/newsfirstlive-kannada/media/post_attachments/wp-content/uploads/2025/03/Moscow.jpg)
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ನಿಲ್ಲಿಸುವ ಹಾಗೂ ಶಾಂತಿ ಒಪ್ಪಂದಕ್ಕೆ ಎರಡು ದೇಶಗಳನ್ನು ತಂದು ನಿಲ್ಲಿಸುವ ಪ್ರಯತ್ನ ಜಾಗತಿಕವಾಗಿ ನಡೆಯುತ್ತಿದೆ. ಈ ಹಿಂದೆ ವೈಟ್ಹೌಸ್ನಲ್ಲಿಯೇ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್ ಅಧ್ಯಕ್ಷರಿಗೆ, ನಿಮಗೆ ಯುದ್ಧ ನಿಲ್ಲಿಸದೇ ಬೇರೆ ಆಯ್ಕೆಯಿಲ್ಲ. ನೀವು ಮೂರನೇ ಮಹಾಯುದ್ಧದೊಂದಿಗೆ ಜೂಜಾಡುತ್ತಿದ್ದೀರಿ ಎಂಬ ಖಡಕ್ ಮಾತುಗಳನ್ನು ಹೇಳಿದ ಮೇಲಾದರೂ ಉಕ್ರೇನ್ ಮೆತ್ತಾಗಾದೀತು ಎಂದು ಜಗತ್ತು ಭಾವಿಸಿತ್ತು. ಆದ್ರೆ ಉಕ್ರೇನ್ನ ಯುದ್ಧದ ಉನ್ಮಾದ ಇನ್ನೂ ನಿಂತಂತೆ ಕಾಣುತ್ತಿಲ್ಲ. ಈಗ ನೇರ ರಷ್ಯಾದ ರಾಜಧಾನಿ ಮಾಸ್ಕೋದ ಕಟ್ಟಡವೊಂದರ ಮೇಲೆಯೇ ಡ್ರೋನ್ ದಾಳಿ ನಡೆಸಿದೆ
ಮಂಗಳವಾರ ಅಂದ್ರೆ ಇಂದು ಬೆಳಗ್ಗೆ ಉಕ್ರೇನ್ನಿಂದ ಮಾಸ್ಕೋದ ಮೇಲೆ ದೊಡ್ಡ ಮಟ್ಟದ ಡ್ರೋನ್ ದಾಳಿಯಾಗಿದೆ. ಈ ದಾಳಿಯಲ್ಲಿ ಒಬ್ಬ ವ್ಯಕ್ತಿ ಜೀವಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ. ಈ ಡ್ರೋನ್ ದಾಳಿಯಿಂದಾಗಿ ಮಾಸ್ಕೋದಲ್ಲಿ ವಿಮಾನಯಾನ ಹಾಗೂ ರೈಲು ಪ್ರಯಾಣವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಇಂದು ಮುಂಜಾನೆ ಸುಮಾರು 4 ಗಂಟೆಗೆ ಮಾಸ್ಕೋ ಹಾಗೂ ಮಾಸ್ಕೋದ ಸುತ್ತಮುತ್ತಲಿನ ಪ್ರದೇಶದಲ್ಲಿ ಉಕ್ರೇನ್ ಡ್ರೋನ್ ದಾಳಿ ಮಾಡಿದೆ. ಈ ಬಗ್ಗೆ ಟೆಲಿಗ್ರಾಮ್ ಮೆಸೇಜ್ ಮಾಡಿರುವ ಮಾಸ್ಕೋದ ಗವರ್ನರ್ ಆ್ಯಂಡ್ರೆ ವೊರೊಬ್ಯಾವ್ ಉಕ್ರೇನ್ ಡ್ರೋನ್ ದಾಳಿಯಿಂದಾಗಿ ಒಬ್ಬ ವ್ಯಕ್ತಿಯ ಜೀವ ಹೋಗಿದ್ದು. ಮೂರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಭಾರತದ ವಿರೋಧಿ ಜಸ್ಟಿನ್ ಟ್ರುಡೋ ಕಿಕ್ಔಟ್.. ಕೆನಡಾದ ಹೊಸ ಪ್ರಧಾನಿಯಿಂದ ಭಾರತಕ್ಕೆ ಏನು ಲಾಭ?
ಮಾಸ್ಕೋದ ಮೇಯರ್ ಸರ್ಜೆ ಸೊಬ್ಯಾನಿನ್ ಹೇಳುವ ಪ್ರಕಾರ ಒಟ್ಟು ಮಾಸ್ಕೊದತ್ತ ವಿವಿಧ ದಿಕ್ಕುಗಳಲ್ಲಿ ತೂರಿ ಬಂದ 69 ಡ್ರೋನ್ಗಳನ್ನು ನಗರವನ್ನು ಪ್ರವೇಶಿಸುವ ಮೊದಲೇ ಹೊಡೆದುರುಳಿಸಲಾಗಿದೆ ಎಂದು ಹೇಳಿದ್ದಾರೆ.
ಮಾಸ್ಕೋದಲ್ಲಿ ಸುಮಾರು 2 ಕೋಟಿಗೂ ಅಧಿಕ ಜನರು ವಾಸಿಸುತ್ತಾರೆ. ಇದು ಯುರೋಪ್ನ ಅತ್ಯಂತ ದೊಡ್ಡದಾದ ಮೆಟ್ರೊಪಾಲಿಟಿಯನ್ ಸಿಟಿ. ಸದ್ಯ ರಷ್ಯಾದ ವಿಮಾನಯಾನ ಸಂಸ್ಥೆ ಹೇಳುವ ಪ್ರಕಾರ ಮಾಸ್ಕೋದ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟವನ್ನು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ರದ್ಧುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಶಾಂತಿ ನೆಲೆಸಬೇಕಾದ ಸಂದರ್ಭದಲ್ಲಿಯೇ ಉಕ್ರೇನ್ ಮತ್ತೆ ರಷ್ಯಾವನ್ನು ಕೆಣಕಿದೆ. ಈಗ ರಷ್ಯಾದ ಪ್ರತಿಕ್ರಿಯೆ ಏನಿರಲಿದೆ ಎಂಬದನ್ನು ನೋಡಬೇಕು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ