/newsfirstlive-kannada/media/post_attachments/wp-content/uploads/2024/12/vinod_kambli_2.jpg)
ಥಾಣೆ: ಅನಾರೋಗ್ಯದಿಂದ ಬಳಲುತ್ತಿರುವ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ (52) ಅವರನ್ನು ಥಾಣೆಯ ಭಿವಂಡಿಯ ಪೂರ್ಣಾದಲ್ಲಿನ ಆಕೃತಿ ಆಸ್ಪತ್ರೆಗೆ ತಡರಾತ್ರಿ ದಾಖಲು ಮಾಡಲಾಗಿದೆ. ಪ್ರಸ್ತುತ ವಿನೋದ್ ಕಾಂಬ್ಳಿ ಅವರ ಆರೋಗ್ಯ ಸ್ಥಿರವಾಗಿದ್ದು ಆತಂಕ ಪಡುವುದು ಬೇಕಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ವಿನೋದ್ ಕಾಂಬ್ಳಿಯ ಬಾಂದ್ರಾ ನಿವಾಸದಿಂದ ಕರೆ ಮಾಡಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎಂದು ವೈದ್ಯರಿಗೆ ಮಾಹಿತಿ ತಿಳಿಸಲಾಗಿತ್ತು. ಹೀಗಾಗಿ ತಕ್ಷಣ ಆಂಬ್ಯುಲೆನ್ಸ್ ಕಳುಹಿಸಿ ಕಾಂಬ್ಳಿರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಆಸ್ಪತ್ರೆಯಲ್ಲಿ ಅವರಿಗೆ ಹಲವಾರು ವೈದ್ಯಕೀಯ ಟೆಸ್ಟ್ಗಳನ್ನು ಮಾಡಲಾಯಿತು. ಈ ವೇಳೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ಮೂತ್ರದ ಸೋಂಕು ಮತ್ತು ಸೆಳೆತ ಕಂಡು ಬಂದಿದೆ ಎಂದು ವೈದ್ಯರು ಹೇಳಿದ್ದಾರೆ.
ಆಕೃತಿ ಹೆಲ್ತ್ ಸಿಟಿ ಆಸ್ಪತ್ರೆಯ ನಿರ್ದೇಶಕ ಡಾ ಶೈಲೇಶ್ ಠಾಕೂರ್ ಅವರು ಮಾತನಾಡಿ, ವಿನೋದ್ ಕಾಂಬ್ಳೆ ಅವರ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದೆ. ಭಯ ಪಡುವ ಅವಶ್ಯಕತೆ ಇಲ್ಲ. ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲ ದಿನ ಐಸಿಯುನಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ನಾವು ಚಿಕ್ಕವರಿದ್ದಾಗ ಕಾಂಬ್ಳಿ ಅವರ ಅಭಿಮಾನಿಯಾಗಿದ್ದೆ. ಅವರ ಬ್ಯಾಟಿಂಗ್ ಅನ್ನು ಇಷ್ಟ ಪಡುತ್ತಿದ್ದೆ. ಭಾರತ ತಂಡಕ್ಕಾಗಿ ಶ್ರಮಿಸಿದ್ದಾರೆ. ಅವರ ಏಳುಬೀಳು ನೋಡಿದ ಹಿನ್ನೆಲೆಯಲ್ಲಿ ಕಾಂಬ್ಳಿಯವರ ಆಸ್ಪತ್ರೆಯ ವೆಚ್ಚವೆಲ್ಲಾ ನಾವೆ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ವಿನೋದ್ ಕಾಂಬ್ಳಿ 1991ರಲ್ಲಿ ಪದಾರ್ಪಣೆ ಮಾಡಿದರು. ಭಾರತದ ಪರ 17 ಟೆಸ್ಟ್ ಪಂದ್ಯಗಳಲ್ಲಿ 1084 ರನ್ ಸಿಡಿಸಿರುವ ಕಾಂಬ್ಳಿ 2 ಡಬಲ್ ಹಂಡ್ರೆಡ್, 4 ಶತಕ, 3 ಅರ್ಧ ಶತಕ ಸಿಡಿಸಿದ್ದಾರೆ. 104 ಪಂದ್ಯ ಆಡಿದ್ದು, 2477 ರನ್ ಗಳಿಸಿದ್ದು 2 ಶತಕ, 14 ಅರ್ಧಶತಗಳನ್ನ ಬಾರಿಸಿದ್ದಾರೆ. 2000ರಲ್ಲಿ ಕಳಪೆ ಪ್ರದರ್ಶನದ ಆಧಾರದ ಮೇಲೆ ಅವರನ್ನು ತಂಡದಿಂದ ತೆಗೆಯಲಾ ಗಿತ್ತು. ಕೊನೆಯದಾಗಿ ಶ್ರೀಲಂಕಾ ವಿರುದ್ಧ ಆಡಿದ್ದರು.
ಇದನ್ನೂ ಓದಿ: ರನ್ ಮಷಿನ್ಗೆ ಕ್ರಿಕೆಟ್ ಲೋಕದಲ್ಲಿ ಭಾರೀ ಹಿನ್ನಡೆ.. ವಿರಾಟ್ ಕೊಹ್ಲಿ ಬ್ಯಾಟಿಂಗ್ ಚಾರ್ಮ್ ಕಡಿಮೆ ಆಯಿತಾ?
ಬಾಲ್ಯದ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಸ್ಮರಣಾರ್ಥ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಿತ್ತು. ಇದರಲ್ಲಿ ಸಚಿನ್ ತೆಂಡೂಲ್ಕರ್ ವಿನೋದ್ ಕಾಂಬ್ಳಿ ಇಬ್ಬರಿಗೂ ಆಹ್ವಾನವಿತ್ತು. ಅನಾರೋಗ್ಯದಿಂದ ಕಾಂಬ್ಳಿ ಬಳಲುತ್ತಿದ್ದು ಕಾರ್ಯಕ್ರಮದಲ್ಲಿ ಸಚಿನ್ರನ್ನು ಸರಿಯಾಗಿ ಗುರುತಿಸಲಾಗಲಿಲ್ಲ. ಅವರ ಮಾನಸಿಕ ಸ್ಥಿತಿಯೂ ಚೆನ್ನಾಗಿರಲಿಲ್ಲ. ಈ ವೇಳೆ ಸಚಿನ್ ಅವರನ್ನ ಕಂಡು ಭಾವುಕರಾಗಿದ್ದರು. ಈ ಇಬ್ಬರು ಅಚ್ರೇಕರ್ ತರಬೇತಿ ಗರಡಿಯಲ್ಲಿ ಬೆಳೆದವರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ