/newsfirstlive-kannada/media/post_attachments/wp-content/uploads/2025/03/The-Sentinelese.jpg)
ಉತ್ತರ ಸೆಂಟಿನೆಲ್ ದ್ವೀಪ, ಇದು ಭಾರತದ ಅತ್ಯಂತ ಭಯಾನಯಕ ದ್ವೀಪ. ಇಲ್ಲಿ ಕಾಲಿಡಲು ಅಂಡಮಾನ್ ನಿಕೋಬಾರ್​ನ ಸ್ಥಳೀಯರೇ ಕನಸಿನಲ್ಲಿ ಯೋಚಿಸುವುದಿಲ್ಲ. ಇಲ್ಲಿ ವಾಸಿಸುವ ಆದಿವಾಸಿ ಜನಾಂಗದವರು ನಮ್ಮಂತ ಸಾಮಾನ್ಯ ಮನುಷ್ಯರನ್ನು ಕಂಡರೆ ಹಿಂದೆ ಮುಂದೆ ನೋಡದೆ ಬಾಣ ಹೊಡೆದು ಸಾಯಿಸಿ ಬಿಡುತ್ತಾರೆ. ನೂರಾರು ವರ್ಷಗಳಿಂದ ಹೊರ ಜಗತ್ತನಿಂದ ಸಂಪರ್ಕವನ್ನೇ ಕಡಿದುಕೊಂಡು ತನ್ನ ಪಾಡಿಗೆ ತಾನಿರುವ ಜನಸಮುದಾಯವದು. ಆ ಜಾಗಕ್ಕೆ ಕಾಲಿಟ್ಟ ಆಚೆ ಜಗತ್ತಿನವರಾರು ವಾಪಸ್ ಜೀವಂತವಾಗಿ ಬಂದ ಉದಾಹರಣೆಯೇ ಇಲ್ಲ. ಅಂತ ಜಾಗಕ್ಕೆ ಹೊರಟಿದ್ದ ಅಮೆರಿಕಾದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ.
ಮಾರ್ಚ್​ 31 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಮೆರಿಕಾದ 24 ವರ್ಷದ ಯುವಕ ಮಿಖೈಲೊ ವಿಕ್ಟೋರೊವಿಚ್ ಪಾಲಿಯಕೋವ್​​ನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಈತ ನಿರ್ಬಂಧಿತ ಪ್ರದೇಶದವಾದ ಉತ್ತರ ಸೆಂಟಿನೆಲ್ ದ್ವೀಪಕ್ಕೆ ಹೊರಟಿದ್ದ ಎಂದು ಸಿಐಡಿ ಆರೋಪಿಸಿದೆ.
ಮಾರ್ಚ್​ 26 ರಂದು ಅಂಡಮಾನ್ ನಿಕೋಬಾರ್​​ ರಾಜಧಾನಿಯಾದ ಪೋರ್ಟ್​ಬ್ಲೆರ್​ಗೆ ಈ ವ್ಯಕ್ತಿ ತಲುಪಿದ್ದ. ಕುಮಾರ್ ಡೇರಾ ಬೀಚ್ ಮೂಲಕ ಉತ್ತರ ಸೆಂಟಿನೆಲ್ ದ್ವೀಪಕ್ಕೆ ಹೋಗಲು ಯತ್ನಿಸಿದ್ದ. ಮಾರ್ಚ್​ 29ರ ನಡುರಾತ್ರಿ ಸುಮಾರು 1 ಗಂಟೆಗೆ ಈತ ಕುಮಾರ ಡೇರಾ ಬೀಚ್​ನಿಂದ ಬೋಟ್​ ಮೂಲಕ ಹೊರಟಿದ್ದು. ದ್ವೀಪದಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ನೀಡಲು ಅಂತ ತನ್ನೊಂದಿಗೆ ತೆಂಗಿನಕಾಯಿ ಹಾಗೂ ಕೋಲಾದ ಕ್ಯಾನ್​ನ್ನು ಕೂಡ ತೆಗೆದುಕೊಂಡು ಹೊರಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಲಿಯಕೋವ್​​ ಉತ್ತರ ಸೆಂಟಿನಲ್​ ದ್ವೀಪದ ಈಶಾನ್ಯ ಭಾಗವನ್ನು ಮಾರ್ಚ್​​ 30 ಬೆಳಗ್ಗೆ 10 ಗಂಟೆಗೆ ತಲುಪಿದ್ದನಂತೆ. ಬೈನಾಕ್ಯೂಲರ್ ಮೂಲಕ ಅಲ್ಲಿಯ ಜನರನ್ನು ದೂರದಿಂದ ಹುಡುಕಿದ್ದಾನೆ ಆದರೆ ಆತನಿಗೆ ಯಾರು ಕೂಡ ಕಂಡು ಬಂದಿಲ್ಲ. ಆದರೂ ಕೂಡ ಒಂದು ಗಂಟೆ ಅಲ್ಲಿಯೇ ಕಳೆದಿದ್ದಾನೆ. ಸಿಳ್ಳೆ ಹೊಡೆದು ಆ ಸಮುದಾಯದ ಜನರನ್ನು ತನ್ನತ್ತ ಸೆಳೆಯಲು ಯತ್ನಿಸಿದ್ದಾನೆ ಆದರೂ ಕೂಡ ಯಾವುದೇ ರೀತಿಯ ಪ್ರತಿಕ್ರಿಯೆ ಬಂದಿಲ್ಲ. ಕೊನೆಗೆ ಯಾರು ಅವನಿಗೆ ಕಾಣದೇ ಇದ್ದಾಗ ಮತ್ತೆ ಕುಮಾರ ಡೇರಾ ಬೀಚ್​ಗೆ ವಾಪಸ್ ಬಂದಿದ್ದಾನೆ. ಆಗ ಅಲ್ಲಿ ಅವನನ್ನು ಮೀನುಗಾರರು ಕಂಡು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ವಿಚಾರಣೆ ಇನ್ನೂ ಕೂಡ ನಡೆಯುತ್ತಿದೆ ಎಂದು ಡಿಜಿಪಿ ಹೆಚ್​.ಎಸ್​. ಧಲಿವಾಲ ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2025/04/Sentinel-Island-1.jpg)
2018ರಲ್ಲಿ ಇದೇ ರೀತಿ ಉತ್ತರ ಸೆಂಟಿಲೆನ್ ದ್ವೀಪಕ್ಕೆ ಅಲ್ಲಿಯ ಆದಿವಾಸಿ ಜನರನ್ನು ಮತಾಂತರ ಮಾಡಲು ಹೋಗಿದ್ದ ಜಾನ್ಹ್​ ಅಲ್ಲೆನ್ ಚೌ ಎಂಬ ಅಮೆರಿಕಾದ ವ್ಯಕ್ತಿಯನ್ನು ಸೆಂಟಿನೆಲ್​ ದ್ವೀಪದ ಜನರು ಬಾಣ ಹೊಡೆದು ಕೊಂದು ಹಾಕಿದ್ದರು. ಈಗ ಅಂತದೇ ಪ್ರಯತ್ನವನ್ನು 24 ವರ್ಷದ ಅಮೆರಿಕಾದ ವ್ಯಕ್ತಿ ಮಾಡಿದ್ದಾನೆ. ಹಣೆಬರಹ ಗಟ್ಟಿ ಇದ್ದಿದ್ದರಿಂದ ಬದುಕಿ ಬಂದಿದ್ದಾನೆ. ಒಂದು ವೇಳೆ ಆತ ಅಲ್ಲಿಯ ಜನರ ಕಣ್ಣಿಗೆ ಬಿದ್ದಿದ್ದೇ ಆದಲ್ಲಿ ಇವನ ಎದೆಯನ್ನು ಕೂಡ ಅವರ ಬಾಣಗಳು ಸೀಳುತ್ತಿದ್ದಿದ್ದು ಸ್ಪಷ್ಟ. ಈತನೂ ಕೂಡ ಮತಾಂತರ ಉದ್ದೇಶದಿಂದಲೇ ಈ ದ್ವೀಪಕ್ಕೆ ಕಾಲಿಟ್ಟಿದ್ದನಾ ಅಥವಾ ಬೇರೆ ಕಾರಣಗಳಿದ್ದವಾ ಎನ್ನುವುದು ಸಂಪೂರ್ಣ ತನಿಖೆಯ ನಂತರವೇ ತಿಳಿದು ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us