/newsfirstlive-kannada/media/post_attachments/wp-content/uploads/2024/10/VIJ_FARMERS-1.jpg)
ವಿಜಯಪುರ ಜಿಲ್ಲೆಯಲ್ಲಿ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ಸೇರ್ಪಡೆ ಮಾಡಿರುವುದನ್ನ ಖಂಡಿಸಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ರೈತರ ಮನವೊಲಿಸುವಲ್ಲಿ ಜಿಲ್ಲಾಧಿಕಾರಿ ಯಶಸ್ವಿಯಾಗಿದ್ದಾರೆ.
ಇದು ದಿಢೀರನೇ ಎದ್ದು ಕೂತ ವಕ್ಫ್ ಎಂಬ ಭೂತ. ಗುಮ್ಮಟನಗರಿ ವಿಜಯಪುರದಲ್ಲಿ ಜನ್ಮತಾಳಿದ ವಕ್ಫ್ ಸಂಘರ್ಷ ರಾಜ್ಯದ ದಶದಿಕ್ಕುಗಳಿಗೂ ವ್ಯಾಪಿಸಿ ಕಿಚ್ಚು ಹೊತ್ತಿಸಿದೆ. ಕಂಡಕಂಡ ಜಾಗವೆಲ್ಲಾ ನಂದೇ ಅಂತ ಬೇಲಿ ಹಾಕುತ್ತಾ ವಕ್ಫ್ ಚೆಲ್ಲಾಟ ಆಡುತ್ತಿದೆ. ಆಡಳಿತ, ವಿಪಕ್ಷಗಳ ಮಧ್ಯೆ ರಾಜಕೀಯ ವಾಕ್ಸಮರಕ್ಕೂ ಕಾರಣವಾಗಿದೆ.
ಇದನ್ನೂ ಓದಿ:ಹಬ್ಬದ ಸಂಭ್ರಮದಂದೇ ಭಾರತ-ಚೀನಾ ಗಡಿಯಲ್ಲಿ ಮಹತ್ವದ ಬೆಳವಣಿಗೆ.. 2 ದೇಶಗಳ ನಿರ್ಧಾರ ಸ್ವಾಗತಿಸಿದ USA
ರೈತರ ಭೂಮಿಯ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ನಮೂದಿಸಿರೋದು ಕೋಲಾಹಲ ಸೃಷ್ಟಿಸಿದೆ. ರೊಚ್ಚಿಗೆದ್ದ ರೈತ ಮುಖಂಡರು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ನಡೆಸಿದ್ದರು. ನಿನ್ನೆ ರೈತರ ಹೋರಾಟಕ್ಕೆ ಮಣಿದ ವಿಜಯಪುರ ಜಿಲ್ಲಾಧಿಕಾರಿ ಭೂಬಾಲನ್ ನಿರತ ಸ್ಥಳಕ್ಕೆ ತೆರಳಿ, ರೈತರ ಸಮಸ್ಯೆಯನ್ನ ಆಲಿಸಿದರು. ರೈತರಿಗೆ 44 ಪಹಣಿಯಲ್ಲಿ ವಕ್ಫ್ ಬೋರ್ಡ್ ಕೈಬಿಟ್ಟಿರೋ ದಾಖಲೆಗಳನ್ನು ತೋರಿಸಿದರು, ಕೆಲವು ಷರತ್ತುಗಳನ್ನು ಹಾಕಿ ರೈತರು ಧರಣಿ ವಾಪಸ್ ಪಡೆದುಕೊಂಡರು. ಮುಂದೆ ರೈತರಿಗೆ ವಕ್ಫ್ ಬೋರ್ಡ್ ವಿಚಾರವಾಗಿ ನೋಟಿಸ್ ಕೊಟ್ಟರೆ ಮತ್ತೆ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
‘ಧರಣಿ ವಾಪಸ್ ಪಡೆಯುತ್ತಿದ್ದೇವೆ’
ಕೇವಲ ಇಂಡಿ ತಾಲೂಕು ಮಾತ್ರವಲ್ಲ, ಇಡೀ ಜಿಲ್ಲೆಯಾದ್ಯಂತ ಇರುವ ಇಂತಹ ಪ್ರಕರಣಗಳನ್ನು ಕಂಡುಕೊಂಡು ವಕ್ಫ್ ಅನ್ನು ಡಿಲೇಟ್ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಹೇಳಿದ್ರು. ನಾವು ಮಾಡಿರುವಂತ ಹೋರಾಟಕ್ಕೆ ಜಯ ಸಿಕ್ಕಿದೆ. ಈಗ ನಮ್ಮ ಹೋರಾಟವನ್ನ ಹಿಂಪಡೆಯುತ್ತಿದ್ದೇವೆ.
ಅರವಿಂದ ಕುಲಕರ್ಣಿ, ರೈತ ಮುಖಂಡರು
‘ರೈತರ ಹೋರಾಟಕ್ಕೆ ಸಿಕ್ಕ ಜಯ’
ಜಮೀರ್ ಅಹ್ಮದ್ ಖಾನ್ ಬಂದ ನಂತರ ಆದಂತಹ ಎಲ್ಲ ಬದಲಾವಣೆಗಳನ್ನು ಜಿಲ್ಲಾಧಿಕಾರಿಗಳು ಹಾಗೂ ಎಲ್ಲ ಅಧಿಕಾರಿಗಳು ಸಮಸ್ಯೆಗಳನ್ನ ಪರಿಹರಿಸಿ ದಾಖಲೆಗಳನ್ನು ಕೊಟ್ಟಿದ್ದಾರೆ. ರೈತ ಹೋರಾಟಕ್ಕೆ ಸಿಕ್ಕಂತಹ ಮೊದಲ ಜಯವಾಗಿದೆ. ಯಾರೂ ಭಯ ಪಡುವಂತ ಅವಶ್ಯಕತೆ ಇಲ್ಲ. ಈ ಒಂದು ಜಯ ನಮಗೆ ಸಂತೃಪ್ತಿ ತಂದಿದೆ.
ಸಂಗಮೇಶ ಸಗರ, ರೈತ ಸಂಘದ ಜಿಲ್ಲಾಧ್ಯಕ್ಷ
ಇನ್ನು ವಕ್ಫ್ ಬೋರ್ಡ್ನಿಂದ ಭೂಕಬಳಿಕೆ ಯತ್ನ ವಿಚಾರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಬಿಜೆಪಿ ಕಾಲದಲ್ಲೇ ಇದೆಲ್ಲಾ ಆಗಿರೋದು ಅಂತ ಸಚಿವ ಸಚಿವ ಕೃಷ್ಣ ಬೈರೇಗೌಡ ಕಿಡಿಕಾರಿದ್ದಾರೆ.
ಇದನ್ನೂ ಓದಿ: ವಿಜಯಪುರದಲ್ಲಿ ವಕ್ಫ್ ಆಸ್ತಿ ವಿವಾದ: ಎಲ್ಲ ಗೊಂದಲಗಳಿಗೆ ತೆರೆ ಎಳೆದ ಸಚಿವ ಎಂ.ಬಿ.ಪಾಟೀಲ್
‘ಬಿಜೆಪಿ ಕಾಲದಲ್ಲೂ ಪಹಣಿ ಬದಲಾವಣೆ’
ಕಳೆದ 4 ವರ್ಷದಲ್ಲಿ ಅಂದರೆ ಬಿಜೆಪಿ ಅಧಿಕಾರದಲ್ಲಿದ್ದಾಗ 2019 ರಿಂದ 2023ರ ನಡುವೆ ವಕ್ಫ್ ಬೋರ್ಡ್ ಹೆಸರಿಗೆ 138 ಆಸ್ತಿಗಳನ್ನು ಅವರ ಹೆಸರಿಗೆ ಹಕ್ಕು ಬದಲಾವಣೆ ಮಾಡಿದ್ದಾರೆ. ನಮ್ಮ ಸಮಯದಲ್ಲಿ ಆಗಿದ್ದು ಕೇವಲ 46 ಮಾತ್ರ. ಬಿಜೆಪಿ ಅವಧಿಯಲ್ಲಿ 138 ಆಗಿದೆ. ನಾವು ಮಾಡಿದ್ದನ್ನ ನಾವು ವಾಪಸ್ ತೆಗೆದುಕೊಂಡಿದ್ದೇವೆ. ಬಿಜೆಪಿಯವರು ಆವತ್ತು ಎಲ್ಲಿ ಹೋಗಿದ್ದರು. ಅವರ ಸರ್ಕಾರದಲ್ಲೇ 138 ದಾಖಲು ಮಾಡಿದ್ದಾರೆ.
ಕೃಷ್ಣ ಬೈರೇಗೌಡ, ಸಚಿವ
ವಕ್ಫ್ ಬೋರ್ಡ್ ವಿರುದ್ಧ ತೊಡೆತಟ್ಟಿದ ರೈತರ ಹೋರಾಟಕ್ಕೆ ಆರಂಭಿಕ ಯಶಸ್ಸು ಸಿಕ್ಕಿದೆ. ಕೋಲಾರ ಸೇರಿ ಇನ್ನೂ ಹಲವು ಜಿಲ್ಲೆಗಳಲ್ಲಿ ವಕ್ಫ್ ಬೋರ್ಡ್ ಕಬಂದಬಾಹು ಚಾಚಿದೆ ಎನ್ನಲಾಗುತ್ತಿದ್ದು ಅನ್ನದಾತರಿಗೆ ಅನ್ಯಾಯವಾಗದಂತೆ ಸರ್ಕಾರ ನಡೆದುಕೊಳ್ಳಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ