/newsfirstlive-kannada/media/post_attachments/wp-content/uploads/2025/03/Trump-Zelensky-clash.jpg)
ಹಿಂದೆಂದೂ ಕಾಣದಂತ ಘಟನೆಗೆ ಅಮೆರಿಕಾದ ವೈಟ್ ಹೌಸ್ ಸಾಕ್ಷಿಯಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ಅಕ್ಷರಶಃ ಹಾವು-ಮುಂಗುಸಿಯಂತೆ ಕಿತ್ತಾಡಿದ್ದಾರೆ. ಯಾವುದೋ ಟೀ ಅಂಗಡಿ ಮುಂದೆ ಕುಳಿತುಕೊಂಡು ಬೈದಾಡಿಕೊಳ್ಳುವಂತೆ ಶ್ವೇತಭವನದಲ್ಲಿ ಜಗಳವಾಡಿದ್ದಾರೆ. ಅಷ್ಟಕ್ಕೂ ಅತ್ತೆ-ಸೊಸೆಯಂತಿದ್ದ ರಷ್ಯಾ-ಅಮೆರಿಕಾ, ಇದೀಗ ಅಮ್ಮ-ಮಗಳ ರೀತಿ ಬದಲಾಗಿದ್ದೇಕೆ? ಉಕ್ರೇನ್ ಅಧ್ಯಕ್ಷನ ಮೇಲೆ ಡೊನಾಲ್ಡ್ ಟ್ರಂಪ್ಗೇಕೆ ಕೋಪ? ಅಮೆರಿಕಾ ಅಧ್ಯಕ್ಷರ ಬದಲಾವಣೆ ಬಳಿಕ ರಷ್ಯಾ-ಉಕ್ರೇನ್ ಯುದ್ಧವನ್ನ ನೋಡೋ ರೀತಿಯೇ ಬದಲಾಗಿದ್ದೇಕೆ? ಪುಟಿನ್ ಹಾಗೂ ಟ್ರಂಪ್ ಭಾಯಿ ಭಾಯಿ ಥರ ಒಬ್ಬರನ್ನೊಬ್ಬರು ಹೊಗಳ್ತಿರೋದೇಕೆ?-ಈ ಪ್ರತೀ ಪ್ರಶ್ನೆಗೂ ಉತ್ತರ ಪುಟಿನ್ ಹಾಗೂ ಝೆಲೆನ್ಸ್ಕಿ ಹಳೇ ದ್ವೇಷ.
ಕಳೆದ ಮೂರು ವರ್ಷದ ಹಿಂದೆ ಆರಂಭವಾದ ರಷ್ಯಾ- ಉಕ್ರೇನ್ ಯುದ್ದದಲ್ಲಿ ಅಮೆರಿಕ ಉಕ್ರೇನ್ ಪರ ಇತ್ತು. ಆದರೆ, ಇದೀಗ ಟ್ರಂಪ್ ರಷ್ಯಾ ಪರವಾಗಿ ನಿಂತಿದ್ದಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಮೊನ್ನೆ ಮೊನ್ನೆಯಷ್ಟೇ ವಿಶ್ವಸಂಸ್ಥೆಯಲ್ಲಿ ರಷ್ಯಾ ಪರ ಟ್ರಂಪ್ ಮತ ಹಾಕಿರೋದು. ಇದಲ್ಲದೇ ಮೊನ್ನೆಯಷ್ಟೇ ಪುಟಿನ್ಗೆ ಕರೆ ಮಾಡಿದ್ದ ಟ್ರಂಪ್ ವ್ಯಾಪಾರ ಸಂಬಂಧ ವೃದ್ಧಿಗೊಳಿಸೋ ಬಗ್ಗೆ ಮಾತುಕತೆ ನಡೆಸಿದ್ರು. ಇದುವರೆಗೂ ರಷ್ಯಾ ಅಧ್ಯಕ್ಷ ಪುಟಿನ್ ಶಾಂತಿ ಮಂತ್ರ ಜಪಿಸ್ಬೇಕು ಅಂತಿದ್ದ ಅಮೆರಿಕಾ, ಟ್ರಂಪ್ ಅಧ್ಯಕ್ಷರಾದ್ಮೇಲೆ ವರಸೆ ಬದಲಿಸಿದೆ. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಶಾಂತಿ ಮಂತ್ರ ಜಪಿಸ್ಬೇಕು ಅಂತಿದೆ. ಅರ್ಥಾತ್ ಜಗತ್ತಿನ ದೃಷ್ಟಿಯಲ್ಲೇ ಉಕ್ರೇನ್ ಶಾಂತಿಗೆ ಸಿದ್ದವಿಲ್ಲ ಅನ್ನೋ ಸಂದೇಶ ಸಾರಿ ಸಾರಿ ಹೇಳ್ತಿದೆ. ಇಂಥದ್ದೊಂದು ಮಂತ್ರಪಠಣೆ ಹಿಂದೆಯೂ ಟ್ರಂಪ್ ಲೆಕ್ಕಾಚಾರವಿದೆ.
ಟ್ರಂಪ್-ಪುಟಿನ್ ಉದ್ದೇಶ ಒಂದೇ
1. ನ್ಯಾಟೋ ಶಕ್ತಿ!
ಉಕ್ರೇನ್ ನ್ಯಾಟೋ ಪಟ್ಟಿಗೆ ಸೇರಬಾರದು ಅನ್ನೋದು ರಷ್ಯಾದ ಪ್ರಮುಖ ಉದ್ದೇಶ. ಹೀಗಾದ್ರೆ ಉಕ್ರೇನ್ಗೆ ನ್ಯಾಟೋ ದೇಶಗಳ ಪವರ್ ಸಿಗಲಿದೆ.. ಹೀಗಾಗಬಾರದು ಅನ್ನೋದು ಪುಟಿನ್ ಪ್ಲಾನ್. ಇದೇ ಕಾರಣಕ್ಕೆ ಯುದ್ಧ ಶುರುವಾಗಿರೋದು. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಟ್ರಂಪ್ ಉದ್ದೇಶವೂ ಇದೇ ಮಾದರಿಯಲ್ಲಿದೆ. ಅಮೆರಿಕಾ ಫಸ್ಟ್ ಅನ್ನೋ ಮೈಂಡ್ಸೆಟ್ ಹೊಂದಿರೋ ಟ್ರಂಪ್ಗೆ ಅವರ ದೇಶದ ಹಣ ಯೂರೋಪಿಯನ್ ದೇಶಗಳ ಜಗಳದ ನಡುವೆ ವ್ಯಯಿಸೋದು ಇಷ್ಟವಿಲ್ಲ. ಇದೇ ಕಾರಣಕ್ಕೆ ಉಕ್ರೇನ್ ನ್ಯಾಟೋಗೆ ಸೇರ್ಪಡೆ ಮಾಡೋ ಇಂಗಿತ ಟ್ರಂಪ್ಗಿಲ್ಲ.
2. ಇಂಧನದ ‘ಪವರ್’
ರಷ್ಯಾ ಹಾಗೂ ಅಮೆರಿಕಾ ಎರಡೂ ದೇಶಗಳ ಕಣ್ಣು ಇಂಧನ ಶಕ್ತಿಯ ಮೇಲಿದೆ. ರಷ್ಯಾದ ಆರ್ಥಿಕತೆ ತೈಲದ ರಫ್ತಿನ ಮೇಲೆ ನಡೆಯುತ್ತೆ. ಇತ್ತ ಟ್ರಂಪ್ಗೆ ಕೂಡ ತೈಲ ಬೆಲೆಯನ್ನ ನಾನೇ ಕಂಟ್ರೋಲ್ ಮಾಡಬೇಕು ಅನ್ನೋ ಮಹಾದಾಸೆ ಇದೆ. ಈ ಕಾರಣಕ್ಕೆ ರಷ್ಯಾ ಜೊತೆಗೆ ಸ್ನೇಹ ಸಂಬಂಧ ಚೆನ್ನಾಗಿ ಇಟ್ಟುಕೊಳ್ಳೋದು ಟ್ರಂಪ್ಗೆ ಒಂದು ಲೆಕ್ಕದಲ್ಲಿ ಮಹತ್ವದ್ದಾಗಿದೆ.
3. ವಿಲನ್ ಝೆಲೆನ್ಸ್ಕಿ
ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲೆನ್ಸ್ಕಿ ರಷ್ಯಾದ ಪುಟಿನ್ ಪಾಲಿಗೆ ಸದ್ಯದ ಪರಮ ಶತ್ರು ಅಂದ್ರೆ ತಪ್ಪಾಗಲ್ಲ. ಆದ್ರೆ ಇದೇ ಝೆಲೆನ್ಸ್ಕಿ, ಡೊನಾಲ್ಡ್ ಟ್ರಂಪ್ಗೂ ಕೂಡ ಅಘೋಷಿತ ವಿರೋಧಿ. ಅರೆರೆ.. ಅಮೆರಿಕಾದ ಟ್ರಂಪ್ಗೂ, ಉಕ್ರೇನ್ ಅನ್ನೋ ಪುಟ್ಟ ದೇಶದ ಝೆಲೆನ್ಸ್ಕಿಗೂ ಏನು ದ್ವೇಷ ಅಂತೀರಾ? ಈ ಕೋಪತಾಪದ ಹಿಂದೆ ಒಂದು ದೊಡ್ಡ ಕಥೆಯೇ ಇದೆ.
ಝೆಲೆನ್ಸ್ಕಿ V/S ಟ್ರಂಪ್
2020ರಲ್ಲಿ ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಸೋಲೋದರ ಹಿಂದೆಯೂ ಉಕ್ರೇನ್ ಅಧ್ಯಕ್ಷರ ಪರೋಕ್ಷ ಪಾತ್ರ ಇತ್ತು ಅನ್ನೋದು ಅದೆಷ್ಟೋ ಜನರಿಗೆ ಗೊತ್ತಿರಲಿಕ್ಕಿಲ್ಲ. 2019ರ ಸಮಯ ಅದು.. ಟ್ರಂಪ್ ಮುಂಬರೋ ಎಲೆಕ್ಷನ್ಗೆ ತಯಾರಿ ನಡೆಸ್ತಿದ್ರು. ಆಗ ಟ್ರಂಪ್ ಎದುರಾಳಿ ಆಗಿದ್ದಿದ್ದು ಜೋ ಬೈಡನ್. ಚುನಾವಣಾ ತಂತ್ರಗಳನ್ನ ಹೆಣೆಯುವಲ್ಲಿ ನಿಸ್ಸೀಮರಾಗಿದ್ದ ಟ್ರಂಪ್ 2019ರ ಜುಲೈ 25ರಂದು ಝೆಲೆನ್ಸ್ಕಿಗೆ ಒಂದು ಫೋನ್ ಕಾಲ್ ಮಾಡ್ತಾರೆ. ಆಗ ಒಂದು ಇಂಪಾರ್ಟೆಂಟ್ ಚರ್ಚೆ ನಡೆದಿತ್ತು. ಈ ಮಾತುಕತೆ ಅರ್ಥ ಆಗ್ಬೇಕು ಅಂದ್ರೆ 2016ರ ಒಂದಷ್ಟು ಚುನಾವಣಾ ವಿಚಾರಗಳನ್ನ ಗಮನಿಸಬೇಕು.
ಇದನ್ನೂ ಓದಿ: ಜನರ ಜೀವದ ಜತೆ ಆಟ ಆಡಬೇಡ.. ಮಾತಾಡಲು ಬಂದ ಅಧ್ಯಕ್ಷನಿಗೆ ಡೊನಾಲ್ಡ್ ಟ್ರಂಪ್ ಬಿಗ್ ವಾರ್ನಿಂಗ್!
2016ರಲ್ಲಿ ಟ್ರಂಪ್ ಅಮೆರಿಕಾ ಎಲೆಕ್ಷನ್ ಗೆಲ್ಲೋದಕ್ಕೆ ರಷ್ಯಾ ಪರೋಕ್ಷವಾಗಿ ಸಹಾಯ ಮಾಡಿದ್ದ ಆರೋಪ ಕೇಳಿ ಬಂದಿತ್ತು. ವಿಚಾರಣೆ ವೇಳೆ ಟ್ರಂಪ್ ಎದುರಾಳಿಯಾಗಿದ್ದ ಡೆಮಕ್ರಾಟಿಕ್ ಪಕ್ಷದವರ ಇ-ಮೇಲ್ಗಳನ್ನ ರಷ್ಯಾದ ಸೈಬರ್ ಪಡೆಗಳು ಹ್ಯಾಕ್ ಮಾಡಿರೋದು ಪತ್ತೆಯಾಗಿತ್ತು. ಆದ್ರೆ ಇದನ್ನ ಒಪ್ಪಿಕೊಳ್ಳದ ಟ್ರಂಪ್, ರಷ್ಯಾದ ಹೆಸರನ್ನ ಹಾಳು ಮಾಡೋದಕ್ಕೆ ಉಕ್ರೇನ್ ಈ ಕೆಲಸ ಮಾಡಿದೆ ಅಂತಾ ವಾದಿಸಿದ್ರು. ಇದನ್ನ 2020ರ ಚುನಾವಣೆಯಲ್ಲಿ ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದ ಟ್ರಂಪ್, ಎಲೆಕ್ಷನ್ ತಯಾರಿ ನಡುವೆ ಝೆಲೆನ್ಸ್ಕಿಗೆ ಕಾಲ್ ಮಾಡಿದ್ದರು. ಈ ಹ್ಯಾಕಿಂಗ್ಗೆ ಸಂಬಂಧಪಟ್ಟಂತೆ ಒಂದು ತನಿಖೆ ನಡೆಸಿ, ಇದನ್ನ ಉಕ್ರೇನ್ನವರೇ ಮಾಡಿದ್ದಾಗಿ ಬಿಂಬಿಸಿ.. ಹೀಗೆ ಮಾಡಿದ್ರೆ ನಿಮ್ಮೊಂದಿಗೆ ನಾವಿದ್ದೇವೆ. ಮುಂದೆ ಇರ್ತೇವೆ ಅಂತಾ ಟ್ರಂಪ್ ಭರವಸೆ ನೀಡಿದ್ರು. ಇದರ ಜೊತೆಗೆ ಆಗ ಎದುರಾಳಿಯಾಗಿದ್ದ ಜೋ ಬೈಡನ್ ಪುತ್ರ ಹಂಟರ್ ಬೈಡನ್ ವಿರುದ್ಧ ತನಿಖೆ ಮಾಡುವಂತೆಯೂ ಮನವಿ ಮಾಡಿದ್ರು. ಉಕ್ರೇನ್ನ ಪ್ರೈವೇಟ್ ಕಂಪನಿಯೊಂದರ ನಿರ್ದೇಶಕರಾಗಿದ್ದ ಹಂಟರ್ ಬೈಡನ್ರನ್ನ ಯಾವುದಾದರೊಂದು ಪ್ರಕರಣದಲ್ಲಿ ಸಿಲುಕಿಸಿದ್ರೆ, ಬೈಡನ್ ವಿರುದ್ಧ ಚುನಾವಣೆಯಲ್ಲಿ ಅಸ್ತ್ರವಾಗಿಸಿಕೊಳ್ಳಬಹುದು ಅನ್ನೋದು ಟ್ರಂಪ್ ಲೆಕ್ಕಾಚಾರವಾಗಿತ್ತು. ಈ ಬಗ್ಗೆ ನಡೆದ ಸಂಭಾಷಣೆಯಲ್ಲಿ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಟ್ರಂಪ್ ಬೇಡಿಕೆಗಳಿಗೆ ಓಕೆ ಅಂದಿದ್ರಂತೆ.
ಉಲ್ಟಾ ಹೊಡೆದ ಝೆಲೆನ್ಸ್ಕಿ!
ಫೋನ್ ಕರೆಯಲ್ಲಿ ತಲೆ ಅಲ್ಲಾಡಿಸಿದ್ದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಬಳಿಕ ಟ್ರಂಪ್ ವಿರುದ್ಧವೇ ಉಲ್ಟಾ ಹೊಡೆದಿದ್ರು. ಇವರಿಬ್ಬರ ನಡುವೆ ನಡೆದ ದೂರವಾಣಿ ಸಂಭಾಷಣೆ ಏನಾಗಿತ್ತು ಅನ್ನೋ ಮಾಹಿತಿ ಸೋರಿಕೆಯಾಯ್ತು. ವಿಶ್ವಾದ್ಯಂತ ಟ್ರಂಪ್ ಸೀಕ್ರೇಟ್ ಪ್ಲಾನ್ ಬಗ್ಗೆ ವ್ಯಾಪಕ ಚರ್ಚೆಯಾಯ್ತು. ಅಮೆರಿಕಾದ ಎಲೆಕ್ಷನ್ನಲ್ಲಿ ವಿದೇಶಿ ಶಕ್ತಿಗಳನ್ನ ಬಳಸಿಕೊಂಡ ಬಗ್ಗೆ ಟ್ರಂಪ್ ವಿರುದ್ಧ ದೊಡ್ಡ ಪ್ರಮಾಣದಲ್ಲಿ ಖಂಡನೆ ವ್ಯಕ್ತವಾಯ್ತು. ಬಳಿಕ ಎದುರಾದ 2020ರ ಚುನಾವಣೆಯಲ್ಲಿ ಟ್ರಂಪ್ ಸೋಲೋದಕ್ಕೆ ಇದು ಕೂಡ ಒಂದು ಕಾರಣ. ಈ ಫೋನ್ ಸಂಭಾಷಣೆಯನ್ನ ಬೇಕಂತಲೇ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಲೀಕ್ ಮಾಡಿ, ಬೈಡನ್ ಪರ ನಿಂತಿದ್ದಾರೆ ಅಂತಾ ಭಾವಿಸಿದ ಟ್ರಂಪ್ ಕೋಪದಲ್ಲಿ ಕೆಂಡವಾಗಿದ್ದರು. ಕಳೆದ 4 ವರ್ಷದಿಂದ ಅಧಿಕಾರ ಇಲ್ಲದೇ ಕುಳಿತಿದ್ದ ಟ್ರಂಪ್.. ಈಗ ಅಧ್ಯಕ್ಷ ಪಟ್ಟ ಸಿಗ್ತಿದ್ದಂತೆ ಉಕ್ರೇನ್ ಅಧ್ಯಕ್ಷನ ವಿರುದ್ಧ ಬುಸುಗುಡೋದಕ್ಕೆ ಶುರು ಮಾಡಿದ್ದಾರೆ. ಹಾವಿನ ದ್ವೇಷ 12 ವರ್ಷವಾದ್ರೆ.. ಟ್ರಂಪ್ ದ್ವೇಷ 6 ವರ್ಷ ಅಂತಲೇ ಝೆಲೆನ್ಸ್ಕಿ ಹಾಗೂ ಟ್ರಂಪ್ ನಡುವಿನ ಸಂಘರ್ಷವನ್ನ ವಿಶ್ಲೇಷಿಸಲಾಗ್ತಿದೆ.
ಟ್ರಂಪ್-ಪುಟಿನ್ ಕುಚಿಕು ಕುಚಿಕು
ಅಮೆರಿಕಾ ಹಾಗೂ ರಷ್ಯಾ ನಡುವಿನ ಕೋಲ್ಡ್ ವಾರ್ನಲ್ಲಿ ಏನೇನಾಯ್ತು ಅನ್ನೋದು ಇಡೀ ಜಗತ್ತಿಗೆ ಗೊತ್ತು. ಒಬ್ಬರನ್ನ ಕಂಡ್ರೆ ಮತ್ತೊಬ್ಬರು ಧಗಧಗ ಅಂತಿದ್ದವರು ಇಂದು ಐಸ್ಪೈಸ್ ಆಡವಷ್ಟು ಟ್ರಂಪ್-ಪುಟಿನ್ ಕ್ಲೋಸ್ ಆಗಿದ್ದಾರೆ. ಇದಕ್ಕೆ ಕಾರಣ ಮತ್ತದೇ ಡೊನಾಲ್ಡ್ ಟ್ರಂಪ್ ಗೇಮ್ ಪ್ಲಾನ್.. ಇವತ್ತು ಅಮೆರಿಕಾಗೆ ಟಕ್ಕರ್ ಕೊಡೋ ಮಟ್ಟಿಗೆ ಬೆಳೆದು ನಿಂತಿರೋ ಇನ್ನೊಂದು ರಾಷ್ಟ್ರ ಅಂದ್ರೆ ಅದು ಚೀನಾ.. ಹೀಗಾಗಿ ಚೀನಾ ವಿರುದ್ಧ ತೊಡೆ ತಟ್ಟೋದು ಹಾಗೂ ಇಂಡೋ ಫೆಸಿಫಿಕ್ ವಲಯದಲ್ಲಿ ಪ್ರಾಬಲ್ಯ ಸಾಧಿಸೋದು ಟ್ರಂಪ್ರ ಪ್ರಮುಖ ಉದ್ದೇಶ.. ಯೋರೋಪ್ ದೇಶಗಳ ಜಗಳದಲ್ಲಿ ಸುಮ್ಮನೆ ಮೂಗು ತೂರಿಸಿ ಸಮಯ ಹಾಗೂ ಹಣ ವ್ಯರ್ಥ ಮಾಡೋ ಬದಲು ಇಂಡೋ ಫೆಸಿಫಿಕ್ ಭಾಗದ ಮೇಲೆ ಹೆಚ್ಚು ಗಮನಹರಿಸೋದಕ್ಕೆ ಟ್ರಂಪ್ ನಿರ್ಧರಿಸಿದ್ದಾರಂತೆ.
ಪುಟಿನ್ ದ್ವೇಷದಿಂದ ಟ್ರಂಪ್ಗೆ ಲಾಭವೇನೂ ಇಲ್ಲ.. ಆದ್ರೆ ಇದೇ ಪುಟಿನ್ ಚೀನಾಗೆ ಹತ್ತಿರವಾದ್ರೆ, ಅಮೆರಿಕಾ ಸವಾಲಿನ ಪ್ರಮಾಣ ಹೆಚ್ಚಾಗುತ್ತೆ. ಈ ನಡುವೆ ಬ್ರಿಕ್ಸ್ ಒಕ್ಕೂಟದಲ್ಲಿ ಡಾಲರ್ಗೆ ಪರ್ಯಾಯವಾಗಿ ಹೊಸ ಕರೆನ್ಸಿ ತರೋದಕ್ಕೆ ಚರ್ಚೆ ನಡೆದಿರೋದು ಟ್ರಂಪ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದೆಲ್ಲ ಸಮಸ್ಯೆಗಳ ನಡುವೆ ಸುಖಾಸುಮ್ಮನೇ ರಷ್ಯಾ ವಿರುದ್ಧ ದ್ವೇಷ ಸಾಧನೆ ಯಾಕೆ ಅನ್ನೋದು ಟ್ರಂಪ್ ಲೆಕ್ಕಾಚಾರ. ಅಲ್ಲದೇ ಪುಟಿನ್ ಸಹಾಯದೊಂದಿಗೆ ತಮ್ಮ ದ್ವೇಷಿ ಝೆಲೆನ್ಸ್ಕಿ ಬಗ್ಗು ಬಡಿದು, ಉಕ್ರೇನ್ನ ಮೇಲೆ ಪ್ರಾಬಲ್ಯ ಸಾಧಿಸಬಹುದು. ಅಲ್ಲದೇ ಪುಟಿನ್ ಜೊತೆಗೂಡಿ ಇಂಧನ ಕ್ಷೇತ್ರದಲ್ಲಿ ಬಲ ಹಿಗ್ಗಿಸಿಕೊಳ್ಳಬಹುದು. ಯೂರೋಪ್ ಜಗಳದಿಂದ ದೂರ ನಿಂತು ಚೀನಾವನ್ನ ಹಿಮ್ಮೆಟ್ಟಿಸುವತ್ತ ಹೆಚ್ಚು ಕೇಂದ್ರೀಕೃತವಾಗಬಹುದು. ಈ ಮೂಲಕ ಮತ್ತೆ ದೊಡ್ಡಣ್ಣನಾಗಿ ಅಮೆರಿಕಾ ಮೆರೆಯಬೇಕು ಅನ್ನೋದು ಟ್ರಂಪ್ ಮಹಾದಾಸೆ. ಇದೆಲ್ಲದರ ಪರಿಣಾಮವೇ ವೈಟ್ಹೌಸ್ನಲ್ಲಿ ನಡೆದಿರೋ ಟ್ರಂಪ್ ಹಾಗೂ ಝೆಲೆನ್ಸ್ಕಿ ಟಾಕ್ ವಾರ್ ಅನ್ನೋದು ರಾಜತಾಂತ್ರಿಕ ವಿಶ್ಲೇಷಕರ ಅಭಿಪ್ರಾಯ.. ಕಾರಣಗಳು ಅದೇನೇ ಇರಲಿ ಈ ಇಬ್ಬರ ಕಿತ್ತಾಟದಿಂದ ಪುಟಿನ್ ಖುಷಿಯಾಗಿರೋದಂತೂ ನಿಜ.
ವಿಶೇಷ ವರದಿ: ಪ್ರಿಯತೋಷ್.ಎಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ