ ಉದ್ದ 2014 ರಲ್ಲಿ 93 ಕಿಮೀ ಇತ್ತು. ಈಗ 2,474 ಕಿ.ಮೀ. ಗೆ ಹೆಚ್ಚಾಗಿದೆ.
ದೇಶದಲ್ಲಿ ಹೆದ್ದಾರಿ ಪಕ್ಕದಲ್ಲಿ 20-25 ಕೋಟಿ ಗಿಡ, ಮರಗಳನ್ನು ನೆಡುವ ಪ್ಲಾನ್ ಇದೆ. ಜೊತೆಗೆ ಹಳೆಯ ಮರಗಳ ಬದಲಿಗೆ ಹೊಸ ಗಿಡಗಳನ್ನು ನೆಟ್ಟು ಬೆಳೆಸುವ ಪ್ಲಾನ್ ಇದೆ. ಒಂದು ಹಳೆಯ ಮರ ಕಡಿದರೆ 5 ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತೆ. ಟ್ರೀ ಬ್ಯಾಂಕ್ ಬಗ್ಗೆ ಪರಿಸರ ಇಲಾಖೆಯ ಜೊತೆಗೆ ಮಾತುಕತೆ ನಡೆಸಲಾಗುತ್ತೆ. ಒಪ್ಪಿಗೆ ಸಿಕ್ಕ ಬಳಿಕ ಪೂರ್ಣ ಪ್ರಮಾಣದಲ್ಲಿ ಕೆಲಸ ಆರಂಭವಾಗುತ್ತೆ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ