/newsfirstlive-kannada/media/post_attachments/wp-content/uploads/2024/11/UDP_BANK.jpg)
ಉಡುಪಿಯ ಮಹಾಲಕ್ಷ್ಮಿ ಕೋ-ಆಪರೇಟಿವ್ ಬ್ಯಾಂಕ್ನಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ಆರೋಪ ಕೇಳಿಬಂದಿದೆ. 1 ವರ್ಷದಿಂದ ಪಿಕಲಾಟ ನಡೆಯುತ್ತಿದ್ದರೂ ಇದೀಗ ಅನ್ಯಾಯಕ್ಕೆ ಒಳಗಾದವರು ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ. ಈ ವಿಚಾರ ಮಾಜಿ, ಹಾಗೂ ಬಿಜೆಪಿ ಶಾಸಕರ ನಡುವೆ ಜಟಾಪಟಿಗೆ ಕಾರಣವಾಗಿದೆ.
ಉಡುಪಿಯ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ನಲ್ಲಿ ಭಾರೀ ಅವ್ಯವಹಾರ ಆರೋಪ ಕೇಳಿ ಬಂದಿದೆ. ಅದು ಕೂಡ ಸುಮಾರು 1,400 ಜನರಿಗೆ 28 ಕೋಟಿ ರೂಪಾಯಿ ಮೋಸ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಬ್ಯಾಂಕ್ನಲ್ಲಿ ಅವ್ಯವಹಾರ!?
- ಗ್ರಾಹಕರ ಸಹಿ ಹಾಕಿಸಿಕೊಂಡು ಮಧ್ಯವರ್ತಿಗಳು ಕೋಟಿ ಕೋಟಿ ಮೋಸ
- ಕೋವಿಡ್ ಸಮಯದಲ್ಲಿ ಅವ್ಯವಹಾರ ನಡೆಸಿ ನಗದೀಕರಿಸಿದ್ದು ಸಾಭೀತು
- ಮಲ್ಪೆ ಶಾಖೆಯ ವ್ಯವಸ್ಥಾಪಕ ಸುಬ್ಬಣ್ಣ 2023 ಮಾರ್ಚ್ನಲ್ಲಿ ಆತ್ಮಹತ್ಯೆ
- ಬ್ಯಾಂಕಿನ ಅವ್ಯವಹಾರದ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಬಹಿರಂಗ
- ಒಬ್ಬೊಬ್ಬರಿಗೆ 20,000 ದಿಂದ 3 ಲಕ್ಷ ರೂಪಾಯಿವರೆಗೆ ವಂಚನೆ- ಆರೋಪ
‘ಶಾಕ್ ಆಯ್ತು’
ಬ್ಯಾಂಕ್ನಿಂದ ನೋಟಿಸ್ ಬಂತು, ಅದನ್ನು ನೋಡಿದಾಗ ಅದರಲ್ಲಿ 2 ಲಕ್ಷ ರೂಪಾಯಿ ಸಾಲ ಇದೆ. ಇದನ್ನ ಎಲ್ಲರ ಹತ್ತಿರ ಮಾತನಾಡಿ, ಒಟ್ಟಾಗಿ ಬ್ಯಾಂಕ್ಗೆ ಹೋಗಿ ಮಾತನಾಡೋಣ ಎಂದುಕೊಂಡು ಎಲ್ಲರೂ ಒಟ್ಟಿಗೆ ಬ್ಯಾಂಕ್ಗೆ ಹೋಗಿ ಮಾತನಾಡಿದ್ದೇವೆ.
ವಿಶ್ವನಾಥ್, ದೂರುದಾರ
‘ಒಂದು ರೂಪಾಯಿ ಕೊಟ್ಟಿಲ್ಲ’
ಮೀನುಗಾರಿಕೆ ಗ್ರೂಪ್ನಲ್ಲಿ ಮಂಜುನಾಥ್ ಇದ್ದಾನೆ. ಸಾಲ ಮಾಡಿಕೊಡುತ್ತೇನೆ ಎಂದು ಹೇಳಿದ್ದನು. ಮೀನುಗಾರಿಕೆ ಸಂಘದಿಂದ ಸಾಲ ಬರುತ್ತದೆ. ಅದನ್ನು ನೀವು ಕಟ್ಟುವಾಗೆ ಇಲ್ಲ. ನಿಮಗೆ 2 ಲಕ್ಷ ಸಾಲ ಕೊಡುತ್ತೇವೆ ಎಂದು ಹೇಳಿದ್ರು. ಅದಕ್ಕೆ ಸಹಿ ಹಾಕಿ ಸಾಲ ಕೇಳಿದ್ದೇವು. ಆದರೆ ನಮಗೆ ಒಂದೂ ರೂಪಾಯಿ ಕೂಡ ಸಿಕ್ಕಿಲ್ಲ.
ಸ್ಮಿತಾ, ದೂರುದಾರೆ
ಬ್ಯಾಂಕ್ನಲ್ಲಿ ಅವ್ಯವಹಾರ!?
- ದಾಖಲೆ ಇಲ್ಲದೆ ಸಾಲ ಕೊಡಿಸುತ್ತೇವೆ ಎಂದು ಜನಸಾಮಾನ್ಯರ ಸಂಪರ್ಕ
- 20,000ದಂತೆ ಸುಮಾರು 40 ಜನಕ್ಕೆ ಸಾಲ ತೆಗೆಸಿಕೊಟ್ಟಿದ್ದ ಮಧ್ಯವರ್ತಿಗಳು
- ನೂರಾರು ಜನಕ್ಕೆ ಬ್ಯಾಂಕ್ನಲ್ಲಿ ತಲಾ ಎರಡು ಲಕ್ಷ ಸಾಲ ತೆಗೆಯಲಾಗಿದೆ
- ಮತ್ತೆ ಕೆಲವು ಮಂದಿಗೆ ಮೀನುಗಾರ ಸಾಲ ಕೊಡಿಸುವುದಾಗಿ ಸಹಿ ಪಡೆದಿದ್ದಾರೆ
- 20 ಜನಕ್ಕೆ 3 ಲಕ್ಷ ರೂಪಾಯಿ ಸಾಲ ಮರುಪಾವತಿಸುವಂತೆ ನೋಟಿಸ್
ರಘುಪತಿ ಭಟ್ ಎಂಟ್ರಿ.. ಬಿಜೆಪಿ ನಾಯಕರ ನಡುವೆ ಜಟಾಪಟಿ
ಅದ್ಯಾವಾಗ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ನ ಆಡಳಿತ ಸಿಬ್ಬಂದಿ ತಮ್ಮ ನೋವು ಕೇಳದಿದ್ದಾಗ ಮಾಜಿ ಶಾಸಕ ರಘುಪತಿ ಭಟ್ರನ್ನು ಸಂತ್ರಸ್ತರು ಸಂಪರ್ಕ ಮಾಡಿದ್ದಾರೆ. ರಘುಪತಿ ಭಟ್ ಮಧ್ಯಪ್ರವೇಶಿಸುತ್ತಿದ್ದಂತೆ ರಾಜಕೀಯ ಜಟಾಪಟಿ ಶುರುವಾಗಿದೆ. ಬ್ಯಾಂಕಿನಿಂದ ಅನ್ಯಾಯ ಆಗಿದ್ದರೆ, ಆಗಿದೆ ಎಂದು ಪ್ರಮಾಣ ಮಾಡಿ ಎಂದು ರಘುಪತಿ ಭಟ್ಗೆ ಶಾಸಕ ಹಾಗೂ ಬ್ಯಾಂಕ್ನ ಅಧ್ಯಕ್ಷ ಯಶ್ ಪಾಲ್ ಸುವರ್ಣ ಪತ್ರದ ಮೂಲಕ ಸವಾಲು ಹಾಕಿದ್ದರು. ಸವಾಲು ಸ್ವೀಕರಿಸಿ ಈ ಬಗ್ಗೆ ಸೂಕ್ತ ತನಿಖೆ ಆಗಬೇಕೆಂದು ಭಟ್ ಒತ್ತಾಯಿಸಿದ್ದಾರೆ. 1 ಲಕ್ಷ ಸಾಲ ಕೊಟ್ಟು 3 ಲಕ್ಷ ರೂಪಾಯಿಯ ಸಾಲದ ದಾಖಲೆ ಬ್ಯಾಂಕಿನಲ್ಲಿ ಸೃಷ್ಟಿಯಾಗಿದೆ. 20,000 ಪಡೆದವರಿಗೆ 2 ಲಕ್ಷ ಹಾಗೂ 1 ರೂಪಾಯಿ ಬಿಡಿಗಾಸು ಪಡೆಯದ ಮಂದಿಗೆ 3 ಲಕ್ಷ ಸಾಲ ಪಾವತಿಸುವಂತೆ ಬ್ಯಾಂಕ್ ಒತ್ತಡ ಹಾಕುತ್ತಿದೆಯಂತೆ.
ಇದನ್ನೂ ಓದಿ:ಸಮೋಸಾ, ಕೇಕ್ ಪತ್ತೆಗಾಗಿ CID ತನಿಖೆ.. ಸರ್ಕಾರದ ಮಾನ ಹರಾಜು ಅಂತ ಬಿಜೆಪಿ ವ್ಯಂಗ್ಯ
ಸಹಿ ಹಾಕಿ ಯಾವುದೇ ಹಣ ಪಡೆಯದೆ ಇದ್ದ ಜನರಿಗೆ ಹಣ ಕೊಡು ಎಂದರೆ ಎಲ್ಲಿಂದ ಕೊಡುತ್ತಾರೆ. ನೂರಾರು ಜನರಿಗೆ ಮೋಸ ಆಗಿದೆ. ಇವರ ಹಾಕಿದ ಸಹಿ ಹಾಗೂ ಅವರಲ್ಲಿರುವ ಪ್ರತಿ ತೆಗೆದುಕೊಂಡು ಬಂದು ಸಹಿಯನ್ನು ನೋಡಲಿ. ಇವರೇ ಹಣ ಪಡೆದಿದ್ದಾರೆ ಎಂದು ದೇವಾಲಯದ ಮುಂದೆ ಹೇಳಲಿ. ಬ್ಯಾಂಕ್ ನ್ಯಾಯ ಕೊಡಬೇಕು.
ರಘುಪತಿ ಭಟ್, ಮಾಜಿ ಶಾಸಕ
ಇನ್ನು ಮಹಾಲಕ್ಷ್ಮೀ ಬ್ಯಾಂಕ್ ವಿರುದ್ಧ ಮಾಡುತ್ತಿರುವ ಆರೋಪ ಆಧಾರ ರಹಿತ. ಆರೋಪದ ಬಗ್ಗೆ ಯಾವುದೇ ರೀತಿಯ ತನಿಖೆಗೆ ಸ್ವಾಗತ. ಬ್ಯಾಂಕಿನ ಘನತೆಗೆ ಧಕ್ಕೆ ತರುವ ನಿಟ್ಟಿನಲ್ಲಿ ಈ ರೀತಿ ಮಾಡಲಾಗಿದೆ ಅಂತ ಬ್ಯಾಂಕ್ ಅಧ್ಯಕ್ಷ, ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಕಿಡಿಕಾರಿದ್ದಾರೆ.
ಬ್ಯಾಂಕ್ನ ಯಾವುದೇ ರೀತಿಯ ತನಿಖೆಗೆ ನಾನು ಸ್ವಾಗತ ಮಾಡುತ್ತೇನೆ. ಇಡಿ, ಸಿಬಿಐ ತನಿಖೆಗೆ ನೀಡಲಿ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು.
ಯಶ್ಪಾಲ್ ಸುವರ್ಣ, ಬ್ಯಾಂಕ್ ಅಧ್ಯಕ್ಷ, ಬಿಜೆಪಿ ಶಾಸಕ
ಈ ಬ್ಯಾಂಕ್ ಅವ್ಯವಹಾರದ ಬಗ್ಗೆ ಡಿಸಿ, ಎಸ್ಪಿಗೆ ಕಠಿಣ ಕ್ರಮಕ್ಕೆ ಆಗ್ರಹಿಸಿ ದೂರು ನೀಡಲಾಗಿದೆ. ಪ್ರತಿಭಟನೆ ಕೂಡ ನಡೆಸಲಾಗಿದೆ. ಆದ್ರೆ ಮಹಾಲಕ್ಷ್ಮೀ ಬ್ಯಾಂಕ್ನ ಏಳಿಗೆ ಸಹಿಸದೆ, ವೈಯಕ್ತಿಕ ತೇಜೋವಧೆ ಮಾಡಲಾಗುತ್ತಿದೆ ಎಂದು ಬ್ಯಾಂಕಿನ ಆಡಳಿತ ಮಂಡಳಿ ದೂರಿದೆ. ಇತ್ತ ಮೋಸಕ್ಕೆ ಕಾರಣವಾದ ಮಧ್ಯವರ್ತಿಗಳು ತಗ್ಲಾಕ್ಕೊಂಡ್ರೆ ಹಣವನ್ನು ರಿಕವರಿ ಮಾಡಬಹುದಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ