/newsfirstlive-kannada/media/post_attachments/wp-content/uploads/2024/09/GANESH_3.jpg)
ದೇಶಾದ್ಯಂತ ಗಣಪನ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಲಾಗ್ತಿದೆ. ಈ ಸಡಗರ-ಸಂಭ್ರಮದ ಮಧ್ಯೆ ರಾಜ್ಯದಲ್ಲಿ ಕೆಲ ಅಹಿತಕರ ಘಟನೆಗಳು ಸಂಭ್ರಮವನ್ನು ಕಿತ್ತುಕೊಂಡಿವೆ. ಗಣೇಶನ ಪೂಜೆಗೆ ಇಟ್ಟ ಹಣದ ವಿಚಾರಕ್ಕೆ ಅಣ್ಣ-ತಮ್ಮಂದಿರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿದೆ. ಇತ್ತ ರಥ ಎಳೆಯುವಾಗ ದುರಂತ ಸಂಭವಿಸಿದೆ.
ನಾಡಿನೆಲ್ಲೆಡೆ ವಿಘ್ನ ನಿವಾರಕ ಗಣೇಶ ಚತುರ್ಥಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಗ್ತಿದೆ. ಗಂಡು ಮಕ್ಕಳು ಪಂಚೆ-ಶರ್ಟ್ ತೊಟ್ಟು ಪಟಾಕಿ ಸಿಡಿಸಿ ಡಿಜೆ ಸಾಂಗ್ಗೆ, ತಮಟೆ ಸೌಂಡ್ಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಇತ್ತ ನೀರೆಯರು ಮಾತ್ರ ಸೀರೆಯಲ್ಲಿ ಮಿಂಚುತ್ತಾ ಗಣಪತಿ ಪೂಜೆಯಲ್ಲಿ ಬ್ಯುಸಿಯಾಗಿದ್ದಾರೆ. ಇಂತ ಸಡಗರದ ವೇಳೆ ರಾಜ್ಯದಲ್ಲಿ ಕೆಲವು ಅಹಿತಕರ ಘಟನೆಗಳು ಸಂಭವಿಸಿವೆ.
ಇದನ್ನೂ ಓದಿ:ಗಣಪತಿಗೆ 20 ಕೆ.ಜಿ ಬಂಗಾರದ ಕಿರೀಟ ದಾನ.. ಅನಂತ್ ಅಂಬಾನಿ ಖರ್ಚು ಮಾಡಿದ್ದು ಎಷ್ಟು ಕೋಟಿ ರೂಪಾಯಿ?
ಗಣೇಶನ ಪೂಜೆಗೆ ಇಟ್ಟ ಹಣದ ವಿಚಾರಕ್ಕೆ ಸಹೋದರನ ಸಾವು
ಗಣೇಶನ ಪೂಜೆಗೆ ಇಟ್ಟ ಹಣದ ವಿಚಾರಕ್ಕೆ ಕುಟುಂಬದಲ್ಲೇ ಬರ್ಬರ ಕೊಲೆಯಾಗಿದೆ. ಕಾರವಾರದ ಸಾಯಿಕಟ್ಟಾ ಬಿಂದು ಮಾಧವ ದೇಗುಲದ ಬಳಿ ಸೋದರನನ್ನೇ ಭೀಕರವಾಗಿ ಸೋದರ ಕೊಂದಿದ್ದಾನೆ. ಅಣ್ಣ-ತಮ್ಮನ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕು ಇರಿದು ಪಾಪಿ ಮನೀಶ್ ಕಿರಣ್ ಬೋರ್ಕರ್ ಎಂಬಾತ ಸಂದೇಶ್ ಪ್ರಭಾಕರ್ ಬೋರ್ಕರ್ನನ್ನ ಕೊಲೆ ಮಾಡಿದ್ದಾನೆ. ಕೂಡಲೇ ಪೊಲೀಸರು ಹಂತಕನನ್ನು ಹೆಡೆಮುರಿಕಟ್ಟಿದ್ದಾರೆ.
ಪಟಾಕಿ ಸಿಡಿಸಿದ ವಿಚಾರಕ್ಕೆ 2 ಗುಂಪುಗಳ ಗಲಾಟೆ
ಇನ್ನು ಪಟಾಕಿ ಸಿಡಿಸಿದ ವಿಚಾರಕ್ಕೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಕರೋಶಿಯಲ್ಲಿ 2 ಗುಂಪುಗಳ ನಡುವೆ ಗಲಾಟೆಯಾಗಿದೆ. ಪಟಾಕಿ ಸಿಡಿಸಿದ್ದಕ್ಕೆ ಗುಂಪುಗಳ ಮಧ್ಯೆ ಮಾತಿನ ಚಕಮಕಿಯಾಗಿದೆ. ಬಿಟ್ಟುಬಿಡದೇ ಅರ್ಧಗಂಟೆ ಪಟಾಕಿ ಸಿಡಿಸಿದನ್ನ ಗ್ರಾಮದ ಮತ್ತೊಂದು ಗುಂಪು ಪ್ರಶ್ನಿಸಿದೆ. ಮಾತಿಗೆ ಮಾತು ಬೆಳೆದು 2 ಗುಂಪುಗಳ ನಡುವೆ ಗಲಾಟೆಯಾಗಿದೆ.
ಡೊಳ್ಳು ಬಾರಿಸುವ ವಿಚಾರಕ್ಕೆ ಮಾರಾಮಾರಿ.. ಪೊಲೀಸರಿಗೂ ಹಲ್ಲೆ
ಗಣೇಶೋತ್ಸವ ವೇಳೆ ಗಣೇಶನ ಮುಂದೆ ಡೊಳ್ಳು ಬಾರಿಸುವ ವಿಚಾರಕ್ಕೆ 2 ಗುಂಪುಗಳ ಮಧ್ಯೆ ಗಲಾಟೆಯಾಗಿದೆ. ಶಿವಮೊಗ್ಗದ ಭದ್ರಾವತಿ ಅರೆಬಿಳಚಿ ಕ್ಯಾಂಪ್‌ನಲ್ಲಿ ಈ ಘಟನೆ ನಡೆದಿದೆ. ಡೊಳ್ಳು ತಂಡಕ್ಕೆ ಎರಡೂ ಸಮಿತಿಯವರು ಮುಂಗಡ ಹಣ ನೀಡಿದ್ದರು. ಈ ವೇಳೆ ಕಲಾವಿದರು ಒಂದೇ ಕಡೆ ಡೊಳ್ಳು ಬಾರಿಸುತ್ತಿದ್ದಕ್ಕೆ ಇನ್ನೊಂದು ಸಮಿತಿಯವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ 2 ಸಮಿತಿ ಸದಸ್ಯರ ನಡುವೆ ಮಾತಿನ ಚಕಮಕಿಯಾಗಿದೆ. ಮಧ್ಯಪ್ರವೇಶಿಸಿದ ಪೊಲೀಸ್ ಕಾನ್ಸ್ಟೆಬಲ್ಗಳ ಮೇಲೂ ಹಲ್ಲೆಯಾಗಿದೆ. ಸ್ಥಳಕ್ಕೆ ಶಿವಮೊಗ್ಗ ಎಸ್‌ಪಿ, ಅಡಿಷನಲ್ ಎಸ್‌ಪಿ ಭೇಟಿ ನೀಡಿ 15 ರಿಂದ 20 ಜನರನ್ನ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ದೇಶದ ಅತಿದೊಡ್ಡ ಗಣೇಶನ ವಿಗ್ರಹ.. ಎಷ್ಟು ಅಡಿ, ಎಷ್ಟು ಟನ್ ಇದೆ, ಇದರ ವಿಶೇಷತೆ ಏನು?
ದೇವರ ಜಾತ್ರೆಯಲ್ಲಿ ರಥಚಕ್ರಕ್ಕೆ ಸಿಲುಕಿ ಯುವಕ ಸಾವು
ಇನ್ನು ಹಬ್ಬದ ಖುಷಿಯಲ್ಲಿದ್ದ ವಿಜಯಪುರದ ದೇವರಹಿಪ್ಪರಗಿಯ ಬಿ.ಬಿ ಇಂಗಳಗಿಯಲ್ಲಿ ದುರಂತವೊಂದು ನಡೆದುಹೋಗಿದೆ. ರಥಚಕ್ರಕ್ಕೆ ಸಿಲುಕಿ 24 ವರ್ಷದ ದೇವೇಂದ್ರ ಬಡಿಗೇರ್ ಸಾವನ್ನಪ್ಪಿದ್ದಾನೆ. ಘನ ಗುರುಸಿದ್ದೇಶ್ವರ ದೇವರ ಜಾತ್ರೆಯಲ್ಲಿ ಅವಘಡ ಸಂಭವಿಸಿದ್ದು ರಥ ದುರಂತದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಮೈಜುಮ್ ಎನಿಸುವಂತಿದೆ. ರಥ ಎಳೆಯುವಾಗ ಆಯತಪ್ಪಿ ಚಕ್ರದಡಿ ಬಿದ್ದ ದೇವೇಂದ್ರನ ಮೇಲೆ ರಥದ ಚಕ್ರ ಹರಿದಿದ್ದು ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾನೆ. ಗಣೇಶೋತ್ಸವದ ಸಂಭ್ರಮದಲ್ಲಿ ರಾಜ್ಯದ ಕೆಲವೆಡೆ ಅಹಿತಕರ ಘಟನೆಗಳು ಸಂಭವಿಸಿವೆ. ಈ ಬಗ್ಗೆ ಪೊಲೀಸರು ಹೆಚ್ಚಿನ ನಿಗಾ ಇಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ