/newsfirstlive-kannada/media/post_attachments/wp-content/uploads/2025/07/TMK_SHUBHA_KALYANA.jpg)
ಬೆಂಗಳೂರು ಐಟಿ ಸಿಟಿ, ಸಿಲಿಕಾನ್ ಸಿಟಿಯಾಗಿ ಜಗತ್ತಿನಲ್ಲಿ ಹೆಸರು ಗಳಿಸಿದೆ. ಜಗತ್ತಿನ ಖ್ಯಾತನಾಮ ಐಟಿ ಕಂಪನಿಗಳೆಲ್ಲಾ ಬೆಂಗಳೂರಿನಲ್ಲಿವೆ. ಬೆಂಗಳೂರು ನಗರ ಭಾರತದ ಸಿಲಿಕಾನ್ ವ್ಯಾಲಿಯಾಗಿ ಹೆಸರು ಗಳಿಸಿದೆ. ಆದರೇ, ಬೆಂಗಳೂರಿನಲ್ಲಿ ಈಗ ಐಟಿ ಕಂಪನಿಗಳಿಂದಾಗಿ ಕೆಲ ಒತ್ತಡ, ಸಮಸ್ಯೆಗಳು ಸೃಷ್ಟಿಯಾಗಿವೆ. ಬೆಂಗಳೂರಿನಲ್ಲಿ ಭಾರಿ ಟ್ರಾಫಿಕ್ ಜಾಮ್, ಮನೆ ಬಾಡಿಗೆ ದರ ದುಬಾರಿ, ಗಗನಕ್ಕೇರಿರುವ ಭೂಮಿಯ ಬೆಲೆ, ಸದ್ದಿಲ್ಲದೇ ಹೆಚ್ಚಾಗುತ್ತಿರುವ ವಾಯು ಮಾಲಿನ್ಯ ಸೇರಿದಂತೆ ಕೆಲ ಸಮಸ್ಯೆಗಳನ್ನು ಬೆಂಗಳೂರು ಎದುರಿಸುತ್ತಿದೆ.
ಈ ಸಮಸ್ಯೆಗಳಿಂದಾಗಿ ಬೆಂಗಳೂರಿನ ಮೇಲಿನ ಒತ್ತಡ ತಗ್ಗಿಸಲು ಬೆಂಗಳೂರಿನಲ್ಲಿರುವ ಐಟಿ ಕಂಪನಿಗಳನ್ನು ಅಕ್ಕಪಕ್ಕದ ನಗರಗಳಿಗೆ ಶಿಫ್ಟ್ ಮಾಡುವುದು ಕೂಡ ಒಂದು ಉತ್ತಮ ಪರಿಹಾರ. ಕರ್ನಾಟಕದ ಟೈಯರ್ 2 ಮತ್ತು ಟೈಯರ್ 3 ಸಿಟಿಗಳಲ್ಲೂ ಐಟಿ ಕಂಪನಿಗಳು ನೆಲೆಯೂರಿದರೇ, ಬೆಂಗಳೂರಿನ ಮೇಲಿನ ಒತ್ತಡ ಕಡಿಮೆಯಾಗುತ್ತೆ. ಟೈಯರ್ 2 ಮತ್ತು ಟೈಯರ್ 3 ಸಿಟಿಗಳ ಬೆಳವಣಿಗೆಗೂ ಕಾರಣವಾಗುತ್ತೆ.
ಏನೇನು ಸೌಲಭ್ಯ ನೀಡಲಾಗುವುದು?
ಈ ನಿಟ್ಟಿನಲ್ಲಿ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ತುಮಕೂರು ಜಿಲ್ಲಾಡಳಿತ ಪ್ರಯತ್ನ ನಡೆಸಿದ್ದಾರೆ. ಬೆಂಗಳೂರಿನ ಐಟಿ ಹಾಗೂ ಬಿಟಿ ಕಂಪನಿಗಳನ್ನು ತುಮಕೂರಿಗೆ ರತ್ನಗಂಬಳಿ ಹಾಸಿ ಸ್ವಾಗತ ಕೋರಿದ್ದಾರೆ. ತುಮಕೂರಿನಲ್ಲಿ ಐಟಿ ಹಾಗೂ ಬಿಟಿ ಕಂಪನಿಗಳು ನೆಲೆಯೂರಲು ಎಲ್ಲ ಸೌಲಭ್ಯ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಬೆಂಗಳೂರಿನ ಐಟಿ ಕಂಪನಿಗಳು ಹಾಗೂ ಉದ್ಯಮಿಗಳ ಜೊತೆಗೆ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಭೆ ನಡೆಸಿ, ಮಾತುಕತೆ ನಡೆಸಿದ್ದಾರೆ.
ಸದ್ಯ ತುಮಕೂರು ನಗರದಿಂದ 4 ಸಾವಿರ ಮಂದಿ ಐಟಿ ಕಂಪನಿಗಳ ಉದ್ಯೋಗಿಗಳು ನಿತ್ಯ 70 ಕಿಮೀ ದೂರದ ಬೆಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಈ ಐಟಿ ಕಂಪನಿಗಳನ್ನು ಬೆಂಗಳೂರಿನಿಂದ ತುಮಕೂರಿಗೆ ತಂದರೇ, ಐಟಿ ಕಂಪನಿಗಳ ಉದ್ಯೋಗಿಗಳು ಬೆಂಗಳೂರಿಗೆ ಹೋಗುವುದು ತಪ್ಪುತ್ತೆ. ಉದ್ಯೋಗಿಗಳ ವರ್ಕ್ ಮತ್ತು ಲೈಫ್ ಬ್ಯಾಲೆನ್ಸ್ ಮಾಡಲು ಸಹಾಯಕವಾಗುತ್ತೆ. ಜೊತೆಗೆ ಫ್ಯಾಮಿಲಿ ಲೈಫ್ಗೆ ಸಪೋರ್ಟ್ ಮಾಡಲು ಸಹಾಯಕವಾಗುತ್ತೆ ಎಂದು ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದ್ದಾರೆ.
ಸ್ಥಳೀಯ ವಿದ್ಯಾರ್ಥಿಗಳಿಗೂ ಅನುಕೂಲ
ಜೊತೆಗೆ ತುಮಕೂರಿಗೆ ಐಟಿ ಕಂಪನಿಗಳು ಬಂದರೇ, ಬಿಎಸ್ಸಿ, ಬಿಇ, ಹಾಗೂ ಎಂಬಿಎ, ಎಂಸಿಎ ಪದವಿ ಹೊಂದಿರುವ ಸ್ಥಳೀಯ ಪದವೀಧರರಿಗೂ ಅವಕಾಶಗಳ ಬಾಗಿಲು ತೆರೆದುಕೊಳ್ಳುತ್ತವೆ. ಜೊತೆಗೆ ಸ್ಥಳೀಯವಾಗಿ ರಸ್ತೆ, ವಿದ್ಯುತ್ ಸರಬರಾಜು, ಡಿಜಿಟಲ್ ಕನೆಕ್ಟ್ ಸೇರಿದಂತೆ ಮೂಲಸೌಕರ್ಯಗಳು ಕೂಡ ಪ್ರಗತಿಯಾಗುತ್ತವೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದ್ದಾರೆ.
ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಈ ಪ್ರಯತ್ನವನ್ನು ದೀರ್ಘಾವಧಿಯ ಕ್ರಮವಾಗಿ ನೋಡಬೇಕಾಗುತ್ತೆ. ದೀರ್ಘಾವಧಿಯಲ್ಲಿ ತುಮಕೂರಿನಲ್ಲಿ ಆರ್ಥಿಕತೆ ಹಾಗೂ ಶೈಕ್ಷಣಿಕ ಪ್ರಗತಿಯಾಗಲು ಕೂಡ ಈ ಕ್ರಮದಿಂದ ಸಹಾಯಕವಾಗುತ್ತೆ. ತುಮಕೂರು ನಗರದಲ್ಲಿ ಈಗಾಗಲೇ ಆರೇಳು ಇಂಜಿನಿಯರಿಂಗ್ ಕಾಲೇಜುಗಳಿವೆ. 2 ಮೆಡಿಕಲ್ ಕಾಲೇಜುಗಳಿವೆ. ತುಮಕೂರಿನ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು ಐಟಿ ಗೆ ಪೋಕಸ್ ಮಾಡಿ, ಕೋರ್ಸ್ಗಳನ್ನು ಆರಂಭಿಸಬಹುದು. ಇದರಿಂದ ಕೌಶಲ್ಯಾಧಾರಿತ ಶಿಕ್ಷಣ ಹಾಗೂ ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಸಿಗಲಿದೆ. ಇದರಿಂದ ಮುಂದಿನ ಒಂದು ದಶಕದಲ್ಲಿ ತುಮಕೂರು ಅನ್ನು ಐಟಿ ಸಿಟಿಯಾಗಿ ಬೆಳೆಸಲು ಗ್ರೌಂಡ್ ವರ್ಕ್ ಮಾಡಿದಂತೆ ಆಗಲಿದೆ. ಸೈಬರ್ ಜಾಗೃತಿ ಹಾಗೂ ಉದ್ಯೋಗ ಸೃಷ್ಟಿಗೆ ಒತ್ತು ಸಿಗುತ್ತೆ.
ತುಮಕೂರಲ್ಲಿ ಸಮಸ್ಯೆ ಇರಲ್ಲ, ಕೆಲಸ ವೇಗದಲ್ಲಿ ಇರುತ್ತೆ
ಈಗಾಗಲೇ, 36 ಮಂದಿಯ ಐಟಿ ಉದ್ಯಮಿಗಳ ನಿಯೋಗ ತುಮಕೂರಿಗೆ ಭೇಟಿ ನೀಡಿ, ತುಮಕೂರು ನಗರ ಹಾಗೂ ಜಿಲ್ಲೆಯಲ್ಲಿರುವ ಮೂಲಸೌಕರ್ಯದ ವೀಕ್ಷಣೆ ಮಾಡಿದೆ. ತುಮಕೂರು ನಗರದ ಮಹಾತ್ಮ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನಲ್ಲಿ 2 ಸಾವಿರ ಚದರ ಅಡಿ ಜಾಗ ಲಭ್ಯ ಇದೆ. ಜೊತೆಗೆ ತುಮಕೂರು ನಗರದ ಬಾಲಗಂಗಾಧರ ಸ್ವಾಮೀಜಿ ಸರ್ಕಲ್ ಪಕ್ಕದ ಜಿಲ್ಲಾ ಲೈಬ್ರರಿ ಕಟ್ಟಡದಲ್ಲೂ ಐಟಿ ಕಂಪನಿಗಳಿಗೆ ಸೂಕ್ತವಾಗುವ ಸ್ಥಳಾವಕಾಶ ಇದೆ. ಉದ್ಯಮಿಗಳ ನಿಯೋಗವು ಜಿಲ್ಲಾಡಳಿತದ ಕ್ರಮವನ್ನು ಬೆಂಬಲಿಸುವ ಮಾತು ಕೊಟ್ಟಿದೆ.
ಡಿಜಿಟಲ್ ಕ್ಷೇತ್ರದ ಪ್ರವೇಶವು ಈಗ ಲಕ್ಸುರಿಯಾಗಿ ಉಳಿದಿಲ್ಲ. ಆದರೇ, ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗೆ ಮೂಲಭೂತ ಅಗತ್ಯತೆಯಾಗಿದೆ ಎಂದು ತುಮಕೂರಿಗೆ ಭೇಟಿ ನೀಡಿದ್ದ ಐಟಿ ಉದ್ಯಮಿಯೊಬ್ಬರು ಹೇಳಿದ್ದಾರೆ.
ಬೆಂಗಳೂರಿಗೆ ಪರ್ಯಾಯ ನಗರ ತುಮಕೂರು
ಜೊತೆಗೆ ಮಹಿಳಾ ಸಶಕ್ತೀಕರಣವೂ ಸಾಧ್ಯ. ಇನ್ನೂ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಟ್ರಾಫಿಕ್ ಜಾಮ್, ಕಚೇರಿ ಬಾಡಿಗೆ ದರ ದುಬಾರಿಯಾಗುತ್ತಿರುವುದು, ರಸ್ತೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲಸೌಕರ್ಯಗಳ ಕೊರತೆಯಿಂದ ಐಟಿ ಉದ್ಯಮಿಗಳು ಕೂಡ ಬೆಂಗಳೂರಿಗೆ ಪರ್ಯಾಯವಾಗುವ ನಗರ, ಸ್ಥಳದ ಹುಡುಕಾಟದಲ್ಲಿದ್ದಾರೆ. ಬೆಂಗಳೂರಿಗೆ ಪರ್ಯಾಯವಾಗುವತ್ತ ಈಗ ಪಕ್ಕದಲ್ಲೇ ಇರೋ ತುಮಕೂರು ನಗರ ಹಾಗೂ ಜಿಲ್ಲೆ ಆಸಕ್ತಿ ವಹಿಸಿರೋದು ತುಮಕೂರು ಜಿಲ್ಲೆಯ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದು. ರಾಷ್ಟ್ರ ರಾಜಧಾನಿ ದೆಹಲಿ ಐಟಿ ಸಿಟಿಯಾಗಿ ಬೆಳೆಯಲಿಲ್ಲ. ಆದರೇ, ದೆಹಲಿ ಪಕ್ಕದ ಉತ್ತರ ಪ್ರದೇಶದ ನೋಯ್ಡಾ ನಗರ ಹಾಗೂ ಹರಿಯಾಣದ ಗುರುಗ್ರಾಮ ನಗರಗಳು ಐಟಿ ಸಿಟಿಯಾಗಿ ಬೆಳೆದವು. ಈಗ ತುಮಕೂರು ನಗರಕ್ಕೂ ನೋಯ್ಡಾ, ಗುರುಗ್ರಾಮದಂತೆ ಬೆಳೆಯುವ ಅವಕಾಶ ಇದೆ. ಈ ಅವಕಾಶವನ್ನು ಬಾಚಿಕೊಳ್ಳುವ ಪ್ರಯತ್ನವನ್ನು ತುಮಕೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತ ನಡೆಸುತ್ತಿರುವುದು ಒಳ್ಳೆಯ ಬೆಳವಣಿಗೆ.
ತುಮಕೂರಿನಲ್ಲಿ ಬೆಂಗಳೂರಿನಂತೆ ಐಟಿ ಪಾರ್ಕ್ಗಳು ನಿರ್ಮಾಣ ಆಗಬೇಕು. ತುಮಕೂರಿನಲ್ಲಿ ಬೆಂಗಳೂರಿಗೆ ಹೋಲಿಸಿದರೇ, ಟೂಡಾ ಅಪ್ರೂವ್ಡ್ ಲೇಔಟ್ಗಳಲ್ಲಿ ಭೂಮಿಯ ಬೆಲೆ ಕಡಿಮೆ ಇದೆ. ಹೀಗಾಗಿ ಕಡಿಮೆ ವೆಚ್ಚದಲ್ಲಿ ಉತ್ತಮ ಐಟಿ ಪಾರ್ಕ್ ನಿರ್ಮಾಣ ಮಾಡಬಹುದು. ಕೆಲ ಐಟಿ ಕಂಪನಿಗಳು ತುಮಕೂರಿನಲ್ಲಿ ಆರಂಭವಾದರೇ, ಬಳಿಕ ಉಳಿದ ಐಟಿ ಕಂಪನಿಗಳು ತುಮಕೂರಿಗೆ ಹೋಗಲು ಮನಸ್ಸು ಮಾಡುತ್ತವೆ.
ತಮಿಳುನಾಡಿನ ಉದ್ಯಮಿ ಜೋಹೋ ಕಂಪನಿಯ ಸ್ಥಾಪಕ ಶ್ರೀಧರ್ ವೆಂಬು ಅವರು ಗ್ರಾಮೀಣಾ ಭಾಗದಲ್ಲೇ ತಮ್ಮ ಕಂಪನಿಯನ್ನು ತೆರೆದಿದ್ದಾರೆ. ಶ್ರೀಧರ್ ವೆಂಬು ಅವರ ಪ್ರಯತ್ನ ಬೆಂಗಳೂರಿನ ಐಟಿ ಉದ್ಯಮಿಗಳಿಗೆ ಮಾದರಿಯಾಗಬೇಕು. 5.85 ಬಿಲಿಯನ್ ಡಾಲರ್ ಮೌಲ್ಯದ ಕಂಪನಿಯ ಒಡೆಯನಾದರೂ ಶ್ರೀಧರ್ ವೆಂಬು ಹಳ್ಳಿಯಲ್ಲೇ ವಾಸಿಸುತ್ತಿದ್ದಾರೆ. ಹೀಗಾಗಿ ಹಳ್ಳಿಗಳು ಐಟಿ ಕಂಪನಿಯ ಕಾರ್ಯನಿರ್ವಹಣೆಗೆ ಸೂಕ್ತವಲ್ಲ ಎಂಬ ಮನಸ್ಥಿತಿಯಿಂದ ಐಟಿ ಕಂಪನಿಗಳು ಹೊರಬರಬೇಕು.
ಇದನ್ನೂ ಓದಿ: ಬೆಂಗಳೂರಲ್ಲಿ ಹೌಸಿಂಗ್ ಬೋರ್ಡ್ನಿಂದ 3 BHK ಡ್ಯೂಪ್ಲೆಕ್ಸ್ ಹೊಸ ಮನೆಗಳ ಮಾರಾಟ.. ಬೆಲೆ ಎಷ್ಟು?
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಕೇವಲ ಮುಕ್ಕಾಲು ಗಂಟೆ ಪ್ರಯಾಣ
ಜೊತೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಉದ್ಯಮಿಯೊಬ್ಬರು ತಮ್ಮ ಐಟಿ ಕಂಪನಿಯನ್ನು ತೆರೆದಿದ್ದಾರೆ. ಧಾರವಾಡದಲ್ಲೂ ಐಟಿ ಕಂಪನಿ ತೆರೆಯಲು ಐಟಿ ಕಂಪನಿಗಳಿಗೆ ಭೂಮಿ ನೀಡಲಾಗಿದೆ.
ಇನ್ನೂ ತುಮಕೂರು ನಗರದಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರೀ ಮುಕ್ಕಾಲು ಗಂಟೆ ಪ್ರಯಾಣದ ಅವಧಿ. ಈಗ ದಾಬಸ್ ಪೇಟೆಯಿಂದ ಸ್ಯಾಟಲೈಟ್ ಟೌನ್ ರಿಂಗ್ ರೋಡ್ ನಿರ್ಮಾಣವಾಗಿರುವುದರಿಂದ ಬೇಗನೇ ತುಮಕೂರಿನಿಂದ ಏರ್ಪೋರ್ಟ್ ತಲುಪಬಹುದು. ಯಾವುದೇ ಟ್ರಾಫಿಕ್ ಕಿರಿ ಕಿರಿ ಇರಲ್ಲ.
ಬೆಂಗಳೂರು ಏರ್ ಪೋರ್ಟ್ನಿಂದ ಎಲೆಕ್ಟ್ರಾನಿಕ್ ಸಿಟಿ ತಲುಪುವುದಕ್ಕಿಂತ ಬೇಗನೇ ಏರ್ ಪೋರ್ಟ್ನಿಂದ ತುಮಕೂರು ನಗರ ತಲುಪಬಹುದು. ಉದ್ಯೋಗಿಗಳಿಗೆ ಬೆಂಗಳೂರಿಗಿಂತ ಕಡಿಮೆ ವೆಚ್ಚದಲ್ಲಿ ಮನೆಗಳು ಬಾಡಿಗೆಗೆ ಸಿಗುತ್ತವೆ. ಹವಾಗುಣ ಕೂಡ ಉತ್ತಮವಾಗಿದೆ. ಬೆಂಗಳೂರಿನಂತೆ ವಾಯು ಮಾಲಿನ್ಯ, ಶಬ್ದ ಮಾಲಿನ್ಯವೂ ಇಲ್ಲ. ಐಟಿ ಉದ್ಯೋಗಿಗಳಿಗೆ ತುಮಕೂರು ಅಫರ್ಡಬಲ್ ಸಿಟಿ.
ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ