/newsfirstlive-kannada/media/post_attachments/wp-content/uploads/2025/07/Achuthanandan.jpg)
ಕೇರಳ ಮಾಜಿ ಸಿಎಂ ಹಾಗೂ ಕಮ್ಯುನಿಸ್ಟ್ ಪಾರ್ಟಿಯ ಹಿರಿಯ ನಾಯಕರಾಗಿದ್ದ ವಿ.ಎಸ್ ಅಚ್ಯುತಾನಂದನ್ (101) ನಿಧನ ಹೊಂದಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಅಚ್ಯುತಾನಂದನ್ ಕೊನೆಯುಸಿರೆಳೆದಿದ್ದಾರೆ. ಶತಾಯುಷಿ ಆಗಿರುವ ಅಚ್ಯುತಾನಂದನ್, ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.
ದೀರ್ಘಕಾಲದ ಅನಾರೋಗ್ಯದಿಂದಾಗಿ, ಇತ್ತೀಚಿಗೆ ಅವರು ಹಾಸಿಗೆ ಹಿಡಿದಿದ್ದರು. ತಿರುವನಂತಪುರಂನ ಪಟ್ಟಂನಲ್ಲಿರುವ ಎಸ್‌ಯುಟಿ ಆಸ್ಪತ್ರೆಯಲ್ಲಿ 1 ತಿಂಗಳಿಗೂ ಹೆಚ್ಚು ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು (ಜುಲೈ 21) ಮಧ್ಯಾಹ್ನ 3.30ಕ್ಕೆ ನಿಧನರಾದರು. ಜೂನ್ 23 ರಂದು ಅಚ್ಯುತಾ ನಂದನ್ ಅವರಿಗೆ ಹಾರ್ಟ್ ಅಟ್ಯಾಕ್ ಆಗಿತ್ತು. ಅಂದಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. 5 ವರ್ಷದ ಹಿಂದೆ ಸ್ಟ್ರೋಕ್ ಹೊಡೆದಿತ್ತು.
ಅಂದಿನಿಂದ ಸಕ್ರಿಯ ರಾಜಕೀಯದಿಂದ ಅಚ್ಯುತಾನಂದನ್ ದೂರ ಇದ್ದರು. ಅಚ್ಯುತಾನಂದನ್ ಅವರ ಪಾರ್ಥೀವ ಶರೀರವನ್ನು ತಿರುವನಂತಪುರದ ಎಕೆಜಿ ಸೆಂಟರ್ನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗುತ್ತೆ. ಬಳಿಕ ರಾತ್ರಿ ತಿರುವನಂತಪುರದ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತೆ.
ನಾಳೆ (ಜುಲೈ 22) ಸೆಕ್ರೆಟೇರಿಯೇಟ್ನ ದರ್ಬಾರ್ ಹಾಲ್ನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಪಾರ್ಥೀವ ಶರೀರ ಇಡಲಾಗುತ್ತೆ. ಬಳಿಕ ಅವರ ತಿರುವನಂತಪುರದಿಂದ ಸ್ವಂತ ಊರಾದ ಆಲಪುಜ್ಜಕ್ಕೆ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಗುತ್ತೆ. ನಾಡಿದ್ದು ಆಲಪುಜ್ಜದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಹೇಳಲಾಗಿದೆ.
ವಿ.ಎಸ್. ಎಂದೇ ಕೇರಳ ರಾಜಕೀಯದಲ್ಲಿ ಕರೆಯಲ್ಪಡುತ್ತಿದ್ದ ಅಚ್ಯುತಾ ನಂದನ್, ಕೇರಳದಲ್ಲಿ ಜನಪ್ರಿಯ ರಾಜಕೀಯ ನಾಯಕ. ಜನರ ಹೃದಯಕ್ಕೆ ಹತ್ತಿರವಾಗಿದ್ದರು. ಜನರು ಪ್ರೀತಿಯಿಂದ ವಿ.ಎಸ್ ಅಚ್ಯುತಾ ನಂದನ್ ಅವರನ್ನು ತಮ್ಮ ಕಣ್ಣು ಮತ್ತು ಹೃದಯ ಎಂದೇ ಕರೆಯುತ್ತಿದ್ದರು. ಉತ್ತಮ ವಾಗ್ಮಿ ಕೂಡ ಆಗಿದ್ದರು. ಟ್ರೇಡ್ ಯೂನಿಯನ್ ಮೂಲಕ ರಾಜಕೀಯ ರಂಗ ಪ್ರವೇಶಿಸಿದ್ದ ವಿ.ಎಸ್. ಅಚ್ಯುತಾನಂದನ್, ಸಿಪಿಐ(ಎಂ) ಸೆಕ್ರೆಟರಿ ಆಗಿ ಆಯ್ಕೆಯಾದರು. 2006ರಲ್ಲಿ ಕೇರಳದ ಮುಖ್ಯಮಂತ್ರಿ ಹುದ್ದೆಯನ್ನು ವಿ.ಎಸ್. ಅಚ್ಯುತಾನಂದನ್ ಆಲಂಕರಿಸಿದ್ದರು. ಆಗ ಅವರಿಗೆ 83 ವರ್ಷ ವಯಸ್ಸು.
ಇದನ್ನೂ ಓದಿ:ಜೋರು ಮಳೆಗೆ ನಡುಗಿದ ಮುಂಬೈ.. ರನ್ ವೇನಲ್ಲಿ ವಿಮಾನ ಸ್ಕಿಡ್, ಆರೆಂಜ್ ಅಲರ್ಟ್ ಘೋಷಣೆ!
ರೈತರ ಭೂಮಿ ಹಕ್ಕುಗಳು, ರೈತರ ಪರ ಹೋರಾಟ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ವಿ.ಎಸ್. ಅಚ್ಯುತಾನಂದನ್ ಮುಂಚೂಣಿಯಲ್ಲಿದ್ದರು. ವೈಯಕ್ತಿಕ ಜೀವನದಲ್ಲಿ 4ನೇ ವಯಸ್ಸಿಗೆ ಅಚ್ಯುತಾ ನಂದನ್ ತಾಯಿನ ಕಳೆದುಕೊಂಡಿದ್ದರು. 11ನೇ ವಯಸ್ಸಿನಲ್ಲಿ ತಂದೆನ ಕಳೆದುಕೊಂಡಿದ್ದರು. ಬಳಿಕ ಟೈಲರ್ ಆಗಿ ಕೆಲಸ ಮಾಡಿದ್ದರು. ಬಳಿಕ ಸೆಣಬು ಫ್ಯಾಕ್ಟರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿದ್ದರು.
ಇದೇ ಅಚ್ಯುತಾ ನಂದನ್ ತಮ್ಮ ನಾಯಕತ್ವ ಗುಣಗಳಿಂದ ಕೇರಳದ ಜನರ ಮನ ಗೆದ್ದು, ಕೇರಳದ ಮುಖ್ಯಮಂತ್ರಿ ಹುದ್ದೆಗೇರಿ ಇತಿಹಾಸವನ್ನೇ ನಿರ್ಮಿಸಿದ್ದರು. ಕಾಮ್ರೇಡ್ ವಿ.ಎಸ್. ಅಚ್ಯುತಾ ನಂದನ್, ಕೇರಳದ ರಾಜಕೀಯ, ಸಾರ್ವಜನಿಕ ಬದುಕಿನಲ್ಲಿ ತಮ್ಮದೇ ಆದ ಅಚ್ಚು ಹೊತ್ತಿದ್ದಾರೆ.
ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ