/newsfirstlive-kannada/media/post_attachments/wp-content/uploads/2024/12/Tulasi-Gowda-NO-More-3.jpg)
ಕಾನನ ವನಗಳ ವೃಕ್ಷಮಾತೆ.. ಗಿಡ-ಮರ-ಬಳ್ಳಿಗಳನ್ನ ಮಕ್ಕಳಂತೆ ಸಾಕಿ ಸಲುಹಿದ ತಾಯಿ.. ದಟ್ಟ ಕಾಡುಗಳಿಗೆ ಕಾವಲುಗಾರಳಾಗಿ ನಿಂತಿದ್ದ ಅಮ್ಮ.. ಬೇರು, ಚೆಕ್ಕೆಗಳಲ್ಲಿನ ವಿಶೇಷ ಔಷಧೀಯ ಗುಣ ಗುರುತಿಸಿದ ನರ್ಸರಿ ಆಯಿ.. ರಾಜ್ಯ ಕಂಡ ಅಪರೂಪದ ಗಿಡಮರಗಳ ಸಾಕು ಜನನಿ.. ಅರಣ್ಯ ಇಲಾಖೆಯ ಎರಡು ಕಣ್ಣುಗಳಾಗಿದ್ದ ಅವ್ವ.. ತುಳಸಿ ಗೌಡ ಇನ್ನು ನೆನಪು ಮಾತ್ರ.
ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದ ಪದ್ಮಶ್ರೀ ಪುರಸ್ಕೃತ ವೃಕ್ಷಮಾತೆ ತುಳಸಿ ಗೌಡ 86 ವಯಸ್ಸಿನಲ್ಲಿ ಬದುಕು ಮುಗಿಸಿದ್ದಾರೆ. ಅವರ ನೆನಪುಗಳು, ಗಿಡಮರಗಳ ಉಳಿವಿಗಾಗಿ ನಡೆಸಿದ ಹೊರಾಟ, ಸಾಧನೆ, ಬಿಟ್ಟು ಹೋಗಿರುವ ಹೆಜ್ಜೆಗುರುತುಗಳು ನಮ್ಮಲ್ಲಿ ಉಳಿದುಕೊಂಡಿವೆ. ಹಿರಿಯ ಜೀವ ಶಾರೀರಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಕರ್ನಾಟಕ, ಇಡೀ ಪಶ್ಚಿಮಘಟ್ಟ ಮೇಲಾಗಿ ಉತ್ತರ ಕನ್ನಡ ಜಿಲ್ಲೆ ಅವರ ಸಾಧನೆಯನ್ನು ಸದಾಕಾಲ ಸ್ಮರಿಸಿಕೊಳ್ಳಲೇಬೇಕು.
ಅಜ್ಜಿ ನಮ್ಮೊಂದಿಗೆ ಇಲ್ಲ, ಆದರೆ..
ತುಳಸಿ ಗೌಡ! 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾದ ನಂತರ ದೇಶದಾದ್ಯಂತ ಈ ಹೆಸರು ಸಂಚಲನ ಸೃಷ್ಟಿಸಿತ್ತು. ಅಲ್ಲಿಯವರೆಗೂ ಈ ತಾಯಿ ಎಲೆಮರೆ ಕಾಯಿಯಂತೆ ಗಿಡ-ಮರಗಳ ಉಳಿವಿಗಾಗಿ ನಿಸ್ವಾರ್ಥ ಬದುಕನ್ನು ಸೆವೆಸಿದವರು. ತುಳಸಿ ಗೌಡ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಹೊನ್ನಾಳಿ ನಿವಾಸಿಯಾಗಿದ್ದರು. ಹಾಲಕ್ಕಿ ಒಕ್ಕಲಿಗ ಸಮುದಾಯದ ನಾರಾಯಣ ಗೌಡ ಹಾಗೂ ನೀಲಿ ದಂಪತಿಯ ಮಗಳಾಗಿ 1944ರಲ್ಲಿ ತುಳಸಿ ಗೌಡ ಜನಿಸಿದ್ದರು.
ಇದನ್ನೂ ಓದಿ:ಜೀವಕ್ಕೆ ಸಂಚಕಾರ ತರುತ್ತೆ ಟೀ, ಕಾಫಿ! ಕುಡಿಯುವಾಗ ಇರಲಿ ಈ ಎಚ್ಚರ! ಸತ್ಯ ಬಿಚ್ಚಿಟ್ಟ ಆರೋಗ್ಯ ಇಲಾಖೆ
2 ವರ್ಷವಿದ್ದಾಗ ಅಪ್ಪನ ಕಳೆದುಕೊಂಡರು
ತುಳಸಿ ಗೌಡ ಆಗಿನ್ನು ಎರಡು ವರ್ಷ ಮಾತ್ರ. ಏನೂ ಅರಿಯ ಮುಗ್ಧ ಕಂದಮ್ಮನ್ನು ಆಕೆಯ ತಂದೆ ಬಿಟ್ಟು ಹೋದರು. ಅಮ್ಮನ ಮಡಿಲಲ್ಲಿ ಬೆಳೆದ ತುಳಸಿ ಗೌಡ 11 ವರ್ಷಕ್ಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟು ಗಂಡನ ಮನೆ ಬೆಳಗಲು ಹೊರಟರು. ಆದರೆ ಅವರಿಗೆ ಅಲ್ಲಿ ಆಘಾತವೊಂದು ಕಾದಿತ್ತು. ಪತಿ ಗೋವಿಂದ ಗೌಡ ಹೆಚ್ಚು ವರ್ಷಗಳ ಕಾಲ ಅವರ ಜೊತೆ ಇರಲಿಲ್ಲ. ಅನಿರೀಕ್ಷಿತ ದುರ್ಘಟನೆಯಲ್ಲಿ ಜೀವ ಕಳೆದುಕೊಂಡರು. ಪರಿಣಾಮ ಮಗ ಸುಬ್ರಾಯ, ಮಗಳು ಸೋಮಿಗಾಗಿ ಬದುಕಿನ ಬಂಡಿ ಹೊತ್ತರು ತುಳಸಿ ಅಮ್ಮ.
ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ತುಳಸಿ ತಮ್ಮ ಅಮ್ಮನೊಂದಿಗೆ ಸೌದಿ (ಕಟ್ಟಿಗೆ) ತರಲು ಕಾಡಿಗೆ ಹೋಗುತ್ತಿದ್ದರು. ಅಲ್ಲಿ ಗಿಡಮರಗಳ ಬಗ್ಗೆ ಪ್ರೀತಿ ಹುಟ್ಟಿಕೊಂಡಿತು. ಹೀಗಾಗಿ ಅವರು ನಂತರದ ದಿನಗಳಲ್ಲಿ ನರ್ಸರಿಗೆ ಹೋಗಲು ಆರಂಭಿಸಿದ್ದರು. ಅಲ್ಲಿ ಅವರಿಗೆ ದಿನಗೂಲಿಯಾಗಿ ಕೇವಲ 1.25 ಪೈಸೆ ನೀಡಲಾಗುತ್ತಿತ್ತು. ಹೀಗಾಗಿ ಸಂಬಂಧಿಕರೆಲ್ಲ ಅವರಿಗೆ ಆ ಕೆಲಸವನ್ನು ಬಿಡುವಂತೆ ಒತ್ತಾಯಿಸಿದ್ದರು. ಆದರೆ ಪರಿಸರದ ಮೇಲಿನ ಸೆಳೆತ, ಗಿಡ-ಮರಗಳ ಮೇಲಿನ ಪ್ರೀತಿಯಿಂದಾಗಿ ಆ ಕೆಲಸ ತುಳಸಿ ಗೌಡ ಬಿಡಲಿಲ್ಲ.
ಮರಗಳ ಬಗ್ಗೆ ಜ್ಞಾನ ಸಂಪಾದನೆ
ಮನೆಯ ನಿರ್ವಹಣೆಗೆ ಅಮ್ಮನಿಗೆ ಸಾಥ್ ನೀಡಲು ನರ್ಸರಿಗೆ ಹೋಗಲು ಆರಂಭಿಸಿದ್ದ ತುಳಸಿ ಗೌಡಗೆ ಕಾಡಿನ ಬಗ್ಗೆ, ಅಲ್ಲಿರುವ ಸಸ್ಯ ಸಂಪತ್ತುಗಳ ಬಗ್ಗೆ ಹೆಚ್ಚು ಆಸಕ್ತಿ ಮೂಡುತ್ತ ಹೋಯಿತು. ನರ್ಸರಿಯಲ್ಲಿ ಬೀಜಗಳ ಬಗ್ಗೆ ತಿಳಿದುಕೊಂಡರು. ಯಾವ ಮರದ ಬೀಜಗಳು ಹೇಗೆ ಇರುತ್ತವೆ? ಅವುಗಳನ್ನು ಹೇಗೆ ಪಾಲನೆ ಮಾಡಬೇಕು? ಬೀಜದಿಂದ ಸಸಿಯನ್ನು ಹೇಗೆ ಮಾಡಬೇಕು. ಯಾವ ಸಸಿಗಳಿಗೆ ಎಷ್ಟು ನೀರು ಹಾಕಬೇಕು? ಯಾವ ಕಾಲದಲ್ಲಿ ಹಣ್ಣುಗಳು ಸಿಗುತ್ತವೆ? ಅವುಗಳನ್ನು ಬೀಜಕ್ಕಾಗಿ ಆರಿಸಲು ಸೂಕ್ತ ಸಮಯ ಯಾವುದು? ಒಂದು ಸಸಿಗೆ ಗೊಬ್ಬರ ಯಾವ ರೀತಿ ಹಾಕಬೇಕು? ಅನ್ನೋದರ ಕುರಿತ ಸೂತ್ರಗಳನ್ನು ತಿಳಿದುಕೊಂಡರು.
ಇದನ್ನೂ ಓದಿ:ಬದುಕು ಬದಲಾಯಿಸಿದ ವೀಳ್ಯದೆಲೆ.. ಕಪ್ಪು ಮಣ್ಣಿನಲ್ಲಿ ಗದಗ ರೈತನ ಚಮತ್ಕಾರ..!
ಕಾಡಿನ ಸಸಿಗಳನ್ನು ಬೆಳೆಸುವುದರಲ್ಲಿ ನಿಪುಣತೆ ಮತ್ತು ಅವರಲ್ಲಿನ ಆಸಕ್ತಿ, ಪರಿಸರದ ಮೇಲಿನ ಕಾಳಜಿಗೆ ಬೆರಗಾಗಿದ್ದ ಅರಣ್ಯ ಇಲಾಖೆ ಖಾಯಂ ಕೆಲಸ ನೀಡಿತ್ತು. ಸರ್ಕಾರಿ ಇಲಾಖೆಯ ಅಡಿಯಲ್ಲಿ ಬರುವ ನರ್ಸರಿಯಲ್ಲಿ ಖಾಯಂ ಉದ್ಯೋಗಿಯನ್ನಾಗಿ ನೇಮಿಸಿಕೊಂಡಿತ್ತು. ಅಲ್ಲಿಂದ ಪರಿಸರದ ಉಳಿವಿಗಾಗಿ ಮತ್ತಷ್ಟು ಜಾಗೃತಿ ವಹಿಸಿದ್ದ ತುಳಸಿ. ದಟ್ಟ ಕಾಡುಗಳಿಗೆ ಹೋಗಿ ಅಲ್ಲಿ ಬಿದ್ದಿದ್ದ ಬೀಜಗಳನ್ನು ಹೆಕ್ಕಿ ತಂದು ಸಸಿ ಮಾಡುವ ಕಾಯಕದಲ್ಲಿ ತಲ್ಲೀನರಾದರು. ನಿರಂತರವಾಗಿ ಮರಗಳನ್ನು ಬೆಳೆಸಲು ಎಲೆಮರೆ ಕಾಯಿಯಂತೆ ಜೀವವನ್ನು ಮುಡಿಪಾಗಿಟ್ಟಿದ್ದರು.
ಗಿಡ ಮರಗಳ ರಕ್ಷಣೆಯಲ್ಲಿ ತುಳಸಿ ಗೌಡ ನಿಜಕ್ಕೂ ರಾಕ್ಷಸಿಯಾಗಿದ್ದರು. ಸ್ವಂತ ಮಗುವನ್ನು ಜೋಪಾನ ಮಾಡಿದಂತೆ ಮಾಡುತ್ತಿದ್ದರು. ಕಾಡಿನಲ್ಲಿ ತಾವು ಯಾವುದೋ ಮರ ನೆಟ್ಟು ಬಂದು, ಅದು ದೊಡ್ಡದಾದ ಮೇಲೂ ನೋಡಿಕೊಂಡು ಬರುತ್ತಿದ್ದರು. ಅಲ್ಲದೇ ಕಾಡುಗಳ್ಳರು ಕೊಡಲಿ ಹಾಕಿ ಬೀಳಿಸಿದಾಗ ಮರವನ್ನು ತಬ್ಬಿಕೊಂಡು ಗಳಗಳನೇ ಕಣ್ಣೀರು ಇಡುತ್ತಿದ್ದರಂತೆ. ಅದು ಎಷ್ಟೋ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸೇರಿ ನಾಟ ಕೊಯ್ಯೋರಿಗೆ, ಕಾಡುಗಳ್ಳರಿಗೆ ದುಸ್ವಪ್ನವಾಗಿ ಕಾಡಿದ್ದರು.
ಕೈಕೊಟ್ಟ ಆರೋಗ್ಯ
ಸರ್ಕಾರಿ ನರ್ಸರಿಯಲ್ಲಿ ಖಾಯಂ ಉದ್ಯೋಗಿಯಾಗಿ ಕೆಲಸ ಮಾಡ್ತಿದ್ದ ತುಳಸಿ ಗೌಡ ನಿವೃತ್ತಿಯಾಗಿ 10 ವರ್ಷಗಳವರೆಗೂ ಗಿಡ-ಮರಗಳ ಆರೈಕೆಯಲ್ಲಿದ್ದರು. ಇತ್ತೀಚೆಗಿನ ದಿನಗಳಲ್ಲಿ ಆರೋಗ್ಯ ಕೈಕೊಟ್ಟಿದ್ದರಿಂದ ತಮ್ಮ ಸೇವೆ ಬಗ್ಗೆ ಹೆಚ್ಚು ಗಮನ ನೀಡಲಿಲ್ಲ. ಆದರೂ ಅವರ ಹೃದಯದ ಮಿಡಿತ ತನ್ನೂರಿನ, ತನ್ನ ಸುತ್ತಮುತ್ತ ಇರುವ ಅರಣ್ಯದ ಬಗ್ಗೆಯೇ ಆಗಿತ್ತು. ಆ ಮೂಲಕ ಒಂದು ಲಕ್ಷ ಮರಗಳನ್ನು ನೆಟ್ಟು ಪೋಷಣೆ ಮಾಡಿಕೊಂಡು ಬಂದ ಹೆಗ್ಗಳಿಕೆ ಇವರದ್ದಾಗಿದೆ.
ಇದನ್ನೂ ಓದಿ:ಇಲ್ಲೊಂದು ಅದ್ಭುತ ಹಳ್ಳಿ! ಇಲ್ಲಿ ಎಣ್ಣೆ ಕುಡಿಯಂಗಿಲ್ಲ.. ಚಟಕ್ಕೆ ಬಿದ್ದವ್ರಿಗೆ ಎಂಟ್ರಿಯೇ ಇಲ್ಲ..
300ಕ್ಕೂ ಹೆಚ್ಚು ಗಿಡಮರಗಳ ಬಗ್ಗೆ ಮಾಹಿತಿ..
300ಕ್ಕೂ ಹೆಚ್ಚು ಗಿಡಮರಗಳ ಬಗ್ಗೆ ಜ್ಞಾನ ಹೊಂದಿದ್ದ ತುಳಸಿ ಗೌಡ, ಅವುಗಳ ಬೀಜ, ಬಳ್ಳಿ, ಹಣ್ಣು ನೋಡುತ್ತಿದ್ದಂತೆ ಇದು ಯಾವ ಮರದ್ದು ಎಂದು ಹೇಳುತ್ತಿದ್ದರು. ಇನ್ನೂ ಒಂದು ವಿಶೇಷತೆ ಏನೆಂದರೆ ಹಾಲಕ್ಕಿ ಸಮುದಾಯದ ಅನೇಕ ಜನರು ಈಗಲೂ ಗಾಂವಟಿ ಔಷಧಿಯನ್ನು ನೆಚ್ಚಿಕೊಂಡಿದ್ದಾರೆ. ಆ ಭಾಗದ ಅನೇಕರು ಹಳ್ಳಿ ಔಷಧಿಗಳನ್ನು ನೀಡುತ್ತಾರೆ. ತುಳಸಿ ಗೌಡ ಅವರಿಗೆ ಗಿಡಮೂಲಿಕೆಯ ಔಷಧಿ ಗುಣಗಳ ಬಗ್ಗೆ ಜ್ಞಾನವನ್ನೂ ಹೊಂದಿದ್ದರು. ಯಾವ ಕಾಯಿಲೆಗೆ ಯಾವ ಮರದ ಬೇರು, ಚೆಕ್ಕೆ, ಎಲೆ ನೀಡಬೇಕು ಅನ್ನೋದನ್ನು ಹೇಳುತ್ತಿದ್ದರು. ಜೊತೆಗೆ ಹಷಾರಿಲ್ಲ ಎಂದು ಮನೆಗೆ ಬಂದಾಗ ಔಷಧಿಗಳ ಬೇರುಗಳನ್ನು ಕೊಟ್ಟು ಕಳುಹಿಸುತ್ತಿದ್ದ ಮಾತುಗಳು ಅಲ್ಲಿನ ಸ್ಥಳೀಯರದ್ದಾಗಿದೆ. ಕೆಲವು ವರದಿಗಳ ಪ್ರಕಾರ, ಅವರು 300ಕ್ಕೂ ಹೆಚ್ಚು ಗಡಿಮರಗಳಿಂದ ಮೆಡಿಸಿನ್ಗಳನ್ನು ಪತ್ತೆ ಹಚ್ಚಿದ್ದಾರೆ.
ಪ್ರಶಸ್ತಿಗಳು
ಅವಿರತ, ದಣಿವಯರಿಯದ ಸೇವೆಗೆ ಎನ್ಸೈಕ್ಲೋಪಿಡಿಯಾ ಫಾರೆಸ್ಟ್ ಗೌರವ, ಪ್ರಿಯದರ್ಶಿನಿ, ವೃಕ್ಷಮಿತ್ರ, ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಹುಡುಕಿಕೊಂಡು ಬಂದವು. 2020ರಲ್ಲಿ ಪದ್ಮಶ್ರೀ ಪ್ರಶಸ್ತಿ ಘೋಷಣೆ ಬೆನ್ನಲ್ಲೇ ಅವರ ಸ್ಥಾನ ಮತ್ತಷ್ಟು ಎತ್ತರಕ್ಕೆ ಹೋಗಿತ್ತು.
ಮನೆ ಬಾಗಿಲಿಗೆ ಯಾರೇ ಬಂದರೂ ಎಲ್ಲರನ್ನೂ ಸಮನಾಗಿ ಕಾಣುತ್ತಿದ್ದರು. ಯಾರಿಗೂ ಬೇಧ-ಭಾವ ಮಾಡುತ್ತಿರಲಿಲ್ಲ. ಸೌಜನ್ಯದ ಮೂರ್ತಿಯಂತಿದ್ದ ತುಳಸಿ ಗೌಡ ಸಮಾಜದ ದೊಡ್ಡ ಆಸ್ತಿ ಆಗಿದ್ದರು. ಹೋದಲೆಲ್ಲ ಪರಿಸರ, ಗಿಡಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಮಕ್ಕಳಂತೆ ಗಿಡ-ಮರಗಳನ್ನು ಬೆಳೆಸಿ, ರಕ್ಷಿಸಿ ಎಂದು ಹೇಳುತ್ತಿದ್ದರು- ಸ್ಥಳೀಯ
ಚುನಾವಣಾ ಪ್ರಚಾರಕ್ಕೆ ಉತ್ತರ ಕನ್ನಡ ಜಿಲ್ಲೆಗೆ ಬಂದ ಪ್ರಧಾನಿ ಮೋದಿಯವರು ವೃಕ್ಷ ಮಾತೆಗೆ ನಮಸ್ಕರಿಸಿ ಆಶೀರ್ವಾದ ಪಡೆದ ದೃಶ್ಯವನ್ನು ಜನ ಇನ್ನೂ ಮರೆತಿಲ್ಲ. ಯಾರೊಂದಿಗೂ ಏರು ದನಿಯಲ್ಲಿ ಮಾತಾಡಿದ್ದೇ ಇಲ್ಲ. ತಮ್ಮ ಮುಗ್ಧತೆ, ಸರಳತೆಯಿಂದ ಜೀವನ ಸೆವೆಸಿದ ತುಳಸಿ ಗೌಡಗೆ ನಮ್ಮೆಲ್ಲರಿಗೂ ಮಾದರಿ ಹೆಜ್ಜೆಗಳನ್ನು ಬಿಟ್ಟು ಹೋಗಿದ್ದಾರೆ. ಬದುಕಿನ ಯಾತ್ರೆ ಮುಗಿಸಿದ ತುಳಸಿ ಗೌಡ ಇನ್ನು ನೆನಪಷ್ಟೇ. ನಿಜವಾದ ಸಂತೋಸವನ್ನು ಗಿಡ-ಮರಗಳಲ್ಲಿ ಕಂಡರು. ತಮ್ಮ ಸರಳ ಜೀವನ, ಫಲಾಪೇಕ್ಷೆ ಇಲ್ಲದ ಕಾಯಕದ ಮೂಲಕ ದೇಶದ ಜನರ ಮನಸ್ಸು ಗೆದ್ದಿದ್ದರು. ನಿಸರ್ಗದಲ್ಲಿರುವ ಸಸ್ಯ ಸಂಪತ್ತಿನ ನಾಡಿಮಿಡಿತ ತಿಳಿದಿದ್ದ ಅವರನ್ನ ಮರಗಳ ವಿಜ್ಞಾನಿ ಅಂತಲೂ ಕೆಲವರು ಹೇಳುತ್ತಿದ್ದರು.
ವಿಶೇಷ ಬರಹ: ಗಣೇಶ ಕೆರೆಕುಳಿ, ನ್ಯೂಸ್ಫಸ್ಟ್, ಡಿಜಿಟಲ್ ಡೆಸ್ಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ