/newsfirstlive-kannada/media/post_attachments/wp-content/uploads/2025/01/UMASHREE.jpg)
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವೆ ಹಾಗೂ ಹಿರಿಯ ನಟಿ ಉಮಾಶ್ರೀ ಅವರು ಇದೇ ಮೊದಲ ಬಾರಿಗೆ ಯಕ್ಷಗಾನ ರಂಗ ಪ್ರವೇಶ ಮಾಡಿದ್ದಾರೆ. ಪೆರ್ಡೂರು ಮೇಳದಿಂದ ಆಯೋಜನೆ ಮಾಡಲಾಗಿದ್ದ ಶ್ರೀರಾಮ ಪಟ್ಟಾಭಿಷೇಕ, ಮಾಯಾಮೃಗಾವತಿ ಎಂಬ ಯಕ್ಷಗಾನ ಪ್ರಸಂಗದಲ್ಲಿ ಮಂಥರೆಯಾಗಿ ಉಮಾಶ್ರಿ ಅವರು ಅಭಿನಯ ಮಾಡಿದ್ದಾರೆ.
ನಟನೆಗೆ ಎಂದರೆ ಉಮಾಶ್ರಿ ಅವರದ್ದು ಮೊದಲೇ ಎತ್ತಿದ ಕೈ. ಪುಟ್ನಂಜ ಎಂದು ಇಡೀ ಕರ್ನಾಟಕದ ಮನ ಗೆದ್ದವರು. ಆದರೆ ಇದುವರೆಗೂ ಯಕ್ಷಗಾನದಲ್ಲಿ ಎಲ್ಲಿಯೂ ಉಮಾಶ್ರೀ ಅವರು ಕಾಣಿಸಿಕೊಂಡಿರಲಿಲ್ಲ. ಇದೇ ಮೊಟ್ಟ ಮೊದಲ ಬಾರಿಗೆ ಯಕ್ಷರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತರ ಕನ್ನಡದ ಹೊನ್ನಾವರದಲ್ಲಿ ನಡೆದ ಶ್ರೀರಾಮ ಪಟ್ಟಾಭಿಷೇಕ, ಮಾಯಾಮೃಗಾವತಿ ಎಂಬ ಯಕ್ಷಗಾನ ಪ್ರಸಂಗದಲ್ಲಿ ಮಂಥರೆಯಾಗಿ ಉಮಾಶ್ರೀ ಅಭಿನಯಿಸಿದ್ದಾರೆ. ಪೆರ್ಡೂರು ಮೇಳದಿಂದ ಆಯೋಜನೆಗೊಂಡಿದ್ದ ಈ ಯಕ್ಷಗಾನದಲ್ಲಿ ಉಮಾಶ್ರೀ ಅವರ ನಟನೆ ನೋಡಿ ಪ್ರೇಕ್ಷಕರೆಲ್ಲ ಮನ ತುಂಬಾ ನಕ್ಕು ನಟನೆಯನ್ನು ಹಾಡಿ ಹೊಗಳಿದ್ದಾರೆ.
ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಮಂಥರೆ ಪಾತ್ರಕ್ಕಾಗಿ ಎರಡು ದಿನ ಯಕ್ಷಗಾನ ತರಬೇತಿ ಪಡೆದುಕೊಂಡಿದ್ದರು. ಬಳಿಕ ಟ್ರೈನ್ ಮೂಲಕ ಹೊನ್ನಾವರಕ್ಕೆ ಬಂದಿದ್ದ ಹಿರಿಯ ನಟಿ ಹೋಟೆಲ್ ಒಂದರಲ್ಲಿ ತಂಗಿದ್ದರು. ಅಲ್ಲಿಯೇ 1 ಗಂಟೆ ತಮ್ಮ ಪಾತ್ರವನ್ನು ಅಭ್ಯಾಸ ಮಾಡಿದ್ದರು. ಬಳಿಕ ರಾತ್ರಿ ಪೆರ್ಡೂರಿನಲ್ಲಿ ನಡೆದ ಯಕ್ಷಗಾನ ವೇದಿಕೆಯಲ್ಲಿ ಅಭಿನಯದ ಮೂಲಕ ಜನರನ್ನು ರಂಜಿಸಿದರು. ಅವರ ಮಂಥರೆ ಪಾತ್ರಕ್ಕೆ ಅಭಿಮಾನಿಗಳ ಚಪ್ಪಾಳೆ ಏನು ಕಡಿಮೆ ಇರಲಿಲ್ಲ ಎಂದು ಹೇಳಬಹುದು.
ಇದನ್ನೂ ಓದಿ:ಪುಟ್ಟಕ್ಕನ ಸಾಧನೆಗೆ ಮತ್ತೊಂದು ಗರಿ.. ಹಿರಿಯ ನಟಿ ಉಮಾಶ್ರೀಗೆ ಅಭಿನಂದನೆಗಳ ಮಹಾಪೂರ
ಇನ್ನು ಉಮಾಶ್ರೀ ಅವರು ಇಂದು ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆಯಲಿದ್ದಾರೆ. ದೇವರ ದರ್ಶನದ ಬಳಿಕ ಬೆಂಗಳೂರಿಗೆ ಮತ್ತೆ ವಾಪಸ್ ಆಗಲಿದ್ದಾರೆ ಎಂದು ತಿಳಿದು ಬಂದಿದೆ. ಉಮಾಶ್ರೀ ಅವರು ನಾಟಕ, ಸಿನಿಮಾ, ಧಾರಾವಾಹಿಗಳಲ್ಲಿ ಇಷ್ಟು ವರ್ಷ ನಟಿಸಿದ್ದರು. ಈಗ ಯಕ್ಷಗಾನದಲ್ಲೂ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ