/newsfirstlive-kannada/media/post_attachments/wp-content/uploads/2025/02/UDP-BRIDGE.jpg)
ಆ ನಾಲ್ಕು ಗ್ರಾಮಗಳಿಗೆ ಇದೊಂದೇ ಮುಖ್ಯ ಸಂಪರ್ಕ ಕೊಂಡಿ. ಆದ್ರೆ ಈ ಮುಖ್ಯ ಕೊಂಡಿ ಕಳಚಿ ಬೀಳುವ ಸ್ಥಿತಿಯಲ್ಲಿದೆ. ಹಲವು ದಶಕದಿಂದ ಹೊಸ ಸೇತುವೆ ನಿರ್ಮಾಣಕ್ಕೆ ಮನವಿ ಮಾಡಿ ಮಾಡಿ ಸುಸ್ತಾದ ಗ್ರಾಮಸ್ಥರು ಅಪಾಯವನ್ನ ಎದುರು ನೋಡುವಂತಾಗಿದೆ. ಕಾರ್ಕಳ, ಮುಂಡ್ಲಿ. ಶಿರ್ಲಾಲು, ಕೆರ್ವಾಸೆಗೆ ಸಂಪರ್ಕ ಕಲ್ಪಿಸುಲು ಇರುವುದು ಒಂದೇ ಮುಖ್ಯ ಸೇತುವೆ. ಹೀಗೆ ಬಿಳಿ ಬಣ್ಣ ಬಳಿದು, ತೇಪೆ ಹಾಕಿ, ಅಪಾಯವನ್ನ ಮರೆಮಾಚುವ ಸ್ಥಳೀಯ ಆಡಳಿತ. ಹೊಸ ಸೇತುವೆ ಪ್ರಯತ್ನಕ್ಕೂ ಕೈ ಹಾಕಿಲ್ಲ. ಸೇತುವೆಯ ಬಹುತೇಕ ಕಬ್ಬಿಣದ ಸರಳುಗಳು ಎದ್ದು ಹೋಗಿದ್ದು ಸೇತುವೆ ಭಾಗಶಃ ಶಿಥಿಲ ಆಗುವ ಹಂತಕ್ಕೆ ಬಂದು ನಿಂತಿದೆ.
ಹೀಗೆ ಅಪಾಯದ ಸ್ಥಿತಿಯಲ್ಲಿರೋ ಸೇತುವೆ ಮೇಲೆ ಗಂಟೆಗೊಮ್ಮೆ ಭಾರೀ ಗಾತ್ರದ ವಾಹನಗಳು ಸಂಚಾರ ಮಾಡ್ತಿರುತ್ತೆ. ಕೆಳ ಭಾಗದಲ್ಲಿ ರಭಸವಾಗಿ ಹರಿಯುವ ಸ್ವರ್ಣ ನದಿ ಮೇಲೆ ಈ ಅಪಾಯಕಾರಿ ಸೇತುವೆಯಲ್ಲಿ ಓಡಾಟ ಎಂಥವರ ಎದೆಯನ್ನೂ ಝಲ್ಲೆನಿಸುತ್ತೆ. ಕಾರಣ ವಾಹನ ಓಡಾಟದ ವೇಳೆ ಸೇತುವೆಯಲ್ಲಿ ಅಲುಗಾಟದ ಅನುಭವ. ಹೀಗಾಗಿ ನಾಲ್ಕು ದಶಕದ ಹಳೆಯ ಸೇತುವೆ ಬದಲು ಹೊಸ ಸೇತುವೆ ನಿರ್ಮಾಣ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ಈ ಸೇತುವೆ ಕುಸಿಯುವ ಎಲ್ಲಾ ಲಕ್ಷಣ ಇರೋದ್ರಿಂದ ಶಾಸಕ ಸುನಿಲ್ ಕುಮಾರ್ ಅವರು ಇತ್ತ ಗಮನ ಹರಿಸಬೇಕಿದೆ. ಆದಷ್ಟು ಬೇಗ ಹೊಸ ಸೇತುವೆ ಭಾಗ್ಯ ಕಲ್ಪಿಸಿ ಅನ್ನೋ ಒತ್ತಾಯ ಕೇಳಿ ಬಂದಿದೆ. ಒಂದ್ವೇಳೆ ಸೇತುವೆ ಕುಸಿದರೆ ದೊಡ್ಡ ಅವಘಡ ನಡೆಯೋದು ಗ್ಯಾರಂಟಿ. ಇದರಿಂದ ನಾಲ್ಕು ಗ್ರಾಮದ ಜನರು ಸಂಪರ್ಕವನ್ನೇ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಇದನ್ನೂ ಓದಿ:ಬಿಗ್‌ಬಾಸ್ ವಿನ್ನರ್ ಹನುಮಂತ ಹೊಸ ಗಾನ ಬಜಾನಾ.. ಶಾಸಕ ಪ್ರಭು ಚೌಹಾಣ್ ಜೊತೆ ಭರ್ಜರಿ ಸ್ಟೆಪ್!
ದಿನನಿತ್ಯ ವಾಹನ ಸವಾರರು. ಸ್ಥಳೀಯರು ಪ್ರಾಣವನ್ನ ಕೈಯಲ್ಲಿ ಹಿಡಿದು ಓಡಾಡುವ ಪರಿಸ್ಥಿತಿ ಇದೆ. ಶಾಸಕ ಸುನಿಲ್ ಕುಮಾರ್ ಈ ಅಪಾಯದ ಸೇತುವೆಗೆ ಮುಕ್ತಿ ಕೊಟ್ಟು.. ಹೊಸ ಸೇತುವೆ ಭಾಗ್ಯ ಕಲ್ಪಿಸುವ ಮೂಲಕ ಮುಂಬರುವ ಅಪಾಯವನ್ನ ತಪ್ಪಿಸುವ ಅನಿವಾರ್ಯತೆ ಸದ್ಯಕ್ಕಿದೆ. ಈ ಬಗ್ಗೆ ಶಾಸಕರು ಗಮನ ಹರಿಸ್ತಾರಾ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ