/newsfirstlive-kannada/media/post_attachments/wp-content/uploads/2024/12/VINOD-KAMBLI.jpg)
ವಿನೋದ್ ಕಾಂಬ್ಳಿ ಒಂದು ಕಾಲದಲ್ಲಿ ಕ್ರಿಕೆಟ್ ಅಂಗಳದಲ್ಲಿ ಮಿಂಚಿ ಮರೆಯಾದ ದ್ರುವ ತಾರೆ. ಪ್ರತಿಭೆಯಿದ್ದರೂ ಅದೃಷ್ಟ ಕೈಗೂಡದೆ ಬದುಕಿನ ದಿಕ್ಕು ತಪ್ಪಿಸಿಕೊಂಡು ಪರದಾಡುತ್ತಿರುವ ಹತಭಾಗ್ಯ ಮಾಜಿ ಕ್ರಿಕೆಟಿಗ. ಸಚಿನ್ ಮತ್ತು ಕಾಂಬ್ಳಿ ಇಬ್ಬರು ಒಂದೇ ಗುರುವಿನ ಗರಡಿಯಲ್ಲಿ ಬೆಳೆದ ಪ್ರತಿಭೆಗಳು.ಸಚಿನ್ ಜಗತ್ತಿನ ಸರ್ವಶ್ರೇಷ್ಠ ಕ್ರಿಕೆಟ್ ಆಟಗಾರ ಎಂಬ ಪದವಿಯನ್ನು ಪಡೆದರು. ಗಾಡ್ ಆಫ್ ಕ್ರಿಕೆಟ್ ಎಂದು ಕ್ರಿಕೆಟ್ ಪ್ರಿಯರಿಂದ, ಅಭಿಮಾನಿಗಳಿಂದ ಹೊಗಳಿಸಿಕೊಂಡರು. ಆದ್ರೆ ಕಾಂಬ್ಳಿ ದುರಾದೃಷ್ಟವೋ, ಚಿತ್ತ ಚಾಂಚಲ್ಯವೋ, ತಪ್ಪಿದ ಶಿಸ್ತಿನ ಬದುಕೋ ಗೊತ್ತಿಲ್ಲ. ಅದ್ಭುತ ಪ್ರತಿಭೆಯೊಂದು ಕಾಲಗರ್ಭಕ್ಕೆ ಸೇರಿಕೊಂಡಿತು. ಇತ್ತೀಚೆಗೆ ಕೆಲವು ದಿನಗಳಿಂದ ಮತ್ತೆ ಕಾಂಬ್ಳಿ ಹೆಸರು ಮುನ್ನೆಲೆಗೆ ಬಂದಿತ್ತು.
ತಮ್ಮ ಗುರುವಾದ ರಮಾಕಾಂತ್ ಅಚ್ರೆಕರ್ ಅವರ ಸ್ಮಾರಕ ಅನಾವರಣದ ವೇಳೆ ಸಚಿನ್ ಹಾಗೂ ಕಾಂಬ್ಳಿ ಒಂದೇ ವೇದಿಕೆಯಲ್ಲಿ ಕಂಡು ಬಂದರು. ಇಬ್ಬರು ಕೈ ಕೈ ಹಿಡಿದು ಶುಭಾಶಯ ವಿನಿಮಯ ಮಾಡಿಕೊಂಡರು. ಸಚಿನ್ ಕೈ ಬಿಡಲು ಕಾಂಬ್ಳಿ ಸಿದ್ಧವೇ ಇರಲಿಲ್ಲ. ಕೊನೆಗೆ ಸಚಿನ್ ಪಕ್ಕದ ಚೇರ್ನಲ್ಲಿ ಬಂದು ಕುಳಿತುಕೊಂಡರು. ಬಾಲ್ಯದ ಗೆಳೆಯ ಸಚಿನ್ರನ್ನು ಗುರುತು ಹಿಡಿಯಲಾರದಷ್ಟು ಸಹ ಬಳಲಿದ ರೀತಿ ಅಂದು ಕಾಂಬ್ಳಿ ಕಂಡು ಬಂದರು.
ಇದನ್ನೂ ಓದಿ: ಸಚಿನ್ ಕೈ ಹಿಡಿದ ವಿನೋದ್ ಕಾಂಬ್ಳಿ.. ಬಾಲ್ಯದ ಗೆಳೆಯರ ಅಪರೂಪದ ವಿಡಿಯೋ ಫುಲ್ ವೈರಲ್!
ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಹಳೆಯ ಗೆಳೆಯರ ಸಂಗಮದ ಬಗ್ಗೆ ಹೊಗಳಿಕೆಗಳ ಜೊತೆ ಕಾಂಬ್ಳಿಯನ್ನು ಕಂಡ ಜನರು ಅವರ ಸ್ಥಿತಿಗೆ ಮರುಗಿದರು. ದೈತ್ಯ ಪ್ರತಿಭೆಯೊಂದು ಹೇಗಾಗಿ ಹೋಯಿತಲ್ಲ ಎಂದು ಭಾವುಕರು ಆದರು. ಕಾಂಬ್ಳಿ ಪರಿಸ್ಥಿತಿ ಈಗ ಸರಿಯಿಲ್ಲ. ಆರೋಗ್ಯದ ಹಲವು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. ಅದರಿಂದ ಆಚೆ ಬರುವಷ್ಟು ಆರ್ಥಿಕವಾಗಿಯೂ ಕೂಡ ಅವರ ಗಟ್ಟಿಯಾಗಿಲ್ಲ. ಸದ್ಯ ಕಾಂಬ್ಳಿ ಅವರ ಆರೋಗ್ಯದ ಬಗ್ಗೆ ಅವರಿಗೆ ಸಹಾಯಕವಾಗಿ ನಿಲ್ಲುವವರ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ.ಇದೇ ಸಂದರ್ಭದಲ್ಲಿ ಕಾಂಬ್ಳಿ ನನ್ನ ಮಗನಿದ್ದಂತೆ. ಆತನ ಕಾಳಜಿ ಇನ್ಮುಂದೆ ನನ್ನದು ಎಂದು ಹಿರಿಯ ಕ್ರಿಕೆಟ್ ಆಟಗಾರ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:IND vs AUS; ರೋಹಿತ್ ಪಡೆಗೆ ಭಾರೀ ಮುಖಭಂಗ.. ಬ್ಯಾಟಿಂಗ್ ವೈಫಲ್ಯ, ಟೆಸ್ಟ್ ಸೋತ ಟೀಮ್ ಇಂಡಿಯಾ
ಕಾಂಬ್ಳಿ ನೆರವಿಗೆ ಈಗ ಭಾರತೀಯ ಕ್ರಿಕೆಟ್ ತಂಡದ ಮಾಜಿ ಹಾಗೂ ಹಿರಿಯ ಆಟಗಾರ ಸುನೀಲ್ ಗವಾಸ್ಕರ್ ನಿಂತಿದ್ದಾರೆ. ರಾಷ್ಟ್ರೀಯ ಸುದ್ದಿವಾಹಿನಿಯ ಜೊತೆ ಮಾತನಾಡಿರುವ ಸುನೀಲ್ ಗವಾಸ್ಕರ್, ವಿನೋದ್ ಕಾಂಬ್ಳಿ ಹಲವು ಕಾಯಿಲೆಗಳಿಂದ ಒದ್ದಾಡುತ್ತಿದ್ದಿದ್ದು ತಿಳಿದಿದೆ. ನಾವೆಲ್ಲಾ 1983ರ ಕ್ರಿಕೆಟ್ ವಿಶ್ವಕಪ್ನಲ್ಲಿ ಆಡಿದವರು. ನಮ್ಮ ನಂತರ ಬಂದ ಪ್ರತಿಭೆಗಳೆಲ್ಲಾ ನಮಗೆ ಮಕ್ಕಳ ಇದ್ದ ಹಾಗೆ. ವಿನೋದ್ ಕಾಂಬ್ಳಿ ಕೂಡ ನನ್ನ ಮಗ ಇದ್ದ ಹಾಗೆ. ಅವನಿಗೆ ಅಗತ್ಯವಿರುವ ನೆರವನ್ನು ನೀಡುವುದು ನನ್ನ ಕರ್ತವ್ಯ ಹೀಗಾಗಿ ಆತನಿಗೆ ಏನೆಲ್ಲಾ ಅಗತ್ಯವಿದೆಯೋ ಅದನ್ನೆಲ್ಲಾ ನಾನು ಪೂರೈಸುತ್ತೇನೆ ಎಂದು ಹೇಳಿದ್ದಾರೆ.
ನಾನು ಇದನ್ನು ಸಹಾಯ ಎಂದು ಹೇಳಲು ಬಯಸುವುದಿಲ್ಲ. ಅವನ ಬಗ್ಗೆ ಕಾಳಜಿ ಎಂದು ಹೇಳಲು ಇಷ್ಟಪಡುತ್ತೇನೆ. ಮತ್ತೆ ಆತ ತನ್ನ ಕಾಲಿನ ಮೇಲೆ ತಾನು ನಿಲ್ಲುವ ಹಾಗೆ ಮಾಡುವುದು ನನ್ನ ಜವಾಬ್ದಾರಿ. ಏನು ಮಾಡಬೇಕು, ಹೇಗೆ ಮಾಡಬೇಕು ಎಂಬುದನ್ನು ಮುಂದಿನ ದಿನಗಳಲ್ಲಿ ಚಿಂತಿಸಲಿದ್ದೇವೆ. ಯಾರು ಸಮಸ್ಯೆಯಿಂದ ಬಳಲುತ್ತಿದ್ದಾರೊ ಅಂತಹ ಕ್ರಿಕೆಟಿಗರ ಸಹಾಯಕ್ಕೆ ನಾವು ನಿಲ್ಲಬೇಕು. ದಯವಿಟ್ಟು ಅವರ ಪರಿಸ್ಥಿತಿಯನ್ನು ನೋಡಿ ಯಾರು ಕೂಡ ನಗಬಾರದು ಎಂದು ಗವಾಸ್ಕರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ