ವೀರಶೈವ ಲಿಂಗಾಯತ ಪಂಚ ಪೀಠಾಧೀಶರ ಸಮ್ಮೇಳನ; 12 ನಿರ್ಣಯ ಘೋಷಿಸಿದ ಶ್ರೀಗಳು

author-image
Bheemappa
Updated On
ವೀರಶೈವ ಲಿಂಗಾಯತ ಪಂಚ ಪೀಠಾಧೀಶರ ಸಮ್ಮೇಳನ; 12 ನಿರ್ಣಯ ಘೋಷಿಸಿದ ಶ್ರೀಗಳು
Advertisment
  • ಉತ್ತರ ಭಾರತದಲ್ಲಿಯೂ ವೀರಶೈವ ಲಿಂಗಾಯತ ಸಮುದಾಯ ಇದೆ
  • ಪಂಚಪೀಠಗಳು ಮತ್ತು ಶಾಖಾ ಮಠಗಳ ನಡುವೆ ಉತ್ತಮ ಬಾಂಧವ್ಯ
  • ಉಪಜಾತಿ ಯಾವುದೇ ಇದ್ರು ವೀರಶೈವ ಲಿಂಗಾಯತ ಒಗ್ಗಟ್ಟು ಕಾಪಾಡಿ

ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಹೆಸರಾದ ದಾವಣಗೆರೆಯಲ್ಲಿ 2 ದಿನಗಳ ಕಾಲ ವೀರಶೈವ ಲಿಂಗಾಯತ ಪಂಚ ಪೀಠಾಧೀಶರ ಸಮ್ಮೇಳನ ನಡೆದಿದೆ. 16 ವರ್ಷಗಳ ಬಳಿಕ ವೀರಶೈವ ಲಿಂಗಾಯತ ಪಂಚ ಪೀಠಾಧೀಶರು ಒಂದೇ ವೇದಿಕೆಗೆ ಬಂದು ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ವೀರಶೈವ ಲಿಂಗಾಯತ ಪಂಚ ಪೀಠಗಳಾದ ರಂಭಾಪುರಿ, ಕಾಶೀ, ಉಜ್ಜೈನಿ, ಕೇದಾರ, ಶ್ರೀಶೈಲ ಪೀಠಾಧಿಪತಿಗಳು ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮನವಿಗೆ ಮೇರೆಗೆ ಒಗ್ಗೂಡಿ ಒಂದೇ ವೇದಿಕೆಗೆ ಬಂದು ಭಾಗವಹಿಸಿದ್ದರು.

ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಆಯೋಜಿಸಿದ್ದ ಈ ಪಂಚ ಪೀಠಾಧೀಶರ ಶೃಂಗ ಸಮ್ಮೇಳನದಲ್ಲಿ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಕೂಡ ಭಾಗವಹಿಸಿದ್ದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ವೀರಶೈವ ಲಿಂಗಾಯತ ನಾಯಕರು ಭಾಗಿಯಾಗಿ ಸಮುದಾಯದ ಒಗ್ಗಟ್ಟು, ಏಳಿಗೆ ಹಾಗೂ ಮುಂದಿನ ದಿನಗಳಲ್ಲಿ ಮಾಡಬೇಕಾದ ಕೆಲಸ ಕಾರ್ಯಗಳ ಬಗ್ಗೆ ಚರ್ಚೆ ನಡೆಸಿದ್ದರು.

publive-image

ವೀರಶೈವ ಲಿಂಗಾಯತ ಸಮುದಾಯದ ಏಳಿಗೆ ದೃಷ್ಟಿಯಿಂದ ಏನೆಲ್ಲಾ ಕೆಲಸ ಕಾರ್ಯಗಳನ್ನು ಜನರು ಹಾಗೂ ಸರ್ಕಾರ ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಸಿ ಪ್ರಮುಖ 12 ನಿರ್ಣಯ ಮಂಡಿಸಿ ಅಂಗೀಕರಿಸಲಾಗಿದೆ. ಉಪಜಾತಿಯ ಕಾರಣಕ್ಕಾಗಿ ವೀರಶೈವ ಲಿಂಗಾಯತ ಧರ್ಮ ಹರಿದು ಹಂಚಿ ಹೋಗಬಾರದು. ಜಾತಿ ಗಣತಿ ವೇಳೆ ಎಲ್ಲ ಒಳಪಂಗಡಗಳು ವೀರಶೈವ ಲಿಂಗಾಯತ ಎಂದೇ ಬರೆಸಬೇಕು ಎಂದು ನಿರ್ಣಯ ಕೈಗೊಳ್ಳಲಾಗಿದೆ.
ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯ ಶ್ರೀಗಳು 12 ನಿರ್ಣಯಗಳನ್ನು ಘೋಷಿಸಿದರು.

12 ನಿರ್ಣಯಗಳು ಯಾವುವು..?

1. ಬರಲಿರುವ ಜಾತಿಗಣತಿಯಲ್ಲಿ ಎಲ್ಲಾ ಒಳಪಂಗಡಗಳು ವೀರಶೈವ ಲಿಂಗಾಯತ ಎಂದೇ ಬರೆಸಬೇಕು. ವೀರಶೈವ ಲಿಂಗಾಯತ ಸಮಗ್ರತೆ ಮತ್ತು ಒಗ್ಗಟ್ಟು ಪ್ರತಿಪಾದಿಸಬೇಕು.

2. ಸನಾತನ ಹಿಂದೂ ವೀರಶೈವ ಧರ್ಮದ ಲಿಂಗಾಯತ ಅನುಯಾಯಿಗಳು ಉದ್ಯೋಗದಿಂದಲೇ ಉಪಜಾತಿ ನಿರ್ಮಾಣ ಆಗಿದ್ದು, ಯಾವುದೇ ಕಾರಣಕ್ಕೂ ವೀರಶೈವ ಲಿಂಗಾಯತ ಧರ್ಮವು ಹಂಚಿ ಹೋಗಬಾರದು. ಉಪಜಾತಿ ಯಾವುದೇ ಇದ್ದರೂ ವೀರಶೈವ ಲಿಂಗಾಯತ ಒಗ್ಗಟ್ಟು ಕಾಪಾಡಿಕೊಂಡು ಹೋಗಬೇಕು.

3. ಜನಗಣತಿ ಮಾಡುವ ವೇಳೆ ಮತದ ಕಾಲಂ ಇರಬೇಕು ಎಂಬ ಆಗ್ರಹ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ. ಈ ವಿಷಯವಾಗಿ ಪ್ರಧಾನಿ ಮೋದಿ ಅವರ ಗಮನ ಸೆಳೆಯಲು ಸಮಾಜದ ಮುಖಂಡರು, ವೀರಶೈವ ಲಿಂಗಾಯತ ಸಮಾಜದ ಮಠಾಧಿಪತಿಗಳು, ಎಲ್ಲಾ ಪಕ್ಷಗಳ ಸಂಸದರ ನಿಯೋಗ ನವದೆಹಲಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು.

4.ವೀರಶೈವ ಲಿಂಗಾಯತ ಧರ್ಮದ ಎಲ್ಲಾ ಒಳಪಂಗಡಗಳಿಗೆ ಕೇಂದ್ರ ಸರ್ಕಾರದ ಒಬಿಸಿ ಕೊಡಿಸಲು ಎಲ್ಲಾ ಉಪಪಂಗಡಗಳ ಒಗ್ಗಟ್ಟಿನಿಂದ ರಚನಾತ್ಮಾಕ ಕಾರ್ಯಕ್ರಮ ಆಯೋಜಿಸಬೇಕು.

publive-image

5. ವೀರಶೈವ ಲಿಂಗಾಯತ ಒಳಪಂಗಡಗಳಿಗೆ ನೀಡಲಾಗುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೀಸಲಾತಿ ಮುಂದುವರಿಕೆ ಆಗಬೇಕು.

6. ವೀರಶೈವ ಲಿಂಗಾಯತ ಮಹಾಸಭಾ ಎಲ್ಲಾ ಜಿಲ್ಲಾ, ತಾಲೂಕು, ಗ್ರಾಮೀಣ ಭಾಗದ ಸಂಘಟನೆಗಳು ಯಾವುದೇ ಕಾರ್ಯಕ್ರಮ, ರ್ಯಾಲಿ ಸೇರಿದಂತೆ ಸಮಾರಂಭ ನಡೆಸಿದರೆ ಶ್ರೀ ಜಗದ್ಗುರು ರೇಣುಕಾಚಾರ್ಯರ ಫೋಟೋ ಹಾಕಬೇಕು. ಕೆಲವು ಕಡೆ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದ ಲಿಂಗೈಕ್ಯ ಹಾನಗಲ್ ಕುಮಾರಸ್ವಾಮಿ, ಬಸವಣ್ಣವರ ಥಮ್ಲಂ ಬಲಭಾಗದಲ್ಲಿ ಜಗದ್ಗುರು ರೇಣುಕಾಚಾರ್ಯರ ಭಾವಚಿತ್ರ ಹಾಕದೇ ಕೆಲವು ಸಂಘಟನೆಗಳು ಪತ್ರಿಕೆಗಳಲ್ಲಿ ಪ್ರಕಟಿಸಿದ್ದು ಗಮನಕ್ಕೆ ಬಂದಿದೆ. ಹಾಗೆ ಮಾಡಬಾರದು. ಈ ಮೂಲಕ ಮಹಾಸಭಾಗೆ ತಿಳುವಳಿಕೆ ಕೊಡುತ್ತೇವೆ. ಪಂಚಪೀಠಾಧ್ಯಕ್ಷರ ಐದು ಫೋಟೋ ಹಾಕಲು ಕಷ್ಟವಾಗುತ್ತದೆ. ಐದೂ ಫೋಟೋ ಹಾಕಲು ಸಾಧ್ಯ ಆಗದಿದ್ರೆ ರೇಣುಕಾಚಾರ್ಯರ ಒಂದು ಫೋಟೋವಾದರೂ ಇರಬೇಕು ಎಂಬುದು ಪಂಚಪೀಠಾಧ್ಯಕ್ಷರ ಬಯಕೆ. ಇದಕ್ಕೆ ಎಲ್ಲರ ಸಹಮತ ಇದೆ.

7. ವೀರಶೈವ ಲಿಂಗಾಯತ ಸಮುದಾಯದ ತತ್ವ, ಸಿದ್ಧಾಂತ ಮನವರಿಕೆ ಮಾಡಿಕೊಡಬೇಕು.

8. ಗುರು ಪರಂಪರೆ, ಪ್ರಾಚೀನ ಪರಂಪರೆ ಆಚರಣೆ ಸೇರಿದಂತೆ ಹಿಂದಿನಂತೆ ಎಲ್ಲವೂ ನಡೆಯುವಂತಾಗಬೇಕು ಯುವಜನಾಂಗದವರಿಗೆ ವೀರಶೈವ ಲಿಂಗಾಯತ ಧರ್ಮದ ಆಚರಣೆ, ಇತಿಹಾಸ, ಧಾರ್ಮಿಕ ಪರಂಪರೆ ತಿಳಿಸಿಕೊಡುವ ಕೆಲಸ ಆಗಬೇಕು.

9. ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳ ವಿಕಲಚೇತನರು, ಶೋಷಿತರ ಹಿತರಕ್ಷಣೆ, ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು.

ಇದನ್ನೂ ಓದಿ:ಕೇವಲ 18 ತಿಂಗಳಿಗೆ 18 ಕೋಟಿ ಜೀವನಾಂಶ ಕೇಳಿದ ಪತ್ನಿ.. ದುಡಿದು ತಿನ್ನಿ- ಸುಪ್ರೀಂಕೋರ್ಟ್ CJI

publive-image

10. ಪಂಚಪೀಠಗಳು ಮತ್ತು ಶಾಖಾ ಮಠಗಳ ನಡುವೆ ಉತ್ತಮ ಬಾಂಧವ್ಯ, ವಾತಾವರಣ ನಿರ್ಮಾಣಗೊಳ್ಳಬೇಕು. ಆಯಾ ಪೀಠಗಳ ಪೀಠಾಧ್ಯಕ್ಷರು ಶಾಖಾ ಮಠಗಳ ಸಮಸ್ಯೆ ಪರಿಹರಿಸಲು ಮಾರ್ಗದರ್ಶನ ನೀಡಿ ಬಲಪಡಿಸಬೇಕು. ಶಾಖಾ ಮಠದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು.

11. ಪ್ರತಿವರ್ಷವೂ ಪೀಠಾಚಾರ್ಯರು, ಶಿವಾಚಾರ್ಯರ ಶೃಂಗಸಭೆ ನಡೆಸಿ ವೀರಶೈವ ಲಿಂಗಾಯತ ಪರಂಪರೆ ಆದರ್ಶ ಪಾಲನೆ ಮಾಡಲಾಗುವುದು.

12. ಉತ್ತರ ಭಾರತದ ದೆಹಲಿ, ರಾಜಸ್ತಾನ, ಜಮ್ಮುಕಾಶ್ಮೀರ ಸೇರಿದಂತೆ ಹಲವು ರಾಜ್ಯಗಳಲ್ಲಿ ಅನಾದಿ ಕಾಲದಿಂದಲೂ ವೀರಶೈವ ಲಿಂಗಾಯತ ಸಮುದಾಯದವರು ವಾಸವಿದ್ದು, ಅವರಿಗೂ ಸರ್ಕಾರಿ ಸೌಲಭ್ಯಗಳು, ಯೋಜನೆಗಳನ್ನು ರೂಪಿಸಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment