/newsfirstlive-kannada/media/post_attachments/wp-content/uploads/2025/02/MAHAKUMBA-STAMP-2.jpg)
ಜನವರಿ 29ರಂದು ನಡೆದ ಪ್ರಯಾಗ್ರಾಜ್ ಕಾಲ್ತುಳಿತ ಪ್ರಕರಣದ ತನಿಖೆ ಚುರುಕಾಗಿದೆ. ಅಂದು ದುರಂತ ಸ್ಥಳದಲ್ಲಿ 16 ಸಾವಿರ ಮೊಬೈಲ್ಗಳು ಆ್ಯಕ್ಟೀವ್ ಆಗಿದ್ದವು ಅನ್ನೋದು ತನಿಖೆಯಿಂದ ಹೊರಬಂದಿದೆ.. ಕೆಲವು ಶಂಕಿತರನ್ನು ಪೊಲೀಸರು ಗುರುತಿಸಿದ್ದಾರೆ. ಈ ಮಧ್ಯೆ ಇಂದು ವಸಂತ ಪಂಚಮಿ ಇದ್ದು ಕೋಟ್ಯಂತರ ಜನ ಪುಣ್ಯಸ್ನಾನಕ್ಕೆ ಸಜ್ಜಾಗಿದ್ದು ಸರ್ಕಾರ ತೀವ್ರ ಕಟ್ಟೆಚ್ಚರ ವಹಿಸಿದೆ.
ಮಹಾಕುಂಭಮೇಳ.. 144 ವರ್ಷಗಳಿಗೊಮ್ಮೆ ನಡೆಯುವ ಧಾರ್ಮಿಕ, ಸಾಂಸ್ಕೃತಿಕ ವೈಭವೋತ್ಸವ. ಪ್ರಯಾಗ್ರಾಜ್ನ ಪವಿತ್ರ ತ್ರಿವೇಣಿ ಸಂಗಮದಲ್ಲಿ ಶಾಹಿಸ್ನಾನಗಳು ಮಹಾ ಪುಣ್ಯಸ್ನಾನ ಎನಿಸಿದ್ದು ಕೋಟ್ಯಂತರ ಭಕ್ತರನ್ನು ಸೆಳೆಯುತ್ತಿದೆ.
ಪ್ರಯಾಗ್ರಾಜ್ ಕಾಲ್ತುಳಿತ ವೇಳೆ 16 ಸಾವಿರ ಮೊಬೈಲ್ ಆಕ್ಟೀವ್
ಜನವರಿ 29.. ಮೌನಿ ಅಮಾವಾಸ್ಯೆಯಂದು ಸಂಭವಿಸಿದ್ದ ಕಾಲ್ತುಳಿತ 30 ಜನರನ್ನು ಬಲಿ ಹಾಕಿತ್ತು.. ಅದ್ರಲ್ಲೂ ಕರ್ನಾಟಕದ ನಾಲ್ವರು ದುರ್ಮರಣಕ್ಕೀಡಾಗಿದ್ದರು.. ದುರಂತದಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.. ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ದುರಂತದ ದಿನ ತ್ರಿವೇಣಿ ಸಂಗಮ ಪ್ರದೇಶದಲ್ಲಿ 16 ಸಾವಿರ ಮೊಬೈಲ್ ನಂಬರ್ಗಳು ಸಕ್ರಿಯವಾಗಿದ್ದನ್ನ ಪತ್ತೆ ಹಚ್ಚಿದ್ದಾರೆ. ಸದ್ಯ 16 ಸಾವಿರಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳ ದತ್ತಾಂಶಗಳನ್ನು ತನಿಖಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಆ ಸಂಖ್ಯೆಗಳಲ್ಲಿ ಹಲವು ಪ್ರಸ್ತುತ ಸ್ವಿಚ್ ಆಫ್ ಆಗಿವೆ ಎನ್ನಲಾಗಿದೆ.
ಇದನ್ನೂ ಓದಿ: Basant Panchami: ಇಂದು ಮಹಾಕುಂಭಮೇಳದ ಕೊನೆಯ ಅಮೃತ ಸ್ನಾನ; ಮಹತ್ವದ ಬದಲಾವಣೆಗಳು!
ಕಾಲ್ತುಳಿತ ಪ್ರಕರಣದ ತನಿಖೆಗಾಗಿ ಮೂವರು ಸದಸ್ಯರ ನ್ಯಾಯಾಂಗ ಕಮಿಟಿ ರಚನೆ ಮಾಡಲಾಗಿದ್ದು ದುರಂತದ ಸ್ಥಳಕ್ಕೆ ತೆರಳಿ ಆಯೋಗ ಪರಿಶೀಲನೆ ನಡೆಸಿದೆ. ಒಂದು ತಿಂಗಳಲ್ಲಿ ತನಿಖೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಇನ್ನು ದುರಂತಕ್ಕೆ ಬ್ಯಾರಿಕೇಡ್‌ಗಳನ್ನು ದಾಟಿ ಜನ ನುಗ್ಗಿದ್ದರಿಂದ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಸದ್ಯ ದುರಂತದ ವೇಳೆ ಆಕ್ಟೀವ್ ಆಗಿದ್ದ 16 ಸಾವಿರ ಮೊಬೈಲ್ ನಂಬರ್ಗಳ ಬಗ್ಗೆ ತನಿಖೆ ಚುರುಕುಗೊಂಡಿದೆ. ಸಿಸಿಟಿವಿ ದೃಶ್ಯಗಳನ್ನ ಸಂಗ್ರಹಿಸಿದ್ದು ಶಂಕಿತರ ಗುರುತು ಪತ್ತೆಯಾಗಿದೆ ಎನ್ನಲಾಗಿದೆ.
ವಸಂತ ಪಂಚಮಿಯಂದು ಅವಘಡ ತಪ್ಪಿಸಲು ಹೈಅಲರ್ಟ್!
ಶ್ರೀ ಪಂಚಮಿ, ಸರಸ್ವತಿ ಪಂಚಮಿ ಅಂತಲೂ ಕರೆಯಲ್ಪಡುವ ವಸಂತ ಪಂಚಮಿ ಇಂದು ಇದ್ದು ಮಹಾಕುಂಭಮೇಳದಲ್ಲಿ ಸಂಭ್ರಮಮನೆ ಮಾಡಿದೆ. ಮಾಘ ಮಾಸದ 5ನೇ ದಿನ ಬರುವ ವಸಂತ ಪಂಚಮಿಯಂದು ಮಹಾಕುಂಭಮೇಳದ 3ನೇ ಶ್ನಾಹಿಸ್ನಾನ ನಡೆಯಲಿದೆ.. ಹೀಗಾಗಿ ಇಂದು ಕೋಟ್ಯಂತರ ಭಕ್ತರು ಅಮೃತಸ್ನಾನ ಮಾಡಲು ಪ್ರಯಾಗ್ರಾಜ್ನಲ್ಲಿ ಸೇರಿದ್ದಾರೆ. ಕಾಲ್ತುಳಿತದಂತಹ ದುರಂತ ಮತ್ತೆ ಸಂಭವಿಸದಂತೆ ಯುಪಿ ಸರ್ಕಾರ ಹೈಅಲರ್ಟ್ ಘೋಷಿಸಿದೆ.
ಇದನ್ನೂ ಓದಿ:ಹುಬ್ಬಳ್ಳಿ ಸಿದ್ಧಾರೂಢ ಮಠದಲ್ಲಿರೋ ಆರೂಢ ಜ್ಯೋತಿಯ ಶಕ್ತಿ ಎಂಥದ್ದು? ರಹಸ್ಯ ಬಿಚ್ಚಿಟ್ಟ ನಾಗಾಸಾಧು!
ತುರ್ತು ಆರೋಗ್ಯ ಸೇವೆಗಾಗಿ 1200 ವೈದ್ಯಕೀಯ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರಯಾಗ್ರಾಜ್ನ ಆಸ್ಪತ್ರೆಗಳಲ್ಲಿ 500 ಬೆಡ್, ತುರ್ತು ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇನ್ನು ವಿಶೇಷ ವೈದ್ಯಕೀಯ ತಂಡ, ಔಷಧಿ ದಾಸ್ತಾನು ರೆಡಿ ಇದೆ. ಜನಸಂದಣಿ ತಗ್ಗಿಸಲು ತ್ರಿವೇಣಿ ಸಂಗಮದ ರಸ್ತೆ ಬದಿಯ ಶಾಪ್ಗಳ ಎತ್ತಂಗಡಿ ಮಾಡಲಾಗಿದೆ. ಇಂದು ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಲು ವಿವಿಐಪಿ ಪಾಸ್ಗಳನ್ನು ರದ್ದು ಮಾಡಲಾಗಿದೆ. ಭಕ್ತರ ಸುರಕ್ಷತೆಗಾಗಿ ಯುಪಿ ಸರ್ಕಾರ 2500 ಬಸ್ ಕಾಯ್ದಿಸಿದೆ. ಭಕ್ತರು ಪುಣ್ಯಸ್ನಾನಕ್ಕೆ ಹೋಗಿ ಬರೋವರೆಗೆ ವಿಶೇಷ ನಿಗಾ ಇರಿಸಲಾಗಿದೆ. ಅದೂ ಅಲ್ಲದೇ ಇಂದು ಪ್ರಯಾಗ್ರಾಜ್ನಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಇನ್ನು ನಿನ್ನೆಯವರೆಗೆ ತ್ರಿವೇಣಿ ಸಂಗದಲ್ಲಿ ಸುಮಾರು 35 ಕೋಟಿಗೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ ಅಂತ ಹೇಳಲಾಗಿದೆ. ಫೆಬ್ರವರಿ 12ರಂದು ಮಾಘ ಪೂರ್ಣಿಮೆ ಹಾಗೂ ಫೆಬ್ರವರಿ 26ರಂದು ಮಹಾಶಿವರಾತ್ರಿಯಂದು ಪುಣ್ಯಸ್ನಾನದೊಂದಿಗೆ ಮಹಾಕುಂಭಮೇಳ ಅಂತ್ಯ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ