/newsfirstlive-kannada/media/post_attachments/wp-content/uploads/2025/07/PAHALGAM.jpg)
ಭಾರತದ ಕಾಶ್ಮೀರದ ಪುಲ್ವಾಮಾ ಹಾಗೂ ಪಹಲ್ಗಾಮ್ ಉಗ್ರಗಾಮಿ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ದಿ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆ ಎಂದು ಅಮೆರಿಕಾ ಹೇಳಿದೆ. ಜೊತೆಗೆ ದಿ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆಯನ್ನು ವಿದೇಶಿ ಉಗ್ರಗಾಮಿ ಸಂಘಟನೆ ಎಂದು ಅಮೆರಿಕಾ ಘೋಷಿಸಿದೆ. ಇದರಿಂದಾಗಿ ಪಾಕಿಸ್ತಾನವನ್ನು ಮತ್ತೆ ಎಫ್‌ಎಟಿಎಫ್‌ನ ಗ್ರೇ ಪಟ್ಟಿಯಲ್ಲಿ ಇಡಬೇಕೆಂಬ ಭಾರತದ ಬೇಡಿಕೆಗೆ ಈಗ ಮತ್ತಷ್ಟು ಬಲ ಸಿಕ್ಕಂತಾಗಿದೆ.
ದಿ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆಯು ಪುಲ್ವಾಮಾ ಹಾಗೂ ಪಹಲ್ಗಾಮ್ನಲ್ಲಿ ದಾಳಿ ನಡೆಸಿದ್ದು ತಾನೇ ಎಂದು ಹೇಳಿಕೊಂಡಿತ್ತು. ಎರಡೂ ಭಯೋತ್ಪಾದನಾ ದಾಳಿಯ ಹೊಣೆ ಹೊತ್ತಿಕೊಂಡಿತ್ತು. ದಿ ರೆಸಿಸ್ಟೆನ್ಸ್ ಫ್ರಂಟ್ ಸಂಘಟನೆಯು ಲಷ್ಕರ್ ಇ ತೋಯ್ಬಾದ ಅಂಗಸಂಸ್ಥೆ. ಅಮೆರಿಕಾವು ದಿ ರೆಸಿಸ್ಟೆನ್ಸ್ ಫ್ರಂಟ್ ಅನ್ನು ವಿದೇಶಿ ಭಯೋತ್ಪಾದನಾ ಸಂಘಟನೆ ಎಂದು ಘೋಷಿಸಿರುವುದನ್ನು ಭಾರತದ ವಿದೇಶಾಂಗ ಮಂತ್ರಿ ಜೈಶಂಕರ್ ಅವರು ಸ್ವಾಗತ ಮಾಡಿದ್ದಾರೆ.
ಅಮೆರಿಕಾದ ವಿದೇಶಾಂಗ ಸಚಿವ ಮಾರ್ಕ್ ರುಬಿಯೋ ಹಾಗೂ ವಿದೇಶಾಂಗ ಇಲಾಖೆಯನ್ನು ಅಭಿನಂದಿಸುವುದಾಗಿ ಭಾರತದ ವಿದೇಶಾಂಗ ಮಂತ್ರಿ ಎಸ್.ಜೈಶಂಕರ್ ಟ್ವೀಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಯೋತ್ಪಾದನಾ ನಿಗ್ರಹದಲ್ಲಿ ಭಾರತ- ಅಮೆರಿಕಾ ಒಟ್ಟಾಗಿವೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಗ್ರೇ ಪಟ್ಟಿ ಅಂದರೇ ಸಾಲ ಸೌಲಭ್ಯ, ನೆರವು ಸಿಗಲ್ಲ
ಪಾಕಿಸ್ತಾನವನ್ನು ಎಫ್‌ಎಟಿಎಫ್ (ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಪೋರ್ಸ್)ನ ಗ್ರೇ ಪಟ್ಟಿಯಲ್ಲಿ ಇಡಬೇಕೆಂದು ಭಾರತವು ಎಫ್ಎಟಿಎಫ್ಗೆ ಮತ್ತೆ ಪತ್ರ ಬರೆದು ಒತ್ತಾಯಿಸಿದೆ. ಫೈನಾನ್ಷಿಯಲ್ ಟಾಸ್ಕ್ ಪೋರ್ಸ್ ಜಗತ್ತಿನಲ್ಲಿ ಭಯೋತ್ಪಾದನೆಗೆ ಹಣ ಪೂರೈಸುವುದನ್ನು ತಡೆಯಲು ಇರುವ ಸಂಸ್ಥೆ. ಜೊತೆಗೆ ಭಯೋತ್ಪಾದನೆಗೆ ಹಣ ವರ್ಗಾವಣೆ ಮಾಡುವುದನ್ನು ತಡೆಯಲು ವಿಫಲವಾಗುವ ರಾಷ್ಟ್ರಗಳನ್ನು ವಿವಿಧ ಪಟ್ಟಿಗೆ ಸೇರಿಸಲಾಗುತ್ತೆ. ಗ್ರೇ ಪಟ್ಟಿ ಅಂದರೇ ಬೂದು ಬಣ್ಣದ ಪಟ್ಟಿಗೆ ಯಾವುದೇ ರಾಷ್ಟ್ರ ಸೇರ್ಪಡೆಯಾದರೇ, ಅಂಥ ರಾಷ್ಟ್ರಕ್ಕೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಸಾಲ ಸೌಲಭ್ಯ, ನೆರವು ಸಿಗಲ್ಲ. ಹೀಗಾಗಿ ಪಾಕಿಸ್ತಾನವು ಭಯೋತ್ಪಾದನೆಗೆ ಹಣಕಾಸು ನೆರವು ನೀಡುತ್ತಿದೆ. ಭಯೋತ್ಪಾದನಾ ಸಂಘಟನೆಗಳಿಗೆ ತನ್ನ ನೆಲದಲ್ಲಿ ಆಶ್ರಯ ನೀಡಿದೆ. ಹೀಗಾಗಿ ಪಾಕಿಸ್ತಾನವನ್ನು ಗ್ರೇ ಪಟ್ಟಿಗೆ ಸೇರ್ಪಡೆ ಮಾಡಬೇಕು ಅನ್ನೋದು ಭಾರತದ ಒತ್ತಾಯವಾಗಿದೆ.
ಪಾಕಿಸ್ತಾನವು ಜಾಗತಿಕ ಹಣಕಾಸು ಸಂಸ್ಥೆಗಳಿಂದ ಪಡೆಯುವ ಹಣ, ಸಾಲವನ್ನು ಭಯೋತ್ಪಾದನೆಗೆ ಬಳಸುತ್ತಿದೆ ಎಂದು ಭಾರತವು ಮೊದಲಿನಿಂದಲೂ ವಾದಿಸುತ್ತಿದೆ. ಹೀಗಾಗಿ ಭಾರತದ ಈ ವಾದಕ್ಕೆ ಅಮೆರಿಕಾವು ದಿ ರೆಸಿಸ್ಟೆನ್ಸ್ ಫ್ರಂಟ್ ಅನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿರುವುದು ಮತ್ತಷ್ಟು ಪುಷ್ಟಿ ನೀಡಿದೆ. ಪಾಕಿಸ್ತಾನ ಬೂದು ಪಟ್ಟಿ ಅಥವಾ ಗ್ರೇ ಲಿಸ್ಟ್ಗೆ ಸೇರ್ಪಡೆ ಮಾಡಿದರೇ, ಪಾಕಿಸ್ತಾನ, ಭಯೋತ್ಪಾದನೆಗೆ ಬೆಂಬಲ ನೀಡುವುದು ಹಾಗೂ ಹಣಕಾಸು ನೆರವು ಅನ್ನು ಭಯೋತ್ಪಾದನೆ ಸಂಘಟನೆಗಳಿಗೆ ನೀಡುವುದನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಈ ಕ್ರಮ ಕೈಗೊಳ್ಳಲು ವಿಫಲವಾದರೇ, ಬಳಿಕ ಎಫ್ಎಟಿಎಫ್ ಅಂಥ ದೇಶವನ್ನು ಕಪ್ಪು ಪಟ್ಟಿಗೆ ಸೇರಿಸುತ್ತೆ.
ಇದನ್ನೂ ಓದಿ:ಮನೆಯಲ್ಲೇ ಬಾರ್, ಮಲೇಷ್ಯಾ ಗರ್ಲ್.. 10 ವರ್ಷ, ₹200 ಕೋಟಿ ದೋಖಾ, ಯಾರೀ ನಯವಂಚಕ?
ಭಯೋತ್ಪಾದನಾ ಸಂಘಟನೆಗಳಿಗೆ ಹಣ
ಈ ವರ್ಷದ ಸೆಪ್ಟೆಂಬರ್ ಅಥವಾ ಆಕ್ಟೋಬರ್ನಲ್ಲಿ ಎಫ್‌ಎಟಿಎಫ್‌ನ ಸಭೆ ನಡೆಯಲಿದೆ. ಆ ವೇಳೆ ಭಾರತದ ಮನವಿಯನ್ನು ಎಫ್‌ಎಟಿಎಫ್ ಪರಿಗಣಿಸಬಹುದು. ಪಾಕಿಸ್ತಾನದ ಮೇಲಿನ ನಂಬಿಕೆ ಇಟ್ಟು ಐಎಂಎಫ್, ವಿಶ್ವಬ್ಯಾಂಕ್ ನೀಡಿದ ಸಾಲದ ಹಣವನ್ನು ಪಾಕಿಸ್ತಾನದ ಬಡ ಜನರ ಉದ್ಧಾರಕ್ಕಾಗಿ ಬಳಸಿಲ್ಲ. ಬದಲಿಗೆ ಭಯೋತ್ಪಾದನಾ ಸಂಘಟನೆಗಳನ್ನು ಬೆಳೆಸಲು ಆ ಹಣ ಬಳಕೆಯಾಗಿದೆ ಎಂದು ಭಾರತ ಹೇಳಿದೆ.
ಜೊತೆಗೆ ಪಾಕಿಸ್ತಾನದಲ್ಲಿ ಭಯೋತ್ಪಾದನಾ ಸಂಘಟನೆಗಳಿವೆ, ಭಯೋತ್ಪಾದನಾ ಸಂಘಟನೆಗಳಿಗೆ ಪಾಕಿಸ್ತಾನ ಸರ್ಕಾರ, ಮಿಲಿಟರಿ ನೆರವು ನೀಡಿವೆ ಎನ್ನುವುದಕ್ಕೆ ಬೇಕಾದ ಸಾಕ್ಷ್ಯಗಳನ್ನು ಭಾರತ ಈಗಾಗಲೇ ಜಗತ್ತಿಗೆ ನೀಡಿದೆ. ಎಫ್‌ಎಟಿಎಫ್‌ನ ಸದಸ್ಯ ರಾಷ್ಟ್ರಗಳಾದ ಮೆಕ್ಸಿಕೋ, ಅರ್ಜೆಂಟೈನಾ, ಕೆನಡಾ, ಡೆನ್ಮಾರ್ಕ್ ದೇಶಗಳಿಗೂ ಭಾರತ ಸಾಕಷ್ಟು ಮಾಹಿತಿಯನ್ನು ಪಾಕ್ ಬಗ್ಗೆ ನೀಡಿದೆ. ಈಗ ಪಾಕಿಸ್ತಾನದ ದಿ ರೆಸಿಸ್ಟೆನ್ಸ್ ಫ್ರಂಟ್ ಅನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಅಮೆರಿಕಾವು ಘೋಷಿಸಿರುವುದು ಭಾರತದ ವಾದಕ್ಕೆ ಮತ್ತಷ್ಟು ಬಲ ನೀಡಿದೆ. ಅಮೆರಿಕಾ ವಿಶ್ವದ ಸೂಪರ್ ಪವರ್ ರಾಷ್ಟ್ರ. ಹೀಗಾಗಿ ಅದರ ಈ ತೀರ್ಮಾನ ವಿಶ್ವದ ಉಳಿದ ರಾಷ್ಟ್ರಗಳ ಮೇಲೂ ಪರಿಣಾಮ, ಪ್ರಭಾವ ಬೀರುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ