ದ ವಾರಿಯರ್ ಕಿಂಗ್‌.. ಟೆಸ್ಟ್ ಕ್ರಿಕೆಟ್ ನಿಮ್ಮನ್ನ ಮಿಸ್ ಮಾಡಿಕೊಳ್ಳುತ್ತೆ; ಫ್ಯಾನ್ಸ್‌ ಓದಲೇಬೇಕಾದ ಸ್ಟೋರಿ!

author-image
admin
ದ ವಾರಿಯರ್ ಕಿಂಗ್‌.. ಟೆಸ್ಟ್ ಕ್ರಿಕೆಟ್ ನಿಮ್ಮನ್ನ ಮಿಸ್ ಮಾಡಿಕೊಳ್ಳುತ್ತೆ; ಫ್ಯಾನ್ಸ್‌ ಓದಲೇಬೇಕಾದ ಸ್ಟೋರಿ!
Advertisment
  • 'ಗ್ರೇಟ್ ಕ್ರಿಕೆಟರ್' ಆಗಿ ವೈಟ್ ಜರ್ಸಿ ಕಳಚಿಟ್ಟ ವಿರಾಟ್‌ ಕೊಹ್ಲಿ
  • ಕೊಹ್ಲಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ.. ಅಂದು ಏನಂದಿದ್ರು ಗೊತ್ತಾ?
  • ಇನ್ನೆರೆಡು ವರ್ಷಗಳಲ್ಲಿ ಕೊಹ್ಲಿ ಬ್ಯಾಟ್ ಬಿಟ್ಟು ಕಣ್ಮರೆ ಆಗ್ತಾರಾ?

17 ವರ್ಷದ ಹಿಂದಿನ ಕಥೆ ಇದು. ನಾನು ಮೀಡಿಯಾ ಫೀಲ್ಡ್​​​​ಗೆ ಬಂದು ವರ್ಷವಾಗಿತ್ತು. ಆಗಷ್ಟೇ ವಿರಾಟ್ ಕೊಹ್ಲಿ ಮಲೇಷ್ಯಾದ ಕೌಲಾಲಂಪುರದಲ್ಲಿ, ಅಂಡರ್ 19 ವಿಶ್ವಕಪ್ ಗೆದ್ದು ಭಾರತಕ್ಕೆ ವಾಪಸಾಗಿದ್ರು. ಒಂದು ದಿನ ಕೊಹ್ಲಿಯನ್ನ ನಾನು ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ (NCA)ನಲ್ಲಿ ನೋಡಿದೆ. ಅದೇನ್ ಗತ್ತು, ಅದೇನ್ ಌಟಿಡ್ಯೂಡ್..! ಮೊದಲ ಸಲ ನಾನು ಕೊಹ್ಲಿಯನ್ನ ನೋಡಿದಾಗ, ಈತನಿಗೆ ಬಹಳ ದುರಹಂಕಾರ ಅಂದುಕೊಂಡಿದ್ದೆ. ಆದ್ರೆ ಕೆಲವೇ ದಿನಗಳಲ್ಲಿ ನನಗೆ, ಕೊಹ್ಲಿ ಮೇಲಿನ ಅಭಿಪ್ರಾಯವೇ ಬದಲಾಯ್ತು.

ಹೌದು..! ನನಗೆ ಒಬ್ಬ ಸ್ನೇಹಿತ ಇದ್ದ. ಆತನ ಹೆಸರು ಅಮರ್. ಆತ ನಮ್ಮ ಮನೆಯ ಬಳಿ ಇರೋ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಒಂದು ದಿನ ಆತನನ್ನ ನಾನು KSCAನಲ್ಲಿ ನೋಡಿದೆ. ಅಲ್ಲಿ ಇಬ್ಬರ ಪರಿಚಯವಾಯ್ತು. ಹಾಗೆ ಮಾತಾಡುತ್ತಾ ಇಬ್ಬರು ಸ್ನೇಹಿತರಾದೆವು. ಒಂದು ದಿನ ನನ್ನ ಸ್ನೇಹಿತ ಅಮರ್ ಮತ್ತು ವಿರಾಟ್ ಕೊಹ್ಲಿಯನ್ನ ಜೊತೆಯಾಗಿ ಎನ್​ಸಿಎನಲ್ಲಿ ನೋಡಿದೆ. ಅಮರ್ ಮತ್ತು ಕೊಹ್ಲಿಯನ್ನ ನೋಡಿ, ನನಗೆ ಫುಲ್ ಶಾಕ್ ಆಯ್ತು. ಕೊಹ್ಲಿ ಮತ್ತು ಅಮರ್ ಇಬ್ಬರು, ಅದೇನ್ ಮಾತಾಡುತ್ತಿದ್ರೋ ಗೊತ್ತಿಲ್ಲ..! ಆದ್ರೆ ನಾನು ಅವರಿಗಾಗಿ ಸ್ವಲ್ಪ ಹೊತ್ತು ಕಾದು ನಿಂತೆ. ನಂತರ ಅಮರ್ ನನ್ನನ್ನ ಗಮನಿಸಿ, ಬ್ರೋ ಕಮ್ ಇಯರ್ ಅಂದ. ನಾನು ಅಮರ್ ಬಳಿ ಹೋದೆ. ಅಮರ್, ಈತ ನನ್ನ ಸ್ನೇಹಿತ ಗಂಗಾಧರ್.! ಈತ ಕ್ರಿಕೆಟ್ ಜರ್ನಲಿಸ್ಟ್ ಅಂತ, ಕೊಹ್ಲಿಗೆ ಪರಿಚಯ ಮಾಡಿಕೊಟ್ಟ.

publive-image

ನಾನು ಕೊಹ್ಲಿ ಕಣ್ಣುಗಳು ನೋಡುತ್ತಲೇ, ಹಾಯ್ ವಿರಾಟ್, ಐ ಯ್ಯಾಮ್ ಗಂಗಾಧರ್ ಅಂತ ಪರಿಚಯ ಮಾಡಿಕೊಂಡೆ. ಅಂದು ನಾನು ಫಂಕಿ ಫಂಕಿಯಾಗಿದ್ದ ಕೊಹ್ಲಿಯನ್ನ ದುರಹಂಕಾರಿ, ಸಿಕ್ಕಾಪಟ್ಟೆ ಌಟಿಟ್ಯೂಡ್ ಅಂದುಕೊಂಡಿದ್ದೆ. ಆದ್ರೆ ಎಲ್ಲವೂ ಸುಳ್ಳಾಯ್ತು. ಕೊಹ್ಲಿ ಜೊತೆ ನಾನು ಸುಮಾರು 20-30 ನಿಮಿಷ ನಿಂತು ಮಾತನಾಡಿದೆ. ಕೊಹ್ಲಿ ಮಾತು ಕೇಳಿ, ಆತನ ಮೇಲಿದ್ದ ನೆಗೆಟಿವ್ OPINION ಎಲ್ಲಾ ಮಾಯವಾಯ್ತು. ನಿಜ ಹೇಳಬೇಕಂದ್ರೆ ಕೊಹ್ಲಿ ಒಬ್ಬ ಗುಡ್ ಹ್ಯೂಮೆನ್ ಬೀಯಿಂಗ್ ಅಂತ, ಅವರತ್ತರ ಮಾತನಾಡಿದಾಗಲೇ ಗೊತ್ತಾಗಿದ್ದು.

19 ವರ್ಷದಲ್ಲೇ ಕೊಹ್ಲಿ ಆಡ್ತಿದ್ದ ಆ ಮೆಚ್ಯೂರ್ಡ್ ಮಾತುಗಳನ್ನ ಕೇಳಿ, ನಾನು ಸುಸ್ತಾದೆ. ಏನಪ್ಪಾ ಇದು..! ಕೊಹ್ಲಿ ನೋಡೋಕೆ ಒರಟಾಗಿ ಕಾಣ್ತಾರೆ. ಆದ್ರೆ ಆತನ ಮಾತುಗಳು ಸಿಕ್ಕಾಪಟ್ಟೆ ಮೃದುವಾಗಿತ್ತು. ಹೀಗೆ ಕೊಹ್ಲಿ ಅಂಡರ್ 19 ವಿಶ್ವಕಪ್ ಗೆದ್ದ ಮೇಲೆ ಎರಡು ಮೂರು ಬಾರಿ ಭೇಟಿಯಾದೆವು. ಸ್ನೇಹಿತರ ಹಾಗೆ ಇದ್ದೆವು. ಕೊಹ್ಲಿ ಬೆಂಗಳೂರಿಗೆ ಬಂದಾಗಲೆಲ್ಲಾ ನೋಡುತ್ತಿದ್ದೆ. ಆದ್ರೆ ಹೆಚ್ಚು ಮಾತನಾಡುತ್ತಿರಲಿಲ್ಲ..! ಜಸ್ಟ್ ಹಾಯ್ ಬೈ ಅಷ್ಟೆ.

publive-image

ನಂತರ ನಾನು ಹಾಗಾಗ ನನ್ನ ಸ್ನೇಹಿತ ಅಮರ್ ಬಳಿ ಕೊಹ್ಲಿ ಬಗ್ಗೆ ವಿಚಾರಿಸುತ್ತಿದ್ದೆ..! ಏನಪ್ಪಾ ಅಮರ್, ಕೊಹ್ಲಿ ಎಲ್ಲಿ..? ಇಂಡಿಯನ್ ಟೀಮ್​​ಗೆ ಯಾವಾಗ ಆಡ್ತಾನೆ ಅಂತ ಕೇಳ್ತಿದ್ದೆ. ಆಗ ಅಮರ್ ಅದ್ಯಾಕೋ ಕೊಹ್ಲಿ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದ ಅನಿಸುತ್ತದೆ. ಗೊತ್ತಿಲ್ಲ ಬ್ರೋ, ಕೊಹ್ಲಿನ ನಾನು ಇತ್ತೀಚಿಗೆ ನೋಡ್ಲಿಲ್ಲ. ಕೊಹ್ಲಿ ಫುಲ್ ಬ್ಯುಸಿ ಅಂತಿದ್ದ. ಆದ್ರೆ ಕೆಲವೇ ದಿನಗಳಲ್ಲಿ ಕೊಹ್ಲಿ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೀತಿತ್ತು.

ಹೌದು..! ಅಂದು ಬಿಸಿಸಿಐನ ಕನಸಿನ ಕೂಸು ಇಂಡಿಯನ್ ಪ್ರೀಮಿಯರ್ ಲೀಗ್, ಕಿಕ್ ಸ್ಟಾರ್ಟ್​​ ಆಯ್ತು. ಕ್ರಿಕೆಟಿಗರಿಗೆಲ್ಲಾ ಜಾಕ್​ಪಾಟ್ ಹೊಡೀತು. ಅದ್ರಲ್ಲಿ ಕೊಹ್ಲಿಗೂ ಅದೃಷ್ಟ ಖುಲಾಯಿಸಿತ್ತು. ಕೊಹ್ಲಿ 12 ಲಕ್ಷ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ, ಡ್ರಾಫ್ಟ್​ ಮೂಲಕ ಎಂಟ್ರಿ ಕೊಟ್ರು. ಡ್ರಾಫ್ಟ್​ ಅಂದ್ರೆ, ಅಂಡರ್​ 19 ತಂಡದ ಆಟಗಾರರನ್ನ ಮಾತ್ರ, ಡ್ರಾಫ್ಟ್​ ಮೂಲಕ ಪಿಕ್ ಮಾಡುವುದು.

ಕೊಹ್ಲಿ ಆರ್​ಸಿಬಿಗೆ ಬಂದಿದ್ದು ನನಗಂತೂ ಫುಲ್ ಖುಷ್ ಆಯ್ತು. ಯಾಕಂದ್ರೆ ನಾನು ಬೆಂಗಳೂರು ಹುಡುಗ, ಕೊಹ್ಲಿನೂ ನಮ್ಮ ಊರಿಗೆ ಬಂದ ಅಂತ, ನನ್ಗೆ ಅಷ್ಟೇ ಖುಷಿ ಆಯ್ತು. ಕೊಹ್ಲಿ ಆರ್​ಸಿಬಿಗೆ ಬಂದಿದ್ದೆ ತಡ.! ನಾನು ಕೊಹ್ಲಿಯನ್ನ ಮೀಟ್ ಮಾಡೋ ತವಕ ಮತ್ತೆ ಹೆಚ್ಚಾಯ್ತು. ಕೊಹ್ಲಿಯನ್ನ ನೋಡಲೇಬೇಕು..! ಕೊಹ್ಲಿಯನ್ನ ಮಾತನಾಡಿಸಲೇಬೇಕು ಅಂತ, ನನಗಷ್ಟೇ ನಾನು ಹಾಗಾಗ ಹೇಳಿಕೊಳ್ಳುತ್ತಿದೆ.

publive-image

ಅಂದು ಏಪ್ರಿಲ್ 16, 2008..! ಚಿನ್ನಸ್ವಾಮಿ ಸ್ಟೇಡಿಯಮ್​ಗೆ ನಾನು ಹಾಗೆ ಸುಮ್ಮನೆ ಭೇಟಿಕೊಟ್ಟೆ. ನೋಡಿದ್ರೆ ಅಲ್ಲಿ, ಆರ್​ಸಿಬಿ ಆಟಗಾರರು ಪ್ರಾಕ್ಟೀಸ್ ಮಾಡ್ತಿದ್ರು. ಒಂದ್ಕಡೆ ರಾಹುಲ್ ದ್ರಾವಿಡ್, ಜಾಕ್ ಕಾಲಿಸ್, ಮಾರ್ಕ್ ಬೌಷರ್, ಜಹೀರ್ ಖಾನ್​​​​ ಸೇರಿದಂತೆ ಬೆಂಗಳೂರು ಆಟಗಾರರು ಫುಲ್ ಜೋಷ್​ನಲ್ಲಿ, ನೆಟ್ ಪ್ರಾಕ್ಟೀಸ್ ಮಾಡ್ತಿದ್ರು. ನಾನು ಕೊಹ್ಲಿಯನ್ನ ಹುಡುಕುತ್ತಿದ್ದೆ. ಎಲ್ಲಪ್ಪಾ ನಮ್ಮ ಹುಡುಗ..! ಇದಾನ ಇಲ್ವಾ ಅಂತ ಅತ್ತಾ ಇತ್ತ ನೋಡ್ತಿದ್ದೆ.! ಆದ್ರೆ ವಿರಾಟ್, ಆಗಷ್ಟೇ ನೆಟ್​ ಪ್ರಾಕ್ಟೀಸ್ ಮುಗಿಸಿ ಬೌಂಡರಿಲೈನ್​ ಬಳಿ ಕಿಟ್​ಬ್ಯಾಗ್​ ಪ್ಯಾಕ್ ಮಾಡ್ತಿದ್ದ. ಹೋಗಿ ಮಾತಾಡೋಣ ಅನ್ಕೋಂಡೆ. ಆದ್ರೆ ಸೆಕ್ಯೂರಿಟಿ ಕಾರಣ, ಕೊಹ್ಲಿ ಬಳಿ ಹೋಗದಿರಲು ನಿರ್ಧರಿಸಿದೆ.

ಆದ್ರೆ ಪ್ರಾಕ್ಟಿಸ್ ಮುಗಿಸಿಕೊಂಡು ಕೊಹ್ಲಿ ಮತ್ತಿತರೆ ಆಟಗಾರರು, ಪೆವಿಲಿಯನ್ನತ್ತ ಬರ್ತಿದ್ರು. ನಾನು ಅಲ್ಲೇ ಸುಮಾರು ಹೊತ್ತು ನಿಂತಿದ್ದೆ. ನಾನು ಕೊಹ್ಲಿಯನ್ನ ನೋಡಿ, ಕೈಬೀಸಿದೆ. ವಿರಾಟ್​​​​​ ನನ್ನನ್ನ ನೋಡಿ ನಗುನಗುತಲೇ ಬಂದು ಶೇಕ್ ಹ್ಯಾಂಡ್ ಮಾಡಿದ್ರು. HOW ARE YOU..? ALL GOOD ಅಂತ ಕೇಳಿದ್ರು. ಅದಕ್ಕೆ ನಾನು, ಐ ಌಮ್ ಫೈನ್ ವಿರಾಟ್, ಆಲ್​​ ದ ಬೆಸ್ಟ್ ಅಂತ ಹೇಳಿದೆ. ಕೊಹ್ಲಿ ನನ್ನನ್ನ ಗುರುತಿಸಿದಕ್ಕೆ ತುಂಬಾ ಖುಷಿಯಾಯ್ತು. ಮತ್ತು ಬಹಳ ದಿನಗಳ ಬಳಿಕ ಮಾತನಾಡಿಸಿದಕ್ಕೆ, ಹೇಳಿಕೊಳ್ಳದಂತಹದ ಮನಸಿನೊಳಗೆ ಖುಷಿಯಾಯ್ತು.

ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಐಪಿಎಲ್​​​​​​ ಮೊದಲ ಪಂದ್ಯ ನೋಡೋಕೆ ಕಾಯ್ತಿದ್ದ ನನಗೆ, ತುಂಬಾ ನೋವುಂಟಾಯ್ತು. ಮೊದಲ ಪಂದ್ಯದಲ್ಲೇ ಕೊಹ್ಲಿ, ಭಾರೀ ನಿರಾಸೆ ಮೂಡಿಸಿದ. ಕೇವಲ ಒಂದೇ ಒಂದು ರನ್ನಿಗೆ ಔಟಾದ. ಆ ಸೀಸನ್​ನಲ್ಲಿ ಕೊಹ್ಲಿ, ಹೇಳಿಕೊಳ್ಳುವಂತಹ ರನ್ ಹೊಡೆಯಲಿಲ್ಲ. 2009ರಲ್ಲೂ ಕೊಹ್ಲಿ, ಐಪಿಎಲ್ ಮತ್ತು ಚಾಂಪಿಯನ್ಸ್​ ಲೀಗ್ ಎರಡರಲ್ಲೂ ಮತ್ತೆ ನಿರಾಸೆ ಮೂಡಿಸಿದ್ರು.

publive-image

ನಿಜ ಹೇಳಬೇಕಂದ್ರೆ, 2008 ಮತ್ತು 2009ರಲ್ಲಿ ಕೊಹ್ಲಿ, ಸೀರಿಯಸ್ ಕ್ರಿಕೆಟ್ ಆಡಲಿಲ್ಲ. ಐಪಿಎಲ್​ನಲ್ಲಿ 12 ಲಕ್ಷ ರೂಪಾಯಿ ಸಿಕ್ಕ ಖುಷಿ ಒಂದೆಡೆ..! ಮತ್ತೊಂದೆಡೆ ಕೊಹ್ಲಿ ಐಪಿಎಲ್​ನ ಆಫ್ಟರ್ ನೈಟ್ ಪಾರ್ಟೀಸ್​ನಲ್ಲಿ ಫುಲ್​ ಬ್ಯುಸಿಯಾಗಿ, ಆಟವನ್ನೇ ಮರೆತಂತಿತ್ತು. ಐಪಿಎಲ್​​​​ ಅನ್ನೋ ಕಲರ್​ಫುಲ್ ಲೋಕದಲ್ಲಿ ಮುಳುಗಿದ್ದ ಕೊಹ್ಲಿ, ಬದಲಾಗೇ ಬಿಟ್ರು. ಕೊಹ್ಲಿಯ ಸ್ಥಿತಿಯನ್ನ ಕಂಡು ನನಗೆ, ಎಲ್ಲೋ ಒಂದ್ಕಡೆ ಬೇಸರ, ನೋವು ಕೂಡ ಇತ್ತು. ಏನಪ್ಪಾ, ಇಂತಹ ಟ್ಯಾಲೆಂಟೆ ಇರೋ ಹುಡುಗ, ಪಾರ್ಟಿ ಅದು ಇದು ಅಂತ ಕರಿಯರ್​ನೇ ಹಾಳು ಮಾಡಿಕೊಳ್ತಿದ್ದಾನೆ ಅನಿಸ್ತಿತ್ತು.

ಬಹುಶಃ ಕೊಹ್ಲಿಗೂ ಇದೇ ಅನಿಸ್ತಿತ್ತೋ ಏನೋ..! ನೋಡ ನೊಡುತ್ತಿದಂತೆ ಕೊಹ್ಲಿ, ಭಾರೀ ಬದಲಾದ್ರು. ಪಾರ್ಟಿಗೆ ಗುಡ್​ಬೈ ಹೇಳಿದ್ರು. ಕ್ರಿಕೆಟ್ ಮೇಲೆ ಹೆಚ್ಚು ಫೋಕಸ್ ಮಾಡೋಕೆ ಶುರು ಮಾಡಿದ್ರು. ಹೌದು..! ಕೊಹ್ಲಿ ಮೈಂಡ್​​ನಲ್ಲಿದ್ದಿದ್ದು ಒಂದೇ..! ಅದು ಏನಾದ್ರೂ ಅಚೀವ್ ಮಾಡಬೇಕು ಅಂತ. ಅದೇ ವರ್ಷ ಕೊಹ್ಲಿ, ಟೀಮ್​ ಇಂಡಿಯಾ ಏಕದಿನ ತಂಡಕ್ಕೆ, ಎಂಟ್ರಿ ಕೊಟ್ರು.

ಧೋನಿ ನಾಯಕತ್ವದಲ್ಲಿ ಕೊಹ್ಲಿ, ದಂಬುಲ್ಲಾದಲ್ಲಿ ಲಂಕಾ ವಿರುದ್ಧ ಏಕದಿನ ಕ್ರಿಕೆಟ್​ಗೆ ಡೆಬ್ಯೂ ಮಾಡಿದ್ರು. ಆದ್ರೆ ಅಂದುಕೊಂಡಂತೆ ಕೊಹ್ಲಿ, ಡೆಬ್ಯೂ ಮಾಡೋಕೆ ಆಗಲಿಲ್ಲ. ಮೊದಲ ಮೂರು ಏಕದಿನ ಪಂದ್ಯಗಳಲ್ಲಿ ಕೊಹ್ಲಿ, ಸಾಧನೆ ಌವರೇಜ್. 2010ರಲ್ಲಿ ಸುರೇಶ್ ರೈನಾ ನಾಯಕತ್ವದಲ್ಲಿ ಟಿ-ಟ್ವೆಂಟಿ ಕ್ರಿಕೆಟ್ ಹಾಗೆ 2011ರಲ್ಲಿ ಧೋನಿ ನಾಯಕತ್ವದಲ್ಲಿ ವಿರಾಟ್ ಟೆಸ್ಟ್ ಕ್ರಿಕೆಟ್​ಗೂ ಪದಾರ್ಪಣೆ ಮಾಡಿದ್ರು. ಆ ಎರಡೂ ಫಾರ್ಮೆಟ್​​ನಲ್ಲೂ ಕೊಹ್ಲಿ ಡೆಬ್ಯೂ, ಅಷ್ಟು ಸುಲಭವಾಗಿರಲಿಲ್ಲ.

publive-image

2009 ಡಿಸೆಂಬರ್​. ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಕೊಹ್ಲಿ, ಲಂಕಾ ವಿರುದ್ಧ ಮೊದಲ ಏಕದಿನ ಶತಕ ಸಿಡಿಸಿದ್ರು. ಇಷ್ಟ ಸಾಕಾಗಿತ್ತು ನೋಡಿ..! ಇಡೀ ವಿಶ್ವವೇ ಕೊಹ್ಲಿಯತ್ತ ಮುಖ ಮಾಡೋಕೆ..! ನಂತರ 2013ರಲ್ಲಿ ಹೋಬಾರ್ಟ್​​ನಲ್ಲಿ ಕೊಹ್ಲಿ, ಲಂಕಾ ವೇಗಿ ಲಸಿತ್ ಮಲಿಂಗಾಗೆ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟಿದ್ರು. ಅಲ್ಲಿಂದ ಶುರುವಾಯ್ತು ನೋಡಿ, ವರ್ಲ್ಡ್​ ಕ್ರಿಕೆಟ್​ನಲ್ಲಿ ಕಿಂಗ್ ಕೊಹ್ಲಿಯ ರೂಲಿಂಗ್.

2014- ಕೊಹ್ಲಿಯ ಕರಾಳ ಇಂಗ್ಲೆಂಡ್ ಪ್ರವಾಸ..!
ಅದು 2014. ಇಂಗ್ಲೆಂಡ್ ಟೂರ್ ಆಫ್ ಇಂಡಿಯಾ. ಆ ಪ್ರವಾಸದಲ್ಲಿ ವಿರಾಟ್ ಕೊಹ್ಲಿ, ದೊಡ್ಡ ಅಗ್ನಿ ಪರೀಕ್ಷೆ ಎದುರಿಸಿದ್ರು. ಜೇಮ್ಸ್ ಌಂಡರ್​ಸನ್, ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್, ಕ್ರಿಸ್ ಜೊರ್ಡನ್, ಮೊಯಿನ್ ಅಲಿಯಂತಹ ಬೌಲರ್​ಗಳು, ಕೊಹ್ಲಿಯನ್ನ ಇನ್ನಿಲ್ಲದೆ ಕಾಡಿದ್ರು. ನಾಟಿಂಗ್​ಹ್ಯಾಮ್, ಲಾರ್ಡ್ಸ್​, ಸೌತ್​ಹ್ಯಾಂಪ್ಟನ್, ಮ್ಯಾಂಚೆಸ್ಟರ್ ಮತ್ತು ದ ಓವಲ್ ಟೆಸ್ಟ್​ ಸೇರಿದಂತೆ, ಆಡಿದ 5 ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಗಳಿಸಿದ್ದು, ಕೇವಲ 134 ರನ್ ಮಾತ್ರ. ಈ ಪ್ರವಾಸ ಕೊಹ್ಲಿ ಪಾಲಿಗೆ ಅತ್ಯಂತ ಕರಾಳ ಪ್ರವಾಸವಾಗಿತ್ತು. ಕೊಹ್ಲಿ ಟೆಸ್ಟ್ ಕರಿಯರ್ ಮುಗೀದೇ ಹೋಯ್ತು ಅಂತ, ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗಿತ್ತು. ಆದ್ರೆ ಇಂಗ್ಲೆಂಡ್ ಪ್ರವಸದ ಬಳಿಕ, ಕೊಹ್ಲಿ ಆಡಿದ್ದೆ ಆಟ..! ಮಾಡಿದ್ದೇ ದಾಖಲೆ.

publive-image

2014- ಕಾಂಗರೂಗಳ ಹುಟ್ಟಡಗಿಸಿದ ಯಂಗ್ ಕೊಹ್ಲಿ..!
ಇಂಗ್ಲೆಂಡ್​ನಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ಕೊಹ್ಲಿಗೆ, ಆಸಿಸ್ ಟೆಸ್ಟ್ ಸರಣಿ ಮಾಡು ಇಲ್ಲವೆ ಮಡಿ ಸರಣಿಯಾಗಿತ್ತು. ಈ ಸರಣಿಯಲ್ಲಿ ಕೊಹ್ಲಿ ಗೆದ್ರೆ, ಟೀಮ್ ಇಂಡಿಯಾದಲ್ಲಿ ಸ್ಥಾನ. ಇಲ್ದಿದ್ರೆ ತಂಡದಿಂದ ಗೇಟ್​​ಪಾಸ್ ಅಂತ ಕ್ರಿಕೆಟ್ ಪಂಡಿತರು ಭವಿಷ್ಯ ನುಡಿದಿದ್ರು. ಆದ್ರೆ ಕಾಂಗರೂಗಳ ನಾಡಲ್ಲಿ ಕೊಹ್ಲಿ ಅಟ್ಟಹಾಸ ಮೆರೆದ್ರು. ಆಸಿಸ್​​ನ ಸ್ಟೀಡ್ ಗನ್​ಗಳಾದ ಮಿಚ್ಚೆಲ್ ಜಾನ್ಸನ್, ಪೀಟರ್ ಸಿಡಲ್, ರಿಯಾನ್ ಹ್ಯಾರಿಸ್, ಜೋಷ್ ಹೇಝಲ್​ವುಡ್ ಮತ್ತು ನಾಥನ್ ಲಯನ್ ಬೌಲಿಂಗ್​ನ್ನ, ಕೊಹ್ಲಿ ಧೂಳಿಪಟ ಮಾಡಿದ್ರು. ಆ ಸರಣಿಯಲ್ಲಿ ಕೊಹ್ಲಿ 4 ಶತಕ ಮತ್ತು 692 ರನ್ ಸಿಡಿಸಿದ್ರು.

ಕೊಹ್ಲಿ ಆಟಕ್ಕೆ ಫಿದಾ ಆಗಿದ್ದ ಆಸಿಸ್ ಕ್ರಿಕೆಟ್​ ಫ್ಯಾನ್ಸ್..!
ಆವತ್ತು ಅಂದ್ರೆ 2014ರಲ್ಲಿ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಹೋರಾಡಿದ್ದ ರೀತಿ ನೋಡಿ, ಇಡೀ ಆಸ್ಟ್ರೇಲಿಯನ್ನರೇ ದಂಗಾಗಿ ಹೋದ್ರು. ಕೊಹ್ಲಿ ಹೊಡೆಯೋ ಒಂದೊಂದು ಏಟಿಗೂ, ಎದ್ದು ನಿಂತು ಚಪ್ಪಾಳೆ ತಟ್ಟಿದ್ರು. ತಮ್ಮ ದೇಶದಕ್ಕೆ ಬಂದು, ತಮ್ಮ ಬೌಲರ್​ಗಳನ್ನೇ ಅಟ್ಟಾಡಿಸಿಕೊಂಡು ಹೊಡಿತಿರೋ ಕೊಹ್ಲಿಗೆ, ಇಡೀ ಆಸ್ಟ್ರೇಲಿಯನ್ನರೇ ಫಿದಾ ಆಗ್ಬಿಟ್ರು. ಇದಷ್ಟೇ ಅಲ್ಲ..! ಕೊಹ್ಲಿ ಹೋರಾಟದ ಮನೋಭಾವ ನೋಡಿ, ಇಡೀ ಕಾಂಗರೂಗಳು ಇವ ನಮ್ಮವ ಅಂತ ಸ್ವೀಕರಿಸಿದ್ರು. ಅದ್ರಲ್ಲೂ ಟೆಸ್ಟ್ ಸರಣಿ ವೇಳೆ ವೈಲೆಂಟ್​ ಆಗಿದ್ದ ಆಸಿಸ್ ವೇಗಿ ಮಿಚ್ಚೆಲ್ ಜಾನ್ಸನ್​​, ಕೊಹ್ಲಿಯ ಕೆಚ್ಚೆದೆಯ ಆಟಕ್ಕೆ ಫುಲ್ ಸೈಲೆಂಟ್ ಆಗ್ಬಿಟ್ರು. ಅವತ್ತು ಕೊಹ್ಲಿ ಆಟ ಹೇಗಿತ್ತು ಅಂತ, ಕಾಂಗರೂಗಳೇ ಚೆನ್ನಾಗಿ ವರ್ಣಿಸುತ್ತಾರೆ.

publive-image

ಟೆಸ್ಟ್​ ಕ್ರಿಕೆಟ್​ನಲ್ಲಿ 30 ಶತಕ- 20 ಶತಕಗಳು SENA ವಿರುದ್ಧವೇ..!
ಟೆಸ್ಟ್ ಕ್ರಿಕೆಟ್​ನಲ್ಲಿ ಒಂದೊಂದು ಶತಕ ಸಿಡಿಸೋದು ಕಷ್ಟಾನೇ..! ಅಂತಹದ್ರಲ್ಲಿ ಕೊಹ್ಲಿ 30 ಶತಕಗಳನ್ನ ಸಿಡಿಸಿದ್ದಾರೆ ಅಂದ್ರೆ, ತಮಾಷೆಯ ಮಾತಲ್ಲ ಬಿಡಿ..! ವಿಶೇಷ ಅಂದ್ರೆ ಕೊಹ್ಲಿ ಶತಕ ಸಿಡಿಸಿರೋದು ಬಲಿಷ್ಟ ತಂಡಗಳ ವಿರುದ್ಧವೇ.! ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್, ಆಸ್ಟ್ರೇಲಿಯಾದಂತಹ SENA ರಾಷ್ಟ್ರಗಳ ವಿರುದ್ಧವೇ ವಿರಾಟ್ ಆರ್ಭಟಿಸಿರೋದು. 30 ಶತಕಗಳ ಪೈಕಿ ಕೊಹ್ಲಿ, 20 ಶತಕಗಳು ಈ ಬಲಿಷ್ಟ ತಂಡಗಳ ವಿರುದ್ಧವೇ ದಾಖಲಿಸಿರೋದು. ಈ ಸಾಧನೆನೇ ಹೇಳುತ್ತೆ ಕೊಹ್ಲಿ ತಾಕತ್ತು ಏನು ಅನ್ನೋದನ್ನ.

ಟೆಸ್ಟ್ ಕ್ರಿಕೆಟ್​ನಲ್ಲಿ 7 ಡಬಲ್ ಸೆಂಚುರಿ ಸಿಡಿಸಿದ ವೀರ ವಿರಾಟ್..!
ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ರಿಕಿ ಪಾಂಟಿಂಗ್, ಬ್ರಿಯಾನ್ ಲಾರ, ಸುನಿಲ್ ಗವಾಸ್ಕರ್, ವಿವಿಎಸ್ ರಿಚರ್ಡ್ಸ್​ ರಂತಹ ದಿಗ್ಗಜ ಕ್ರಿಕೆಟಿಗರನ್ನ ಕೊಹ್ಲಿ, ಟೆಸ್ಟ್ ಕ್ರಿಕೆಟ್​​ನಲ್ಲಿ ಸೈಡ್ ಹೊಡೆದಿದ್ದಾರೆ. 7 ಬಾರಿ ವಿರಾಟ್ ಡಬಲ್ ಸೆಂಚುರಿ ಸಿಡಿಸಿ, ದಾಖಲೆ ಬರೆದಿದ್ದಾರೆ. ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ, ಸೌತ್ ಆಫ್ರಿಕಾ ವಿರುದ್ಧ ತಲಾ ಒಂದು ದ್ವಿಶತಕ ಮತ್ತು ಶ್ರೀಲಂಕಾ ವಿರುದ್ಧ 2 ದ್ವಿಶತಕಗಳನ್ನ ಕೊಹ್ಲಿ ಸಿಡಿಸಿ ಮಿಂಚಿದ್ದಾರೆ.

ನಾಯಕನಾಗಿ ತಂಡವನ್ನ, ಆಟಗಾರರನ್ನ ಬದಲಿಸಿದ್ದೇ ವಿರಾಟ್..!
ಎಂ.ಎಸ್.ಧೋನಿ ನಿವೃತ್ತಿಯ ನಂತರ ಕೊಹ್ಲಿ, ಭಾರತ ಟೆಸ್ಟ್ ತಂಡದ ನಾಯಕನಾದ್ರು. 2015ರಲ್ಲಿ ಟೀಮ್ ಇಂಡಿಯಾ ಸಾರಥ್ಯವಹಿಸಿಕೊಂಡ ವಿರಾಟ್, ನಾಯಕನಾಗಿ ದಾಖಲೆಗಳ ಮೇಲೆ ದಾಖಲೆಗಳು ಮಾಡಿದ್ರು. FACT ಏನಪ್ಪಾ ಅಂದ್ರೆ, ನಾಯಕನಾಗಿ ಕೊಹ್ಲಿ ತವರಿನಲ್ಲಿ ಒಂದೇ ಒಂದು ಟೆಸ್ಟ್ ಸರಣಿ ಸೋತಿಲ್ಲ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಮೊದಲ ನಾಯಕ ವಿರಾಟ್. ಇಂಗ್ಲೆಂಡ್, ಆಸಿಸ್, ಸೌತ್ ಆಫ್ರಿಕಾದಲ್ಲಿ ಎರಡೆರೆಡು ಟೆಸ್ಟ್ ಪಂದ್ಯಗಳನ್ನ ಗೆದ್ದ ನಾಯಕ. SENA ರಾಷ್ಟ್ರಗಳಲ್ಲಿ ಹೆಚ್ಚು ಪಂದ್ಯಗಳನ್ನ ಗೆದ್ದ ಸಾರಥಿ. ವಿದೇಶಗಳಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನ ಗೆದ್ದ ಗ್ರೇಟ್ ಕ್ಯಾಪ್ಟನ್. ನಾಯಕನಾಗಿ 7 ಬಾರಿ ಡಬಲ್ ಸೆಂಚೂರಿ ಮತ್ತು 20 ಶತಕಗಳು, ಕೊಹ್ಲಿ ಹೆಸರಿನಲ್ಲಿ ದಾಖಲಾಗಿವೆ. ಹಾಗೆ 49 ತಿಂಗಳ ಕಾಲ ಟೀಮ್ ಇಂಡಿಯಾವನ್ನ ನಂಬರ್.1 ಟೆಸ್ಟ್ ತಂಡ ಮಾಡಿದ ಕೀರ್ತಿ, ಹೆಮ್ಮೆ ಕೊಹ್ಲಿಗೆ ಸಲ್ಲುತ್ತದೆ.

publive-image

ಇದಷ್ಟೇ ಅಲ್ಲ.! ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾದಲ್ಲಿ ಭಾರೀ ಬದಲಾವಣೆ ಕಂಡಿತ್ತು. ಡ್ರೆಸಿಂಗ್ ರೂಮ್ ವಾತಾವರಣ ಇರಬಹುದು ಅಥವಾ ಆಟಗಾರರ ಮೈಂಡ್​ ಸೆಟ್ ಇರಬಹುದು. ಎಲ್ಲವನ್ನೂ ಕೊಹ್ಲಿ ಬದಲಾಯಿಸಿದ್ರು. ಕೊಹ್ಲಿ ನಾಯಕನಾಗಿದ್ದಾಗ ಟೀಮ್ ಇಂಡಿಯಾ ಆಟಗಾರರು ಹೆಚ್ಚು ಎನರ್ಜಟಿಕ್ ಆಗಿದ್ರು. ಕಾರಣ, ಅಂದು ಕ್ಯಾಪ್ಟನ್ ಕೊಹ್ಲಿ ಮಾಡಿದ್ದ ಫಿಟ್ನೆಸ್ ಕ್ರಾಂತಿ. ಆ ಕ್ರಾಂತಿಯಿಂದ ಟೀಮ್ ಇಂಡಿಯಾ, ವಿಶ್ವಕ್ರಿಕೆಟ್​ನಲ್ಲಿ ಭಾರೀ ಸದ್ದು ಮಾಡಿತ್ತು. LAZY ಫೀಲ್ಡಿಂಗ್ ಸೈಡ್ ಎನಿಸಿಕೊಂಡಿದ್ದ ಟೀಮ್ ಇಂಡಿಯಾ, ಫೀಲ್ಡಿಂಗ್​ನಲ್ಲಿ ಸೌತ್ ಆಫ್ರಿಕಾ, ಆಸ್ಟ್ರೇಲಿಯಾದಂತಹ ಸೂಪರ್ ಫೀಲ್ಡಿಂಗ್​ ಸೈಡ್​​​ ತಂಡಗಳನ್ನೇ ನಡುಗಿಸಿತು.

ಕೊಹ್ಲಿ ಸಾರಥ್ಯದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಅಟ್ಯಾಕ್ ಕೂಡ ಬದಲಾಯ್ತು. ಅಂದು ಕೊಹ್ಲಿ ಮಾಡಿದ್ದ ಫಿಟ್ನೆಸ್ ಕ್ರಾಂತಿ, ಬೌಲರ್​ಗಳ ಮೇಲೂ ಪರಿಣಾಮ ಬೀರಿತು. ಕೊಹ್ಲಿ ನಾಯಕತ್ವದಲ್ಲೇ ಹೆಚ್ಚು ಹೆಚ್ಚು ಫಾಸ್ಟ್ ಬೌಲರ್​ಗಳು ಬೆಳಕಿಗೆ ಬಂದ್ರು. ವೇಗಿಗಳನ್ನ ಸಾರಥಿ ಕೊಹ್ಲಿ, ಚೆನ್ನಾಗಿ ಬೆಳೆಸಿ ದೀರ್ಘಕಾಲ ತಂಡದ ಸೇವೆ ಮಾಡುವಂತೆ ಮಾಡಿದ್ರು. ನೀವು ನಂಬ್ತೀರೋ ಇಲ್ವೋ ಗೊತ್ತಿಲ್ಲ..! ಅಂಡರ್ ಕೊಹ್ಲಿ, ಟೀಮ್ ಇಂಡಿಯಾ ವೇಗಿಗಳು 591 ವಿಕೆಟ್ ಪಡೆದು ವಿಶ್ವದಾಖಲೆ ಬರೆದಿದ್ರು. ನಾಯಕನಾಗಿ ಕೊಹ್ಲಿ ಮಾಡಿದ್ದ ಸಾಧನೆ, ಭಾರತ ತಂಡದ ಯಾವ ನಾಯಕನೂ ಮಾಡಲಿಲ್ಲ. ಮಾಡೋಕೂ ಆಗ್ತಿರಲಿಲ್ಲ ಬಿಡಿ..!

ಕೊಹ್ಲಿ ಅಗ್ರೆಶನ್ ಕಂಡು ಬೌಲರ್​ಗಳು ಬೆಚ್ಚಿಬಿದ್ದಿದ್ರು..!
ವಿರಾಟ್ ಕೊಹ್ಲಿ, ಯಾವತ್ತೂ ಡಿಫೆನ್ಸೀವ್ ಕ್ರಿಕೆಟ್ ಆಡ್ಲಿಲ್ಲ. ಕೊಹ್ಲಿ ಅಗ್ರೆಸಿವ್ ಬ್ರ್ಯಾಂಡ್ ಆಫ್ ಕ್ರಿಕೆಟ್​​ಗೆ ಫೇಮಸ್. ನಾಯಕನಾಗಿ ಹಾಗೆ ಆಟಗಾರನಾಗಿ ಕೊಹ್ಲಿ, ಎದುರಾಳಿಗಳ ವಿರುದ್ಧ ಗೆಲುವಿಗಾಗಿ ಹೋರಾಟ ನಡೆಸಿದವರು. ಕೊಹ್ಲಿಗೆ ಸೋಲು ಅನ್ನೋ ಪದನೇ ಇಷ್ಟ ಆಗ್ತಿರಲಿಲ್ಲ. ಕೊನೆಯವರೆಗೂ ಕೊಹ್ಲಿಯದ್ದು ಒಂದೇ ಮಂತ್ರ.! ಅದು ಗೆಲುವು..! ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ, 2021ರ ಲಾರ್ಡ್ಸ್​ ಟೆಸ್ಟ್​ ಪಂದ್ಯದ ಫೈನಲ್​ ಡೇ..! ಕೊನೆಯ ದಿನ ಇಂಗ್ಲೆಂಡ್ ಗೆಲುವಿಗಾಗಿ ಹೋರಾಟ ನಡೆಸಿತ್ತು. ಆದ್ರೆ ಕೊಹ್ಲಿ ಆಡಿದ ಆ ಒಂದೇ ಒಂದು ಮಾತು, ಇಂಗ್ಲೆಂಡ್ ತಂಡದ ಸೋಲಿಗೆ ಕಾರಣವಾಯ್ತು. ಹೌದು..! ಕೊನೆಯ ದಿನ ಕೊಹ್ಲಿ, ಟೀಮ್ ಹಡಲ್​ನಲ್ಲಿ ತಮ್ಮ ಬೌಲರ್​ಗಳಿಗೆ ಒಂದು ಮಾತು ಹೇಳಿದ್ರು. ಅದೇನಂದ್ರೆ, 60 ಓವರ್​ಗಳಲ್ಲಿ ಇವರಿಗೆ ನರಕ ದರ್ಶನ ಮಾಡಿಸಬೇಕು ಅಂತ.! ಆ ಮಾತು ತಂಡದ ಫಲಿತಾಂಶವನ್ನೇ ಬದಲಿಸಿತು.

publive-image

2021 WTC FINALS ಸೋಲು.! ಕೊಹ್ಲಿಗೆ ಕಾಡಿತ್ತು ನೋವು..!
ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ, ಚೊಚ್ಚಲ ವರ್ಲ್ಡ್​ ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್​​​ಗೆ ಎಂಟ್ರಿ ಕೊಟ್ಟಿತ್ತು. ಸೌತ್​ಹ್ಯಾಂಪ್ಟನ್​ನಲ್ಲಿ ಕೊಹ್ಲಿ ಪಡೆಗೆ, ಕಿವೀಸ್ ಕಿವಿ ಹಿಂಡುವ ಪ್ಲಾನ್​​​​​​​​​​​​​​​​​​​​​​​​​​ ಇತ್ತು. ಆದ್ರೆ ಅಂದು ಅಂದುಕೊಂಡಿದ್ದೇ ಒಂದು.. ಆಗಿದ್ದೇ ಇನ್ನೊಂದು..! ಇಂಗ್ಲೀಷ್ ಕಂಡೀಷನ್ಸ್​ನಲ್ಲಿ ಟಿಮ್ ಸೌಥಿ, ಟ್ರೆಂಟ್ ಬೋಲ್ಟ್, ನೇಲ್ ವ್ಯಾಗ್ನರ್, ಕೈಲ್ ಜೇಮಿಸನ್ ದಾಳಿಗೆ ತತ್ತರಿಸಿದ ಟೀಮ್ ಇಂಡಿಯಾ, 8 ವಿಕೆಟ್​ಗಳ ಹೀನಾಯ ಸೋಲು ಅನುಭವಿಸಿತು. ಆ ಸೋಲನ್ನ ನಾಯಕ ಕೊಹ್ಲಿ, ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ರೋಹಿತ್, ಪೂಜಾರ, ರಹಾನೆ, ಬೂಮ್ರಾ, ಅಶ್ವಿನ್, ಜಡೇಜಾರಂತಹ ಸ್ಪೆಷಲಿಸ್ಟ್​ಗಳಿದ್ರೂ, ಸೋಲು ತಪ್ಪಿಸೋಕೆ ಸಾಧ್ಯವಾಗಲಿಲ್ಲ.

ಬರ್ಡಾರ್-ಗವಾಸ್ಕರ್ ಟೆಸ್ಟ್ ಸರಣಿ ವೇಳೆ 'I AM DONE' ಎಂದಿದ್ದ ಕೊಹ್ಲಿ..!
ಪರ್ತ್​​ ಟೆಸ್ಟ್​ನ 2ನೇ ಇನ್ನಿಂಗ್ಸ್​ನಲ್ಲಿ ಕೊಹ್ಲಿ ಅಜೇಯ 100 ರನ್​ಗಳಿಸಿದ್ರು. ಕೊಹ್ಲಿ ಬ್ಯಾಟಿಂಗ್ ನೋಡಿದ್ದ ಕ್ರಿಕೆಟ್ ಫ್ಯಾನ್ಸ್, ಕಾಂಗರೂಗಳಿಗೆ ಮುಂದೆ ಕಾದಿದೆ ಹಬ್ಬ ಅಂತ ಬಿಂಬಿಸಿದ್ರು. ಆದ್ರೆ ನಂತರ ನಡೆದಿದ್ದೇ ಬೇರೆ..! ಕಾಂಗರೂಗಳ ಬಲಗೆ ಬಿದ್ದು ವಿಲ ವಿಲ ಒದ್ದಾಡಿದ ಕೊಹ್ಲಿ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅಡ್ರೆಸ್ ಇಲ್ಲದಂತೆ ಹೋದ್ರು. ಕೊಹ್ಲಿಗೆ ಅದೇನನಿಸಿತೋ ಏನೋ..! ಆಗ ಕೊಹ್ಲಿ I AM DONE ಅಂತ ತನ್ನ ಸಹಪಾಠಿಗಳ ಮುಂದೆ ಹೇಳೇಬಿಟ್ರು. ಆದ್ರೆ ಕೊಹ್ಲಿ ಸಹಪಾಠಿಗಳು ಅದನ್ನ ಸೀರಿಯಾಸ್ ಆಗಿ ತೆಗೆದುಕೊಳ್ಳಲಿಲ್ಲ. ಒಂದಂತು ನಿಜ.! ಕೊಹ್ಲಿಯ ಟೆಸ್ಟ್ ರಿಟೈರ್​ಮೆಂಟ್ ಪ್ಲಾನ್, ಆಸ್ಟ್ರೇಲಿಯಾದಲ್ಲೇ ನಿರ್ಧಾರವಾಗಿತ್ತು.

publive-image

ಕೊಹ್ಲಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ..! ಅಂದು ಏನಂದಿದ್ರು ಗೊತ್ತಾ..?
2013ರಲ್ಲಿ ಕೊಹ್ಲಿ 'ಸೀದಿ ಬಾತ್' ಅನ್ನೋ ವಿಶೇಷ ಸಂದರ್ಶನದಲ್ಲಿ, ಆ ಒಂದು ಮಾತನ್ನ ಹೇಳಿದ್ರು. ನನ್ನ ಗುರಿ ಟೆಸ್ಟ್ ಕ್ರಿಕೆಟ್​ನಲ್ಲಿ ಹತ್ತು ಸಾವಿರ ರನ್​ಗಳಿಸೋದು ಅಂತ. ಆದ್ರೆ ಕೊಹ್ಲಿ ಅಂದು ನುಡಿದಂತೆ ನಡೆಯಲಿಲ್ಲ. 123 ಟೆಸ್ಟ್ ಪಂದ್ಯಗಳನ್ನ ಆಡಿರುವ ಕೊಹ್ಲಿ, 9230 ರನ್​ಗಳಿಸಿದ್ದಾರೆ. ಅಟ್ಲೀಸ್ಟ್, ಮುಂಬರುವ ಇಂಗ್ಲೆಂಡ್ ಟೆಸ್ಟ್ ಸರಣಿ ಆಡಿದ್ರೆ, ಕೊಹ್ಲಿ ಹತ್ತು ಸಾವಿರ ರನ್​ಗಳಿಸಬಹುದಿತ್ತು. ತನ್ನ ಕನಸನ್ನ ನನಸು ಮಾಡಿಕೊಳ್ಳಬಹುದಿತ್ತು. ಆದ್ರೆ ಕೊಹ್ಲಿ 770 ರನ್ ಗಳಿಸುವ ಮುನ್ನವೇ, ಇನ್ನಿಂಗ್ಸ್​ ಮುಗಿಸಿಬಿಟ್ರು.

ಟೆಸ್ಟ್ ಕ್ರಿಕೆಟ್​​​​​​​​​​​​​​​​​​​​​​​​​​​​​​​ ಅಂದ್ರೆ 'ರಿಯಲ್ ಚಾಲೆಂಜ್' ಅಂದಿದ್ರು ಕೊಹ್ಲಿ..!
ಬಾಲ್ಯದಿಂದಲೂ ಕೊಹ್ಲಿಗೆ ಕ್ರಿಕೆಟ್ ಅಂದ್ರೆ ಲವ್.. ಕ್ರಿಕೆಟ್ ಅಂದ್ರೆ ಫ್ಯಾಶನ್..! ಅದ್ರಲ್ಲೂ ಟೆಸ್ಟ್ ಕ್ರಿಕೆಟ್​ ಮೇಲೆ ಕೊಹ್ಲಿಗೆ, ಅಪಾರ ಪ್ರೀತಿ, ಗೌರವ. ಟೆಸ್ಟ್ ಕ್ರಿಕೆಟ್​​​ ಅನ್ನೋ ಸವಾಲನ್ನ ಗೆಲ್ಲೋದೇ, ಕ್ರಿಕೆಟರ್ ಕೊಹ್ಲಿಗಿದ್ದ ಬಿಗ್ ಚಾಲೆಂಜ್. ಆದ್ರೆ ಕೊಹ್ಲಿ, ಟೆಸ್ಟ್ ಕ್ರಿಕೆಟರ್ ಅಂತ ಯಾವತ್ತೂ ಕರೆಸಿಕೊಂಡಿಲ್ಲ. ಕೊಹ್ಲಿಯನ್ನ ಇಂದಿಗೂ ವೈಟ್​​ಬಾಲ್ ಕ್ರಿಕೆಟ್​​​ನ ಲೆಜೆಂಡ್ ಅಂತಾನೇ ಕರೆಯುತ್ತಾರೆ. ಇದು ಕೊಹ್ಲಿಗೆ ಸ್ವಲ್ಪ ಬೇಸರ ಇದೆ. ಆದ್ರೆ ಟೆಸ್ಟ್​ನಲ್ಲಿ ಕೊಹ್ಲಿ ಬೆಸ್ಟ್ ಪರ್ಫಾಮೆನ್ಸ್ ನೀಡಿರೋದನ್ನ ಮರೆಯೋ ಆಗಿಲ್ಲ.

ಕೊಹ್ಲಿ ಟೆಸ್ಟ್ ಕರಿಯರ್​ನ ಆ 3 PHASE ಹೇಗಿತ್ತು..?

2011- 2015
41 ಪಂದ್ಯ, 2994 ರನ್, 11 ಶತಕ, 44.02 ಸರಾಸರಿ- ಕೊಹ್ಲಿ ಟೆಸ್ಟ್ ಕ್ರಿಕೆಟ್ ಕರಿಯರ್​ನ ಆರಂಭಿಕ ದಿನಗಳು, ಟು ಬಿ ಫ್ರಾಂಕ್ ಹೇಳಿಕೊಳ್ಳುವಂತಿರಲಿಲ್ಲ. ಆದ್ರೆ ಕೊಹ್ಲಿ ನಿಧಾನವಾಗಿ ಪಿಕ್​​ಅಪ್ ಆದ್ರು. 2014ರ ಆಸಿಸ್ ಪ್ರವಾಸದಲ್ಲಿ ಕೊಹ್ಲಿ, ಅಡಿಲೇಡ್​​ ಟೆಸ್ಟ್​ನ ಎರಡೂ ಇನ್ನಿಂಗ್ಸ್​ಗಳಲ್ಲಿ ಬ್ಯಾಕ್​ ಟು ಬ್ಯಾಕ್ ಸೆಂಚುರಿ ಸಿಡಿಸಿ, ವಿಶ್ವಕ್ರಿಕೆಟ್​ನಲ್ಲೇ ಸದ್ದು ಮಾಡಿದ್ರು. ಆದಾದ ನಂತರ ಕೊಹ್ಲಿಯ ಗತ್ತು ವಿಶ್ವಕ್ಕೆ ಗೊತ್ತಾಯ್ತು. 2011ರಿಂದ 2015ರವರೆಗೂ ಕೊಹ್ಲಿ 41 ಟೆಸ್ಟ್ ಪಂದ್ಯಗಳನ್ನ ಆಡಿ, 2994 ರನ್​​ಗಳಿಸಿದ್ರು. 44.02ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದ ವಿರಾಟ್, 11 ಭರ್ಜರಿ ಶತಕಗಳನ್ನ ಸಿಡಿಸಿದ್ರು.

2016-2019
43 ಪಂದ್ಯ, 4208 ರನ್, 16 ಶತಕ, 66.79 ಸರಾಸರಿ- ಆ 4 ವರ್ಷಗಳು ಕೊಹ್ಲಿ ಪಾಲಿನ ಡ್ರೀಮ್ ಇಯರ್ಸ್​. 2016 ರಿಂದ 2019ರವರೆಗೂ ಟೆಸ್ಟ್ ಕ್ರಿಕೆಟ್​ನಲ್ಲಿ ಕೊಹ್ಲಿಯನ್ನ ಕಟ್ಟಿಹಾಕೋರೆ ಇರಲಿಲ್ಲ. ಆ ಪಿರಿಯಡ್​ನಲ್ಲಿ ಕೊಹ್ಲಿ, ಟೆಸ್ಟ್ ಕ್ರಿಕೆಟ್​​ನಲ್ಲಿ ಕಿಂಗ್ ಆಗಿ ಮರೆದ್ರು. 16 ಶತಕಗಳು, 67ರ ಬ್ಯಾಟಿಂಗ್ ಸರಾಸರಿ, 4208 ರನ್ ಕೊಹ್ಲಿ ಖಾತೆಯಲ್ಲಿ..! ಅಬ್ಬಬ್ಬಬ್ಬಾ..! ಅಂದು ಟೆಸ್ಟ್​ನಲ್ಲಿ ಕೊಹ್ಲಿಯ ವಿರಾಟ ವೀರಾವೇಶಕ್ಕೆ, ಇಡೀ ಕ್ರಿಕೆಟ್ ವಲಯವೇ ಸಲಾಂ ಹೊಡೆದಿತ್ತು. ಘಟಾನುಘಟಿ ಬೌಲರ್​ಗಳೇ, ವಿರಾಟ ಆರ್ಭಟಕ್ಕೆ ಬೆಚ್ಚಿಬಿದ್ದಿದ್ರು.

2020-2025
39 ಪಂದ್ಯ, 2028 ರನ್, 3 ಶತಕ, 30.72 ಸರಾಸರಿ- ಆದ್ರೆ ಕಳೆದೈದು ವರ್ಷಗಳಿಂದ ಕೊಹ್ಲಿ ಬ್ಯಾಟ್, ಫುಲ್ ಸೈಲೆಂಟ್ ಆಗ್ಬಿಟ್ಟಿದೆ. ವೈಟ್​ಬಾಲ್ ಫಾರ್ಮೆಟ್​ನಲ್ಲಿ ಕೊಹ್ಲಿ ಹೇಗೋ ರನ್​ ಹೊಡೆದು, ಟೀಕಕಾರರನ್ನ ಸೈಲೆಂಟ್ ಮಾಡ್ತಿದ್ರು. ಆದ್ರೆ ಲಾಂಗರ್ ಫಾರ್ಮೆಟ್​ನಲ್ಲಿ ಕೊಹ್ಲಿ, ಆಕಾಶದಿಂದ ಪಾತಾಳಕ್ಕೆ ಬಿದ್ದರು. 2020ರಿಂದ 2025, ಇಲ್ಲಿಯವರೆಗೂ ಕೊಹ್ಲಿ 39 ಟೆಸ್ಟ್ ಪಂದ್ಯಗಳನ್ನ ಆಡಿ, ಕೇವಲ ಮೂರೇ ಮೂರು ಶತಕಗಳನ್ನ ಸಿಡಿಸಿದ್ದಾರೆ. ಕೊಹ್ಲಿಯ ಬ್ಯಾಟಿಂಗ್ ಸರಾಸರಿ 30.72..! ಈ ಐದು ವರ್ಷಗಳು ಕೊಹ್ಲಿಯ ನಿದ್ದೆಕೆಡಿಸಿತು. ಈ ಐದು ವರ್ಷಗಳಲ್ಲೇ ಕೊಹ್ಲಿ, ಟೀಕಕಾರರಿಗೆ ಆಹಾರವಾದ್ರು. ಅಂದು ಹೀರೋ ಆಗಿ ಮೆರೆದಿದ್ದ ಕೊಹ್ಲಿ, ನಾಲ್ಕೈದು ವರ್ಷಗಳಲ್ಲಿ ಝೀರೋ ಆದ್ರು. ಕೊಹ್ಲಿ ಆಟದ ಬಗ್ಗೆ ಎಲ್ಲರೂ ಅನಾಲಿಸ್ ಮಾಡೋಕೆ ಶುರುವಾದ್ರು. ಇದು ಕೊಹ್ಲಿಗೆ ಅತ್ಯಂತ ನೋವಿನ ದಿನಗಳಾಗಿತ್ತು.

publive-image

ಬೇಸರ, ನೋವು, ಕಣ್ಣೀರು, ಏಕಾಂಗಿ ಕೊಹ್ಲಿ..!
ವಿರಾಟ್, ಟೆಸ್ಟ್ ಕ್ರಿಕೆಟ್​​​ನಿಂದ ದೂರ ಸರಿದಿದ್ದಾರೆ. ಈಗ ಎಲ್ಲರೂ ಕೊಹ್ಲಿ ದಾಖಲೆಗಳು, ಸಾಧನೆಗಳ ಬಗ್ಗೆ ಮಾತನಾಡುತ್ತಾರೆ. ಆದ್ರೆ ಕೊಹ್ಲಿಯ ಹೋರಾಟ, ಕಣ್ಣೀರನ್ನ ಬಹುಷಃ ಯಾರೂ ಕೂಡ ನೋಡಿರಲು ಸಾಧ್ಯವಿಲ್ಲ ಬಿಡಿ..! ಹೌದು..! ಪ್ರತಿ ವೈಫಲ್ಯದ ಪ್ರವಾಸದ ನಂತರ ಕೊಹ್ಲಿ, ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬೇಸರ, ನೋವನ್ನ ಹೊರಹಾಕಿದ್ದಾರೆ. ಏಕಾಂಗಿಯಾಗಿ ಕುಳಿತು ಕಣ್ಣೀರು ಸುರಿಸಿದ್ದಾರೆ. ಅಷ್ಟರ ಮಟ್ಟಿಗೆ ಕೊಹ್ಲಿ ಟೆಸ್ಟ್​ ಕ್ರಿಕೆಟ್​​ಅನ್ನ ಪ್ರೀತಿಸುತ್ತಿದ್ರು. ಕೊಹ್ಲಿ ಟೆಸ್ಟ್ ಕ್ರಿಕೆಟ್​​ಅನ್ನ JUST ANOTHER ಫಾರ್ಮೆಟ್ ಅಂತ ಸ್ವೀಕರಿಸಿದ್ದಿದ್ರೆ, ಇವತ್ತು ಕೊಹ್ಲಿ ಆ ಇಷ್ಟೆಲ್ಲಾ ಸಾಧನೆಯನ್ನ ಮಾಡುತ್ತಿರಲಿಲ್ಲ..!

ಥ್ಯಾಂಕ್ಯೂ ಕೊಹ್ಲಿ..! ಟೆಸ್ಟ್ ಕ್ರಿಕೆಟ್ 'WILL MISS YOU'..!
ಭಾರತೀಯ ಟೆಸ್ಟ್ ಕ್ರಿಕೆಟ್ ಇವತ್ತು ದಿಗ್ಗಜರನ್ನ ಕಳೆದುಕೊಂಡಿದೆ ನಿಜ. ಆದ್ರೆ ಕೊಹ್ಲಿ ಇಲ್ಲದ ಟೆಸ್ಟ್ ತಂಡವನ್ನ ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಕೊಹ್ಲಿ ಟೆಸ್ಟ್ ಕ್ರಿಕೆಟ್ ಅನ್ನ ಮಿಸ್ ಮಾಡಿಕೊಳ್ಳೋದಲ್ಲ..! ಟೆಸ್ಟ್ ಕ್ರಿಕೆಟೇ ಕೊಹ್ಲಿಯನ್ನ ಮಿಸ್ ಮಾಡಿಕೊಳ್ಳುತ್ತದೆ. ಟೆಸ್ಟ್​ನಲ್ಲಿ ಕೊಹ್ಲಿ ಶ್ರೇಷ್ಟ ಬೌಲರ್​​ಗಳಿಗೆ ನೀರು ಕುಡಿಸಿದ್ದಾರೆ. ಕೊಹ್ಲಿ ಬ್ಯಾಟ್ ಹಿಡಿದು ನಿಂತ್ರೆ, ಬೌಲರ್​ಗಳ ತಲೆ ತಿರುಗುತ್ತಿತ್ತು. ಎದುರಾಳಿ ಕ್ಯಾಪ್ಟನ್​ಗಳ ಗೇಮ್​ಪ್ಲಾನ್ ಬದಲಾಗುತ್ತಿತ್ತು. ಟೆಸ್ಟ್ ಕ್ರಿಕೆಟ್​​​ನಲ್ಲಿ ಕೊಹ್ಲಿ, ಆ ಮಟ್ಟಕ್ಕೆ ಹವಾ ಕ್ರಿಯೇಟ್ ಮಾಡಿದ್ರು.

ಕೊಹ್ಲಿಯದ್ದು ಬೇಸರದ ನಿರ್ಧಾರನಾ..? ಸರಿಯಾದ ನಡೆನಾ..?
ಕಳೆದ ಕೆಲ ದಿನಗಳಿಂದ ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿಯ ಬಗ್ಗೆ, ಸಿಕ್ಕಾಪಟ್ಟೆ ಚರ್ಚೆಯಾಗ್ತಿತ್ತು. ಕೊಹ್ಲಿ ಟೆಸ್ಟ್ ಕ್ರಿಕೆಟ್​​ಗೆ ಗುಡ್​ಬೈ ಹೇಳಬಾರದು..! ಕೊಹ್ಲಿ ಇನ್ನಷ್ಟು ದಿನಗಳ ಕಾಲ ಟೆಸ್ಟ್ ಕ್ರಿಕೆಟ್​ನಲ್ಲಿ ಮುಂದುವರೆಯಬೇಕು ಅಂತ ಪರ-ವಿರೋಧ ಚರ್ಚೆಯಾಗ್ತಿತ್ತು. ಆದ್ರೆ ಮೇ 12ರಂದು ಕೊಹ್ಲಿ ತಮ್ಮ X ಖಾತೆಯಲ್ಲಿ ನಿವೃತ್ತಿಯ ಬಗ್ಗೆ ಸ್ಪಷ್ಟತೆ ನೀಡಿದ್ರು. ಆದ್ರೆ ಕೊಹ್ಲಿಯ ನಿರ್ಧಾರ ಬೇಸರದಿಂದ ಬಂದಿದ್ದೋ ಅಥವಾ ಕೊಹ್ಲಿ ಯೋಚಿಸಿ ನಿವೃತ್ತಿಯ ನಿರ್ಧಾರ ಕೈಗೊಂಡ್ರೋ ಗೊತ್ತಿಲ್ಲ. ಬಿಸಿಸಿಐ ಒಂದು ಸತ್ಯ ಹೇಳಿದ್ರೆ, ಮೂಲಗಳು ಇನ್ನೊಂದು ಸತ್ಯ ಹೇಳುತ್ತಿವೆ. ಹಾಗಾಗಿ ಕೊಹ್ಲಿ ಟೆಸ್ಟ್ ನಿವೃತ್ತಿಗೆ ಕಾರಣ, ಇನ್ನು ಸ್ಪಷ್ಟವಾಗಿ ತಿಳಿದುಬಂದಿಲ್ಲ.

publive-image

5 ತಿಂಗಳಲ್ಲಿ 3 ದಿಗ್ಗಜರು ರಿಟೈರ್ಡ್​ 'ಹರ್ಟ್'..?
ಡಿಸೆಂಬರ್ 18, 2024ರಂದು ಆಫ್ ಸ್ಪಿನ್ನರ್ ಆರ್​,ಅಶ್ವಿನ್ ಟೆಸ್ಟ್ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ರು. ಮೇ 7, 2025 ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್​​​ಗೆ ನಿವೃತ್ತಿ ಘೋಷಿಸಿದ್ರು. ರೋಹಿತ್ ರಿಟೈರ್​ಮೆಂಟ್ ಹೇಳಿದ ಕೇವಲ ಐದೇ ದಿನಗಳಲ್ಲೇ, ಕೊಹ್ಲಿ ವೈಟ್​​ ಜರ್ಸಿಯನ್ನ ಕಳಚುವ ಕಠಿಣ ನಿರ್ಧಾರ ಕೈಗೊಂಡ್ರು. ಕೇವಲ 5 ತಿಂಗಳಲ್ಲಿ ಮೂವರು ದಿಗ್ಗಜರನ್ನ ಕಳೆದುಕೊಂಡ ಭಾರತೀಯ ಕ್ರಿಕೆಟ್,​ ನಿಜಕ್ಕೂ ಬಡವಾಗಿದೆ. ಆದ್ರೆ ಈ ಆಟಗಾರರನ್ನ ಯಾವತ್ತೂ ರೀಪ್ಲೇಸ್ ಮಾಡೋಕೆ ಆಗಲ್ಲ.

ಇದನ್ನೂ ಓದಿ: ಟೆಸ್ಟ್​​ ಕ್ರಿಕೆಟ್​​ಗೆ ಕೊಹ್ಲಿ ನಿವೃತ್ತಿ.. ಸ್ಟಾರ್ ಆಟಗಾರನ ಈ ನಿರ್ಧಾರಕ್ಕೆ 2 ಕಾರಣಗಳು!

ಇನ್ನೆರೆಡು ವರ್ಷಗಳಲ್ಲಿ ಕೊಹ್ಲಿ ಬ್ಯಾಟ್ ಬಿಟ್ಟು ಕಣ್ಮರೆ..! 
ಟಿ-ಟ್ವೆಂಟಿ ವಿಶ್ವಕಪ್ ಗೆದ್ದ ಮೇಲೆ ಕೊಹ್ಲಿ, ಆ ಫಾರ್ಮೆಟ್​​ಗೂ ಗುಡ್​ಬೈ ಹೇಳಿದ್ರು. ಈಗ ಟೆಸ್ಟ್​ ಕ್ರಿಕೆಟ್​​ನಿಂದ ನಿವೃತ್ತಿ ಹೊಂದಿರೋ ಕೊಹ್ಲಿ, ಕೇವಲ ಏಕದಿನ ಕ್ರಿಕೆಟ್ ಮಾತ್ರ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆದ್ರೆ ಅದು ಕೂಡ ಇನ್ನೆರೆಡು ವರ್ಷ ಮಾತ್ರ. ಈಗಾಗಲೇ ಟೀಮ್ ಇಂಡಿಯಾದಲ್ಲಿ ಯಂಗ್​ಸ್ಟರ್​​ಗಳು ಭಾರೀ ಸದ್ದು ಮಾಡ್ತಿದ್ದಾರೆ. ಆದ್ರೆ ಕಳೆದು ಹೋಗುವ ಮುನ್ನ ಕೊಹ್ಲಿ, ಆ ಫಾರ್ಮೆಟ್​​ಗೂ ವಿದಾಯ ಹೇಳೋಕೆ ಮನಸು ಮಾಡಲಿದ್ದಾರೆ. 2027ರಂದು ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಜಂಟಿಯಾಗಿ ಆಯೋಜಿಸುವ ಏಕದಿನ ವಿಶ್ವಕಪ್ ನಂತರ, ಕೊಹ್ಲಿ ಓಡಿಐನಿಂದಲೂ ದೂರ ಉಳಿಯಲಿದ್ದಾರೆ. ಬ್ಯಾಟ್ ಬಿಟ್ಟು, ಎಲ್ಲರಿಂದಲೂ ದೂರ ಹೋಗಲಿದ್ದಾರೆ. ಈಗಾಗಲೇ ಕೊಹ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.

publive-image

'ಗ್ರೇಟ್ ಕ್ರಿಕೆಟರ್' ಆಗಿ ವೈಟ್ ಜರ್ಸಿ ಕಳಚಿಟ್ಟ ಕೊಹ್ಲಿ..!
ಸುನಿಲ್ ಗವಾಸ್ಕರ್, ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಜಿ ಆರ್ ವಿಶ್ವನಾಥ್, ವೀರೇಂದ್ರ ಸೆಹ್ವಾಗ್, ಭಾರತ ಕಂಡಂತಹ ಶ್ರೇಷ್ಟ ಟೆಸ್ಟ್ ಕ್ರಿಕೆಟರ್​ಗಳು. ಕೊಹ್ಲಿ ಕೂಡ ಈ ಲಿಸ್ಟ್​ನಲ್ಲಿ, ಟಾಪ್​​ ಫೋರ್​​ನಲ್ಲಿ ಕಾಣಿಸಿಕೊಳ್ಳೋ ಶ್ರೇಷ್ಟ ಆಟಗಾರ. 14 ವರ್ಷಗಳ ಸುದೀರ್ಘ ಕ್ರಿಕೆಟ್​ ಕರಿಯರ್​ನಲ್ಲಿ ಕೊಹ್ಲಿ, ಯಾವತ್ತೂ ಇಂಜುರಿ, ಔಟ್ ಆಫ್ ಫಾರ್ಮ್ ಅಂತ ಚೆಂಚ್​ನಲ್ಲಿ ಕೂರಲಿಲ್ಲ. ಪ್ರತಿ ಪಂದ್ಯದಲ್ಲೂ.. ಅದು ವೈಟ್​ಬಾಲ್ ಆಗಲಿ.. ರೆಡ್ ಬಾಲ್ ಆಗಲಿ.. ಫೈಟರ್​ನಂತೆ ಫೈಟ್ ಮಾಡುವ ಕೊಹ್ಲಿ, ಇದೀಗ ಗ್ರೇಟ್ ಕ್ರಿಕೆಟರ್ ಆಗಿ ವೈಟ್ ಜರ್ಸಿ ಕಳಚಿಟ್ಟಿದ್ದಾರೆ. ಅಂದಹಾಗೆ ಟೆಸ್ಟ್ ಕ್ರಿಕೆಟ್​​​​​​, ಕೊಹ್ಲಿಯ ಕ್ರಿಕೆಟ್ ಕರಿಯರ್ ಮಾತ್ರ ಶೇಪ್ ಮಾಡಿಲ್ಲ..! ಕೊಹ್ಲಿಗೆ ಟೆಸ್ಟ್ ಕ್ರಿಕೆಟ್ ಸಿಕ್ಕಾಪಟ್ಟೆ ಟೆಸ್ಟ್ ಮಾಡಿದೆ. ತಾಳ್ಮೆ ಕಲಿಸಿದೆ. ಜೀವನದ ಪಾಠ ಕಲಿಸಿದೆ. ಈ ಲೈಫ್ ಲೆಸನ್​​​ನನ್ನ ಕೊಹ್ಲಿ, ಮುಂದೆ ಜೀವನದಲ್ಲೂ ಅಳವಡಿಸಿಕೊಳ್ಳಲಿದ್ದಾರೆ. ಭಾರತ ಟೆಸ್ಟ್ ತಂಡಕ್ಕೆ ಸುದೀರ್ಘ ಸೇವೆ, ಬಲ, ಶಕ್ತಿ ತುಂಬಿರುವ ವಿರಾಟ್​​ಗೆ ಹ್ಯಾಟ್ಸ್​ ಆಫ್ ಹೇಳಲೇಬೇಕು.

- ಥ್ಯಾಂಕ್ಯೂ ವಿರಾಟ್​​ 

ವಿಶೇಷ ವರದಿ: ಗಂಗಾಧರ್.ಜಿ.ಎಸ್
ಸ್ಪೋರ್ಟ್ಸ್​ ಬ್ಯೂರೋ ಹೆಡ್, ನ್ಯೂಸ್​​ಫಸ್ಟ್​ ಕನ್ನಡ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment