/newsfirstlive-kannada/media/post_attachments/wp-content/uploads/2025/02/GOURAMMA_1.jpg)
ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ನಡೀತಿರುವ ಕುಂಭಮೇಳಕ್ಕೆ ಒಮ್ಮೆಯಾದರೂ ಹೋಗಬೇಕು, ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಬೇಕು ಅನ್ನೋದು ಬಹುತೇಕರ ಆಸೆ. ಆದ್ರೆ ಹಣವಿಲ್ಲದವರಿಗೆ ಇದು ಕನಸು ಮಾತ್ರ. ಹೀಗೆ ಮಹಾಕುಂಭಮೇಳಕ್ಕೆ ಹೋಗಲಾಗದ ಮಹಿಳೆಯೊಬ್ಬರು ಮನೆಯಲ್ಲೇ ಗಂಗೆ ಚಿಮ್ಮಿಸಿ ಮಹಾಕುಂಭದ ನಾಮಕರಣ ಮಾಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಸಾಧು-ಸಂತರ ಸಂಗಮ. ಗಂಗಾನದಿ ತೀರದಲ್ಲಿ ಕೋಟ್ಯಂತರ ಜನರಿಂದ ಪುಣ್ಯ ಸ್ನಾನ.. ಹೀಗೆ ಕೇಸರಿ ಲೋಕವೇ ಸೃಷ್ಟಿಯಾಗಿರೋ ಪ್ರಯಾಗ್ರಾಜ್ಗೆ ಹೋಗಬೇಕು ಅನ್ನೋದು ಎಲ್ಲರ ಆಸೆ. ಆದ್ರೆ ಹೀಗೆ ಮಹಕುಂಭಮೇಳಕ್ಕೆ ಹೋಗಲಾಗದ ಮಹಿಳೆಯೊಬ್ಬರು ಮನೆಯಲ್ಲೇ ಗಂಗೆ ಚಿಮ್ಮಿಸಿದ್ದಾರೆ. ಈ ಮಹಾತ್ಕಾರ್ಯ ಮಾಡಿದವರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶ ನಗರದ ಗೌರಿ.
ಎಲ್ಲರಿಗೂ ಪವಿತ್ರ ಗಂಗಾಸ್ನಾನ ಮಾಡುವ ಬಯಕೆ
ಏಕಾಂಗಿಯಾಗಿ ಬಾವಿ ತೋಡಿರುವ 56 ವರ್ಷದ ಗೌರಿ ಮಹಾಕುಂಭಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡುವ ಹಂಬಲ ಹೊಂದಿದ್ದರು. ಹಣದ ಕೊರತೆಯಿಂದ ಕಟ್ಟಿಕೊಂಡ ಕನಸು ಈಡೇರಲಿಲ್ಲ. ಹೀಗಾಗಿ ಪವಿತ್ರ ಗಂಗಾಸ್ನಾನ ಮಾಡುವ ಬಯಕೆ ಹೊತ್ತು ಮನೆಯಲ್ಲೇ ಗಂಗೆ ತರಿಸುವ ದೃಢ ನಿರ್ಧಾರ ಮಾಡಿದರು. ಇದಕ್ಕಾಗಿ ಮನೆಯ ಹಿಂಭಾಗದ ಚಿಕ್ಕ ಜಾಗದಲ್ಲಿ ಏಕಾಂಗಿಯಾಗಿ ಬಾವಿ ತೋಡಲು ಪ್ರಾರಂಭಿಸಿದರು. 40 ಅಡಿ ಆಳದಲ್ಲೀಗ ಗಂಗಾ ಜಲ ಉಕ್ಕಿದೆ. ಬಾವಿಯಲ್ಲಿ ತುಂಬಿದ ಜಲಕ್ಕೆ ಪೂಜೆ ಸಲ್ಲಿಸಿ ಮನೆಗೆ ಬರಮಾಡಿಕೊಳ್ಳಲಾಗಿದೆ. ಫೆಬ್ರುವರಿ 26ಕ್ಕೆ ಶಿವರಾತ್ರಿ ದಿನ ಈ ವಿಶೇಷ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಲು ನಿರ್ಧರಿಸಲಾಗಿದ್ದು, ಈ ಬಾವಿಗೆ ಕುಂಭ ಮೇಳದ ಸವಿ ನೆನಪಿನ ಫಲಕ ಹಾಕುವ ಆಸೆ ಗೌರಿ ಅಮ್ಮನವರದ್ದು.
ಕುಂಭಮೇಳದಲ್ಲಿ ಎಷ್ಟೋ ಜನ ಸ್ನಾನ ಮಾಡುತ್ತಾರೆ. ಇದಕ್ಕಾಗಿ ಅಲ್ಲಿಗೆ ಹೋಗಿ ಬರುತ್ತಿದ್ದಾರೆ. ಆದರೆ ನಮಗೆ ಹೋಗಲು ಸಾಧ್ಯವಾಗದ ಮಾತು. ಅದರ ನೆನಪಿಗಾಗಿ ಈ ಬಾವಿಯನ್ನು ತೋಡಲಾಗಿದೆ. ಮಹಾ ಕುಂಭಕ್ಕೆ ಹೋಗುವುದಕ್ಕೆ ಆಗಲ್ಲ. ಅದಕ್ಕಾಗಿ ಇಲ್ಲೇ ನೀರು ತಗೊಂಡು ಸ್ನಾನ ಮಾಡೋದು. ಗಂಗೆ ಎಲ್ಲ ಕಡೆ ಹರಿಯುವುದು ಒಂದೇ. ಇಲ್ಲಿ ಗಂಗೆ ಹರಿಯಲ್ಲ, ಒಳಗೆ ಕುಳಿತುಕೊಳ್ಳುತ್ತಾಳೆ. ಸ್ನಾನ ಮಾಡೋಣಂತ ಮಾಡಿದೆ.
ಗೌರಿ, ಬಾವಿ ತೋಡಿದ ಮಹಿಳೆ.
ಇದನ್ನೂ ಓದಿ:ಅಂಬೇಡ್ಕರ್ ಬಳಿಕ ಹೆಚ್ಚು ಓದಿಕೊಂಡ ವ್ಯಕ್ತಿ ಯಾರು? ಇವರ ಬಳಿ ಇರೋ ಡಿಗ್ರಿಗಳು ಎಷ್ಟು?
ಇನ್ನು ಈ ಗೌರಿ ಏಕಾಂಗಿಯಾಗಿ ಬಾವಿ ತೋಡಿ ನೀರು ತರಿಸಿದ್ದು ಇದು ಮೊದಲಲ್ಲ. ಈ ಹಿಂದೆ ಊರಿಗೆ, ಜನರಿಗೆ ಹಾಗೂ ತೋಟಕ್ಕೆ ನೀರಿಲ್ಲ ಎಂದು 2 ಬಾವಿ ತೋಡಿದ್ದರು. ನಂತರ ತಮ್ಮ ಬಡಾವಣೆಯ ಅಂಗನವಾಡಿ ಮಕ್ಕಳಿಗೆ ಕುಡಿಯುವ ನೀರಿಲ್ಲ ಎಂದು ತಾವೇ ಏಕಾಂಗಿಯಾಗಿ ಬಾವಿ ತೋಡಿ ಶುದ್ಧ ಕುಡಿಯುವ ನೀರು ಸಿಗುವಂತೆ ಮಾಡಿದ್ದರು. ಇದೀಗ ಕುಂಭಮೇಳದ ಸವಿನೆನಪಿಗಾಗಿ ಮತ್ತೊಮ್ಮೆ ತಮ್ಮ ಮನೆಯ ಬಳಿಯೇ ಬಾವಿ ತೋಡಿದ್ದಾರೆ..
ಮನಸ್ಸು ಪರಿಶ್ರಮ ಇದ್ರೆ ಆಕಾಶವೂ ಅಂಗೈಯಗಲ ಅನ್ನೋಥರ, ಈಕೆ ಮಹಾಕುಂಭಮೇಳಕ್ಕೆ ಹೋಗಿ ಗಂಗಾಸ್ನಾನ ಮಾಡಲಾಗದ ಪರಿಸ್ಥಿತಿಯನ್ನ ಮನೆಯಲ್ಲೇ ಗಂಗೆ ಚಿಮ್ಮಿಸಿ ಸರಿದೂಗಿಸಿಕೊಂಡಿದ್ದಾರೆ. ಗಂಗೆಯನ್ನು ತನ್ನ ತಾಯಿಗಾಗಿ ಭೂಮಿಗೆ ತಂದ ಭಗೀರಥ ಮಹಾಋಷಿಯಂತೆ ಗೌರಮ್ಮ ತನ್ನ ಮನೆಗೆ ಗಂಗೆ ತರಿಸಿ, ಪ್ರಯಾಗರಾಜ್ನಲ್ಲಿ ಪವಿತ್ರ ಸ್ನಾನ ಮಾಡುವ ಕನಸನ್ನ ನನಸು ಮಾಡಿಕೊಂಡಿದ್ದಾರೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ